ದಾರಾವಾಹಿ

ಅದ್ಯಾಯ-09

Simple Country Painting by Chuck Pinson

ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ಫೆಲಿಕ್ಸ್ ಡೇಸಾ ಅವರು ಈಶ್ವರಪುರದ ಪ್ರಸಿದ್ಧ ಕ್ರಿಮಿನಲ್ ಲಾಯರ್‍ಗಳಲ್ಲಿ ಅಗ್ರಗಣ್ಯರಾಗಿದ್ದವರು. ಅವರು ತಮ್ಮಲ್ಲಿಗೆ ಬರುವ ವ್ಯಾಜ್ಯಗಳ ನ್ಯಾಯಾನ್ಯಾಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಂದರ್ಭ ಸನ್ನಿವೇಶಗಳಿಗೆ ತಕ್ಕಂತೆ ಆ ದಾವೆಗಳ ನೈಜ ಸ್ವರೂಪವನ್ನು ವಿಶೇಷ ಚಾಕಚಕ್ಯತೆಯಿಂದ ಪರಿವರ್ತಿಸುತ್ತ ನೊಂದವರನ್ನು ಸಂರಕ್ಷಿಸುವ ಕಾಯಕದಲ್ಲಿ ಸದಾ ಯಶಸ್ಸು ಕಾಣುತ್ತಿದ್ದರು. ಆ ಬಗೆಯ ಕಾರ್ಯವೈಖರಿಯಿಂದಲೇ ಎರಡು, ಮೂರು ದಶಕಗಳ ಕಾಲ ಅವಿರತವಾಗಿ ದುಡಿದು ಅಪಾರ ಸಂಪತ್ತನ್ನೂ ಗಳಿಸಿದ್ದರು. ಕೊನೆಯಲ್ಲಿ ಸ್ವಯಂ ನಿವೃತ್ತರಾಗಿ ಪತ್ನಿ ಐರಿನ್ ಡಿಕೋಸ್ತಾರೊಂದಿಗೆ ಮಹಾದೇವಿ ನಗರದ ತಮ್ಮ ದೊಡ್ಡ ಬಂಗಲೆಯಲ್ಲಿ ಐಷಾರಾಮದಿಂದ ವಾಸಿಸುತ್ತಿದ್ದರು. ಹತ್ತು ತಲೆಮಾರು ಕುಳಿತುಂಡರೂ ಕರಗದಷ್ಟು ಐಶ್ವರ್ಯ ಅವರ ಬಳಿಯಿತ್ತು. ಆದರೇನು ಬಂತು. ಅದನ್ನನುಭವಿಸಲು ಸಂತಾನಭಾಗ್ಯವಿರಲಿಲ್ಲ. ತಮ್ಮ ನಂತರ ತಮ್ಮ ಸಂಪತ್ತನ್ನು ಕಾಪಾಡಲು ಒಬ್ಬಿಬ್ಬರಾದರೂ ವಂಶದ ಕುಡಿಗಳು ಇಲ್ಲವಲ್ಲಾ! ಎಂಬ ಕೊರಗು ಅವರನ್ನು ಸದಾ ಕಾಡುತ್ತಿತ್ತು. ಹಾಗಾಗಿ ತಮ್ಮ ಆರಾಧ್ಯ ಧೈವಗಳಾದ ಏಸುಕ್ರಿಸ್ತನನ್ನೂ ಮೇರಿಯಮ್ಮನನ್ನೂ ಹಗಲಿರುಳು ಪ್ರಾರ್ಥಿಸುತ್ತಿದ್ದರು. ಜೊತೆಗೆ ಹಲವಾರು ಮಂದಿರ, ಮಸೀದಿಗಳಿಗೂ ಭೇಟಿ ಕೊಡುತ್ತ ಅಲ್ಲಿ ಸೂಚಿಸುತ್ತಿದ್ದ ವಿವಿಧ ಹರಕೆ ಮತ್ತು ಪೂಜೆ ಪುನಸ್ಕಾರಗಳನ್ನೆಲ್ಲ ಭಕ್ತಿಯಿಂದ ನೆರವೇರಿಸುತ್ತಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಯಾರೋ, ‘ನಿಮಗೆ ನಾಗದೋಷವಿರಬೇಕು. ಹಿಂದೆ ನೀವೋ ಅಥವಾ ನಿಮ್ಮವರೋ ನಾಗರಹಾವನ್ನು ಕೊಂದಿರಬೇಕು. ಆ ಪಾಪಕ್ಕೆ ಪ್ರಾಯಃಶ್ಚಿತ್ತ ಮಾಡಿಕೊಳ್ಳಿ. ಖಂಡಿತಾ ಮಕ್ಕಳಾಗುತ್ತವೆ!’ ಎಂದು ಸಲಹೆಯಿತ್ತರು. ಆದರೆ ಡೇಸಾರು ಮೊದಮೊದಲು ಅವರ ಮಾತಿಗೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ, ಹಿಂದೆ ಅವರು ತಮ್ಮ ತೋಟದೊಳಗೆ ಕಾಣಿಸಿಕೊಂಡಿದ್ದ ಕೆಲವು ನಾಗರಹಾವುಗಳನ್ನು ಬಂದೂಕಿನಿಂದ ಸ್ವತಃ ಉಡಾಯಿಸಿದ್ದರು. ಕಾರಣ, ತಮ್ಮ ಪವಿತ್ರ ಬೈಬಲ್‍ನಲ್ಲಿ ನಾಗರಹಾವನ್ನು ಸೈತಾನನೆಂದು ಹೇಳಲಾಗಿದೆ. ಅಷ್ಟಲ್ಲದೇ ಅದೊಂದು ವಿಷಜಂತುವು ಕೂಡಾ. ಹಾಗಾಗಿ ಅದನ್ನು ಕೊಲ್ಲುವುದು ಪಾಪವಲ್ಲ ಎಂದು ಅವರು ನಂಬಿದ್ದರು. ಆದರೆ ಬೈಬಲ್‍ನ ಆದಮ್ ಮತ್ತು ಈವ್‍ರ ಕಥೆಯಲ್ಲಿ ಬರುವ ಸೈತಾನನೆಂಬ ‘ಸರ್ಪ’ಕ್ಕೆ ಬೇರೆಯೇ ಅರ್ಥವಿದೆ. ಏನೆಂದರೆ, ದೇವರ ಇಚ್ಛಾಶಕ್ತಿಯಿಂದ ಆವಿರ್ಭವಿಸುವ ಮಾನವನು ಆಧ್ಯಾತ್ಮಿಕ ಏಳಿಗೆಯನ್ನು ಹೊಂದುತ್ತ ಮರಳಿ ಆ ಶಕ್ತಿನೊಡನೆ ಐಕ್ಯವಾಗುವಂಥ ಮೇರು ಪ್ರಕ್ರಿಯೆಗೆ ಮುಳುವಾಗಿ ಅವಳು/ಅವನನ್ನು ಸಾಂಸಾರಿಕ ಬಂಧನಕ್ಕೆ ತಳ್ಳುವಂಥ ಕಾಮವನ್ನು ಪ್ರಚೋದಿಸುವ ಕಶೇರುವಿನ ಶಕ್ತಿಯನ್ನೇ ಸಾಂಕೇತಿಕವಾಗಿ ಬೈಬಲ್‍ನಲ್ಲಿ ಸರ್ಪ ಅಥವಾ ಸೈತಾನನೆಂದು ಹೇಳಲಾಗಿದೆ ಎಂಬ ಸೂಕ್ಷ್ಮವನ್ನು ಅರ್ಥೈಸಿಕೊಳ್ಳುವ ಅಗತ್ಯ ಡೇಸಾರಿಗೆಂದೂ ಬಂದಿರಲಿಲ್ಲ.

