ದಾರಿಹೋಕನೆಂದು ನಂಬಿ ಬಿಟ್ಟೆ!
ಅವ್ಯಕ್ತ
ಕುಶಲ ಚೇಷ್ಟೆಗಳ ಕನಸ ಮಾರುವ ಕಾಂತನೆ
ಹೆಣ್ಣಿನ ಒಳಮನಸ್ಸ ಮರ್ಮವ ಹೇಳುವೆ ತಿಳಿದುಕೊ…
ನಿನ್ನ ನಿಜ ಲೋಕದ ಕಡಲ ಮುತ್ತು ಗಳಂತಿರುವ,
ಮೌನ ವನಿತೆಯರ ಸಖಿಗುಟ್ಟಿದು..
ಮುಂಗುರುಳ ನಡುವೆ ನಲಿವ ಕಣ್ಣಲ್ಲಿ
ಕನಸೊಂದ ಹುಡುಕುವುದು ತಪ್ಪೇನಲ್ಲಾ..
ತುಂಟ ನಗುವಿನೊಳಗೆ ರಸಿಕತೆಯ
ಬಯಕೆಯು ಅಲ್ಪಾಯುಷಿಯೂ ಅಲ್ಲಾ..
ಸಭ್ಯತೆಯ ನೀಳ ಸೆರಗ ಜಾರಿಸಲು
ಬಾಡದ ನಿತ್ಯಾನುರಾಗವ ಹುಡುಕುವಳಷ್ಟೆ,
ಸಹಜ ಜೀವನದಲ್ಲಿರುವ ತಿರುವುಗಳ ಮಧ್ಯೆ
ಸ್ಪಷ್ಟ ಮನದ ಮದುರ ಪ್ರೀತಿಯ ಅರಸುವಳಷ್ಟೇ.
ಉದಾಸೀನ ಪುರುಷನ ಭೂಷಣವಾದರೆ,
ಕ್ಷಮಿಸುವುದು ಸ್ತ್ರೀಯ ಮಾತೃತ್ವವೇ ಹೌದು.
ನಿನ್ನ ಮೆದುಳಿನಾಟದ ದಾಳದ ಕಾಯಿ ಅವಳೆಂದರೆ,
ಅವಳ ಹೃದಯದಾಟದ ಗುಪ್ತ ರಾಜ ನೀನು ಮರುಳೇ.
ಅಯ್ಯೋ,
ಮೂಢಾಂಧ…!
ಈ ಯುಗದ ಬಲಿಷ್ಠ ಸ್ವತಂತ್ರ ನಾರಿ ಇವಳು.
ಆ ಕನಸಿನ ವೀಣಾತಂತಿಗಳ ಮೀಟುವುದ ನೀ ನಿಲ್ಲಿಸಿದೆ,
ಬಯಕೆಯ ಹೆಬ್ಬಾಗಿಲ ಮುಚ್ಚಿ, ಪ್ರೀತಿಯ ಹೂಗಳನಿಟ್ಟಳು
ಮಚ್ಚೆಯ ಕಚ್ಚಿದಾಗಲೇ ಗುಟ್ಟಾದ ಗಂಟೊಂದ ಕಟ್ಟಿದ್ದಳು..
ಕಾಣದೆ ಅರಳುವ ಮುಗುಳ್ನಗೆಯೊಳಗಿನ ಆಲಿಂಗನವ,
ತುಸುತಟ್ಟಿ ನೋಡದೆ….
ನಾನು ಕೇವಲ ದಾರಿಹೋಕ ಎಂದು ನೀ ನಂಬಿಬಿಟ್ಟೆ!
ಒಲವ ಅನರ್ಘ್ಯ ಮಾಲೆಗೆ ಅಹಂಮಿನ ಮೋಡ ಕವಿಯಿತಷ್ಟೆ.