
ಇವು ಯಾತನೆಯ ದಿನಗಳು
ರಾಜಕೀಯ ಪರಿಬಾಷೆಯಲ್ಲಿ ಬಣ್ಣಿಸಲಾಗದಂತಹ,
ಕವಿತೆಗಳನ್ನಾಗಿಸಲೂ ಸಾದ್ಯವಿರದಂತಹ-
ಕತೆಗಳನ್ನಾಗಿಸಲೂ ಸಂಯಮವಿರದಂತಹ ಕಾಲ!
ಅದೆಲ್ಲೊ ಆಧಾರ್ ಲಿಂಕ್ ಇರದೆ
ಹಸಿವಿನಿಂದ ಹೆಣ್ಣು ಮಗುವೊಂದು ಸಾಯುತ್ತದೆ
ಅದೆಲ್ಲೋ ಹೆಣ್ಣೊಬ್ಬಳನ್ನು
ಅತ್ಯಾಚಾರ ಮಾಡಿ ಯೋನಿಗೆ ಸಲಾಕೆ ತೂರಿಸಿ ಕೊಲ್ಲುತ್ತಾರೆ
ಅದೆಲ್ಲೋ ತುಂಬು ಬಸುರಿಯ ಗರ್ಭಸೀಳಿ
ಹುಟ್ಟಬೇಕಿರುವ ಮಗುವ ಕೊಲ್ಲುತ್ತಾರೆ
ಹಸಿದವಳೊಬ್ಬಳು ತುಂಡು ರೊಟ್ಟಿ
ಕದ್ದಿದ್ದಕ್ಕೆ ಬೆತ್ತಲು ಮಾಡಿ
ಮೆರವಣಿಗೆಮಾಡುತ್ತಾರೆ
ಅದೆಲ್ಲೊ ಸತ್ತ ದನದ ಚರ್ಮ
ಸುಲಿದ ತಪ್ಪಿಗೆ ದಲಿತ ಯುವಕರನ್ನು
ಥಳಿಸಲಾಗುತ್ತದೆ
ಅದೆಲ್ಲೋ ಅವರುಗಳನ್ನೆದುರಿಸಿ
ಮಾತಾಡಿದವರನ್ನು ಹತ್ಯೆಗಯ್ಯಲಾಗುತ್ತದೆ
ಇವೆಲ್ಲವನ್ನೂ ಅದೆಲ್ಲೋ
ಅಂತಂದುಕೊಂಡು
ಮೌನಕ್ಕೆ ಮುಗಿಬಿದ್ದ ನನ್ನ
ಷಂಡತನಕ್ಕೆ ಸಾಕ್ಷಿಯಾಗಿ
ಹೊಟ್ಟೆತುಂಬ ಉಂಡು ತೇಗುತ್ತೇನೆ
ಗೆಳೆಯರೊಂದಿಗೆ ಹೊಸದೊಂದು
ವಾದವಿವಾದಕ್ಕಾಗಿ ಹೊಸ
ಆಯುಧಗಳನ್ನು ಅನ್ವೇಷಿಸಲು
ಮುಂದಾಗುತ್ತೇನೆ,
ಸವಕಲಾದ ಅವೇ ಹಳೆಯ ಶಬುದಗಳ
ಮತ್ತೆ ಮಸೆದು ಮಚ್ಚಾಗಿಸಿ
ಹಲ್ಲು ಕಚ್ಚುತ್ತೇನೆ
ದಿನದಂತ್ಯಕ್ಕೆ ಮಾತಿನ
ಮಲ್ಲಯುದ್ದದಲ್ಲಿ ಗೆದ್ದ
ಸಂಭ್ರಮದಲ್ಲಿ
ಪಲ್ಲಂಗದಲ್ಲಿ ಪವಡಿಸುತ್ತೇನೆ
ನಾನು ಬದುಕಿರುವುದಕ್ಕೆ ಸಾಕ್ಷಿಯಾಗಿ ಆಗೀಗ
ಕನ್ನಡಿಯೊಳಗೆ ಇಣುಕಿ
ನನ್ನ ಚಹರೆಯ ಇರುವಿಕೆಯ ಬಗ್ಗೆ
ಖಾತರಿ ಪಡಿಸಿಕೊಳ್ಳುತ್ತೇನೆ
ಇದೀಗ ಯಾತನೆಯ ಕಾಲ
ಬರೆದ ಕವಿತೆ ಕತೆಗಳ ಸುಟ್ಟು ಹಾಕಿ
ಅದೇ ಬೆಂಕಿಯಲ್ಲಿ
ಒಳಿತೊಂದನ್ನು ಅರಸುವ ಕಾಲ
