ಕವಿತೆ
ಆ ಪ್ರೀತಿಯನ್ನು
ಮೀನಾಕ್ಷಿ ಹರೀಶ್
ಅವ್ಯಕ್ತ ವಾದ ಇಚ್ಛೆ ಇದ್ದರೂ
ವ್ಯಕ್ತ ಮಾಡದೆ, ಕ್ಷಣ ಕ್ಷಣಕ್ಕೂ ಮುಗುಳು ನಗುತ್ತಲೇ
ದಿನಗಳು ಸವೆದವು ನಿರ್ಲಿಪ್ತತೆ ಯಿಂದ
ಹಗಲಲ್ಲಿ ಮುಗುಳು ನಗು
ಇರುಳಲ್ಲಿ ಮೌನದ ನಗು
ಪ್ರೀತಿಗಾಗಿ ಹುಡುಕಿದವು ಕಣ್ಣುಗಳು
ನಿಂತಲ್ಲೇ ಕಡಲ
ನಿರೀಕ್ಷೆಯೊಳು ಕಾಯುತ್ತ
ಸರಿದು ಹೋದವು ಹಲವಾರು ವಸಂತಗಳು
ಕಂಗಳು ತುಂಬಿದವು ಸೋಲಿನ ಹನಿಯಿಂದ
ಮತ್ತೆ ಮತ್ತೆ ಸೋಲುತ್ತ ನಿರಾಸೆಯಲಿ
ಹೃದಯದೆಲ್ಲ
ಇಷ್ಟಗಳು ಕಷ್ಟಗಳಾದವು
ಕಾಮನೆಗಳು ವೈರಾಗ್ಯಕ್ಕೆ ವಾಲಿದವು
ಅಂಗಳದಲ್ಲಿ ನೂರಾರು ದೀಪಗಳು ಒಮ್ಮೆಲೆ ಬೆಳಗಿದವು
ತಾಳದಾಯಿತು ಆ ವೈರಾಗ್ಯಕ್ಕೆ ಆ ಬೆಳಕು,
ಹೋಗಿಬಿದಲೇ ಆ ಒಲವಿನತ್ತ
ಬಿಗುಮಾನ ಬಿಟ್ಟು
ನಿಂತುಬಿಡಲೇ ಎನಿಸಿತು ಆ ಪ್ರೀತಿಯ ಉಸಿರಿನತ್ತ
ಬಿಡಲೋಲ್ಲದು ನಾ ಕಟ್ಟಿದ ವೈರಾಗ್ಯವು ಆ ಉಸಿರಿನತ್ತ
ಬೇಕೆನಿಸಿತು ಮನಕೆ ನಿರ್ಮಲವಾದ ಪ್ರೀತಿಯ ಆಸರೆಯೊಂದ
ಸಿಗುವುದೇ ಆ ನಿರ್ಮಲ ಪ್ರೀತಿಯು ಆ ಕಡಲಿಂದ
ನಿಂತಲ್ಲೇ ಕುಳಿತೆನು ವೈರಾಗ್ಯದ
ನಿಟ್ಟುಸಿರಿನಿಂದ
ಕಳೆದುಕೊಳ್ಳಲಾರೆನು ಆ ಪ್ರೀತಿಯನ್ನು
***********************************************