ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ-15

ಆತ್ಮಾನುಸಂಧಾನ

ಕೂಡಿ ಉಣ್ಣುವ ‘ಕಂಬಳ’ಗಳು

Tribes of India

                ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಣಗಳನ್ನು ಓಡಿಸುವ ಸ್ಪರ್ಧೆಗೆ ‘ಕಂಬಳ’ ಎನ್ನುತ್ತಾರೆ. ಆದರೆ ನಾವು ಚಿಕ್ಕವರಿರುವಾಗ ನಮ್ಮ ಕೇರಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಎಲ್ಲರೂ ಕೂಡಿ ಊಟ ಮಾಡುವ ಸಹಭೋಜನದ ಖುಷಿಗೆ ‘ಕಂಬಳ’ ಎಂದು ಕರೆಯುತ್ತಿದ್ದರು.

                ಒಂದು ಕಾಲದಲ್ಲಿ ಕೇರಿಯ ಎಲ್ಲ ಮನೆಗಳೂ ಹುಲ್ಲು ಹೊದಿಕೆಯ ಛಾವಣಿ ಹೊಂದಿದ್ದವು. ಪ್ರತಿಯೊಂದು ಮನೆ ಛಾವಣಿಯನ್ನೂ ‘ಭತ್ತದ ಹುಲ್ಲು’ ಬೇಣದ ಕರಡ, ಇಲ್ಲವೇ ತೆಂಗಿನ ಗರಿಯಿಂದ ಹೊದಿಕೆ ಮಾಡಿಕೊಳ್ಳುವುದು ಕಾಣುತ್ತಿತ್ತು. ವರ್ಷಕ್ಕೊಮ್ಮೆ ಮಳೆಗಾಲದ ಪೂರ್ವದಲ್ಲಿ ಇದನ್ನು ನವೀಕರಿಸುವುದು ಅನಿವಾರ್ಯವಾಗಿತ್ತು. ಯಾರ ಮನೆಯ ಛಾವಣಿಯ ಹುಲ್ಲು ಹೊದಿಕೆ ಸಂದರ್ಭದಲ್ಲಿಯೂ ಯಾರು ಸಂಬಳ ಪಡೆದು ಕೆಲಸ ಮಾಡುತ್ತಿರಲಿಲ್ಲ. ಮನೆಯ ಯಜಮಾನ ಸಾಮಾನ್ಯವಾದ ಹಗಲಿನ ಊಟ ಮತ್ತು ರಾತ್ರಿ ಪಾಯಸದೂಟಕ್ಕೆ ವ್ಯವಸ್ಥೆ ಮಾಡಿಕೊಂಡು ಪ್ರತಿಮನೆಗೆ ಹೋಗಿ “ಇಂದು ನಮ್ಮ ಮನೆಗಂಬಳ ದಯವಿಟ್ಟು ಬನ್ನಿ” ಎಂದು ವಿನಂತಿಸಿ ಬರುತ್ತಿದ್ದ. ಕೇರಿಯ ಎಲ್ಲ ಮನೆಯವರೂ ಮನೆಗೊಬ್ಬರಂತೆ ಬಂದು ಆ ಮನೆಯ ಹೊದಿಕೆಯ ಕೆಲಸದಲ್ಲಿ ಸಹಕಾರ ನೀಡಿ ಅಂದು ಅದೇ ಮನೆಯ ಆತಿಥ್ಯ ಸ್ವೀಕರಿಸಿ ಹೋಗುತ್ತಿದ್ದರು. ಸರಕಾರದಿಂದ ಹಂಚಿನ ಮನೆಗಳ ಭಾಗ್ಯ ದೊರಕುವವರೆಗೂ ಈ ‘ಮನೆಗಂಬಳ’ದ ಪದ್ಧತಿ ಜಾರಿಯಲ್ಲಿತ್ತು.

