ನುಡಿ ಕಾರಣ

ಲಹರಿ

ನುಡಿ ಕಾರಣ

ಗೋನವಾರ ಕಿಶನ್ ರಾವ್.

Amazon.com: Pencil Sketch Photo Editor: Appstore for Android

ನಾಮಗಳು,ಉಪನಾಮಗಳು,ಅಡ್ಡಹೆಸರುಗಳು,ಸಾಮಾನ್ಯವಾಗಿ ನಮಗೆಲ್ಲರಿಗೂ ಸಾಧಾರಣ ಸಂಗತಿ.

ವ್ಯಾಕರ್ಣ ನಿಯಮಗಳ ಪ್ರಕಾರ ನಾಮಪದ ಎಂದರೆ,ವ್ಯಕ್ತಿ, ವಸ್ತು ಮತ್ತು ಊರಿನ ಹೆಸರು.ಅವುಗಳಲ್ಲಿ,ರೂಢಿಯಾಗಿ ಬಂದ ಹೆಸರು,ರೂಢ ನಾಮವಾದರೆ,ಇಟ್ಟಹೆಸರಿಗೆ ಅಂಕಿತನಾಮ ಮತ್ತು ವೃತ್ತಿ,ಅಂಗವಿಕಲತೆ ಮುಂತಾದುವುಗಳನ್ನು ಹೇಳುವುದು. ಅಡ್ಡ ಹೆಸರುಗಳನ್ನು ,ಉಪನಾಮಗಳನ್ನು ಅನ್ವರ್ಥಕ ನಾಮಗಳ ಗುಂಪಿಗೆ ಸೇರಿಸಬಹುದು ಎಂದುಕೊಳ್ಳುತ್ತೇನೆ ಆದರೆ ವಿದ್ವಾಂಸರು ಇನ್ನೂ‌ ಇವುಗಳನ್ನ  ವಿವಿಧನಾಮಪದ ಎಂದೇ ಗುರುತಿಸಿದ್ದಾರೆ.ಸ್ಥಳ,ಅಥವಾ ಸರಿಯಾದ ನಾಮಕರಣ ಮಾಡಿದ ಹೆಸರಿಗೆಬದಲಾಗಿ,ಪ್ರೀತಿಯಿಂದ,ಮುದ್ದಿನಿಂದ,ಇರುವ ಹೆಸರಗಳನ್ನು ಅಪಭ್ರಂಶ ಗೊಳಿಸಿ ಬೇರೆಯೇ ಒಂದು ಹೆಸರನ್ನು ಕರೆಯಲು ಬಳಸುವದೇ ಅಡ್ಡ ಹೆಸರು ಎನ್ನಬಹುದೆ.ಊರಿನ ವೃತ್ತಿ, ಮನೆತನ,ಮುಂತಾದ ಹೆಸರುಗಳು ಸಹ ಅಡ್ಡ ಹೆಸರುಗಳಾಗಿ ಮುಂದುವರಿಯುತ್ತವೆ. ಕುಲಕರ್ಣಿಯನ್ನೇ ಉದಾಹರಣೆಗಳಾಗಿ ತೆಗೆದುಕೊಂಡರೆ,ಊರಿನ,ಜಮೀನುಗಳ ಲೆಕ್ಕಪತ್ರ ಗಳನ್ನು ಇಡುವ,ಕಂದಾಯ ವಸೂಲಿ ಮಾಡುವ ಮಾಡಿದ್ದನ್ನು ತಾಲೂಕಾ ಖಜಾನೆಗೆ ಕಟ್ಟುವ ವೃತಿಯಾಗಿದ್ದು ಅದಕ್ಕೆ ವೇತನ ರೂಪದಲ್ಲಿ ಒಂದಷ್ಟು ಹಣ ಸಂದಾಯವಾಗುತ್ತಿತ್ತು.