ಅಮ್ಮನೇಕೆ ದೇವರು?

ಕಥೆ

ಅಮ್ಮನೇಕೆ ದೇವರು?

ರಾಘವೇಂದ್ರ ಈ ಹೊರಬೈಲು

ತನ್ನ ಜೋಪಾನ ಮತ್ತು ಅತೀವ ಪ್ರೀತಿಯ ಹೊರತಾಗಿಯೂ ತನಗೇ ಗೊತ್ತಿಲ್ಲದೆ ಕಾಲು ಜಾರಿ, ಕೈತಪ್ಪಿ ಹೊರಟ ಮಗಳನ್ನು ತಿದ್ದಲು ಹೋಗಿ, ಅವಳಿಂದ “ಬೇರೆಯವರಿಗೆ ಸೆರಗು ಹಾಸಿ, ಭಂಡ ಬಾಳು ಬಾಳಿ, ನನ್ನನ್ನು ಸಾಕಿದವಳು” ಎನಿಸಿಕೊಂಡರೂ, ಬೇರೆ ಯಾರೇ ಆಗಿದ್ದರೂ ರಣಚಂಡಿಯಾಗುತ್ತಿದ್ದ ಆ ತಾಯಿ, ತೀರಾ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನನ್ನು ಕಳೆದುಕೊಂಡ ಹೆತ್ತ ಮಗಳ ಮೇಲಿನ ಕರುಳಿನ ಮಮಕಾರಕ್ಕೆ ಬರಸಿಡಿಲಿನಂತಹ ಅವಮಾನವನ್ನೂ ಸಹಿಸಿಕೊಂಡು, ಮಗಳನ್ನು ಕ್ಷಮಿಸಿದ್ದಳು.

ಅಪ್ಪನಿಲ್ಲದ ಮಗಳಿಗೆ ತಾನೇ ಅಪ್ಪ-ಅಮ್ಮ ಎರಡೂ ಆಗಿ, ಜೋಪಾನವಾಗಿ ಸಾಕಲು ಆಕೆ ಹರಸಾಹಸಪಟ್ಟಿದ್ದಳು. ಗಂಡು ದಿಕ್ಕಿಲ್ಲದ ಮನೆಯ ಹೆಣ್ಣುಗಳನ್ನು ಹಂಬಲಿಸುವ ಹಸಿವೆಗಣ್ಣುಗಳಿಗೂ ಸೊಪ್ಪು ಹಾಕದೆ, ಬಗ್ಗದೆ, ಎಂಜಲಾಗದೆ, ಗಟ್ಟಿಗಿತ್ತಿಯ ಬಾಳು ನಡೆಸಿದ್ದಳು. ಅಮ್ಮನ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿದ ಮಗಳು, ತನ್ನ ಸ್ವೇಚ್ಛಾಚಾರಕ್ಕೆ ಅಮ್ಮನೇ ಅಡ್ಡಿಯೆಂದು, ತನಗಾಗಿ ಜೀವ ತೇಯ್ದವಳನ್ನು ತೊರೆದು, ಬಣ್ಣದ ಮಾತಿನಿಂದ ಮರುಳು ಮಾಡಿದವನೊಡನೆ ಏನೊಂದೂ ಯೋಚಿಸದೆ ಓಡಿದಳು.

ತನ್ನ ತೃಷೆ ತೀರುತ್ತಿದ್ದಂತೆ, ಜೊತೆಗಿದ್ದವನು ಎಲ್ಲವನ್ನೂ ದೋಚಿಕೊಂಡು ಓಡಿ ಹೋದ. ತನ್ನದೆಲ್ಲವನ್ನೂ ಕಳೆದುಕೊಂಡು, ಆಘಾತದಿಂದ ಅಪಘಾತಕ್ಕೊಳಗಾಗಿ ಕಣ್ಣುಗಳನ್ನೂ ಕಳೆದುಕೊಂಡು ಅನಾಥಳಾಗಿ ಬಿದ್ದಿದ್ದಾಗ, ಸಹಾಯದ ಬದಲಿ ಹಸಿದ ನಾಯಿಗಳಂತೆ ಎರಗಲು ಬಂದವರೇ ಹೆಚ್ಚು. ಸುದ್ಧಿ ತಿಳಿದಿದ್ದೇ ಎದ್ದೆನೋ ಬಿದ್ದೆನೋ ಎಂದು ಓಡಿ ಬಂದು, ‘ಉದುರುವ ಎಲೆಗೆ ಮರದ ಹಂಗ್ಯಾಕೆಂದು’ ತನ್ನವೇ ಕಣ್ಣುಗಳನ್ನು ದಾನಮಾಡಿ, ಮಗಳಿಗೆ ಬೆಳಕು ನೀಡಿದ ತಾಯಿ ತಾನು ಕುರುಡಿಯಾಗಿ, ಮಗಳಿಗೆ ಭಾರವಾಗುವುದು ಬೇಡವೆಂದು, ದಿಕ್ಕು ಸಿಕ್ಕಿದೆಡೆ ನಡೆದಳು.

*****************

One thought on “ಅಮ್ಮನೇಕೆ ದೇವರು?

  1. ತ್ಯಾಗಮಯಿ ತಾಯಿ ……
    ಮನ ಮಿಡಿಯುವ ಕತೆ

Leave a Reply

Back To Top