ಸ್ವಾರ್ಥ

ಕವಿತೆ

ಸ್ವಾರ್ಥ

ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ

Abstract background of colorful paint on white background

ಗದ್ದುಗೆಯೇರಲು
ಹಣವನು ಎಸೆಯಿತು
ಗಳಿಕೆಯ ತೃಷೆಯಲಿ
ನಶೆಯ ನೀಡಿತು
ಸ್ವಾರ್ಥದ ಮತವನು ಮುತ್ತಿ

ಸಲಿಗೆಯ ಸುಲಿಗೆ ಮಾಡುತ
ಒಸರುವ ಬೆವರಿನ
ಬುತ್ತಿಯ ಕಟ್ಟಿತು
ನೆತ್ತರು ಹಿಚುಕಿ,ನೆಕ್ಕಿ ಕಾಡಿತು
ಕತ್ತಲು ಮುಕ್ಕಿ

ಅನುದಿನ ಮತ್ತಿನಲಿ
ಅಮೃತ ತುತ್ತಿನಲಿ
ಕಡಲಾದರೂ ಕುಡಿದು,
ಗತ್ತಿನಲಿ-ವಿಗತಿಯೆಡೆಗೆ
ಒಂದನ್ಹತ್ತು ಸೇರಿಸಿತು

ಸುಖದ ತಿರುಳ ಸವಿಯುತ
ಸೇವಕನೆಂಬುದ ಮರೆಯಿತು
ಅಡಿಗೊಮ್ಮೆ ಜೊಳ್ಳ ನುಡಿದು,
ಪರರ ಬಾದೆಯನರಿಯದೆ
ನ್ಯಾಯ ನೀತಿ ಮಾತಾಡಿತು

ಕೃತಕ ಕೀರ್ತಿಯ ಪಡೆಯಿತು
ವಿಕೃತ ಸೊಗದಲಿ ಹಾಡಿತು
ಸುಕೃತ ಭಾವವಿರದೆ
ಅಂಬರವೇರಿ
ಕೈ ಬೀಸಿ ಕರಗಿತು

ಯಾರೋ ಬಿತ್ತಿದ ಬೀಜ
ಹೂ-ಕಾಯಿಗಳ ಬಿಡದೆ ತಿಂದು,
ಒಳಗು ಹೊರಗೂ
ಗಿಡದ ಬುಡದ
ನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.
……************************

One thought on “ಸ್ವಾರ್ಥ

  1. ವಾಸ್ತವ ಬಿಚ್ಚಿಟ್ಟ ಅಧ್ಬುತ ಭಾವಭಿತ್ತಿ ಹೊಂದಿದ ಕವಿತೆ….ಚೆನ್ನಾಗಿದೆ

Leave a Reply

Back To Top