ಅಂಕಣ ಬರಹ

ಸುಮ್ಮನಿದ್ದರಿದೇನಯ್ಯಾ ?

ಚಿತ್ರಗಳು ಅಂತರ್ಜಾಲ ಕೃಪೆ

ಗೋತ್ರನಾಮವ ಬೆಸಗೊಂಡರೆ

ಮಾತನೂಂಕದೆ ಸುಮ್ಮನಿದ್ದಿರಿದೇನಯ್ಯಾ ?

ತಲೆಯ ಕುತ್ತಿ ನೆಲವ ಬರೆಯುತ್ತಿದ್ದಿರಿದೇನಯ್ಯಾ ?

ಗೋತ್ರ ಮಾದಾರ ಚೆನ್ನಯ್ಯ,

ಡೋಹಾರ ಕಕ್ಕಯ್ಯನೆಂಬುದೇನು ?

ಕೂಡಲ ಸಂಗಯ್ಯ ? ೧

ವೈಧಿಕ ಚಿಂತನೆಗಳಿಗೆ ವಿರುದ್ಧವಾಗಿಯೇ ಒಡಮೂಡಿದ ವಚನ ಚಳುವಳಿಯು ಬಹುಸೂಕ್ಷ್ಮವಾಗಿ ಅಲ್ಲಿನ ಆಚಾರ, ವಿಚಾರ, ನಡೆ ನುಡಿಗಳನ್ನು ಖಂಡಿಸುತ್ತಲೇ ಪರ್ಯಾಯ ರಚನೆಯನ್ನು ಮಾಡಿರುವುದು. ಚಳವಳಿಯೊಂದರ ನೇತಾರ ಪ್ರತೀ ಕ್ಷಣವೂ ಜಾಗೃತನಾಗಿರಬೇಕು ಎಂಬುದಕ್ಕೆ ಬಸವಣ್ಣನವರು ಉದಾಹರಣೆ. ಬಸವಣ್ಣನವರ ವಚನಗಳಲ್ಲಿ ವೈಧಿಕರು ಹೇಳುವ “ಉತ್ತಮ” ಎಂಬ ಉದನ್ನು ಒಪ್ಪಲಾರದ, ಅದಕ್ಕೊಂದು ಪರ್ಯಾಯ ರಚನೆಯನ್ನು ಮಾಡಿ ಸಾಮಾನ್ಯ ಜನರನ್ನೂ ನಡೆ, ನುಡಿ, ಆಚಾರ, ವಿಚಾರಗಳಿಂದ ಉತ್ತಮರಾಗುವುದಕ್ಕೆ ಹಾದಿಗಳನ್ನು ಕಾಣಿಸಿದ್ದಾರೆ. ಅಂತಹ ವಚನಗಳಲ್ಲಿ ಮೇಲಿನದೂ ಒಂದು. ಧರ್ಮದ ಆಚರಣೆಗಳಲ್ಲಿ “ಅಹಂಕಾರ” ದ ದ್ಯೋತಕವಾಗಿ ನಿಲ್ಲುವುದು ಗೋತ್ರ. ವೈಧಿಕ ಋಷಿಗಳು, ಯತಿಗಳ ಹೆಸರನ್ನು ಗೋತ್ರಗಳನ್ನಾಗಿ ಮಾಡಿಕೊಂಡು ತಮ್ಮ “ಕುಲ” ಕ್ಕೆ ಇಟ್ಟುಕೊಂಡು ಶ್ರೇಷ್ಟವೆನ್ನುವ ಮಾತುಗಳನ್ನು ಮೇಲಿನ ವಚನದಲ್ಲಿ ಕೆಡವಿ ಮತ್ತೊಂದನ್ನು ಕಟ್ಟಿರುವುದು ಇದರಲ್ಲಿನ ವಿಶೇಷ.

