ಕವಿತೆ
ಈಗ
ಆನಂದ ಆರ್.ಗೌಡ ತಾಳೇಬೈಲ್
ರವಿವಾರದ ಸಂಜೆ
ಅಮಲು ಚೆಲ್ಲಿದ ಎಂಥೆಂಥಾದೋ
ಕಸ ಪೌರ ಸೇವಕರ ಪೊರಕೆ
ಶುಚಿಗೊಳಿಸುತ್ತಿತ್ತು
ರಸ್ತೆಯ ಇಕ್ಕೆಲಗಳಲ್ಲಿ
ಆಗ ತಾನೇ ಪ್ರಸವವಾದ
ಹೊಂಗಿರಣ ಅವರ ವದನಕ್ಕೆ
ಮುತ್ತನೀಯುತ್ತಿತ್ತು
ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳ
ನೆರಳು ಬೆಳಕಿನಾಟ ಕಲೆಗಾರನ
ಕುಂಚದ ಕಲೆಯ ನಾಚಿಸಿದೆ
ಕಾರ್ಪೋರೇಟ್ ರಸ್ತೆ ನಡುವೆ
ನೆಟ್ಟ ಪುಟ್ಟ ಗಿಡಗಳು
ಆರೈಕೆ ಮಾಡಲು ತೂಗು ಹಾಕಿದ
ದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕ
ರಾರಾಜಿಸುತ್ತಿದೆ
ಚುನಾವಣೆ ಮುಗಿದರೂ
ಅದರಂಚಿನಲಿ ಹಾಯ್ದು
ಹೋಗುವ ಚಿರಯೌವನೆ
ಅಂಗೈ ಸೋಕಿದರೆ ಹಾಲು
ತೊಟ್ಟಿಕ್ಕುವ ಸೊಬಗು
ಇನ್ನೂ ಹೊಟ್ಟೆಕಿಚ್ಚು ತರಿಸುವ
ತೊಟ್ಟುಡುಗೆಯ ಸಿರಿವಂತಿಕೆ
ಮುಚ್ಚಿದೆದೆಯೊಡ್ನಿ
ಅರಿವಿಲ್ಲದೇ ಇಳಿದು
ಚಿಗುರಿದೆಲೆಗಳ ಸವರಿ
ಅಮಲೇರಿಸುವ ಆ ನೋಟ
ಮನಸ ಕೊಲ್ಲುವ ಸಂಚಲತೆ
ಪಡ್ಡೆ ಹೈಕಳ ಹೃದಯ ಬಡಿತ
ಇಮ್ಮಡಿಸಿದೆ
ಆ ರಸ್ತೆ
ಕತ್ತಲೆಯಲಿ ಆಗಾಗ ಶವವಾಗಿ
ಮಲಗಿದರೆ
ಒಮ್ಮೊಮ್ಮೆ ಚಂದಮಾಮ ಇಣುಕಿ
ಆಟವಾಡುತ್ತಾನೆ
ರಸ್ತೆಯ ಹೃದಯ ಅಗೆದು ಬಗೆದು
ಈಗ ಅಲ್ಲಲ್ಲಿ ಟಾಕೀ ಕಟ್ಟುತ್ತಿದ್ದಾರೆ
ಒಳಗೊಳಗೇ ಪೈಪ್ ಲೈನ್
ಕಕ್ಕಸು ಕೊಳಚೆ ಹೊರಹಾಕಲು
ಜನ ಹೈರಾಣಾಗಿದ್ದಾರೆ
ಗಾಡಿಗಳು ನೀರಿನಲೆಗಳ
ಮೇಲೆ ಸಾಗಿ ದಡ ಮುಟ್ಟುತ್ತಿವೆ
ಧೂಳನ್ನು ನುಂಗಿ ಬದುಕುವ
ಮಕ್ಕಳು ಮುದುಕರು ಮೂಕರಾಗಿ
ಕೆಮ್ಮು ಸುಂಬಳ ಇಳಿಸುತ್ತಿದ್ದಾರೆ
ಮನೆ ಒರೆಸುವ ಮನೆಯೊಡತಿಯ
ಮೌನದ ಕಟ್ಟೆ ಒಡೆದಿದೆ
ಆದರೂ ಕೋಟಿ ಕೋಟಿಗಳ ಟೆಂಡರ್
ಪಡೆದ ಲೀಡರ್ ನೋಡುತ್ತಲೇ ಇದ್ದಾನೆ
ಅಂಬುಲೆನ್ಸ್ ನ ತಿರುಗಾಟವನ್ನು
ಮಂದಿ ಮೂಗು ಮುರಿದು ಅವನ ಪ್ರತಿಕ್ರಿಯೆಗೆ
ಕಾಯುತ್ತಿದ್ದಾರೆ !
**********************************************
ಸೂಪರ್ ಗೌಡ್ರೆ
ಚಂದ ಪದ್ಯ
ಒಳ್ಳೆಯ ಕವಿತೆ ಗೌಡ್ರೆ
Super
ಸರ್
Super ಸರ್