ಗಜಲ್

ಗಜಲ್

ಡಾ.ರೇಣುಕ ಅರುಣಕುಮಾರ ಕಠಾರಿ

orange and blue abstract painting

ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರು
ಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು

ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕು
ಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು

ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರು
ಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು

ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆ
ಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ ಈ ಲೋಕದೆದುರು

‘ರೇಣು’ ಕೇಳೆ ಮುಡಿಗಳೆಲ್ಲ ಒಂದಾಗಬೇಕು ನಡೆ ನುಡಿಯೊಳಗೆ ಇಂದೇ
ಕತ್ತಲಾದ ಬೊಗಸೆಯೊಳಗೆ ಮೈಲಿಗೆ ತೊಳೆದು ಬೆಳಕ ಬುಗ್ಗೆ ಚಿಮ್ಮಿಸಬೇಕು ಈ ಲೋಕದೆದುರು.

************************************************************

Leave a Reply

Back To Top