ಈ ಮೇಲಿನ ವಚನದಲ್ಲಿ ಎರಡು ಅಂಶಗಳು ಗಮನ ಸೆಳೆಯುತ್ತವೆ.‌ ಇದೊಂದು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳೆರಡರೊಡನೆಯೂ ಸಂವಾದ ನಡೆಸುವಂತಿದೆ. ಪ್ರತಿಯೊಂದು ಸಂವಾದಕ್ಕೂ, ವಾದಕ್ಕೂ ತನ್ನದೇ ಆದ ವ್ಯಾಪ್ತಿ, ಮಿತಿ ಇರುವಂತೆ ಈ ವಚನದ ಮಾತುಗಳು ಸಹಾ ಗೋತ್ರನಾಮದಿಂದ ಗುಂಪಾದ ಕುಲದವರೊಂದಿಗಿನ ಸಂವಾದವಾಗಿದೆ. ಹಾಗೆಯೇ ಗೋತ್ರನಾಮವಿಲ್ಲದವರೊಡನೆ ಸಂವಾದ ನಡೆಸಿ ಹಾದಿಯನ್ನೂ ತೋರಿಸುತ್ತಿದೆ. ಇದೊಂದು ವ್ಯಕ್ತಿಯೊಬ್ಬ ಏಕಕಾಲದಲ್ಲಿ ಎರಡು ಸಮುದಾಯಗಳೊಂದಿಗೆ ನಡೆಸುತ್ತಿರು ಸಂವಾದವಾಗಿದೆ. ಈ ವಚನದ ಆಂತರ್ಯದಲ್ಲೊಂದು ಸಿಟ್ಟು ಎರಡೂ ಸಮುದಾಯಗಳ ನಡೆಯ ಬಗೆಗೂ ಇದೆ. ಆ ಸಿಟ್ಟು ಕೇವಲ ವಿರೋಧಿಸಬೇಕೆಂಬ ಸಿಟ್ಟಲ್ಲ, ಕ್ರಿಯಾಶೀಲವಾದ, ರಚನಾತ್ಮಕವಾದ ಸಿಟ್ಟು. ಒಂದು ಗೋತ್ರನಾಮವನ್ನು ಕೇಳಿ ಅವಮಾನಿಸುವ ಒಂದು ಗುಂಪು, ಆ ಗೋತ್ರನಾಮವನ್ನು ಹೇಳಲಾರದ ಅಸಹಾಯಕರ ಮತ್ತೊಂದು ಗುಂಪು. ಹೀಗೆ ಎರಡು ಗುಂಪುಗಳಿಗೂ ಕೊಟ್ಟ ನಿರ್ದಿಷ್ಟ ಉತ್ತರವಾಗಿ ಈ ವಚನ ಮುಖ್ಯವಾಗುತ್ತದೆ.

ಈ ವಚನವು ಮುಂದೆನಡೆಯಬಹುದಾದ ಒಂದು ಘಟನೆಯನ್ನು ಕಲ್ಪಿಸಿಕೊಂಡು ಮಾತನಾಡುತ್ತಿರುವುದಲ್ಲ. ನಡೆದ ಘಟನೆಗೆ ಸ್ಪಂದಿಸಬೇಕಾದ ರೀತಿಯನ್ನು ಹೇಳುತ್ತಿದೆ. ಗೋತ್ರದ ಹೆಸರನ್ನು “ಬೆಸಗೊಂಡರೆ” ಎಂಬ ವರ್ತಮಾನಕಾಲ ಕ್ರಿಯಾಪದಕ್ಕೆ, ಉತ್ತರಿಸಲಾಗದೆ “ಸುಮ್ಮನಿದ್ದಿರಿದೇಕಯ್ಯ” ಎಂಬ ವರ್ತಮಾನದ ಕ್ರಿಯಾಪದದಲ್ಲಿಯೇ ಉತ್ತರಿಸುವಂತೆ ಹಾದಿ ಕಾಣಿಸುತ್ತಿದೆ. ಅದರೊಂದಿಗೆ ಪ್ರಶ್ನೆ ಮಾಡಿಸಿಕೊಂಡವರಿಂದಾದ ಎರಡು ಆಂಗಿಕಾಭಿವ್ಯಕ್ತಿಯೂ ವಚನದಲ್ಲಿ ಬಂದಿದೆ. ಗೋತ್ರವಿಲ್ಲದವರಿಗೆ ಗೌರವವಿಲ್ಲ ಎಂಬ ವೈಧಿಕರೆದುರು “ಮಾತನೂಂಕದೆ” ಅವಮಾನಿತರಾಗಿ ಮೌನದಿಂದ ಇರುವುದು ಮತ್ತು ಅವಮಾನ ನಾಚಿಕೆಗಳಿಂದ “ತಲೆಯ ಕುತ್ತಿ ನೆಲವ ಬರೆಯುತ್ತಿದ್ದಿರಿದೇನು” ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಸಮುದಾಯವೊಂದು ಮಾತನಾಡುವ ಅವಕಾಶವೇ ಇಲ್ಲದ ಮತ್ತು ತಲೆ ಎತ್ತಿ ನಡೆಯಲಾರದ ಎರಡೂ ಕ್ರಿಯೆಗಳ ವಿರುದ್ಧವಾದ ಬಸವಣ್ಣನವರಲ್ಲಿನ ಸಿಟ್ಟು ಎದುರು ಪಕ್ಷದವರೊಡನೆ ಮಾತನಾಡುವಂತೆ, ತಲೆ ಎತ್ತಿ ನಿಲ್ಲುವಂತೆ ನೇರವಾಗಿ ಉತ್ತರವನ್ನು ಕೊಡುತ್ತಿದೆ. ಅಸ್ಥಿತ್ವವನ್ನು ಹೇಳಿಕೊಳ್ಳುವ ಬಸವಣ್ಣನವರ ಕ್ರಮವನ್ನಿಲ್ಲಿ ಗಮನ ಸೆಳೆದುಬಿಡುತ್ತದೆ.

