ಗಜಲ್
ಅರುಣಾ ನರೇಂದ್ರ
ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿ
ನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ
ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವು
ಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ
ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿ
ಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ
ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆ
ಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ
ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿ
ಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ..
*************************************