ಪ್ರೀತಿಯೆನಲು ಹಾಸ್ಯವೇ

hand of man punch attack

ಚಂದ್ರಪ್ರಭ

ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ ಬಡಿಯುತ್ತದೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವಾಗಲೂ ಅವರು ‘… ಒಲವೆ ನಮ್ಮ ಬದುಕು’ ತರಹದ ಸಾಲುಗಳನ್ನು ಗುನುಗುತ್ತಾರೆ. ಆಗೀಗ ತಾವು ಆಸ್ಥೆಯಿಂದ ಕಟ್ಟಿದ ಮನೆಯಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಾರೆ. ಕರ್ತವ್ಯದ ಕರೆಯಾಲಿಸಿ ನಾಲ್ವರು ನಾಲ್ಕು ದಿಕ್ಕಾಗುವ ಅವರು ಜಾಲ ತಾಣಗಳಲ್ಲಿ ಇಂಟರ್ ಕನೆಕ್ಟೆಡ್ ಆಗುತ್ತಾರೆ. ಸಾಹಿತ್ಯ, ರಾಜಕಾರಣ, ಸಿನಿಮಾ, ಪ್ರಚಲಿತ ವಿದ್ಯಮಾನ ಎಲ್ಲವುಗಳ ಮೇಲೆಯೂ ಕಮೆಂಟಿಸುತ್ತಾರೆ.. ಭೇಟಿಗಳಲ್ಲಿ ಒಮ್ಮೊಮ್ಮೆ ಅಭಿಪ್ರಾಯ ಭೇದ ಕಾಡುವಾಗ ಮುನಿದು ಮುಖ ತಿರುವಿಕೊಳ್ಳುತ್ತಾರೆ. ಉದ್ವಿಗ್ನತೆಯಲ್ಲೂ ನೆನಪಾಗುತ್ತದೆ ಅವರಿಗೆ ಕವಿ ಸಾಲು –
‘… ಹತ್ತಿರವಿದ್ದರೂ ದೂರ ನಿಲ್ಲುವೆವು.. ಕೋಟೆಯಲಿ.. ‘ ತಂತಮ್ಮ ಕೋಟೆಯಲ್ಲಿ ನಿಂತುಕೊಂಡೇ ಕವಿತೆ ಕುರಿತು ಅವರು ವಿಮರ್ಶೆ ಮಾಡುತ್ತಾರೆ..ಆದರೂ ಕೋಟೆ ಒಡೆಯುವ ದಾರಿಗಾಣದೇ ಪರಸ್ಪರ ಬೀಳ್ಕೊಡುವಾಗ ಎಲ್ಲದಕ್ಕೂ ಮುಸುಕೆಳೆದು ನಕ್ಕು ಬಿಡುತ್ತಾರೆ. ಜೀವನ ಪ್ರವಾಹ ತಮ್ಮನ್ನು ಜೊತೆಯಾಗಿ ಕರೆದೊಯ್ಯುತ್ತಿದೆ ಎಂದವರಿಗೆ ಮನವರಿಕೆಯಾಗುತ್ತದೆ.. ಕ್ವಚಿತ್ತಾಗಿ ಸಿಗುವ ಅವಕಾಶಗಳಲ್ಲಿ ಅವರು ಫೋಟೋಕ್ಕೊಂದು ಚಂದದ ಪೋಜು ಕೊಡುತ್ತಾರೆ.. ಅದು ನೀಡುವ ಪುರಾವೆಯಲ್ಲಿ ಜೀವನೋತ್ಸಾಹವನ್ನು ಬಚ್ಚಿಟ್ಟುಕೊಳ್ಳುತ್ತಾರೆ..
ನಿಮ್ಮ ಅಕ್ಕಪಕ್ಕದಲ್ಲೆಲ್ಲೋ ಇವರು ಇದ್ದಾರು.. ಸುಮ್ಮನೆ ಆಚೀಚೆ ಒಮ್ಮೆ ಕಣ್ಣು ಹಾಯಿಸಿ ಬಿಡಿ..
ನನಗೇಕೊ ಕೆ. ಎಸ್. ನ. ಸಾಲು ಗುನುಗುವ ಮನಸ್ಸಾಗುತ್ತಿದೆ…
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದ ಕನಸ ಕಂಡು
ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ
ಪ್ರೀತಿಯೆನಲು ಹಾಸ್ಯವೆ?


Leave a Reply

Back To Top