ಪ್ರಶ್ನೆಗೆ ಪ್ರಶ್ನೆಗಳನ್ನೇ ಉತ್ತರವನ್ನಾಗಿಸಿರುವ ಈ ವಚನದ ಆಂತರ್ಯದಲ್ಲಿ ನಡೆದಿರುವ ಭಾಷಿಕ ಸಂರಚನೆಯ ಸೂಕ್ಷ್ಮತೆಯೇ ಗಮನಸೆಳೆಯುತ್ತದೆ. ನಾಲಕ್ಕು ಪ್ರಶ್ನೆಗಳನ್ನು ಒಂದು ಪ್ರಶ್ನೆಗೆ ವಿರುದ್ಧವಾಗಿ ನಿಲ್ಲಿಸುತ್ತಿದ್ದಾರೆ. ಇದರೊಳಗಿನ ಸೂಕ್ಷ್ಮತೆ ತನ್ನ ಶಿವಶರಣರ ಬಾಯಿಂದರೇ ಉತ್ತರ ತರಿಸಬೇಕಾದ ತುರ್ತಿನ‌ಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಂದು ಪ್ರಶ್ನೆಗಳು ಕೇಳಿದೊಡನೆ ಉಂಟಾಗುವ ಉತ್ತರವನ್ನೊಮ್ಮೆ ಗಮನಿಸಿ

ಪ್ರ. ಮಾತನೂಂಕದೆ ಸುಮ್ಮನಿದ್ದಿರಿದೇನಯ್ಯಾ ?

. ಹೌದು, ಸುಮ್ಮನಿದ್ದೆವು. ಮುಂದೆ ಸುಮ್ಮನಿರಲಾರೆವು ಮಾತನಾಡುವೆವು.

ಪ್ರ. ತಲೆಯ ಕುತ್ತಿ ನೆಲವ ಬರೆಯುತ್ತಿದ್ದಿರಿದೇನಯ್ಯಾ ?

. ಹೌದು, ತಲೆಯ ಕುತ್ತಿ ನೆಲವ ಬರೆಯುತ್ತಿದ್ದೆವು. ಮುಂದೆ ಹಾಗೆ ಮಾಡಲಾರೆವು.

ಪ್ರ. ಗೋತ್ರ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯನೆಂಬುದೇನು ?

. ಹೌದು ನಮ್ಮ ಗೋತ್ರನಾಮ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ ಎಂಬುದು ಅರ್ಥವಾಯಿತು.

ಪ್ರ. ಕೂಡಲ ಸಂಗಯ್ಯ ?

ಉ. ಹೌದು. ಕೂಡಲ ಸಂಗಯ್ಯನ ಸಾಕ್ಷಿಯಾಗಿ ಗೋತ್ರನಾಮವ ಬೆಸಗೊಂಡರೆ ಸುಮ್ಮನಿರಲಾರೆವು, ತಲೆಯ ಕುತ್ತಿ ನೆಲವ ಬರೆಯಲಾರೆವು, ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯನೆಂದು ಗೋತ್ರದ ಹೆಸರೆಂದು ಹೇಳುವೆವು.

