ಗಝಲ್
ಸಿದ್ಧರಾಮ ಹೊನ್ಕಲ್
ಪ್ರೀತಿ ಪ್ರೇಮವೆಂಬುದು ಎಂಥ ಕಲ್ಲು ಹೃದಯಕೂ ಸುಂದರ ಮಧುರಯಾತನೆ ಸಖಿ
ದಕ್ಕಿದರು ದಕ್ಕದಿದ್ದರೂ ಭಾವುಕ ಮನದ ಮೂಲೆಯಲಿ ಅನಂತಕಾಲ ಕಾಪಿಡುವುದೇನೆ ಸಖಿ
ಅವರ ಸೋಲು ಸುಖ ತಾರದಿರದು ಉಭಯರಿಗೂ ಗೆಲ್ಲದೇನೆ ಸಖಿ
ಸೋಲಿನ ಸುಖ ಗೆದ್ದ ಗೆಲುವಿಗಿಲ್ಲ ಅನುರಾಗದಲಿ ಸೋಲಬೇಕೆನೆ ಸಖಿ
ಕಾಡದಿರು ಕೆಣಕದಿರು ಕೊಲ್ಲದಿರು ಬರೀ ಮಾತಿನಿಂದಲೇನೆ ಸಖಿ
ಈ ನಿನ್ನ ಕಣ್ಣ ನೋಟದಲ್ಲೇ ಒಂದು ಭರಿಸುವ ಭಾವವೂ ಇದೆಯಲ್ಲೇನೆ ಸಖಿ
ಆ ದೇವರು ಅವಳ ಸೃಷ್ಠಿಸಿದ್ದೇ ನಿಜವಾದರೆ ಇಡಲಿಲ್ಲ ಏಕೆ ಎಲ್ಲರಂತನೆ ಸಖಿ
ಸಂಶಯ ಅಪನಂಬಿಕೆ ಅನುಮಾನಗಳನ್ನು ಏಕೆ ತುಸು ಹೆಚ್ಚು ನೀಡಿದನೆ ಸಖಿ
ನಿರ್ಮೋಹಿಯ ಸಂಗ ಬಯಸಿದವನಿಗೆ ನಿಸ್ಸಂಗವೇ ಪ್ರಸಾದವಾಗಬೇಕೆನೆ ಸಖಿ
ಅಪಾರ ಮೋಹವ ಮುಚ್ಚಿಟ್ಟುಕೊಂಡು ಮನದಲ್ಲೆ ಸದಾ ಕೊರಗಬೇಕೆನೆ ಸಖಿ
ಈ ಖೇದ ತುಂಬಿದ ಮನದಲಿ ಒಲವಿನ ಆಸೆ ತೀರದೆ ಬಾಳು ಬರಡಾಯಿತೇನೆ ಸಖಿ
ಜೀವನ ತುಂಬದೇ ಹೋಯಿತು ಹಾಯ್! ಹೊನ್ನು’ಬಾಳು ಇನಿತು ಕಿರಿದಾಗಿ ಹೋಯಿತೇನೆ ಸಖಿ
((ಗೈರ ಮುಸಲ್ ಸಲ್ ಸಂಪೂರ್ಣ ಮತ್ಲಾ ಗಜಲ್)
**********************
*******************************************************