ಯುಗಾದಿ ವಿಶೇಷ ಬರಹ

ಯುಗಾದಿ

White Petaled Tree during Daytime

ಯುಗಾದಿ

       ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಒಂದು ಅತ್ಯುನ್ನತ ಸಾಂಸ್ಕೃತಿಕ ಮಹತ್ವವಿದೆ.

ಆದುದರಿಂದಲೇ ಭಾರತೀಯರು ತಮ್ಮ ಹೊಸವರುಷದ ದಿನವೂ ಯುಗಾದಿಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಗ್ರಾಮೀಣರ ಆಡುಮಾತಿನ ಲ್ಲಿ ಹೇಳುವುದಾದರೆ ಯುಗಾದಿಯು ‘ಉಗಾದಿ’ ಎನಿಸಿಕೊಳ್ಳುತ್ತದೆ. ಯುಗಾದಿ ಹಬ್ಬ ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ ನವಮನ್ವಂತರ, ಅಲ್ಲದೆ ಇದು ಭಾರತೀಯರಾದ ನಮ್ಮ ಪಾಲಿಗೆ ಹೊಸ ವರುಷದ ಮೊದಲ ದಿನ.

    ಯುಗಾದಿಯನ್ನು ಚಾಂದ್ರಮಾನ- ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿಯಿದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ದತಿಗೆ ಚಾಂದ್ರಮಾನ ಯುಗಾದಿ ಎನ್ನುವರು. ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿಯನ್ನು ಆಚರಿಸುವರು. ದಕ್ಷಿಣ ಭಾರತೀಯರು ಚಾಂದ್ರಮಾನ ವನ್ನು ಅನುಸರಿಸಿ ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿ ಆಚರಿಸುವರು.

 ಬೇವು- ಬೆಲ್ಲ

      ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು.ಬೇವು ಬೆಲ್ಲವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ…

 ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ|

ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ||

ಅದರರ್ಥ ಹೀಗಿದೆ–

“ನೂರು ವರುಷಗಳ ಆಯುಷ್ಯ, ಸದ್ರಢ ಆರೋಗ್ಯ ,ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ”.

  ಯುಗಾದಿ ಹಬ್ಬದಂದು ಬೇವು ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ,ಸುಖ- ದು:ಖ, ನಲಿವು,ನೋವು ಎಂಬ ಮಾತಿನಂತೆ ಜೀವನದಲ್ಲಿ ಇವೆರಡರ ಇರುವಿಕೆ ಅಗತ್ಯ ವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ‌ಸಾಧ್ಯ. ಆದರೆ ಕಷ್ಟಕ್ಕಿಂತ ಸುಖವೆ ಬೇಕು‌ ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ ಜೀವನ ಎನ್ನುವುದು ಕಷ್ಟ ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ‌ ಇವೆರಡು ಒಂದನ್ನೊಂದು ಬಿಟ್ಟಿರಲಾರವು.

       ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ.

      ಯುಗಾದಿ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರ ಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ವರ್ಷವನ್ನು ಬೀರುವವು. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುತ್ತದೆ.

      ಹೊಸ ವರ್ಷದ ಪ್ರಾರಂಭದ ಸಂಕೇತವಾದ ಯುಗಾದಿಯನ್ನು ಬಡವ ಬಲ್ಲಿದರೆಂಬ ತಾರತಮ್ಯವಿಲ್ಲದೆ ಎಲ್ಲಾ ಹಿಂದೂಗಳು ಆಚರಿಸುತ್ತಾರೆ. ರೈತರು ಎತ್ತುಗಳನ್ನು ಅಲಂಕರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ವನ್ನು ಭಾರತ ಪರ್ವದಲ್ಲಿ ಬೇರೆ ಬೇರೆ ಹೆಸರಿನಿಂದ ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಗುಜರಾತ್,ಮಹಾರಾಷ್ಟ್ರದಲ್ಲಿ ಯುಗಾದಿಯ ದಿನ ಪ್ರತಿಯೊಂದು ಮನೆಯ ಮುಂದೆ ಗುಡಿಯನ್ನು ನಿಲ್ಲಿಸುವ ಪದ್ದತಿ ಇರುವುದರಿಂದ ಯುಗಾದಿಯನ್ನು ಗುಡಿಪಾಡ್ಯ ಎಂದು ಕರೆಯುವರು. ಗುಡಿ ಎಂದರೆ ಧ್ವಜ. ಒಂದು ಕೋಲಿನ ತುದಿಗೆ ರೇಷ್ಮೆ ಬಟ್ಟೆ ಏರಿಸಿ ಅದರ ಮೇಲೆ ಬೆಳ್ಳಿ ಅಥವಾ ಹಿತ್ತಾಳೆಯ ಸಣ್ಣ ಬಿಂದಿಗೆಯನ್ನು‌ ಕಟ್ಡಿ ಬೇವು ಮತ್ತು ಮಾವಿನ ಎಲೆಗಳಿಂದ ಅಲಂಕರಿಸುವರು. ಮಹಾಭಾರತದಲ್ಲಿ ಇದರ ಪ್ರಸ್ತಾಪವಿದೆ.

     ಸಿಹಿತಿನಿಸು……    ಒಬ್ಬಟ್ಟು ಅಥವಾ ಹೊಳಿಗೆ ಬಹಳ ದಿನ ಇರದೇ ಕೊಡುವುದೆಂದು ಕಡಲೆ ಅಥವಾ ತೊಗರಿ ಬೆಳೆಯ ಹೂರಣದಲ್ಲಿ ಮಾಡುವರು. ಇದನ್ನೆ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆಯುತ್ತಾರೆ. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆವರು.