ಹೀಗೆ ಒಂದು ಪ್ರಶ್ನೆ, ಎರಡು ಅವಮಾನಿತ ಕ್ರಿಯೆಗಳಿಗೆ ಪರ್ಯಾಯ ಆಂತರಿಕವಾಗಿ ಗಟ್ಟಿಯಾಗಿಸಿ ಉತ್ತರ ಬರುವಂತೆ ಮಾಡುವಲ್ಲಿನ ಬಹುಸೂಕ್ಷ್ಮ ಭಾಷಿಕ ರಚನೆ ಇದಾಗಿದೆ. ಪ್ರಶ್ನಿಸಿಕೊಂಡವರಿಗೆ ಮತ್ತೊಂದಷ್ಟು ಪ್ರಶ್ನೆಯನ್ನೆಸೆದು ಅಪೇಕ್ಷಿತ ಉತ್ತರವನ್ನು ಅವರಿಂದಲೇ ಆತ್ಮಸಾಕ್ಷಿಯಾಗಿ ಬರೆಸುವ ಭಾಷಿಕ ಕಲೆಗಾರಿಕೆ, ಸಮೂಹ ಸಂವಹನ ವಿಧಾನ ಮತ್ತು ಅಸ್ಥಿತ್ವವನ್ನು ಕಂಡುಹಿಡಿದುಕೊಳ್ಳುವಲ್ಲಿ ನೇತಾರನೊಬ್ಬ ಮಾಡಿರುವ ಕಾರ್ಯಗಳಿವು.

ವಚನದಲ್ಲಿ ಬಹುಮುಖ್ಯವಾದ ವೈಧಿಕರ “ಗೋತ್ರನಾಮ”‌ಪದಕ್ಕೆ ಪರ್ಯಾಯವಾಗಿ ಮತ್ತೆರಡು ಅದೇ ಗೋತ್ರನಾಮವನ್ನು ಕಟ್ಟುವಲ್ಲಿನ ಬಸವಣ್ಣನವರಲ್ಲಿನ ಐತಿಹಾಸಿಕ ದೃಷ್ಟಿಕೋನ ಕೆಲಸ ಮಾಡಿರುವ ಪರಿಯು ಬೆರಗಾಗಿಸುತ್ತದೆ. ಮತ್ತು ಅವರು ಹೇಳಿರುವ ಇಬ್ಬರು ವ್ಯಕ್ತಿಗಳ ಬದುಕಿನ ನಡೆಯನ್ನು ಗಮನಿಸಿದರಂತೂ ಒಂದಷ್ಟು ಭಯವೆನಿಸುವಂತಿದೆ. ಅದರ ಬಗೆಗೆ ಒಂದಷ್ಟು ವಿವೇಚಿಸಿ ನನ್ನ ಮಾತುಗಳಿಗೆ ಕೊನೆ ಕಾಣಿಸುವುದು ಉತ್ತಮವೆನಿಸುತ್ತದೆ.