 ಆದ್ದರಿಂದ, ನಾಗದೋಷ ಅದೂ ಇದೂ ಎಂಬ ನಂಬಿಕೆಗಳೆಲ್ಲ ಬೇರೆ ಧರ್ಮಕ್ಕೆ ಸಂಬಂಧಿಸಿದ ವಿಚಾರ. ತಮಗೆ ಅದರಲ್ಲಿ ವಿಶ್ವಾಸವಿಲ್ಲ ಎಂದು ಅವರು ಸುಮ್ಮನಾಗಿದ್ದರು. ಆದರೆ ಕಾಲಕ್ರಮೇಣ, ಇಷ್ಟೆಲ್ಲ ಬಗೆಯ ಪೂಜೆ ಪುನಸ್ಕಾರಗಳನ್ನು ನೇಮನಿಷ್ಠೆಯಿಂದ ಮಾಡಿಸುತ್ತ ಬಂದಿದ್ದೇವೆ. ಹೀಗಿರುವಾಗ ನಮ್ಮದೇ ಹಿತೈಷಿಗಳು ಹೇಳಿದ ಆ ಒಂದು ವಿಚಾರವನ್ನು ಯಾಕೆ ತಳ್ಳಿ ಹಾಕಬೇಕು? ಹೇಗಾದರೂ ಸರಿ ಮಕ್ಕಳಾದರೆ ಸಾಕು. ದೇವರು ಒಬ್ಬನೇ. ನಾಮ, ರೂಪಗಳು ಹಲವು ಎಂಬ ಗಾದೆ ಮಾತೇ ಇಲ್ಲವೇ? ಎಂದು ಡೇಸಾ ದಂಪತಿ ತಮ್ಮನ್ನು ತಾವು ಸಮಜಾಯಿಷಿಕೊಂಡರು ಮತ್ತು ಅದೇ ಹಿತೈಷಿಗಳ ಸೂಚನೆಯಂತೆ ಅಂಥ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನೊಡನೆ ದೂರದ ಪ್ರಸಿದ್ಧ ನಾಗಕ್ಷೇತ್ರವೊಂದರ ದರ್ಶನಕ್ಕೆ ಕಾರು ಹತ್ತಿದರು. ಅಲ್ಲೊಂದು ಲಾಡ್ಜ್‍ನಲ್ಲಿ ಮೂರು ದಿನಗಳ ಕಾಲ ಉಳಿದುಕೊಂಡು, ಆ ಕ್ಷೇತ್ರದಲ್ಲಿ ಸೂಚಿಸಲಾದ ಪೂಜಾವಿಧಿಗಳನ್ನು ಭಯಭಕ್ತಿಯಿಂದ ನೆರವೇರಿಸಿ ಹಿಂದಿರುಗಿದರು. ಆವತ್ತಿನಿಂದ ಸರ್ವ ದೇವರ ಸ್ಮರಣೆ ಮಾಡುತ್ತ ಸಮಾಗಮ ನಡೆಸಿದರು. ಆದರೆ ಅವರು ಆವರೆಗೆ ಪೂಜಿಸುತ್ತ ಬಂದ ಯಾವ ದೇವರುಗಳೂ ಅವರಿಗೆ ವಂಶದ ಕುಡಿಯೊಂದನ್ನು ಕರುಣಿಸುವ ದಯೆ ತೋರಲಿಲ್ಲ. ಹಾಗಾಗಿ ಒಂದುದಿನ ಸಂಪೂರ್ಣ ನಿರಾಶೆಗೊಂಡ ಡೇಸಾ ದಂಪತಿ ಸಂತಾಪೇಕ್ಷೆಯ ಹಂಬಲವನ್ನೇ ತ್ಯಜಿಸಿಬಿಟ್ಟರು.