                ಇನ್ನೊಂದು ‘ಹಕ್ಕಿ-ಕಂಬಳ’. ನಮ್ಮೂರಿನ ಗದ್ದೆ ಬಯಲಿನಲ್ಲಿರುವ ಕೆರೆದಂಡೆ, ಹಳ್ಳದ ದಂಡೆಗಳ ಮೇಲೆ ಬೆಳೆದು ನಿಂತ ಮುಳ್ಳು ಪೊದೆಗಳಲ್ಲಿ, ಕೇದಗೆ ಹಿಂಡುಗಳಲ್ಲಿ ‘ಹುಂಡು ಕೋಳಿ’ ಎಂಬ ಹಕ್ಕಿಗಳ ಗುಂಪು ಸದಾ ನೆಲೆಸಿರುತ್ತಿದ್ದವು. ಒಂದು ಕೋಳಿ ಮರಿ ಗಾತ್ರದ ಈ ಹಕ್ಕಿಗಳಿಗೆ ನೀಲಿ ಮಿಶ್ರಿತ ಕಪ್ಪುಗರಿಗಳು ಮೈ ತುಂಬಾ ಇರುತ್ತಿದ್ದವು. ಆದರೆ ಕೊರಳಿನ ಭಾಗದಲ್ಲಿ ಬಿಳಿಯ ದೊಡ್ಡದೊಂದು ಹುಂಡು (ವರ್ತುಲಾಕೃತಿಯಲ್ಲಿರುವ ಬಿಳಿಯ ಗರಿಗಳು) ಕಾಣಿಸುತ್ತಿತ್ತು. ಅದಕ್ಕಾಗಿಯೇ ಇವುಗಳನ್ನು ‘ಹುಂಡುಕೋಳಿ’ ಎಂದು ಸಾಮಾನ್ಯವಾಗಿ ಎಲ್ಲರೂ ಕರೆಯುತ್ತಿದ್ದರು.

6 NATURAL FIBRES

                ಅಕ್ಟೋಬರ್ ನವೆಂಬರ್ ತಿಂಗಳ ಹೊತ್ತಿಗೆ ಗದ್ದೆ ಕೊಯ್ಲು ಆರಂಭವಾಗಿ ಬಯಲು ಸ್ವಚ್ಛವಾಗಿ ಕಾಣುತ್ತಿತ್ತು. ಅದೇ ಸುಮಾರಿಗೆ ಮೂಡಣದ ಗಾಳಿ ಅಬ್ಬರದಿಂದ ಬೀಸಲಾರಂಭಿಸುತ್ತದೆ. ಈ ಗಾಳಿಯ ಬೀಸುವಿಕೆಯಿಂದ ಹುಂಡುಕೋಳಿ ಹಕ್ಕಿಯ ಗರಿಗಳೆಲ್ಲಾ ಉದುರಿ ಬತ್ತಲಾದಂತೆ ಕಾಣುತ್ತಿದ್ದವು. ಆಗ ಹಕ್ಕಿಗಳು ಓಡಬಲ್ಲವಲ್ಲದೇ ಹಾರುವುದು ಸಾಧ್ಯವಾಗುತ್ತಿರಲಿಲ್ಲ. ಈ ಸಮಯದ ಸದವಕಾಶ ಪಡೆದು ನಮ್ಮೂರಿನ ಬಹುತೇಕ ಗಂಡಸರು ಮಕ್ಕಳು ಸೇರಿ ಕೆರೆದಂಡೆ ಹಳ್ಳದ ಕಟ್ಟಿನ ಮೇಲಿದ್ದ ಮುಳ್ಳು ಪೇದೆಗಳ ಮೇಲೆ ಕೋಲಿನಿಂದ ಬಡಿದು ಸದ್ದು ಮಾಡಿದರೆ ಹಿಂಡುಗಳಲ್ಲಿ ಅವಿತು ಕುಳಿತ ಹುಂಡುಕೋಳಿಗಳು ಗಾಬರಿಯಿಂದ ಬಯಲಿನಲ್ಲಿ ಓಡುತ್ತಿದ್ದವು. ಅವುಗಳನ್ನು ಬೆನ್ನಟ್ಟಿ ಹೊಡೆದು ಸುಲಭವಾಗಿ ಹಿಡಿಯುವುದು ಸಾಧ್ಯವಾಗುತ್ತಿತ್ತು. ಹೀಗೆ ಎಲ್ಲರೊಟ್ಟಾಗಿ ಮಧ್ಯಾಹ್ನದವರೆಗೆ ಹಕ್ಕಿ ಬೇಟೆ ಮಾಡಿದರೆ ಕನಿಷ್ಟ ಹದಿನೈದರಿಂದ ಇಪ್ಪತ್ತರ ವರೆಗೆ ಹಕ್ಕಿಗಳು ಕೈವಶವಾಗುತ್ತಿದ್ದವು. ಮಧ್ಯಾಹ್ನದ ಬಳಿಕ ಮನೆಗೆ ಬಂದಾದ ಮೇಲೆ ತಲೆಗೊಬ್ಬರಂತೆ ಒಂದು ‘ಸಿದ್ದೆ’ ಅಕ್ಕಿ ನಾಲ್ಕಾಣಿಯ ಕಾಸು ಸೇರಿಸಿ ಕೂಡಿದ ಎಲ್ಲ ಅಕ್ಕಿಯನ್ನು ಬೀಸಿ ದೋಸೆ ಸಿದ್ಧಪಡಿಸಿ, ಕೂಡಿದ ಕಾಸಿನಿಂದ ಮಸಾಲೆ ತಂದು ಹಕ್ಕಿ ಮಾಂಸದ ಅಡಿಗೆಯೂ ಸಿದ್ಧವಾಗುತ್ತಿತ್ತು. ಅಂದು ರಾತ್ರಿ (ಎಲ್ಲ ಮನೆಯ ಹೆಂಗಸರನ್ನು ಉಳಿದು) ಸಾಮಾನ್ಯವಾಗಿ ಎಲ್ಲರೂ ಕೂಡಿ ಸಹಪಂಕ್ತಿ ಭೋಜನದ ಆನಂದ ಹೊಂದುತ್ತಿದ್ದೆವು. ಕೆಲವು ಗಂಡಸರು ಹಕ್ಕಿ ಮಾಂಸದೂಟದೊಂದಿಗೆ ಆಗ ಸರಕಾರದ ಅನುಮತಿಯಿಂದಲೇ ದೊರೆಯುವ ತೆಂಗಿನ ಮರದ ‘ಶೇಂದಿ’ ಎಂಬ ಮಾದಕ ಪೇಯವನ್ನು ಸೇವಿಸುವ ರೂಢಿಯೂ ಇತ್ತು. ಹಕ್ಕಿ ಕಂಬಳ ವರ್ಷದಲ್ಲಿ ಒಂದು ಬಾರಿ ಮಾತ್ರ ಸಾಧ್ಯವಿತ್ತು.