. ಮಾದಾರ ಚೆನ್ನಯ್ಯ

ಬಸವಣ್ಣನವರಿಗಿಂತ ನೂರುವರ್ಷಗಳಿಗೂ ಹೆಚ್ಚು ಹಿಂದೆ ಬದುಕಿದ್ದ ವಚನಕಾರನೀತ. ಈತಬೊಬ್ಬ ಗುಪ್ತಭಕ್ತ. ಅರವತ್ತಕ್ಕೂ ಹೆಚ್ಚು ವರ್ಷಗಳು ಗುಪ್ತ ಭಕ್ತಿ ಮಾಡಿಕೊಂಡಿದ್ದವನು. ಚೋಳರಾಯನ ಆಸ್ಥಾನದಲ್ಲಿನ ಕುದುರೆ ಲಾಯದಲ್ಲಿ ಕೆಲಸ ಮಾಡುತ್ತಿದ್ದವನು. ಇವನ ಬಗೆಗೆ ಎರಡು ರೀತಿಯ ಚರ್ಚೆಗಳಿವೆ. ಈತ ತಮಿಳುನಾಡಿನ ಶಿವಭಕ್ತನೆಂದು ಕೆಲವರು ಕರೆದರೆ, ಈತ ಕನ್ನಡನಾಡಿನವನು ಎಂದು ಕೆಲವರ ಅಭಿಪ್ರಾಯ. ಈ ವಿಷಯವನ್ನು ಕುರಿತು ಡಾ. ಎಂ. ಚಿದಾನಂದಮೂರ್ತಿಗಳು ಮತ್ತು ಡಾ. ಎಸ್. ವಿದ್ಯಾಶಂಕರರ ನಡುವೆ ನಡೆದಿರುವ ಚರ್ಚೆಯೇ ಬಹಳ ವಿಸ್ತಾರವಾದದ್ದು, ಇರಲಿ. ಚೋಳರಾಜನ ಕುದುರೆ ಲಾಯದಲ್ಲಿ ಹುಲ್ಲಿನ ಕಾಯಕವನ್ನು ಮಾಡುತ್ತಾ, ಗುಪ್ತಭಕ್ತನಾಗಿದ್ದುದನ್ನು ಎಲ್ಲರೂ ಒಪ್ಪಿದ್ದಾರೆ. ಚೊಳರಾಜನ ಆಡಂಬರದ ಭಕ್ತಿಗೆ ಶಿವ ಮೆಚ್ಚದೆ, ಮಾದಾರ ಚೆನ್ನಯ್ಯನ ಗುಪ್ತಭಕ್ತಿಗೆ ಮೆಚ್ಚಿ ಇವನ ಮನೆಯಲ್ಲಿ ಅಂಬಲಿ ಉಂಡ ಕತೆಯನ್ನು ನೆನಪಿಸಿ.

ಮೇಲಿನ ವಚನದಲ್ಲಿ ಶಿವನನ್ನು ಒಲಿಸಿಕೊಳ್ಳುವಲ್ಲಿ ಗುಪ್ತ ವೀರಮಾಹೇಶ್ವರ ಭಕ್ತಿಯೇ ಮುಖ್ಯವೆಂದು ಬದುಕಿ ತೋರಿದ ಮಾದಾರ ಚೆನ್ನಯ್ಯನಲ್ಲಿನ ನಡೆ, ನಿಲುವು, ಒಲವನ್ನು ಮಧ್ಯೆ ತಂದು ಪ್ರಶ್ನೆ ಕೇಳಿದವರಿಗೆ, ಉತ್ತರ ಕೊಡಬೇಕಾದವರಿಗೆ ಒಂದು ದೊಡ್ಡ ಬದುಕಿನ ಕ್ರಮವನ್ನು ನೆನಪಿಸಿದ್ದಾರೆ. ಬಸವಣ್ಣ ತನ್ನ ವಚನಗಳಲ್ಲಿ ಇಪ್ಪತ್ತೆಂಟು ಸಲ ಮಾದಾರ ಚೆನ್ನಯ್ಯನನ್ನು ಸ್ಮರಿಸಿದ್ದಾನೆ. ತನ್ನ ಸಹೋದರಿಯ ಮಗನಿಗೆ “ಚೆನ್ನ” ಎಂಬ ವಿಶೇಷಣವನ್ನು ನೀಡಿರುವುದರ ಹಿಂದಿನ ಪ್ರೀತಿ, ಗೌರವಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಬಸವಣ್ಣನವರ ಕಾಲಾನಂತರ ಶಿವಶರಣರ ಬದುಕನ್ನೇ ಕಥೆಯಾಗಿಸಿದ ಹರಿಹರ “ಮಾದಾರಚೆನ್ನಯ್ಯಗಳ ಮಹಾತ್ಮೈ” ಎಂಬ ರಗಳೆಯನ್ನು ಸಹಾ ಬರೆದಿದ್ದಾನೆ.