   ಆದರೆ ಅಷ್ಟಕ್ಕೆ ಅವರ ಸಮಸ್ಯೆ ಬಗೆಹರಿಯುತ್ತದೆಯೇ? ಖಂಡಿತಾ ಇಲ್ಲ. ತಮ್ಮ ಅರಮನೆಯಂಥ ಬಂಗಲೆಯನ್ನೂ ವಿಶಾಲವಾದ ಗಾರ್ಡನ್ ಹಾಗೂ ತಾವು ಹೊರದೇಶಗಳಿಂದ ತಂದು ನೆಟ್ಟು ಬೆಳೆಸಿ, ಹಣ್ಣುಹಂಪಲುಗಳಿಂದ ತುಂಬಿ ತುಳುಕುತ್ತಿದ್ದ ದೊಡ್ಡ ತೋಟವೊಂದನ್ನು ಹಿಂದಿನಷ್ಟು ಆಸ್ಥೆಯಿಂದ ನೋಡಿಕೊಳ್ಳಲು ಅವರಿಗೆ ತಮ್ಮ ವಯೋಸಹಜ ತೊಂದರೆಗಳಿಂದಾಗಿ ಸಾಧ್ಯವಾಗುತ್ತಿರಲಿಲ್ಲ. ತಮ್ಮ ಮೈಯಲ್ಲಿ ಶಕ್ತಿಯಿರುವ ತನಕ ಪ್ರತೀ ಗಿಡಮರಗಳನ್ನೂ ಜೋಪಾನ ಮಾಡುತ್ತ ಬೆಳೆಸಿದ್ದರು. ಬರಬರುತ್ತ ನೆರೆಕರೆಯ ಕೆಲವು ಬಡ ಕೂಲಿಯವರನ್ನು ಕರೆದು ತೋಟದ ಕೆಲಸವನ್ನೂ ಬಂಗಲೆಯ ಚಾಕರಿಯನ್ನೂ ಮಾಡಿಸುತ್ತ ದಿನ ಕಳೆಯುತ್ತಿದ್ದರು. ಆದರೆ ಅವರಲ್ಲಿ ಕೆಲವು ಕೆಲಸದಾಳುಗಳು ಡೇಸಾರ ಶ್ರೀಮಂತಿಕೆಯನ್ನು ಕಂಡೋ ಅಥವಾ ಇಂಥ ಮುದುಕರಿಗೆ ತಮ್ಮಂಥವರ ಆವಶ್ಯಕತೆ ಯಾವತ್ತಿಗೂ ತಪ್ಪಿದ್ದಲ್ಲ ಎಂಬ ಹಗುರ ಧೋರಣೆಯಿಂದಲೋ ಅವರನ್ನು ಸದಾ ದುಡ್ಡಿಗಾಗಿ ಪೀಡಿಸುತ್ತಿದ್ದರು. ಕೆಲಸದ ನಡುವೆಯೇ ಮೂಗಿನ ಮಟ್ಟ ಕುಡಿದು ಬಂದು ಬಿದ್ದು ಹೊರಳಾಡುತ್ತಿದ್ದರು. ಅದನ್ನೆಲ್ಲ ನೋಡುತ್ತ ಬಂದ ಡೇಸಾ ದಂಪತಿ ಅವರಿಂದಲೂ ರೋಸಿ ಹೋದರು. ಆದ್ದರಿಂದ ಅವರಿಗೆ ದೂರದ ಊರಿನಿಂದ ಯಾವುದಾದರೂ ಬಡ ಕಾರ್ಮಿಕ ಕುಟುಂಬವೊಂದನ್ನು ಕರೆಯಿಸಿ ತಮ್ಮಲ್ಲೇ ಉಳಿಸಿಕೊಳ್ಳುವುದು ಉತ್ತಮ ಎಂದೆನ್ನಿಸಿತು. ಕೂಡಲೇ ತಮ್ಮ ಆಪ್ತೇಷ್ಟರಲ್ಲಿ ವಿಚಾರಿಸತೊಡಗಿದರು. ಹಾಗಾಗಿ ಅಂಥದ್ದೊಂದು ಕುಟುಂಬದ ಸುಳಿವು ಅವರಿಗೆ ದೊರಕಿತು. ಉತ್ತರ ಕರ್ನಾಟಕದ ಅಜಯಪುರದ ಸಂತಾನಪ್ಪ ಕಿಲ್ಲೆ ಎಂಬವನ ಬಡ ಕುಟುಂಬವು ಆಹೊತ್ತು ಈಶ್ವರಪುರದಲ್ಲಿತ್ತು. ಡೇಸಾರ ಸ್ನೇಹಿತರೊಬ್ಬರು ಆ ಕುರಿತು ಸಂತಾನಪ್ಪನೊಡನೆ ಮಾತಾಡಿದರು. ಅವನಿಗೂ ಅಂಥದ್ದೊಂದು ಭದ್ರ ನೆಲೆ ಮತ್ತು ಕಾಯಕದ ಅಗತ್ಯವಿದ್ದುದರಿಂದ ಅವನು ಕೂಡಲೇ ಒಪ್ಪಿದ. ಆದ್ದರಿಂದ ಗೊತ್ತುಪಡಿಸಿದ ದಿನವೊಂದರಂದು ಅವರು ಸಂತಾನಪ್ಪನ ಕುಟುಂಬವನ್ನು ಕರೆದು ತಂದು ಡೇಸಾ ದಂಪತಿಗೆ ಒಪ್ಪಿಸಿದರು.

