ಕವಿತೆ
ಇನ್ನೂ ಎಷ್ಟು ದೂರ?
ಡಾ.ಕಾತ್ಯಾಯಿನಿ ಕುಂಜಿಬೆಟ್ಟು
ನಕ್ಷತ್ರ ಕದಿಯಲು
ಹೊರಟಿರುವೆ
ಮೈ ತುಂಬ ನಕ್ಷತ್ರ ಹೊಂದಿರುವ
ಆಕಾಶದಿಂದ
ಎರಡೇ ಎರಡು ನಾನು ಕದ್ದರೆ
ಯಾರ ಅಪ್ಪನ ಮನೆ ಗಂಟು
ಹೋದೀತು ಹೇಳು?
ಹೊರಟಿದ್ದೇನೆ
ಕನ್ನ ಕೊರೆಯಲು
ಯಾರಿಗೆ ಗೊತ್ತು?
ನಕ್ಷತ್ರಗಳು ಎನ್ನುವುದು
ನೀಲಿ ಗೋಡೆಯ ಅಚಿನಿಂದ
ಇನ್ನಾರೋ ಕನ್ನ ಕೊರೆದು
ಇಣುಕಿದ ತೂತಿರಬಹುದು
ಆಚೆ ಮೂಡಿರಬಹುದು
ಈಚೆ ಮುಳುಗಿದ ಸೂಯ೯
ತನ್ನ ಕಿರಣಗಳ ಕನ್ನದ ತೂತುಗಳಿಂದ
ಈಚಿನ ಕತ್ತಲಿಗೆ ತೂರಿರಬಹುದು
ಅಬ್ಬಾ! ಅಗಣಿತ ನಕ್ಷತ್ರಗಳು!
ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದು
ನನ್ನಂತೆ ಎರಡೇ ಎರಡು
ನಕ್ಷತ್ರ ಕದಿಯಲು ಹೊರಟವರು
ನಡೆಯುತ್ತಲೇ ಇದ್ದೇನೆ
ಇನ್ನೂ ಎಷ್ಟು ದೂರ?
*************************