ಅಂಕಣ ಬರಹ

ಬೆಳೆದು ದೊಡ್ಡವರಾಗುವುದೆಂದರೆ

grayscale photo of person carrying child

ಬೆಳೆದು ದೊಡ್ಡವರಾಗುವುದೆಂದರೆ ಪ್ರಜ್ಞೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುವುದಲ್ಲ.ಹದಿಹರೆಯದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಮನೋಧೋರಣೆಯನ್ನ ನಂತರ ಬದಲಿಸುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಹದಿಹರೆಯದ ಮಕ್ಕಳ ತಾಯ್ತಂದೆಯರು ಬಹಳ ವ್ಯಥಿತರಾಗುವುದು.ಮಕ್ಕಳು ಹೇಳುವ ಒಂದು ಸಣ್ಣ ಸುಳ್ಳು , ಅವರು ತೋರುವ ಒಂದು ಸಣ್ಣ ನಿರ್ಲಕ್ಷ್ಯ ತಂದೆ ತಾಯಿಗೆ ಬಹಳ ನೋವನ್ನುಂಟುಮಾಡುತ್ತದೆ.

ಮಕ್ಕಳೇ ಅವರ ಜಗತ್ತು.ಮಕ್ಕಳಿಗಾಗೇ ಬದುಕು ಸವೆಸುವ ತಾಯ್ತಂದೆಯರನ್ನ ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ಬಹಳಷ್ಟು ಸಲ ಎಲ್ಲೋ ಸೋಲುತ್ತಾರೆ. ಹಾಗೊಮ್ಮೆ ಅರ್ಥ ಮಾಡಿಕೊಂಡರೂ ಕಾಲ ಮಿಂಚಿ ಹೋಗಿರುತ್ತದೆ. ಆ ಮಕ್ಕಳು ಮುಂದೆ ತಾಯಿಯ ಅಥವಾ ತಂದೆಯ ಪಾತ್ರ ಧರಿಸಿದಾಗ ಹಳೆಯದೆಲ್ಲ ನೆನಪಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಮಕ್ಕಳು ಎಂದೂ ಕೆಟ್ಟ ಹಾದಿ ಹಿಡಿಯಲಾರರು ಎಂಬ ನಂಬಿಕೆಯಿಂದಲೇ ತಾಯ್ತಂದೆಯರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು. ಮಕ್ಕಳ ಯಾವುದೋ ಒಂದು ನಡೆಯಿಂದ ಈ ನಂಬಿಕೆಗೆ ಘಾಸಿಯಾದರೂ ಮತ್ತೆ ಅದನ್ನು ಗಳಿಸಲು ಸಾಧ್ಯವೇ ಇಲ್ಲ.

    ಹದಿಹರೆಯದ ಮಕ್ಕಳ ದೃಷ್ಟಿಯಲ್ಲಿ ತಂದೆ ತಾಯಿಯರೆಂದರೆ ಸದಾ ತಮ್ಮ ಬಗ್ಗೆ ಪತ್ತೇದಾರಿ ಕೆಲಸ ಮಾಡುವವರು, ಅನುಮಾನಪಡುವವರು…ಸದಾ ಬೆನ್ನ ಹಿಂದೆ ಹಿಂಬಾಲಿಸುವವರು…ಸದಾ ತಮ್ಮ ಮೊಬೈಲ್ , ನೋಟ್ ಬುಕ್ ಗಳನ್ನ ಕಪಾಟು ,ಚೀಲಗಳನ್ನ ಹುಡುಕುವ ಪತ್ತೇದಾರರು..ನಾನು ದೊಡ್ಡವನಾದರೂ ನನ್ನ ಮೇಲೆ ನಂಬಿಕೆಯಿಲ್ಲ  , ಪ್ರೈವೆಸಿ ಕೊಡುವುದಿಲ್ಲ ಎನ್ನುವುದು ಬಹಳ ಮಕ್ಕಳ ದೂರು .ಆದರೆ ಇಲ್ಲಿ ತಾಯ್ತಂದೆಯರು ನಿಜಕ್ಕೂ ತಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಇಷ್ಟೆಲ್ಲಾ ಮಾಡುತ್ತಾರೆಯೇ ಹೊರತು ಅಪನಂಬಿಕೆಯಿಂದಲಲ್ಲ ಎನ್ನುವುದು ಆ ಬೆಳೆದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ.