   ಉದಾರ ಮನಸ್ಸಿನ ಡೇಸಾ ದಂಪತಿ ಆ ಕಾರ್ಮಿಕರು ಉಳಿದುಕೊಳ್ಳಲು ತಮ್ಮ ವಿಶಾಲವಾದ ಹಿತ್ತಲ ಮನೆಯನ್ನೇ ಬಿಟ್ಟುಕೊಟ್ಟರು. ಸಂತಾನಪ್ಪ ದಂಪತಿ ತೀರ ಬಡವರು ಮತ್ತು ಮುಗ್ಧ, ಪ್ರಾಮಾಣಿಕ ಜನರು. ಅವರು ಡೇಸಾರ ತೋಟದ ಕೆಲಸವನ್ನೂ, ಬಂಗಲೆಯ ಚಾಕರಿಯನ್ನೂ ತಮ್ಮದೇ ಎಂಬಷ್ಟು ಮುತುವರ್ಜಿಯಿಂದ ಮಾಡತೊಡಗಿದರು. ಸಂತಾನಪ್ಪನ ಕಪಟವಿಲ್ಲದ ನಿರಂತರ ದುಡಿಮೆ. ಅದಕ್ಕೆ ತಕ್ಕಂಥ ಒಳ್ಳೆಯತನ ಮತ್ತು ಅವನ ಮಡದಿ ಮುನಿಯಮ್ಮ ತನ್ನ ಮನೆ ದೇವರಿಗೆ ತೋರುವಂಥದ್ದೇ ಭಯಭಕ್ತಿಯಿಂದ ಅವರನ್ನು ಆರೈಕೆ ಮಾಡುತ್ತಿದ್ದುದು ಹಾಗೂ ಅವರ ಪುಟ್ಟ ಮಕ್ಕಳಿಬ್ಬರು ಬಂಗಲೆಯ ತುಂಬೆಲ್ಲ ಚಿನಕುರುಳಿಗಳಂತೆ ಓಡಾಡುತ್ತ ನವಚೈತನ್ಯ ತುಂಬುತ್ತಿದ್ದ ವಿಚಾರಗಳು ಡೇಸಾ ದಂಪತಿಯು ಅವರನ್ನು ಅತಿಯಾಗಿ ಹಚ್ಚಿಕೊಳ್ಳುವಂತೆ ಮಾಡಿತು. ಆದ್ದರಿಂದ ತಮ್ಮ ಕೊನೆಗಾಲದಲ್ಲಿ ಆಸರೆಯಾದ ಆ ಕುಟುಂಬದ ಮೇಲೆ ಅವರಿಗೆ ಅತೀವ ಪ್ರೀತಿ ವಿಶ್ವಾಸ ಬೆಳೆದು, ಅನ್ಯೋನ್ಯ ಸಂಬಂಧವನ್ನು ಪೋಣಿಸಿಬಿಟ್ಟಿತು. ಹಾಗಾಗಿ ಅವರನ್ನು ತಮ್ಮ ಚಾಕರಿಯವರಂತೆ ಕಾಣದೆ ಹೆತ್ತ ಮಕ್ಕಳಂತೆ ಆದರಿಸತೊಡಗಿದರು.  

