ನನ್ನಜ್ಜ…..

ಕವಿತೆ

ನನ್ನಜ್ಜ…..

ಕೋಟಿಗಾನಹಳ್ಳಿ ರಾಮಯ್ಯ

ಇರಬೇಕು ಇದ್ದಿರಲೇಬೇಕು
ಅಜ್ಜನೊಬ್ಬ ನನಗೆ
ನಿತ್ಯ ಮುದ್ದೆ ಗೊಜ್ಜಿಗೆ
ನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲ
ರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರ
ಮಳೆ ಮಾತ್ರ ,
ಜಡಿಮಳೆ ಮಾತ್ರ
ಸುರಿಮಳೆ ಮಾತ್ರ
ಸುರಿತುತ್ತಲೇ ಇದೆ ಸಥ
ದಕ್ಕದಲ್ಲ ದಣಿದು ದಾವಾರಿದ
ಕಿರು ನಾಲಗೆಗೆ ಕಿರು ತುಂತುರ ಹನಿ
ನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತ
ಕೇಳಿಯೂ ಕೇಳದಂತೆ
ನೋಡಿಯೂ ನೋಡದಂತೆ
ಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆ
ನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತ
ಅರಬ್ಬಿನ ಮರಳುಗಾಡಲಿ
ಒಂಟೆ ಕೊರಳ ಗಂಟೆ ಕಿಂಕಿಣಿಯಲಿ
ಗೊತ್ತಿದ್ದೂ ನಾನು ಇಲ್ಲಿರುವೆ ಎಂದು
ಕೈಗೆ ಸಿಗದಂತೆ ಹೊನ್ನೇರಿನಲಿ
ಬಂದಿದೆ ಬಿತ್ತನೆ ಹತ್ತಿರ
ನೊಗ ಹೇರಿಸಿಲ್ಲ ಇನ್ನೂ ಹೆಗಲಿಗೆ
ಉತ್ತು ಬಿತ್ತುವ ಮಾತು ಅತ್ತಗೆ
ದತ್ತೂರಿ , ಗರಿಕೆ , ತುಂಗೆ ಒತ್ತಗೆ ಒತ್ತೊತ್ತಗೆ
ತುಂಬಿ ಹೋಗಿದೆ ನೆತ್ತಿ ನೊಣ ಸೊಕ್ಕಿ
ಗೆಡ್ಡೆ ರಸ ಬೊಡ್ಡೆ
ಅರಸೊತ್ತಿಗೆಯ ಉನ್ಮತ್ತ ಹಕ್ಕಿನಲಿ
ಪಾದುಕಾ ಪಟ್ಟಾಭಿಷೇಕದ ಅಣಕು ಪ್ರಹಸನದಲಿ
ಅಜ್ಜ ಬಂದಾಗ ಬೀಜ ಬಿತ್ತುವ ಹೊತ್ತು
ಹದಗೊಂಡಿಬೇಡವೇನು ನೆಲ ಉತ್ತು
ನನ್ನಜ್ಜ ನೇಗಿಲಯೋಗಿ
ಕಣ್ಣೂರ ಕಪ್ಪು ಕುಂಕುಮ ಭೂಮಿಯಲಿ
ಶಬ್ದ , ಅಕ್ಷರ , ಧ್ವನಿ ರೂಪ
ಬಿತ್ತುವ ಕೂರಿಗೆಯ ರಾಗ ಪರಾಗ
ಬಿತ್ತಲೇ ಬೇಕಲ್ಲ ಅಜ್ಜ ಬಂದಾಗ
ಹಿಡಿದ ಕೈಕೂರಿಗೆಗೆ ಒಂದೆರೆಡಾದರೂ ಘಟ್ಟಿ ಕಾಳು
ಅರಳಿ ಹೂವ್ವಾಗುವಂತೆ ಹುಚ್ಚೆಳ್ಳ ಹೂ ಬಾಳು
ನನ್ನಜ್ಜ ಹೂಗಾರ
ಮಕರಂದ ಮಮಕಾರ
ರಸಸಿದ್ದ ಮಾಯಕಾರ
ಗಂಧ ಹೂವ್ವಿನದಿರಲಿ
ನರನರವ ಕುಸುಮದ ಒಡಲೇ ಇರಲಿ
ತೀಡಿ ತಂಗಾಳಿ , ನಾದು ಬಿರುಗಾಳಿ
ಪಕಳೆ ಹೂ ಕಾಡ್ಗಿಚ್ಚನಬ್ಬಿಸಿ ಉರುಳಿಸಿ ಹೊರಳಿಸಿ