       ತಮ್ಮ ಮಕ್ಕಳ ನಡೆನುಡಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳೂ ತಾಯ್ತಂದೆಯರ ಹೃದಯಕ್ಕೆ ಕೂಡಲೇ ಪತ್ತೆಯಾಗಿಬಿಡುತ್ತದೆ.ಒಂದಾನೊಂದು ಕಾಲದಲ್ಲಿ ಅವರೂ ಮಕ್ಕಳೇ ಆಗಿದ್ದವರಲ್ಲವೆ!!

ಈ ಆಧುನಿಕ ,ಡಿಜಿಟಲ್ ಯುಗದಲ್ಲಿ  ಎಲ್ಲರೂ ಅವರವರದೇ  ಆದ ಲ್ಯಾಪ್ ಟಾಪ್, ಮೊಬೈಲ್ ಗಳ ಹಿಡಿದು ಕೆಲಸ , ಆನ್ ಲೈನ್ ಕಲಿಕೆ , ಸೋಷಿಯಲ್ ಮೀಡಿಯಾ ಎಂದು ಮುಳುಗಿ ಹೋಗಿರುವಾಗ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಬದುಕು ನಿಜಕ್ಕೂ  ಅಷ್ಟು ಸಲೀಸಲ್ಲ…ಹದಿಹರೆಯಕ್ಕೆ ಬಂದರೂ ಸಹಾ ಮಕ್ಕಳು ಈ ಜಗತ್ತಿಗೆ , ಈ ಬದುಕಿನ ಅನುಭವಗಳಿಗೆ ಅಪರಿಚಿತರೇ!!

            ಅಪ್ಪ-ಅಮ್ಮದಿರ ಬಗ್ಗೆ ಇದಕ್ಕಾಗಿ ಅಸಮಾಧಾನಗೊಳ್ಳದೆ ನಿನಗೇನು ಗೊತ್ತು  ಈ ಜನರೇಷನ್ ಎಂದು ಹೀಯಾಳಿಸದೆ ಮಕ್ಕಳು ತಮ್ಮ ತಾಯ್ತಂದೆಯರ ವಯಸ್ಸು ,ಅನುಭವಗಳನ್ನ ಗೌರವಿಸಬೇಕಿದೆ. ತಾಯ್ತಂದೆಯರೇ ಬದುಕಲ್ಲ ..ಆದರೆ ತಾಯಗತಂದೆಯರು ಬದುಕಿನ ಬಹುಮುಖ್ಯ ಭಾಗ ಎಂಬುದನ್ನು ಮಕ್ಕಳು ಅರಿಯಬೇಕಿದೆ. ಒಂದೆಡೆ ಕುದಿರಕ್ತದ ವಯಸ್ಸು ಇನ್ನೊಂದೆಡೆ ಸ್ನೇಹಿತರು ಇವೆರಡರ ನಡುವೆ ಅಪ್ಪ ಅಮ್ಮದಿರಿಗೂ ಸಮಯ ಕೊಡುವ ,ಗೌರವ ಕೊಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಅಪ್ಪ ಅಮ್ಮದಿರು ಮಕ್ಕಳಿಗೆ ಸ್ನೇಹಿತರೂ ಆಗಬಲ್ಲರೂ ಪೋಷಕರೂ ಆಗಬಲ್ಲರು .ಆದರೆ ಸ್ನೇಹಿತರೆಂದಿಗೂ ಅಪ್ಪ ಅಮ್ಮನ ಸ್ಥಾನ ತುಂಬಲು ಸಾಧ್ಯವೇ ಇಲ್ಲ.

              ತಾಯ್ತಂದೆಯರಿಂದ ಮುಚ್ಚಿಟ್ಟ ವಿಷಯಗಳು , ಹೇಳಿದ ಸುಳ್ಳುಗಳು ಎಂದಿಗೂ ಮಕ್ಕಳನ್ನು ರಕ್ಷಿಸುವುದಿಲ್ಲ. ಹೀಗೆ ಮಾಡುವುದರ ಮೂಲಕ ಮಕ್ಕಳು ಕೇವಲ ತಮ್ಮ  ತಾಯ್ತಂದೆಯರಿಗೆ ಮೋಸ ಮಾಡುವುದಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆಂದು ಅರಿವಾಗುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ.ಮಕ್ಕಳು  ಬೆಳೆದಂತೆಯೇ ತಾಯ್ತಂದೆಯರೂ ಬೆಳೆಯುತ್ತಾರೆಂಬುದನ್ನು ಮಕ್ಕಳು ಮರೆಯಬಾರದು. ವಯಸ್ಸು ಹೆಚ್ಚುತ್ತಿದ್ದಂತೆ ಆ ತಾಯ್ತಂದೆಯರ ಹೃದಯ ಬಯಸುವುದು ಮಕ್ಕಳ ಪ್ರೀತಿಯನ್ನು ಕಾಳಜಿಯನ್ನು. ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ ಅವರಿಂದ ಏನನ್ನೂ ಬಯಸಬಾರದು ,ನಿರೀಕ್ಷಿಸಬಾರದು  ಎಂದು ಎಷ್ಟೇ ಹೇಳಿಕೊಂಡರೂ ಆ ಜೀವಗಳು ಮಕ್ಕಳಿಗಾಗಿಯೇ ಬದುಕು ಸವೆಸಿ ಜೀವನದ ಸಂಧ್ಯೆಯಲ್ಲಿ ನಿಂತಾಗ ಬೇರಾವ ವಸ್ತು, ಹಣದ ನಿರೀಕ್ಷೆ ಅವರಿಗಿರುವುದಿಲ್ಲ. ಮಕ್ಕಳ ಪ್ರೀತಿ ಮತ್ತು ಸಾನಿಧ್ಯ ಎರಡೇ ಅವರ ನಿರೀಕ್ಷೆಗಳು!.