. ಡೋಹರ ಕಕ್ಕಯ್ಯ

ಕಲ್ಯಾಣಪಟ್ಟಣದಲ್ಲಿದ್ದ ಬಸವಣ್ಣನವರ ಸಮಕಾಲೀನನಿವನು. ಜೋದರ ಕುಲದ ಈ ಶರಣ ಮಾಳವದಿಂದ ಬಂದಿದ್ದನು. ಶಿವನಿಂದೆಯನ್ನು ಕೇಳದ ವೀರಭಕ್ತನೀತ. ಬ್ರಾಹ್ಮಣನೊಬ್ಬ ಹರಿಯನ್ನು ಹೊಗಳಿದಾಗ ಅವನನ್ನು ಕೊಂದನೆಂಬ ಕಥೆಯೂ ಇದೆ. ಬಸವಣ್ಣನನ್ನು ಕಕ್ಕಯ್ಯನ ಮಡದಿ ಪ್ರಸಾದಕ್ಕೆ ಕರೆಯುತ್ತಾಳೆ. ಅದಕ್ಕೆ ಉತ್ತರ ಕೊಡದೆ ಬಸವಣ್ಣನವರು ನಡೆದುಬಿಡುತ್ತಾರೆ. ಇದರಿಂದ ನೊಂದ ಹೆಂಡತಿಗೆ “ನಾವು ಬಸವರಾಜನ ಚರಣಸಮಕ್ಕೆ ಬಪ್ಪವೆ?” ಎಂದು ಉತ್ತರ ಕೊಡುತ್ತಾನೆ. ಇದನ್ನೆಲ್ಲಾ ಧ್ಯಾನದಲ್ಲಿದ್ದ ಬಸವಣ್ಣ ಗಮನಿಸಿ ತಾನು ಉತ್ತರ ಕೊಡದೆ ಬಂದ ತಪ್ಪು ಅರಿವಾಗಿ ಇವನ ಮನೆಯ ಬಾಗಿಲ್ಲನು ಹನ್ನೆರಡು ವರ್ಷಗಳ ಕಾಲ ಕಾಯುತ್ತಾನೆ. “ಶಿವಶರಣರು ಉಳುವಿಗೆ ಹೊರಟಾಗ, ಬಿಜ್ಜಳನ ಸೇನೆಯೊಡನೆ ಇತನೂ ಹೋರಾಡಿರಬೇಕು. ಈಗಿನ ಕಿಕ್ಕೇರಿ ಎಂಬ ಕಡೆ ಈತನು ಹೋರಾಡುತ್ತಾ ಮಡಿದಿರಬೇಕು. ಅಲ್ಲಿ ಕಕ್ಕಯ್ಯನ ದೇವಾಲಯವಿದೆ. ಕಕ್ಕಯ್ಯನ ಕೆರೆ, ಬಾವಿ, ಸಮಾಧಿಗಳೂ ಅಲ್ಲಿವೆ.”೨ “ವೆಂಗಿಭೂಪನು ಈತನ ಲಿಂಗವನ್ನು ಕಲ್ಲೆಂದು ಹಳಿಯಲು ಆತನನ್ನು ಇರಿದು ಕೆಡಹಿದನು” ೩ ಎಂಬ ಮಾತುಗಳನ್ನಿಲ್ಲಿ ಗಮನಿಸಬೇಕು. 

ಈ ಇಬ್ಬರೂ ಐತಿಹಾಸಿಕ ವ್ಯಕ್ತಿಗಳು ಬದುಕಿದ ವಿಶೇಷತೆಯನ್ನು ಕೊಟ್ಟಿದ್ದೇನೆ. ಇವುಗಳಲ್ಲಿ ಬಹುಮುಖ್ಯವಾದ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.

. ಗುಪ್ತಭಕ್ತಿಗೆ ಪ್ರಾಧಾನ್ಯತೆಯಿದೆ.

. ಇವರಿಬ್ಬರೂ ವೀರಭಕ್ತರು.

. ಅವಮಾನ ತಮಗೂ ತನ್ನಿಷ್ಟದ ದೈವಕ್ಕೂ ಅದರೆ ಎಂದೂ ಸೈರಿಸಲಾರದವರು.

. ಅಧಿಕಾರದಲ್ಲಿರುವ ರಾಜನಾದರೂ ವ್ಯಕ್ತಿ, ವ್ಯಕ್ತಿಯ ಇಷ್ಟಾನಿಷ್ಟಗಳ ಕುರಿತು ಅವಮಾನ ಮಾಡಿದರೆ ಹಿಂದು ಮುಂದು ನೋಡದೆ ಹೊಡೆದು ಉರುಳಿಸುವವರು.