ಅದನ್ನು ನಮ್ಮ ತಾತನ ಕಾಲದಲ್ಲಿ ಪೋಟಿಗೆ ಎಂದು ಕರೆಯುತ್ತಿದ್ದರು. ನಮ್ಮ ಹಿರಿಯತಾತ ನಿಜಾಮನ ನೌಕರ ದಾರ. ಕರೋಡಗಿರಿಯ ಅಧಿಕಾರಿ ಅಂದರೆ ಈ ಸುಂಕದ ಕಟ್ಟೆಗಳ ಮೇಲ್ವಿಚಾರಣೆ. ಕಾರಕೂನ ಎನ್ನುವ ಅಭಿಧಾನ ಅದಕ್ಕೆ.ತಾತ ಗತಿಸಿ ಅದೆಷ್ಟೋ ವರುಷಗಳಾಗಿದ್ದರೂ ಇಂದಿಗೂ ನಮ್ಮದು ಕಾರಕೂನರ ಮನೆತನ.ಎರಡನೆಯ ತಾತ ಮಾಡಿದ ಕುಲಕರ್ಣಿ ಯ ವೃತ್ತಿಯಿಂದಾಗಿ ನಮ್ಮೆಲ್ಲ   ಹೆಸರುಗಳ ಮುಂದೆ ಕುಲಕರ್ಣಿ ಉಪನಾಮ.ಅದು ಪರಂಪರಾಗತವಾಗಿ ಬಂದ ಬಳವಳಿ ಎನ್ನುವ ಹಾಗೆ  ನಾವೆಲ್ಲರೂ ಕುಲಕರ್ಣಿಗಳು !  ವಂಶ ಪಾರಂಪರ್ಯವಾಗಿ ಬಂದ ಕುಲಕರ್ಣಿಕೆ ಹೋಯಿತು. ಸರಕಾರ ನಿಯುಕ್ತಿಗೊಳಿಸಿದ   ವಿಲೇಜ ಅಕೌಂಟೆಂಟ್ ಗಳು  ಊರೂರಿಗೆ ಬಂದು  ದಫ್ತರ್ ಗಳನ್ನು ಕಸಿದರೂ ನಾವು ಇಂದಿಗೂ ಕುಲಕರ್ಣಿ ಮನೆತನದವರೇ !  ಅದು ಬೇಡವೇ ಬೇಡ ಎಂದು,ಕುಲಕರ್ಣಿ ಕಿತ್ತಿಹಾಕಿ ಊರಿನ ಹೆಸರನ್ನು ಕಾಯಂಗೊಳಿಸಿದೆ. ಈಗ ನನ್ನ ಅಣ್ಣತಮ್ಮಂದಿರು ಕುಲಕರ್ಣಿ ಗಳು ನಾನು ನನ್ನ ಮಕ್ಕಳು ಗೋನವಾರದವರು !!  ಸರಕಾರದಿಂದ ನಿಯುಕ್ತನಾಗಿ ಬಂದ  ವಿಲೇಜ ಅಕೌಂಟೆಂಟ್ ಪಾಪ, ‘ತಲಾಟಿ ಕುಲಕರ್ಣಿ.’ಈ ಹೆಸರಿನ ರಹಸ್ಯ, ವ್ಯುತ್ಪತ್ತಿ ನನಗೆ ಇನ್ನೂ ತಿಳಿದಿಲ್ಲ.