                ಸದಾ ಅಪ್ಪ ಅಮ್ಮದಿರ ಜೊತೆ ಮಕ್ಕಳು ಇರಲಾಗದು ರೆಕ್ಕೆ ಬಂದ ಹಕ್ಕಿಗಳು ಗೂಡು ತೊರೆದು ಹಾರಲೇ ಬೇಕು .ಅದೇ ಪ್ರಕೃತಿನಿಯಮ.ಆದರೆ ಹಾಗೆ ಹಾರಿ ಹೋದರೂ ಆಗಾಗ್ಗೆ ಮರಳಿ ಗೂಡಿಗೆ ಬಂದು ಕಾಳಜಿ ತೋರುವುದು ಮಾನವನ ಬದುಕಿನ ನಿಯಮವಾಗಬೇಕು.

                ಎಷ್ಟೋ ಬಾರಿ  ಮಕ್ಕಳು ನಾನೇನು ಹುಟ್ಟಿಸು ಎಂದು ಕೇಳಿದ್ದೆನಾ ಎಂದು ಅಪ್ಪ ಅಮ್ಮನನ್ನು ಕೇಳುವುದೂ ಇದೆ. ಈ ಇಂಥ ಮಾತುಗಳಿಂದ ಆ ಹಿರಿಜೀವಗಳಿಗಾಗುವ ಆಘಾತ ಆ ಮಕ್ಕಳಿಗೆ ಅರ್ಥವಾಗಬೇಕಾದರೆ ಅವರೂ ಅಪ್ಪ ಅಮ್ಮದಿರಾಗಬೇಕು!!!ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪ್ಪ ಅಮ್ಮನ ಮನ ನೋಯಿಸಿದ ಮಕ್ಕಳು ನಂತರ ಅರಿತು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಲ್ಲೇನೂ ಉಳಿದಿರುವುದಿಲ್ಲ..ಗೋಡೆಗಂಟಿದ ಅಪ್ಪ ಅಮ್ಮನ  ಮೂಕ ಭಾವ ಚಿತ್ರಗಳ ಬಿಟ್ಟು!!

                ಬರಿದೆ ಪಶ್ಚಾತ್ತಾಪದಿಂದ ಪ್ರಯೋಜನವಿಲ್ಲ.ಹಿರಿಮರಗಳು ಉರುಳಿದ ಜಾಗದಲ್ಲಿ  ಕುಡಿಸಸಿಯಲ್ಲದೇ ಮತ್ತೊಮ್ಮೆ ಏಕಾಏಕಿ ಹಿರಿಯ ಮರವೊಂದು ಮೂಡದು.ಇಂದಿನ  ಬಹುತೇಕ ಮಕ್ಕಳಿಗೆ ಡಿಜಿಟಲ್ ಪ್ರಪಂಚ ಗೊತ್ತಿದೆ, ಸೋಷಿಯಲ್ ಮೀಡಿಯಾ ಗೊತ್ತಿದೆ, ಗೂಗಲ್ ಸರ್ಚ್ ಗೊತ್ತಿದೆಯೆ ವಿನಃ ಬದುಕಿನ ಭಾಷ್ಯ ಗೊತ್ತಿಲ್ಲ.ನಮ್ಮಿಷ್ಟದಂತೆ ಬದುಕುವುದೇ ಬದುಕು ಎನ್ನುವ ಕುರುಡು ಅಹಂ ಅವರನ್ನು ಹಾದಿ ತಪ್ಪಿಸುತ್ತಿದ್ದರೂ ಅದೇ ಸರಿಯಾದ ಹಾದಿ ಎಂದು ಭ್ರಮೆಯಲ್ಲಿ ನಡೆಯುತ್ತಿರುತ್ತಾರೆ. ದುರಂತವೆಂದರೆ ಗೂಗಲ್ ಗಿಂತ ಹೆಚ್ಚಿನ ಜ್ಞಾನ ಇಲ್ಲದ ಅಪ್ಪ ಅಮ್ಮ ಬದುಕಿನ ಅನುಭವಗಳನ್ನು ಬೊಗಸೆ ಬೊಗಸೆ ಮೊಗೆದು ಕುಡಿದಿದ್ದಾರೆ ,ಒಮ್ಮೆ ಕೈ ಚಾಚಿದರೆ ತಮ್ಮ ಬೊಗಸೆಗೂ ಅದನ್ನ ಧಾರೆಯೆರೆಯಲು ಕಾತರರಾಗಿದ್ದಾರೆಂಬ ಸತ್ಯ ಬಹಳಷ್ಟು ಮಕ್ಕಳಿಗೆ ಗೊತ್ತೇ ಆಗದು.