                ಇದೇ ರೀತಿಯಲ್ಲಿ ನಡೆಯುವ ಇನ್ನೊಂದು ಕಂಬಳವೆಂದರೆ ‘ಏಡಿ ಮತ್ತು ಮೀನು ಗಂಬಳ’ ಎಲ್ಲ ಗಂಡಸರು ಮಕ್ಕಳಲ್ಲಿ ಎರಡು ಗುಂಪುಗಳನ್ನಾಗಿ ವಿಂಗಡಿಸಿ ಒಂದು ಗುಂಪು ಅಡಿಗೆ ಕೆಲಸಕ್ಕೆ ನಿಂತರೆ, ಇನ್ನೊಂದು ಗುಂಪು ಮೀನು ಬೇಟೆಗೆ ಹೊರಡುತ್ತಿತ್ತು. ಇದು ಸಾಮಾನ್ಯವಾಗಿ ಸೂರ್ಯಾಸ್ತದ ಬಳಿಕವೇ ಆರಂಭವಾಗುವ ಪ್ರಕ್ರಿಯೆ. ಹತ್ತಾರು ತೆಂಗಿನ ಗರಿಯ ಸೊಡಿಗಳನ್ನು ಕಟ್ಟಿಕೊಂಡು ಗಂಗಾವಳಿ ನದಿಯ ತೀರದಲ್ಲಿ ಮತ್ತು ಅದರ ಉಪಶಾಖೆಗಳಾದ ಹಳ್ಳದಲ್ಲಿ ನೀರಿಗಿಳಿದರೆ ಸೂಡಿಯ ಬೆಳಕಿನಲ್ಲಿ ಏಡಿಗಳು, ಮೀನುಗಳು ಯಥೇಚ್ಛವಾಗಿ ಕಾಣಿಸುತ್ತಿದ್ದವು. ಅವುಗಳನ್ನು ನುರಿತ ಬೇಟೆಗಾರರು ಹಲ್ಲುಗತ್ತಿಯಿಂದ ಕಡಿದು ಹಿಡಿದು, ಕೈಚೀಲಗಳಲ್ಲಿ ಸಂಗ್ರಹಿಸುತ್ತಿದ್ದರು. ಹೀಗೆ ಒಂದೆರಡು ತಾಸು ಮೀನು ಬೇಟೆ ಸಾಗುವಾಗ ಇಡಿಯ ಕೇರಿಗೆ ಸಾಲುವಷ್ಟು ಮೀನು ಮತ್ತು ಏಡಿಗಳು ಸಂಗ್ರಹವಾಗುತ್ತಿದ್ದವು. ಅವುಗಳನ್ನೆಲ್ಲ ಸಂಗ್ರಹಿಸಿ ತಂದು ಪರಿಷ್ಕರಿಸಿ ಅಡಿಗೆ ವಿಭಾಗದವರು ಮೀನು ಮಸಾಲೆ ಸಿದ್ಧಪಡಿಸಿದ ಬಳಿಕ ಪಂಕ್ತಿ ಭೋಜನದಲ್ಲಿ ಮೀನುಗಂಬಳದ ಆನಂದ ಸವಿಯುತ್ತಿದ್ದೆವು.