ಇದು ಒಂದುಹಳ್ಳಿಯ ಐತಿಹ್ಯ ವಾದರೆ ಇದರ ಮುಂದಿನ ಪ್ರಮೋಶನ್ ಗ್ರೇಡಗಳೆಂದರೆ,ದೇಸಾಯಿ, ದೇಶಪಾಂಡೆ,ದೇಶಮುಖ,ಮನಸಬ್ದಾರ್,ಹೀಗೆ ಸಾಗುತ್ತದೆ. ಇವೆಲ್ಲವೂ ವೃತ್ತಿ ನಾಮಗಳೇ ಆಗಿದ್ದು ಇಂದು ಮನೆತನದ ಹೆಸರುಗಳಾಗಿ,ಅನ್ವರ್ಥ ನಾಮಗಳಾಗಬೇಕಿದ್ದು,  ರೂಢಿನಾಮಗಳಾಗಿ ಉಳಿದುಕೊಂಡಿವೆ !

ಹೈದರಾಬಾದ್ ಗೆ ಬಂದಾದ ಮೇಲೆ, ಮಾನ್ವಿ, ಮಟ್ಮಾರಿ ದಿದ್ದಗಿ, ಕುಟುಂಬ ದವರನ್ನು ನೋಡಿಯಾದ ಮೇಲೆ ಊರ ಹೆಸರನ್ನು ಹೊಂದಿದವರನ್ನು ನೋಡಿ ಖುಷಿ ಪಟ್ಟೆ. ಮಾನ್ವಿಕರ್,ಯಾಕೆ ಎಂದು ಯೋಚಿಸುವಾಗ, ‌ ಮರಾಠರಸರ,ಮತ್ತು ಅವರ  ಸಂಸ್ಥಾನಗಳ ಪ್ರಭಾವ ಇದ್ದಿರಬೇಕು ಅಲ್ಲವೇ?   ಎಂದೆನಿಸಿತು.ಬರೀ ಮಾನ್ವಿಕರ್ ಮಾತ್ರ ಅಲ್ಲ ಅಫಜಲಪುರಕರ್,ಅಳಂದಕರ್,ಚಿಂಚೋಳಿಕರ್,ಯಾದಗೀರಕರ್,  ಶೋರಾಪೂರ ಕರ್, ಜೋರಾಪೂರಕರ್, ಮಣೂರಕರ್ ಹೀಗೆ ಹೆಚ್ಚೂ ಕಮ್ಮಿ ಕಲಬುರಗಿ ಜಿಲ್ಲೆಯವರೆಲ್ಲಾ ‘ಕರ್’ ಗಳೇ.

ಡಾ.ಕಿಶನ್ ರಾವ್ ಮಾನ್ವಿಯವರು ವೈದ್ಯವೃತ್ತಿಯ ಕಾಲಾವಧಿಯಲ್ಲಿ ಈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ರಿಂದ  ಅವರೂ ಮಾನ್ವಿಗೆ,ಕರ್ ಜೋಡಿಸಿಕೊಂಡಿದ್ದರು. ಹುಬ್ಬಳ್ಳಿ ಧಾರವಾಡಕಡೆಯಂತೂ, ಅಹಾರ ದಿನಸಿ ತರಕರಿಗಳಹೆಸರನ್ನು ಅಡ್ಡ ಹೆಸರಾಗಿ ಇರುವದನ್ನು ನೀವು‌ಕೇಳಿಯೇಇರುತ್ತೀರಿ.ಬ್ಯಾಳಿಯವರು,ಮೆಣಸಿನಕಾಯಿಯವರುಕುಸುಬಿಯವರು,ಎಣ್ಣಿಯವರು.ನನ್ನ ಒಬ್ಬ ಸಂಬಂಧಿಯೇ ಎಣ್ಣಿ ಶ್ಯಾಮಣ್ಣ.ಜೋಷಿಯವರು,ಆಶ್ರಿತ ರು ಆಚಾರ್ಯರು.  ವೇದ ಪಾರಂಗತರಾಗಿದ್ದರೆ,ವೈದ್ಯರು ಆಯುರ್ವೇದ ವೃತ್ತಿಯಲ್ಲಿದ್ದವರಿದ್ದಿರಬೇಕು.ವೈದ್ಯ ಮನೆತನದಿಂದ ಬಂದ.ಪ್ರಭಾ  ಮೇಡಂ ಏನಾದರೂ ಬೆಳಕು ಬೀರಬಹುದೇನೋ ನೋಡೋಣ.

 ಇರಲಿ ಇನ್ನು ಊರಿನ ಗೌಡರ ವಿಷಯಕ್ಕೆ ಬಂದರೆ ಅಲ್ಲಿ ಅಂದು,ಎರಡು ಬಗೆಯ  ಗೌಡರು ಇದ್ದರು ಒಂದು ಮಾಲಿಗೌಡ,ಇನ್ನೊಂದು ಪೋಲೀಸ ಗೌಡ, ಒಬ್ಬರು ಕುಲಕರ್ಣಿಯ ಸಹೋದ್ಯೋಗಿಯಾದರೆ ಇನ್ನೊಬ್ಬ ಊರಿನ ರಕ್ಷಕಭಟ.ಇವರಿಗೆ ಅಸಿಸ್ಟೆಂಟ್ ಗಳು ತಳವಾರ,ಓಲೇಕಾರ. ಇವಾವೂ ವೃತ್ತಿಗಳು ಇಂದು ಉಳಿದಿಲ್ಲವಾಗಲೀ,ಆ ಮನೆತನದ ಅಡ್ಡ ಹೆಸರುಗಳಾಗಿ ಇವು ಇನ್ನೂ ಮುಂದುವರಿದಿವೆ.