                 ಬಹಳ ಹಿಂದೆ ಸಹೋದ್ಯೋಗಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ.”ಮಕ್ಕಳನ್ನ ದೊಡ್ಡ ಓದು ಓದಿಸಬಾರದು…ವಿದೇಶ ಸೇರಿ ಕೊನೆಗಾಲದಲ್ಲಿ  ನೋಡಲೂ ಬಾರದ ಸ್ಥಿತಿ ಬರೋದೇ ಬೇಡ..ಸುಮ್ನೆ ನಮ್ಮಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹತ್ತಿರವೇ ಇರಲಿ ”  ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಅದಕ್ಕಾಗಿ ಜೀವ ತೆರಲೂ ಸಿದ್ಧವಿರಬೇಕಾದ ತಂದೆಯೊಬ್ಬ ಹೀಗೆ ಹೇಳಿ ತಾಯಿ ಅದಕ್ಕೆ ಹೂಗುಟ್ಟುವ ಪರಿಸ್ಥಿತಿ  ಬಂದಿದೆಯೆಂದರೆ ನಾವಿರುವುದು ಎಂಥಹಾ ದುರಂತದ ಕಾಲದಲ್ಲಿ ಎಂದು ಖೇದವಾಗುತ್ತದೆ. ಆ ತಂದೆ ಹೀಗೆನ್ನಬೇಕಾದರೆ ಸುತ್ತ ಮುತ್ತ ನಡೆವ ಅದೆಷ್ಟು ಘಟನೆಗಳನ್ನ ನೋಡಿ ಆ ಮನಸ್ಸು ರೋಸಿಹೋಗಿರಬೇಕು!!

             ನಮ್ಮ ಕಾಲ ಬೇರೆ ನಿಮ್ಮ ಕಾಲ ಬೇರೆ ..ಅದೆಲ್ಲ ಈಗ ಮೂರು ಕಾಸಿಗೂ ಬಾರದು ಎಂದು ಹಿರಿಯರ ಹಿತವಚನಗಳ ಮೂಲೆಗೊತ್ತುವ ಮಕ್ಕಳಿಗೆ  ಅಪ್ಪ ಅಮ್ಮನೆಂದರೆ ಶತಮಾನ ಹಳೆಯ ಧೂಳು ತುಂಬಿಕೊಂಡ ಮೂಟೆಗಳು!!  ದುರಂತವೆಂದರೆ ಇದೇ ಮಕ್ಕಳಿಗೆ ಮುಂದೊಂದು  ದಿನ ಅವರ ಮಕ್ಕಳಿಂದಲೂ ಇಂತಹುದೇ  ಕಟು ಅನುಭವ ಕಾದಿದೆಯೆನ್ನುವ ಅರಿವೂ ಇಲ್ಲದಿರುವುದು.

             ದೀಪ ತಾನು ಬೆಳಗಿದರಷ್ಟೆ ಮತ್ತೊಂದು ದೀಪವನ್ನು ಬೆಳಗಿಸಬಲ್ಲುದು. ತಾಯ್ತಂದೆಯರ ಬಗ್ಗೆ ಅಕ್ಕರೆ, ಗೌರವ ಹೊಂದಿರುವ ಮತ್ತು ಅದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಮಕ್ಕಳಷ್ಟೇ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಅದನ್ನು ಕಲಿಸಲು ಸಾಧ್ಯವಾಗುವುದು.