. ತನ್ನೆದುರಿನಲ್ಲಿ ಅನ್ಯದೈವವನ್ನು ಹೊಗಳಿದರೆ ಬ್ರಾಹ್ಮಣನಾದರೂ

ಕೊಲ್ಲುವುದಕ್ಕೆ ಹಿಂದು ಮುಂದು ನೋಡದವನು.

ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.

೧. ಗೋತ್ರನಾಮವನ್ನು ಕೇಳಿದರೆ ಸುಮ್ಮನಿರಬಾರದು.

೨. ಅವಮಾನದಿಂದ ತಲೆ ತಗ್ಗಿಸಿ, ನಾಚಿಕೆಪಟ್ಟು ಬೆರಳಿನಿಂದ ನೆಲವನ್ನು ಕೆರೆಯಬಾರದು.

೩. ಮಾದಾರ ಚೆನ್ನಯ್ಯನಂತಹಾ ಗುಪ್ತಭಕ್ತ‌ನ ಗೋತ್ರದವನು ನಾನು ಎಂದು ತನ್ನ ಇಷ್ಟದೈವ, ಆಯ್ಕೆ ಮತ್ತು ತನ್ನ ನಡೆಯನ್ನು ಸ್ಪಷ್ಟಪಡಿಸಬೇಕು. ಮತ್ತೂ ಅವಮಾನ ಮಾಡಲು ಮುಂದಾದರೆ

೪. ಡೋಹಾರ ಕಕ್ಕಯ್ಯನ ಹೆಸರನ್ನು ಪ್ರಸ್ತಾಪ ಮಾಡಿ ಅವನ ಗೋತ್ರದವನೆಂದು ಹೇಳಬೇಕು. ತನಗೆ ತನ್ನ ಆಯ್ಕೆಗೆ, ಆರಾಧ್ಯ ದೈವಕ್ಕೆ ಅವಮಾನ ಮಾಡಿದರೆ ಸುಮ್ಮನಿರಲು ಬಿಡುವವರಲ್ಲ ಶಿವಶರಣರು ಎಂದು ಎಚ್ಚರಿಸಬೇಕು.

೫. ಕೂಡಲ ಸಂಗಯ್ಯನ ಸಾಕ್ಷಿಯಾಗಿ ನಾವು ಭಕ್ತರು. ಗುಪ್ತಭಕ್ತರಾಗಿಯೇ ಮಾದಾರ ಚೆನ್ನಯ್ಯನಂತೆ ವ್ಯಕ್ತಿ ಸಾಧನೆಯ ಮೂಲಕ ಶಿವನನ್ನು ಒಲಿಸಿಕೊಳ್ಳುವವರು. ಹಾಗೆಯೇ ಶಿವಶರಣರಿಗಾಗುವ ಅವಮಾನವನ್ನು ಕಂಡರೆ ತಡೆಯಲಾರದೆ ವೆಂಗಿಯ ರಾಜನನ್ನೇ ಕಡೆದು ಉರುಳಿಸಿದ ಡೋಹಾರ ಕಕ್ಕಯ್ಯನಂತೆ ಆಗುವೆವು ಎಂಬ ಎಚ್ಚರನ್ನು ಈ‌ ವಚನ ಧ್ವನಿಸುತ್ತಿದೆ.

ಈ ವಚನದಲ್ಲಿ “ಅಯ್ಯಾ” ಎಂಬ ಪದವು ಐದು ಬಾರಿ ಬಳಕೆಯಾಗಿದೆ. ಮೊದಲಿಗೆ ಸುಮ್ಮನಿದ್ದವರನ್ನು, ತಲೆಯ ಕುತ್ತಿ ನೆಲವ ಬರೆದವರನ್ನೂ ಹೇಳುವಾಗಿನ ಸಿಟ್ಟು, ಚೆನ್ನಯ್ಯನನ್ನೂ, ಕಕ್ಕಯ್ಯರನ್ನು ಹೇಳುವಾಗ ಗೌರವಯುತ ಪೂಜ್ಯಭಾವದಿಂದ ಬಂದಿದೆ. ಅವರ ಬದುಕಿ ನಡೆಯ ಕುರಿತು ಗೌರವವೂ ಇಲ್ಲಿ‌ ಕೆಲಸ ಮಾಡಿದೆ. ಕೊನೆಗೆ ಕೂಡಲಸಂಗಯ್ಯನನ್ನೂ ತಂದಿರುವುದರಿಂದ‌ ವಚನವು ಕೊನೆಯಾಗುತ್ತದೆ. ಈ ಕೊನೆಯನ್ನು ಸಾಕ್ಣಿಯಾಗಿ ನಿಲ್ಲಿಸಿಕೊಂಡು ಕೇಳಿರುವ ಪ್ರಶ್ನೆಯೆಲ್ಲವೂ ಅವಮಾನಿತರಾದ ಅವಮಾನ ಮಾಡಿದ ಇಬ್ಬರನ್ನು ಎದುರುಬದುರಾಗಿ ನಿಲ್ಲಿಸಿಕೊಂಡು, ಅವಮಾನಿತರಿಂದ ಆಣೆ ಪ್ರಮಾಣ ಮಾಡಿಸಿದಂತೆ ಧ್ವನಿತವಾಗುತ್ತಿದೆ.