   ಡೇಸಾ ದಂಪತಿಗೆ ಸಮೀಪದ ಬಂಧು ಬಳಗವೂ ಒಂದಷ್ಟು ದೂರದ ಸಂಬಂಧಗಳೂ ಇದ್ದವು. ಆದರೆ ಅವರಲ್ಲಿ ಹೆಚ್ಚಿನವರು ಹೊರದೇಶಗಳಲ್ಲಿ ನೆಲೆಸಿದ್ದರು. ಊರಲ್ಲಿದ್ದವರಲ್ಲಿ ಹಲವರು, ಫೆಲಿಕ್ಸ್ ಡೇಸಾರು ವಕೀಲಿ ವೃತ್ತಿಯಲ್ಲಿ ಅಕ್ರಮ ಸಂಪಾದನೆಗಿಳಿದವರು ಎಂಬಂಥ ತಾತ್ಸಾರದಿಂದಲೋ ಅಥವಾ ಅವರ ಶ್ರೀಮಂತಿಕೆಯ ಮೇಲಿನ ಮತ್ಸರದಿಂದಲೋ ಮುಂಚಿನಿಂದಲೂ ಅವರಿಂದ ದೂರವಿರುತ್ತಿದ್ದರು. ಹೊರದೇಶದ ಸಂಬಂಧಿಕರು ವಾರ್ಷಿಕ ರಜಾದಿನಗಳಲ್ಲಿ ಊರಿಗೆ ಬರುವವರು ತಮ್ಮ ಮನೆಗಳಲ್ಲಿರುವುದಕ್ಕಿಂತಲೂ ಹೆಚ್ಚಾಗಿ ಡೇಸಾ ದಂಪತಿಯೊಂದಿಗೆ ಕಾಲ ಕಳೆಯುತ್ತ ಮಜಾ ಉಡಾಯಿಸಿ ಹೋಗುತ್ತಿದ್ದರು. ಆದರೆ ಡೇಸಾ ದಂಪತಿ ಮುದುಕರಾಗಿ ರೋಗರುಜಿನಗಳಿಗೆ ತುತ್ತಾಗುತ್ತ ಬಂದಂತೆ ಅವರ ಬರುವಿಕೆಯೂ ನಿಂತು ಹೋಯಿತು. ಆದ್ದರಿಂದ ಡೇಸಾದಂಪತಿ ಅವರ ಬಗ್ಗೆಯೂ ಜಿಗುಪ್ಸೆ ತಳೆದು ಕೊನೆಗಾಲದಲ್ಲಿ ಸಂತಾನಪ್ಪನ ಕುಟುಂಬವನ್ನೇ ಅವಲಂಬಿಸಿದರು. ಹೀಗಿದ್ದವರು ಕೊನೆಗೊಮ್ಮೆ ಒಂದೊಂದು ವರ್ಷದ ಅಂತರದಲ್ಲಿ ಇಬ್ಬರೂ ಇಹಲೋಕ ತ್ಯಜಿಸಿದರು. ಆ ವಾರ್ತೆಯನ್ನು ಈಶ್ವರಪುರದ ಮುಖ್ಯ ಇಗರ್ಜಿಗೆ ಮುಟ್ಟಿಸಿ, ಕ್ರೈಸ್ತ ಸಮುದಾಯದೊಂದಿಗೆ ಕೂಡಿ ಯಜಮಾನರ ಪಾರ್ಥಿವ ಶರೀರಗಳನ್ನು ಮಣ್ಣು ಮಾಡಿಸಿ, ಅವರ ಆತ್ಮಗಳಿಗೆ ಶಾಂತಿ ಕೋರುವವರೆಗಿನ ಶಾಸ್ತ್ರ ಸಂಪ್ರದಾಯಗಳನ್ನೆಲ್ಲ ಸಂತಾನಪ್ಪ ದಂಪತಿಯೇ ಮುತುವರ್ಜಿಯಿಂದ ನೆರವೇರಿಸುವ ಹಕ್ಕನ್ನು ಪಡೆದಿದ್ದರು. ಕಾರಣ, ಡೇಸಾ ದಂಪತಿ ಸಾಯುವ ಮುನ್ನ ತಮ್ಮ ಚರಾಚರ ಆಸ್ತಿಪಾಸ್ತಿಯ ಮುಕ್ಕಾಲು ಭಾಗವನ್ನು ಸಂತಾನಪ್ಪನ ಕುಟುಂಬಕ್ಕೂ, ಉಳಿದ ಭಾಗವನ್ನು ಇಗರ್ಜಿಗೂ ವಿಲ್ಲು ಬರೆದಿದ್ದರು!

