ಕವಿತೆ
ಬಸ್ಸಿನಲ್ಲಿ..
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಇದು ಬಸ್ಸನೇರಿದ ಹಾಗೆ:
ಹತ್ತಿ ಒಳಗೆ ಸೇರಿದ್ದಾಗಿದೆ
ಪ್ರಯಾಣವಂತೂ ಗ್ಯಾರಂಟಿ ಈಗ
ಎಷ್ಟು ದೂರ ಆದರೇನು
ಮತ್ತು ಎಷ್ಟು ಹೊತ್ತಾದರೇನು
ಕುಳಿತಾದರೂ ನಿಂತಾದರೂ
ಕಡೆಗೆ ತಳ್ಳಾಡಿಸಿಕೊಂಡಾದರೂ
ಹೋಗಲೇಬೇಕು
ಸ್ಥಳ ಬಂದಾಗ ಇಳಿಯಲೇಬೇಕು
ಇದು ಪ್ರಯಾಣ
ಇದೇ ಇಲ್ಲಿನ ನಿಜ ಪ್ರಯಾಣ…!
ದೊರಕಿತೇ ಸೀಟು ಕೂರಿ
ಇಲ್ಲ ತಾಳ್ಮೆಯಲಿ ನಿಲ್ಲಿರಿ
ಮುಖ ಕಂಪೇರಲೇಬೇಕೆ
ನಿಮ್ಮ ಅಶಾಂತಿಯ ರಂಗು
ವಾಂತಿ ಆಗಲೇಬೇಕೆ
ಇನ್ನೊಬ್ಬರ ಮೇಲೆ…!
ವಿಚಾರಿಸಿ ನೋಡಿ
ಹೊಂದಿಕೊಳ್ಳುವ ಮನಸಿನವರಿದ್ದರೆ
ಜರುಗುತ್ತಾರೆ
ನಿಮಗೂ ಒಂದಿನಿತು ತಮ್ಮ ತಾವು
ಸರಿದು ನೀಡುತ್ತಾರೆ
ಇಲ್ಲ ಅವರೂ ಇಳಿವವರೇ ತಾನೆ
ಆಗ ಆ ಜಾಗ ನಮದೆ
ಮುಂದೆ ನಿಮಗಾಗಿ ನಿರ್ವಾಹಕ ಸೀಟಿ ಊದುವವರೆಗೆ
ಆಗ ನೀವೂ ಇಳಿವವರೆ
ಅಷ್ಟೆ ನೋಡಿ ಈ ಪ್ರಯಾಣ
ಈ ಬಸ್ಸಿನಿಂದ ಎಲ್ಲರೂ ಇಳಿದು
ಹೋಗುವವರೆ
ಇಲ್ಲಿ ಯಾರೂ ನಿಲ್ಲುವಂತಿಲ್ಲ
ನಿರಂತರ
ಆದ್ದರಿಂದ ತಾಳ್ಮೆ ಇರಲಿ
ನಿಮಗೂ ಎಲ್ಲರಿಗೂ
ಎಲ್ಲ ಇಳಿಯುವವರು
ಅವರವರ ಸಮಯದಲಿ
ಇದು ಕಾಲದ ಬಸ್ಸು!
ಇನ್ನು ಸ್ವಲ್ಪ ದೂರ ಮಾತ್ರ
ಇನ್ನೇನು ಸ್ವಲ್ಪವೇ ಸ್ವಲ್ಪ ದೂರ
ಅಷ್ಟೆ ಪಯಣ…
**************************
ಅದ್ಭುತ ವಾಗಿದೆ , ಮುಂದುವರಿಸಿ ಸರ್ , ( ಪ್ರಭಾಕರ್ )
ಈ ಕಾವ್ಯದಲ್ಲಿ ಅಧ್ಯಾತ್ಮ ಕಾಣುತ್ತದೆ. ವಾಸ್ತವತೆಯ ಅನಾವರಣವಿದೆ. ಅನುಸರಿಕೊಂಡು ಹೋಗುವ ಗುಣ ಕಲಿಸುತ್ತೆ. Thank you uncle for amazing poem
ಧನ್ಯವಾದಗಳು ಎಂ. ಎಲ್. ಪ್ರಭಾಕರ್ ಹಾಗೂ ಎನ್. ನಿಖಿತ ಅವರಿಗೆ.
Thumba chennagide congrajulation