ವಚನ ಚಳುವಳಿಯೊಂದು ಅಸ್ಥಿತ್ವವಿಲ್ಲದವರಿಗೆ ಅಸ್ಥಿತ್ವ ಕೊಡುವ ಮತ್ತು ಅವಮಾನಿರಾದವರಿಗೆ ಅದನ್ನು ಹೇಗೆ ತೊಡೆದುಕೊಳ್ಳಬೇಕೆ ಎಂಬ ಆಯ್ಕೆಗಳನ್ನು ಪ್ರಶ್ನೆಗಳ ಮೂಲಕವೇ ಸೂಚಿಸಿರುವ ಭಾಷಿಕ ಕ್ರಮ, ಐತಿಹಾಸಿಕ ವ್ಯಕ್ತಿಗಳನ್ನು ತಂದು ಪುರಾಣಪ್ರತೀಕವಾಗಿ ಬಳಸಿಕೊಂಡಿರುವ ಕ್ರಮ ಮತ್ತು ಮುಂದಿನ ಹರಹರನಂತಹಾ ಪ್ರಚಂಡ ವಾಗ್ವಿಲಾಸದ ಕವಿಗೆ ಕಥೆಯನ್ನು ನಡೆಸಿಕೊಂಡು ಹೋಗುವಲ್ಲಿ ಬಳುವಳಿಯಾಗಿ ವಚನ ಸಾಹಿತ್ಯವೇ ಕೊಟ್ಟಿರುವ ವಸ್ತುಗಳು ಈ ವಚನದಿಂದ ದೊರೆಯುತ್ತದೆ. ವಚನಕಾರರ ಬದುಕನ್ನು ಕಾವ್ಯರೂಪದಲ್ಲಿ‌ ಹರಿಹರ ಕಟ್ಟಲು ಬಳಸಿಕೊಂಡ ತಂತ್ರದಿಂದ ಮಾತ್ರ ಬೇಸರವಾಗುತ್ತದೆಯೇ ಹೊರತು, ಅವನ ಪ್ರಚಂಡ ಪ್ರತಿಭೆಗೆ ಮಾರುಹೋಗದವರಿಲ್ಲ. ಹರಿಹರನಂತಹ ಪ್ರತಿಭೆಯ ನಿರ್ಮಾಣಕ್ಕೂ ಇಂತಹ ವಚನಗಳು ಕಾರಣವಾಗಿವೆ.


ಅಡಿಟಿಪ್ಪಣಿಗಳು

೧. ಬಸವಣ್ಣನವರ ಷಟ್ ಸ್ಥಳದ ವಚನಗಳು. ಸಂ. ಬಸವನಾಳ ಶಿವಲಿಂಗಪ್ಪ. ಸಾಹಿತ್ಯ ಸಮಿತಿ. ಧಾರವಾಡ. ವ ಸಂ ೭೪೪. ಪು ೧೯೫. (೧೯೫೪)

೨. ಶಿವಶರಣ ಕಥಾರತ್ನಕೋಶ. ತ.‌ ಸು. ಶಾಮರಾಯ. ತಳುಕು ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು. ಪು ೫೭ (೧೯೬೭)

೩. ಶಿವಶರಣ ಕಥಾರತ್ನಕೋಶ. ತ.‌ ಸು. ಶಾಮರಾಯ. ತಳುಕು ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು. ಪು ೫೮ (೧೯೬೭)

****************************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top