                                                       ***

ಸಂತಾನಪ್ಪ ಈಶ್ವರಪುರಕ್ಕೆ ಬಂದು ನೆಲೆಸಲು ಮುಖ್ಯ ಕಾರಣ ಅವನ ಊರಿನಲ್ಲಿ ಮಳೆ, ಬೆಳೆ ಚೆನ್ನಾಗಾಗದೆ ಬರಗಾಲ ಬಡಿದದ್ದು. ಆ ವಿಷಮಸ್ಥಿತಿಯಲ್ಲಿ ಊರ ಬಹುತೇಕರು ಕೂಪಿನಾಲಿಗೆಂದು ಗುಳೆ ಹೋಗುತ್ತಿದ್ದರು. ಅದನ್ನು ಕಾಣುತ್ತ ಬರುತ್ತಿದ್ದ ಸಂತಾನಪ್ಪನೂ ಕಂಗಾಲಾಗಿದ್ದ. ಎಲ್ಲರೂ ಹೋದ ಮೇಲೆ  ತಾನಗಾದರೂ ಈ ಒಣ ಭೂಮಿಯಲ್ಲಿ ಏನಿದೆ ಅಂತ ಬದುಕುವುದು…? ಎಂದು ಯೋಚಿಸಿದವನು, ಒಮ್ಮೆ ತಾನೂ ತನ್ನ ಕುಟುಂಬವನ್ನು ಕಟ್ಟಿಕೊಂಡು ಹೊರಟು ಈಶ್ವರಪುರಕ್ಕೆ ಬಂದು ಶಂಕರನ ಕೆಲಸದಾಳಾಗಿ ನೆಲೆಸಿದ. ಆದರೆ ಶಂಕರನ ಜಿಪುಣತನವನ್ನೂ ಕಾರ್ಮಿಕರ ಮೇಲೆಲ್ಲಾ ಅವನು ನಡೆಸುತ್ತಿದ್ದ ದೌರ್ಜನ್ಯವನ್ನೂ ಕಾಣುತ್ತ ಬಂದವನು ಇತರ ಕೂಲಿಯಾಳುಗಳಂತೆ ತಾನೂ ಅವನನ್ನು ಬಿಟ್ಟು ಬೇರೆ ಗುತ್ತಿಗೆದಾರನ ಆಸರೆ ಪಡೆದಿದ್ದ. ಆದರೆ ಆ ಗುತ್ತಿಗೆದಾರನ ಕಥೆ ಇನ್ನೊಂದು ಬಗೆಯದ್ದಾಗಿತ್ತು. ಅವನು ತನ್ನ ಕೆಲಸಗಾರರಿಗೆ ವಾರಪೂರ್ತಿ ಕೆಲಸ ಕೊಡುತ್ತಿದ್ದನಾದರೂ ಸಂಬಳ ಕೊಡಲು ತಿಂಗಳುಗಟ್ಟಲೆ ಸತಾಯಿಸುತ್ತಿದ್ದ. ಆದ್ದರಿಂದ ಸಂತಾನಪ್ಪ, ಪರವೂರಿನಲ್ಲೂ ತನ್ನ ಕುಟುಂಬಕ್ಕೊಂದು ಸೂಕ್ತ ನೆಲೆ ಮತ್ತು ಭದ್ರ ಉದ್ಯೋಗ ದೊರಕಲಿಲ್ಲವಲ್ಲಾ ಎಂಬ ಚಿಂತೆಯಲ್ಲೇ ದಿನಕಳೆಯುತ್ತಿದ್ದ. ಆದರೆ ಅದೇ ಸಂದರ್ಭದಲ್ಲಿ ಫೆಲಿಕ್ಸ್ ಡೇಸಾರ ಆಹ್ವಾನವು ಅವನಿಗೆ ದೇವರೇ ಕೈಬೀಸಿ ಕರೆದಂತಾಗಿತ್ತು. ಆದ್ದರಿಂದ ಡೇಸಾ ದಂಪತಿ ಬದುಕಿದ್ದವರೆಗೆ ಅವನು ಸ್ವಾಮಿನಿಷ್ಠನಾಗಿ ಸೇವೆ ಮಾಡುತ್ತ ಅವರ ಮನಸ್ಸು ಗೆದ್ದ.  