                ಈ ಎಲ್ಲ ಕಂಬಳಗಳ ನಡುವೆಯೂ ಪರಸ್ಪರ ಚೇಷ್ಠೆ, ಜಗಳ, ಟೀಕೆ ಹೊಯ್ದಾಟಗಳು ನಡೆಯುತ್ತಿದ್ದವಾದರೂ ಮುಂದಿನ ಕಂಬಳಕ್ಕೆ ಎಲ್ಲ ವೈಮನಸ್ಸುಗಳನ್ನು ಮರೆತು ಸಜ್ಜಾಗುವುದೇ ಅದ್ಭುತವಾಗಿತ್ತು. ಕೇರಿಯ ಒಟ್ಟೂ ಮನಸ್ಸುಗಳು ಸಾಮರಸ್ಯದಿಂದ ಬದುಕುವಂತೆ ಮಾಡುತ್ತ, ಎಲ್ಲರ ಅಹಮಿಕೆಯನ್ನು ಮೀರಿ ಒಂದಾಗುವ ಸರಳತೆಯನ್ನು ನಾವೆಲ್ಲ ದೊಡ್ಡವರಾದ ಮೇಲೆಯೂ ರೂಢಿಸಿಕೊಂಡಿದ್ದರೆ ಅಂದು ನಾವು ಕೇರಿಯಲ್ಲಿ ಅನುಭವಿಸಿದ ‘ಕಂಬಳ’ದ ಮೂಲಕ ರೂಢಿಸಿಕೊಂಡ ಕೂಡಿ ಉಣ್ಣುವ ಜಾಯಮಾನವೇ ಕಾರಣವೆಂದು ನನಗೆ ಈಗಲೂ ಅನ್ನಿಸುತ್ತದೆ.

**********************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

7 thoughts on “

  1. ಕೂಡಿ ಉಂಡು ಒಂದಾಗಿ ಬಾಳುವ ಕುಟುಂಬದ ಸವಿ ಇಂದು ಕೇವಲ ಕನಸಾಗಿ ಉಳಿದಿರುವುದು ದುರದ್ರಷ್ಟಕರ. ಚೆನ್ನಾಗಿ ಮೂಡಿ ಬಂದಿದೆ ನೆನಪುಗಳ ಬುತ್ತಿ.

  2. ಕುಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದು ಸೂಚಿಸುತ್ತದೆ. ಅಂದಿನ ಸಾಮರಸ್ಯದ ದಿನಗಳು ಇಂದು ಕಾಣಲು ಸಾಧ್ಯವಿಲ್ಲ.

  3. Chikkavaniddaga Aggiya sangada manegambalada bojanakee hoda nenapu matttome marukalisiddake tumba khushi aytu sir. Dhanyavadagalu sir.

Leave a Reply

Back To Top