ಗಜಲ್.
ವಿಜಯಲಕ್ಷ್ಮಿ ಕೊಟಗಿ
ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್
ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್
ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದು
ನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್
ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದು
ನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್
ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದು
ನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್
ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದು
ನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್
ನಾನು ಮನುಷ್ಯನೆಂದೇ ಭಾವಿಸದ ಧನಿಕರಿರಬಹುದು
ನನ್ನ ಗಜಲಿನಲಿ ಮಾನವೀಯತೆ ಜೀವಂತವಾಗಿದೆ ಕಾಮ್ರೇಡ್
ನಾನು ಶೋಷಣೆಯ ವಿರುದ್ಧ ಎತ್ತಿದ ಧ್ವನಿ ಒಂಟಿ ಇರಬಹುದು
ನನ್ನ ಗಜಲಿಗೆ ಬಹುಜನರ ಬೆಂಬಲವಿದೆ ಕಾಮ್ರೇಡ್
ಬಹುತ್ವ ಭಾರತದಲಿ ಮೂಲಭೂತವಾದಿಗಳ ಪ್ರಭುತ್ವ ಇರಬಹುದು
ವಿಜಿಯ ಗಜಲ್ ಹೊತ್ತಿಸಿದ ಕ್ರಾಂತಿಗೆ ಲಾಲ್ ಸಲಾಂ ಸಿಕ್ಕಿದೆ ಕಾಮ್ರೇಡ್.
************************
ಧನ್ಯವಾದಗಳು ಕಾಮ್ರೇಡ್
ನವೀನ ಶೈಲಿಯ ನವೊದಯ ಕಾವ್ಯ