ಗಜಲ್
ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಹಸಿವಾದಾಗ ಮಾತ್ರ ಮಾತನಾಡುತ್ತವೆ
ಹಗಲಲ್ಲ ಇರುಳಲ್ಲ ಕಾಯಕದೊರೆಗಳು ನಮಗಾಗಿ ಅನುಗಾಲ ದುಡಿಯುತ್ತವೆ
ಅಪ್ಪ ಹೂಡಿದ ರೆಂಟೆಗೆ ಬಸವ ಹೆಗಲಾದ ಅದಕ್ಕೆ ಒಮ್ಮೊಮ್ಮೆ ಅಮ್ಮನೂ ಹೊರತಲ್ಲ
ಕೆಸರಾದ ಕೈಗಳು ಬೆವರಿಳಿಸಿದ ಮೈಗಳು ಬರಿದಾದ ಪಾತ್ರೆ ತುಂಬಿಸುತ್ತವೆ
ಕೋಟಿ ವಿದ್ಯೆ ಕಲಿತರೇನು ಹೊಟ್ಟೆಗೆ ತಿನ್ನುವುದು ಮೇಟಿ ವಿದ್ಯೆಯ ವರದಿಂದಲೇ
ಮೆರೆಯದಿರು ಪಟ್ಟಣದ ದಣಿಯೇ ಒಂದುದಿನ ಕಾಲಗಳೇ ಪಾಠ ಕಲಿಸುತ್ತವೆ
ಇಲ್ಲದವರಿಗೆ ಕೊಟ್ಟ ನೂರು ಭರವಸೆಗಳು ಹುಸಿಯಾಗಿ ಹೋದವು ಸುಳಿವಿಲ್ಲದೆ
ಅನ್ನದಾತನ ಮನೆಯಲ್ಲಿ ಅಗುಳನ್ನವೂ ಸಹ ಕೊಪ್ಪರಿಗೆ ಹೊನ್ನಾಗಿ ಕಾಣಿಸುತ್ತವೆ
ಒಕ್ಕಲಿಗರ ಮನೆಯಲ್ಲಿ ಹುಟ್ಟಿ ಬಂದಿರುವುದೇ ಪೂರ್ವಜನ್ಮದ ಪುಣ್ಯವೆನ್ನುವಳು ಮಧು
ಸಿರಿಧಾನ್ಯ ಕಣಜದ ವೈಭವ ನೋಡಲು ಎರೆಡು ಕಣ್ಣುಗಳೇ ಸಾಲದಾಗುತ್ತವೆ
*********************************************
ಮಧು ಕಾರಗಿ