ಘಮಲು ಘಮಲಿನ ಹೂ ದವನ ಬೆಳೆವ ಮಾಲಿ
ಕನಸಿನ್ಹೂದೋಟಗಳ ಕೂಲಿ
ಆದಿಯಿಂದಲೇ ಹೊತ್ತಿದ್ದಾನೆ ಚಟ್ಟಪಟ್ಟ
ಆಳರಸರ ಪಲ್ಲಕಿ ಮೇನೆ , ಸತ್ತ ನಾಯಿ , ಸಗಣಿ,
ಬಂಗಾರದ ಗಣಿ
ನನ್ನಜ್ಜ ಮಾಲಿಗೂ ಮೊದಲು ಝಾಡಮಾಲಿ
ಗುಡಿಸಿ ಕಲ್ಯಾಣದ ಓಣಿಗಳನು
ಆವಂತಿ , ಅಮರಾವತಿ , ಹಸ್ತಿನಾವತಿ , ರಾಜಬೀದಿಗಳನು….
ಮುಗಿದ ದಾಸೋಹದ ಎಂಜಲೆಲೆ ರಾಶಿ
ಅಗಳು , ತೇಗು , ಹೂಸು ಉಚ್ಚೆ ಬಚ್ಚಲ ಬಾಚಿ
ಸತ್ತೆಮ್ಮೆ ಕರ ಹೊತ್ತು ನಡೆದವನು….
ಕೂದು ಗುಡ್ಡೆ ಬಾಡು ಪಾಲ್ಹಾಕಿ ಈಚಲ ಹೆಂಡಕೆ ಸುಟ್ಟು ಕೊರಬಾಡಾಗಿ ನೆಂಜಿಕೊಂಡವನು.
ನನ್ನಜ್ಜ ಕಟುಕ.
ಕಡಿಯುತ್ತಾನೆ , ಕತ್ತರಿಸುತ್ತಾನೆ , ನರ ಹರಿಯುತ್ತಾನೆ
ಹಿಡಿದ ಕಟುಗತ್ತಿ ಗುಲಾಬಿ ಗುತ್ತಿ
ಕುಸುಮ ಕೋಮಲ ಖಡ್ಗದಲಗು
ನನ್ನಜ್ಜ ಕಡಿಯುತ್ತಾನಾದ್ದರಿಂದ ಕಟುಕ.
ನನ್ನಜ್ಜ ಮೂಳೆ , ಮಾಂಸದ ತಜ್ಞ….
ಗೋವಿನದೂ ಸೇರಿದಂತೆ
ಕೋಣನದಂತೂ ಹೆಂಡ ಕುಡಿದಷ್ಟೇ ಸಲೀಸು .
ಅಜ್ಜ ಕಂಡಿಲ್ಲ ಇನ್ನೂ…
ನಡೆದ ಹೆಜ್ಜೆ ಗುರುತು
ಹಚ್ಚೆಯಾಗಿದೆ ಹೆಗ್ಗಲ್ಲ ಬೆನ್ನಮೂಳೆಯಲಿ…
ನೀಲ ನಕ್ಷೆಯಾಗಿದೆ ಆಕಾಶ – ಬ್ರಹ್ಮಾಂಡ ಲೀಲೆಯಲಿ
ನನ್ನಜ್ಜ
ಬುದ್ದ , ಮಹಮದ
ಸಿದ್ದ ರಸಸಿದ್ದ
ಏಸುವಿನ ಮೊಳೆ ಗುರುತು
ಇನ್ನೂ ಅಂಗೈಯಲ್ಲಿ ಮಾಯದೆ ಹಸಿ ಹಸಿ
ಇರಾಕಿನ ಮರಳ ಹಾದಿಗಳು ಹಾಸಿವೆ
ಅವನ ಪಾದಗಳಡಿ
ಗೋ ಪಾದವಾದರೂ ಅಷ್ಟೇ ಹುಲಿ ಪಾದವಾದರೂ ಅಷ್ಟೇ
ಪ್ರೇಮದ ಸಿರಿಪಾದ ಎದೆ ಹಾಲು ಸುರಿಸುವಾಗ
ಖರ್ಜೂರ , ಕಾಫಿ , ಹೂಬಳ್ಳಿ ಜವೆಗೋದಿ
ಜೊತೆಗೂಡಿ ಹಿಂಬಾಲಿಸಿ ಬರುವಾಗ
ನನ್ನಜ್ಜನ ಹೆಚ್ಚೆಯಡಿಯಲ್ಲಿ ನಾದ ನದಿ
ಜೀವವೃಕ್ಷದ ಚಿಗುರು
ನನ್ನಜ್ಜನ ನಡೆ
ಮೃದು ಮಧುರ
ಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲು
ಬುಲ್ ಬುಲ್ ಸಿತಾರ ಝರಿ ಜುಳು ಜುಳು ಗುನುಗು…

*****************************************************

Leave a Reply

Back To Top