      ಎಲ್ಲರೂ ಶ್ರವಣಕುಮಾರನಾಗಲಿ, ಶ್ರೀರಾಮನಾಗಲೀ ,ಭಕ್ತಪುಂಡಲೀಕನಂತಾಗಲೀ ತಾಯ್ತಂದೆಯರ ಸೇವೆ ಮಾಡಲು ಸಾಧ್ಯವಿಲ್ಲ ನಿಜ. ಆದರೆ ಸದಾ ತಾನು ನಿನ್ನೊಂದಿಗಿರುವೆ ಎಂಬ ಸಂತಸದಾಯಕ ಭಾವವನ್ನು  ಹೆತ್ತವರಲ್ಲಿ ಉಂಟುಮಾಡಲು  ಸೋಲಬಾರದು.

                ಮಕ್ಕಳೆಲ್ಲ ತಮ್ಮ ತಾಯ್ತಂದೆಯರ ಪಾಲಿನ ದೀಪವಾಗಲಿ .ಭವಿಷ್ಯದಲ್ಲಿ ಹೊಸ ದೀಪಗಳ ಹಚ್ಚುವ ಬೆಳಗುವ ಹಣತೆಗಳಾಗಲಿ.ಸಾಲು ದೀಪಗಳು ಬೆಳಗಿ ಸುತ್ತಮುತ್ತಲಿರುವ ಕತ್ತಲೆಯ ಮಣಿಸುವಂತಾಗಲಿ.

     ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ |

ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ ||


*******************************************

ಶುಭಾ ಎ.ಆರ್  (ದೇವಯಾನಿ)

ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

2 thoughts on “

  1. ಹದಿಹರೆಯದ ಮಕ್ಕಳ ಪಾಲಕರ ಆತಂಕ,ತಲ್ಲಣಗಳ ನೈಜ ಚಿತ್ರಣ…
    ಎಲ್ಲರು ಹದಿಹರೆಯದ ಮಕ್ಕಳಾಗಿ ತಾಯ್ತಂದೆಯರ ಜೊತೆ ಬೆಳೆದು ಮತ್ತೆ ಹದಿಹರೆಯದ ಮಕ್ಕಳ ತಾಯ್ತಂದೆಯರಾಗಿ ಅವರನ್ನು ಸರಿದಾರಿಗೆ ತರಬೇಕಾದ ಎರಡೆರಡು ರೀತಿಯ ಸ್ಥಿತಿಯಲ್ಲಿ ದಾಟಬೇಕಾದ ವಿಚಿತ್ರ ವಿದ್ಯಮಾನವಿದು…
    ಅತಿ ಆತಂಕ ಪಡುವ ಪಾಲಕರು ಮತ್ತು ಆ ಬಗ್ಗೆ ಕಿಂಚಿತ್ತೂ ಯೋಚಿಸದ ಹದಿಹರೆಯದ ಮಕ್ಕಳು; ತುಂಬಾ ಸಂಕಷ್ಟದ ಕಾಲವಿದು.ಇದನ್ನು ಕೈಗೆತ್ತಿಕೊಂಡು ನಿಭಾಯಿಸುವುದು ಬಹುತೇಕ ಅಸಾಧ್ಯ. ಸಾಧ್ಯವಾದಷ್ಟು ಅವರ ಜೊತೆಗೆ ಹೆಚ್ಚು ವೇಳೆ ಕಳೆಯುವುದು ತೀರ ಅಗತ್ಯ. ಆದರೆ ಇಬ್ಬರೂ ದುಡಿಯುವ ಹಿರಿಯರಿರುವಲ್ಲಿ ಇದು ದುರ್ಲಭ.ಅಜ್ಜ ಅಜ್ಜಿ ಇರುವಂತಿದ್ದರೆ ಸ್ವಲ್ಪ ಪರವಾಯಿಲ್ಲವೇನೋ…
    ಆದರೆ ಅವರು ಕೂಡ ಜೊತೆಯಿರದ ವಾತಾವರಣವನ್ನು ಬಹುತೇಕ ನಾವೇ ಮಾಡಿಕೊಂಡಿದ್ದೇವೆ..!

  2. ನಿಜ ಸರ್ , ನೀವು ಹೇಳಿದಂತೆ ಬಹಳ ವಿಚಿತ್ರ ವಿದ್ಯಮಾನ ಗಳು ನಡೆವ ಕಾಲದಲ್ಲಿ ಬದುಕುತ್ತಿದ್ದೇವೆ..ಮಕ್ಕಳ ಭವಿಷ್ಯದ ಬಗೆಗೆ ಬಹಳ‌ ಆತಂಕವಾಗುತ್ತದೆ

Leave a Reply

Back To Top