 ಯುಗಾದಿಯ ಖಗೋಳ ಘಟನೆಗಳು     ಯುಗಾದಿಯ ಸಂದರ್ಭದಲ್ಲಿ ಭೂಮಿಯ ಆಕ್ಸೆಸ್ ವಾಲುತ್ತದೆ. ಉತ್ತರ ಗೋಳಾರ್ಧವು ಹೆಚ್ಚಿನ ಪ್ರಮಾಣದ ಸೂರ್ಯನ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಈ ಸಮಯದಲ್ಲಿ ಭೂಮಿಯು ಹೆಚ್ಚು ಉಷ್ಣತೆಗೆ ಒಳಗಾಗುತ್ತದೆ. ಆದ್ದರಿಂದ ಮನುಷ್ಯರಿಗೆ ಹೆಚ್ಚು ಶಾಖದ ಅನುಭವಾಗುತ್ತದೆ. ಅದನ್ನು ಸಹಿಸುವ ಶಕ್ತಿಯನ್ನು ಯುಗಾದಿ ಆಚರಣೆ ನೀಡುತ್ತದೆ‌. ಖಗೋಳ ಶಾಸ್ತ್ರದ ಪ್ರಕಾರ ಯುಗಾದಿಯ ಹಿಂದಿನ ದಿನ ಅಮವಾಸ್ಯೆ ಯಾಗಿರುತ್ತದೆ.

      ಹೊಸ ಸಂವತ್ಸರದ ಪ್ರಾರಂಭದ ದಿನ ಇದು. ವಸಂತ ಋತುವಿನ ಪ್ರಾರಂಭದ ದಿನ ಇದಾಗಿರುತ್ತದೆ. ಇನ್ನು‌ “ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು” ಎಂಬ ಹಾಡಿನಂತೆ ಪ್ರಕೃತಿಯೂ ಕೂಡ ಚಿಗುರೆಲೆಗಳಿಂದ‌ ಹೊಸ ಋತುವಿನ ಸ್ವಾಗತ ಕೋರಲು ಸಜ್ಜಾಗಿರುವ ಸಮಯ ಇದಾಗಿದೆ.

      ಈ ಸಮಯದಲ್ಲಿ ಮರಗಳ ಎಲೆಗಳು ಉದುರುತ್ತದೆ, ಹೊಸ ಚಿಗುರು ಪ್ರಾರಂಭವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯೂ ಕೂಡ ನೀಡಲು ಪ್ರಾರಂಭಿಸುವ ಸುದಿನ ಇದು.  ಪಂಚಾಂಗದ ಪ್ರಕಾರ ಯುಗಾದಿಯ ದಿನದಂದು ಹೊಸ ಹಿಂದೂ ಕ್ಯಾಲೆಂಡರ್ ಪ್ರಾರಂಭವಾಗುತ್ತದೆ.

    ಹಿಂದೂ ಕ್ಯಾಲೆಂಡರ್ ಕೇವಲ ಸಾಂಪ್ರದಾಯಿಕವಾಗಿ ಮಾತ್ರವೇ ಮಹತ್ವಪೂರ್ಣ ವಾದುದಲ್ಲ. ಆದರೆ ಇದು ವೈಜ್ಞಾನಿಕವಾಗಿಯೂ ಮತ್ತು ಖಗೋಳ ಶಾಸ್ತ್ರದ ಪ್ರಕಾರವೂ ಕೂಡ ಹಲವು ಗ್ರಹಗಳ ಕ್ಷಣಗಳನ್ನು ವಿವರಿಸುವ ಸಂಪರ್ಕ ಸಾಧನವಾಗಿದೆ.

     ನಮ್ಮ ಭಾರತೀಯ ಶ್ರೇಷ್ಠ ಗಣಿತಜ್ಞರೆನಿಸಿರುವ ಭಾಸ್ಕರಾಚಾರ್ಯರ ಪ್ರಕಾರ ಯುಗಾದಿಯ ಸೂರ್ಯೋದಯವು ಹೊಸ ವರ್ಷದ ಪ್ರಾರಂಭವಾಗಿದೆ. ಯಾಕೆಂದರೆ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆ ಒಂದು ಯುಗಾದಿಯಿಂದ ಇನ್ನೊಂದು ಯುಗಾದಿಗೆ ಒಮ್ಮೆ ಪೂರ್ಣಗೊಂಡಿರುತ್ತದೆ.

     ಈ ರೀತಿಯಾಗಿ ಯುಗಾದಿಯು ನಾಡಿಗೆ ಮಾತ್ತವಲ್ಲದೆ, ಇಡೀ ವಿಶ್ವಕ್ಕೆ ಉಜ್ವಲತೆಯನ್ನು ಜನತೆಗೆ ಸುಖ ಶಾಂತಿಯನ್ನು ನೀಡುವ ವಜ್ರಸಮಾನ ಸಮಯ.

     ಯುಗ ಯುಗಾದಿ ಕಳೆದರೂ

     ಯುಗಾದಿ ಮರಳಿ ಬರುತಿದೆ

     ಹೊಸವರುಷಕೆ ಹೊಸಹರುಷವ

     ಹೊಸತು‌-ಹೊಸತು ತರುತಿದೆ……

ಎಂಬ ದ.ರಾ.ಬೇಂದ್ರೆ ಯವರ ಹಾಡಿನ ಸಾಲಿನಂತೆ ನಾವೆಲ್ಲರೂ ಯುಗಾದಿಯ ನಿಜ ಅರ್ಥ ಅರಿತು ಸಹಕಾರ, ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸೋಣ.

******************************************************

          ಅಕ್ಷತಾ ಜಗದೀಶ.

Leave a Reply

Back To Top