   ಇತ್ತ, ‘ಡೇಸಾ ದಂಪತಿಯ ಅಪಾರ ಸಂಪತ್ತು ಯಾರೋ ದಿಕ್ಕುದೆಸೆಯಿಲ್ಲದ ಪರದೇಸಿಗಳ ಪಾಲಾಯಿತು!’ ಎಂಬ ಸುದ್ದಿ ಅವರ ಬಂಧು ಬಳಗಕ್ಕೆ ಜೀರ್ಣಿಸಲಾಗದ ಸಂಗತಿಯಾಯಿತು. ಆದ್ದರಿಂದ ಅವರಲ್ಲಿ ಕೆಲವರು ಸಂತಾನಪ್ಪನಿಂದ ಆ ಆಸ್ತಿಯನ್ನು ಕಸಿದುಕೊಳ್ಳಲು ಉಪಾಯ ಹೂಡಿ ಅವನ ವಿರುದ್ಧ ಚರ್ಚಿನ ಪಾದ್ರಿಗಳಿಗೂ, ಕ್ರೈಸ್ತ ಮುಖಂಡರಿಗೂ ದೂರು ನೀಡುವ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಚರ್ಚಿನ ಆಗಿನ ಪಾದ್ರಿಯವರು ನಿಜವಾದ ಯೋಗಿಯಂತಿದ್ದವರು. ಅವರು ಡೇಸಾರ ಸಂಬಂಧಿಕರ ದೂರುಗಳನ್ನು ಪರಿಶೀಲಿಸಿ, ಕ್ರೈಸ್ತ ಪ್ರಮುಖರನ್ನೂ ದೂರುದಾರರನ್ನೂ ಆಹ್ವಾನಿಸಿ ಗಂಭೀರ ಚರ್ಚೆ ನಡೆಸಿದರು. ಅದರಿಂದ, ‘ಫೆಲಿಕ್ಸ್ ಡೇಸಾರ ಸಂಪತ್ತು ಅವರ ಸ್ವಯಾರ್ಜಿತ ಆಸ್ತಿ. ಅದನ್ನು ಅವರು ಯಾರಿಗೂ ವರ್ಗಾಯಿಸಲು ಸ್ವತಂತ್ರರು. ಆದ್ದರಿಂದ ಏಸುಕ್ರಿಸ್ತನಿಗೆ ನಿಷ್ಠರಾಗಿ ನಡೆದುಕೊಳ್ಳುವ ಯಾವ ಕ್ರೈಸ್ತನೂ ಆ ಕುರಿತು ಆಕ್ಷೇಪಿಸುವ ಸಣ್ಣತನವನ್ನು ತೋರಬಾರದು!’ ಎಂದು ಆ ಸಭೆಯಲ್ಲಿ ತೀರ್ಮಾನಿಸಿ ಸಂಬಂಧಪಟ್ಟವರನ್ನು ಎಚ್ಚರಿಸಲಾಯಿತು. ಹಾಗಾಗಿ ಡೇಸಾರ ಬಂಧುವರ್ಗವು ನಿರಾಶೆಗೊಂಡು ಸುಮ್ಮನಾಯಿತು. ಇತ್ತ ಪುಕ್ಕಟೆಯಾಗಿ ಕೈಸೇರಿದ ಐಶ್ವರ್ಯವು ಅದೇ ರೀತಿಯಲ್ಲಿ ಕೈಜಾರಲಿದ್ದುದನ್ನು ತಿಳಿದು ಸಂತಾನಪ್ಪನೂ ತಳಮಳಗೊಂಡಿದ್ದವನು ಕ್ರೈಸ್ತ ಮುಖ್ಯಸ್ಥರಿಂದ ಪ್ರಕಟವಾದ ಭರವಸೆಯ ಸುತ್ತೋಲೆ ಆಲಿಸುತ್ತಲೇ ಸಮಾಧಾನಗೊಂಡ. ಜೊತೆಗೆ ಆವರೆಗೆ ಡೇಸಾರ ಔಟ್‍ಹೌಸ್‍ನಲ್ಲೇ ಇದ್ದ ತನ್ನ ಸಂಸಾರವನ್ನು ಕೂಡಲೇ ಅವರ ಬಂಗಲೆಗೆ ವರ್ಗಾಯಿಸಿಕೊಂಡು ಐಷಾರಾಮದ ಬದುಕಿಗೆ ಪಾದಾರ್ಪಣೆ ಮಾಡಿದ.

   ಡೇಸಾರ ಅಪಾರ ಸಂಪತ್ತು ಬಡವ ಸಂತಾನಪ್ಪನ ಪಾಲಿಗೆ ಯಾವತ್ತು ಅನಾಯಾಸವಾಗಿ ಹರಿದು ಬಂದುಬಿಟ್ಟಿತೋ ಆವತ್ತೇ ಅವನೂ ಬದಲಾಗಿಬಿಟ್ಟ! ‘ಅಲ್ಪನಿಗೆ ಐಶ್ವರ್ಯ ಬಂದರೆ!’ ಎಂಬ ಗಾದೆಗೆ ಅನ್ವರ್ಥವಾಗಿಬಿಟ್ಟಿತು ಸಂತಾನಪ್ಪ ದಂಪತಿಯ ಪರಿಸ್ಥಿತಿಯೂ ಕೂಡಾ. ಅಷ್ಟರವರೆಗೆ ಮಹಾದೇವಿ ನಗರದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ತನ್ನ ಮಕ್ಕಳನ್ನು ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗೆ ದೊಡ್ಡ ಮೊತ್ತದ ಅನುದಾನವನ್ನು ನೀಡಿ ಸೇರಿಸಿದ. ಇತ್ತ ಮುನಿಯಮ್ಮನೂ ಬದಲಾದಳು. ಕೆಲವೇ ಕಾಲದ ಹಿಂದೆ ಅದೇ ಬಂಗಲೆಯಲ್ಲೂ, ವಿಶಾಲ ತೋಟದಲ್ಲೂ ದಿನಗೂಲಿಯವಳಾಗಿ ಬೆವರು ಸುರಿಸಿ ದುಡಿದು ಉಣ್ಣುತ್ತಿದ್ದವಳ ಅದೃಷ್ಟದ ನಕ್ಷತ್ರ ಈಗ ಇದ್ದಕ್ಕಿದ್ದಂತೆ ಫಳಫಳ ಹೊಳೆಯಲಾರಂಭಿಸಿತು. ಆದ್ದರಿಂದ ಅವಳೂ ಡೇಸಾರ ಬಂಗಲೆಯ ಯಜಮಾನ್ತಿಯಾಗಿ ಗದ್ದುಗೆಯೇರಿದಳು.

