ಕಾವ್ಯಯಾನ
ಶ್ರೀಕೃಷ್ಣನ ಬೀಳ್ಕೊಡುಗೆ
ಅಭಿಜ್ಞಾ ಪಿ ಎಮ್ ಗೌಡ
ಬೆರಳ ತುದಿಯಲಿ ವಂಶಿ ಜಾರಿದೆ
ಕರವ ಪಿಡಿದಿಹೆ ನಿಲ್ಲು ಮಾಧವ
ತೊರೆದು ಸಾಗುವ ಪರಿಯು ನಿನ್ನೊಳು ಬಂದಿರುವುದೇಕೆ|
ಸರಿದು ಹೋಗದ ನೆನಪ ದೋಣಿಯು
ಕರೆದು ಕೂಗಿವೆ ಕೊಳಲ ದನಿಯಲಿ
ಹರಿದು ಬರುತಿಹ ಚೆಲುವ ಗಾನದ ದಿವ್ಯ ರಾಗದಲಿ||
ಮಥುರ ನಗರವ ಬಿಟ್ಟು ಹೋಗುತ
ವಿತತಿಗೊಳ್ಳುವ ಸಾರ ಭಾವವು
ಜತನವಾಗದೆ ಹೊರಟು ನಡೆದಿದೆ ನವ್ಯ ಕಾಲದಲಿ|
ಮಿಥುನವಾಗದೆ ಗರವು ಬಡಿದಿದೆ
ಪತನಗೊಳ್ಳುವ ಯಮುನೆ ತಟವದು
ಸತತವಾಗಿಯೆ ಮನದ ನೀರಸ ಭಾವ ತುಳುಕುತಿದೆ||
ಯಮುನೆ ಸೊರಗಿದೆ ತರುವು ಬಾಡಿವೆ
ಸುಮದ ಬನವದು ಬೆಸ್ತು ಬಿದ್ದಿದೆ
ನಮನ ಮಾಡುತ ಕೃಷ್ಣನೆನೆಯುತ ನಿಂತು ಗೋಕುಲದಿ||
ಮಮತೆ ಸಲಿಲವು ಮೌನವಾಗಿದೆ
ಸಮತೆ ಬೀರುವ ಖಗವು ಕೊರಗಿವೆ
ಘಮದ ಪುಷ್ಪವು ಬಾಡಿ ತೂಗಿವೆ ಕಾಲ ಮಹಿಮೆಯಲಿ||
ರಾಧೆ ಮನದಲಿ ದುಃಖ ಮಡುವದು
ಹಾದಿಯುದ್ಧಕು ಕೂಗಿ ಕರೆದಿದೆ
ಬಾಧೆಯಿಂದಲೆ ಚೆಲುವೆ ಕಣ್ಣಿನ ನೀರ ಹರಿಸುತಲಿ|
ಕಾದು ಕುಳಿತಳು ರಾಧೆ ವನದಲಿ
ಸಾಧು ಮನವದು ಚಿಂತೆ ಗೂಡಲಿ
ವಾದ ಮಾಡದೆ ಕಳಿಸಿ ಕೊಟ್ಟಳು ಸಾಧ್ವಿ ಸಾರಿಕೆಯು|
ವೇಣು ನಾದವ ನೆನೆದು ಕರೆದಳು
ತಾಣದೊಂದಿಗೆ ಬೆರೆತು ಕಳೆದಳು
ಕಾಣದಂತೆಯೆ ಮುರುಳಿ ಲೋಲನ ಕೊಳಲ ಲೀನದಲಿ|
ಬಾಣದಂತಯೆ ಬೀಸಿ ಬಂದಿಹ
ಜಾಣ ನೆನಪಿನ ಮಾಲೆ ಹೊದ್ದುತ
ಪಾಣಿ ಪಿಡಿಯದೆ ವೇಣು ಸಡಿಲಿಸಿ ಮುಂದೆ ಸಾಗುವನು||
*********************************************
One thought on “ಶ್ರೀಕೃಷ್ಣನ ಬೀಳ್ಕೊಡುಗೆ”