   ಈಗ ಸಂತಾನಪ್ಪನಿಗೂ ತನ್ನ ಬಂಗಲೆ ಮತ್ತು ತೋಟವನ್ನು ನೋಡಿಕೊಳ್ಳಲು ಕೂಲಿಯಾಳುಗಳ ಅಗತ್ಯ ತಲೆದೋರತೊಡಗಿತು. ಆದ್ದರಿಂದ ಅಂದು ಡೇಸಾರು ತಮ್ಮನ್ನು ಕರೆಸಿಕೊಂಡಂತೆಯೇ ಇಂದು ಅವನೂ ತನ್ನ ಊರಿನ ಬಡ ಕುಟುಂಬವೊಂದನ್ನು ಕರೆಯಿಸಿ ಚಾಕರಿಗಿಟ್ಟುಕೊಂಡ. ಡೇಸಾ ದಂಪತಿ ಬಿಟ್ಟು ಹೋದ ಎರಡು ಕಾರುಗಳಿಗೆ ಉತ್ತರ ಕರ್ನಾಟಕದ ಯುವ ಚಾಲಕರು ಬಂದು ಸ್ಟ್ರೇರಿಂಗ್ ಹಿಡಿದು ಸೀಟು ಬೆಲ್ಟುಗಳನ್ನು ಬಿಗಿದುಕೊಂಡು ಯಜಮಾನರ ಅಪ್ಪಣೆಗೆ ಕಾಯತೊಡಗಿದರು. ಒಂದರಲ್ಲಿ ಮುನಿಯಮ್ಮನೂ, ಮತ್ತೊಂದರಲ್ಲಿ ಸಂತಾನಪ್ಪನೂ ಮಕ್ಕಳೊಂದಿಗೆ ನಗರ ಸಂಚಾರಕ್ಕೆ ಹೋಗಿ ಬರುವ ಪರಿಪಾಠವನ್ನಿಟ್ಟುಕೊಂಡರು. ‘ತನ್ನ ಶ್ರಮಕ್ಕೆ ಬಂಗಾರ ಬೆಲೆ. ಪರರದ್ದಕ್ಕೆ ಕವಡೆ ಕಿಮ್ಮತ್ತು!’ ಎಂಬಂತೆ ಸಂತಾನಪ್ಪ ಬಹಳ ಬೇಗನೇ ದುಂದುವೆಚ್ಚವನ್ನೂ ಕಲಿತ. ಮಾತ್ರವಲ್ಲದೆ ಅಗಣಿತ ಸಂಪತ್ತು ಅವನೊಳಗೆ ಸುಪ್ತವಾಗಿದ್ದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳಂಥ ಅರಿಷಡ್ವರ್ಗವನ್ನು ಬಡಿದೆಚ್ಚರಿಸತೊಡಗಿತು. ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ.

(ಮುಂದುವರೆಯುವುದು)

**************************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ಡೇಸಾ ದಂಪತಿಯ ಬದುಕಿನ ಸಂಕ್ಷಿಪ್ತ ಚಿತ್ರಣವನ್ನು ಕಾದಂಬರಿಕಾರರು ಕಟ್ಟಿ ಕೊಟ್ಟಿರುವ ರೀತಿ ಅನನ್ಯ.
    ಬೈಬಲ್ ನಲ್ಲಿ ಸರ್ಪದ ಕುರಿತು ಇರುವ ವಿಚಾರದ ಬಗೆಗಿನ ನಿಜಾರ್ಥವನ್ನು ಸರಿಯಾಗಿ ಗ್ರಹಿಸಿಕೊಳ್ಳದೆ, ಅನೇಕರ ತಪ್ಪು ತಿಳುವಳಿಕೆಯಿಂದ ಅನೇಕ ನಾಗರಹಾವುಗಳು ನಾಶವಾಗುತ್ತಿರುವುದು ನಾನಿರುವ ಹಳ್ಳಿಯಲ್ಲೇ ಕಂಡಿದ್ದೇನೆ.
    ಕಾದಂಬರಿಕಾರರು ಈ ವಿಚಾರದ ನಿಜಾರ್ಥವನ್ನು ಕೂಲಂಕಷವಾಗಿ ಈ ಅಧ್ಯಾಯದಲ್ಲಿ ವಿಶ್ಲೇಷಿಸಿದ್ದಾರೆ. ಈ ಮೂಲಕ ಉರಗ ಜೀವಿಗಳ ರಕ್ಷಣೆಯ ಮಹತ್ವದ ಜವಾಬ್ದಾರಿಯನ್ನು ಕೂಡ ನಿರ್ವಹಿಸಿದ್ದಾರೆ. ಅಭಿನಂದನೆಗಳು ಸರ್

    1. ನಿಮ್ಮ ವಸ್ತುನಿಷ್ಠ ವಿಶ್ಲೇಷಣೆ ಮತ್ತು ಪ್ರೋತ್ಸಾಹಕ್ಕೆ ಹಾರ್ದಿಕ ಧನ್ಯವಾದಗಳು ಅನಿತಾ ಮೇಡಮ್. ಮುಂದೆಯೂ ಹೀಗೆಯೇ ಪ್ರೋತ್ಸಾಹವಿರಲಿ….

Leave a Reply

Back To Top