ಊರಿನ ಅಂಕಿತನಾಮ ಗಳ ಕಡೆ ಒಂದು ದೃಷ್ಟಿ ಹಾಯಿಸಿ ನೋಡೋಣ. ಗ್ರಾಮದೇವತೆಗಳ ಹೆಸರಗಳು ಊರವರಿಗೆ ಇರುವುದು ಸಾಮಾನ್ಯ. ಮಾರೆಪ್ಪ,ದುರಗಪ್ಪ,ಮಾರೆಮ್ಮ,ದುರುಗಮ್ಮ,ಸುಂಕಲಮ್ಮ ದ್ಯಾವಮ್ಮ,ದ್ಯಾವಣ್ಣ ಗಳು ಎಲ್ಲ ಕೆಳಸ್ತರದ ಮನೆಯಲ್ಲಿ ಇದ್ದರೆ ಮೇಲುವರ್ಗದಲ್ಲಿ ಗೌಡರು ಹೆಚ್ಚು.ನಂತರ ಅಪ್ಪಗಳು.ಬಸನಗೌಡ, ಬುಡ್ಡನಗೌಡ,ನರಸನಗೌಡ,ತಿಮ್ಮನಗೌಡ,ರುದ್ರಗೌಡ  ಬಸಪ್ಪ,ಬಸಮ್ಮ, ಇತ್ಯಾದಿ.   ಶರಣಪ್ಪ,ಶರಣಮ್ಮಗಳಂತೂ ವರ ಪುತ್ರ ಪುತ್ರಿಯರು. ಕಲಬುರಗಿಯ ಶರಣಬಸಪ್ಪ ಅಪ್ಪಾ ಅವರ ವರದಾನದಿಂದ ಜನಿಸಿದವರು. ಮಟ್ಮಾರಿಯ ವೀರಭದ್ರ ದೇವರ ಒಕ್ಕಲಿನವರು. ವೀರಭದ್ರಪ್ಪ ವೀರಭದ್ರಮ್ಮ,ವಿರೂಪಾಕ್ಷಪ್ಪ.ವಿರುಪಣ್ಣ.ಉರುಕುಂದಿ ನರಸಿಂಹಸ್ವಾಮಿ ಕುಲದೇವರನ್ನು ಹೊಂದಿರುವವರೆಲ್ಲ, ಉರುಕುಂದೆಪ್ಪ,ಉರಕುಂದಿ,ಉರುಕುಂದಿಗೌಡ.

ಗೋನವಾರದಿಂದ ಹೊರಗೆ ಬರೋಣ . ಪ್ರೀತಿ, ಪ್ರೇಮ,ಮುದ್ದಿನ ಹೆಸರುಗಳ(Nick name) ಕುರಿತು ನೋಡೋಣವೇ?

ನಮ್ಮ ದೇಶದಲ್ಲಿ ಬಹುತೇಕ ಮಂದಿ ಹೆಂಡತಿಯರು ತಮ್ಮ ಗಂಡಂದಿರನ್ನು ಹೆಸರು ಹಿಡಿದು ಕರೆಯುವುದಿಲ್ಲ. ಬದಲಿಗೆ ಅವರಿಗೆ ಸಾಮಾನ್ಯವಾಗಿ ಒಂದು ಹೆಸರನ್ನು ನೀಡುತ್ತಾರೆ. ಅದರ ಪ್ರಕಾರ ಅವರನ್ನು ಕರೆಯುತ್ತಾರೆ. ಅದು ಎಲ್ಲರ ಮುಂದೆ! ಉದಾಹರಣೆಗೆ ; ” ರೀ”, ” ಏನ್ರೀ”, ” ಏನೂ”, ಇತ್ಯಾದಿಗಳು. ಇವು ಕೇವಲ ಸಂಬೋಧನೆಗೆ ಮತ್ತು ಇತರರ ಮುಂದೆ ಗೌರವ ಪೂರ್ವಕವಾಗಿ ಬಳಕೆಯಾಗುತ್ತದೆ !. ಇನ್ನುಳಿದಂತೆ ಇದೇ ಹೆಸರುಗಳು ರಾಗ ಬದಲಾಯಿಸಿಕೊಂಡು ಬೇರೊಂದು ಸಂದರ್ಭದಲ್ಲಿ  ಬೇರೆ ಬೇರೆ ರೀತಿಯಲ್ಲಿ ಬಳಕೆಯಾಗುತ್ತವೆ !!

ಇತ್ತೀಚೆಗಂತೂ ಪರಸ್ಪರ ಹೆಸರುಗಳಿಂದಲೇ ಕರೆಯವುದನ್ನು ನೋಡುತ್ತಿರುವದರಿಂದ ಹೆಂಡತಿ, ಗಂಡನನ್ನು ಹೆಸರಿನಿಂದ ಕರೆಯಬಾರದು ಎನ್ನುವದು ಮಾಯವಾಗಿ ಹೋಗಿದೆ. ಕೆಲವರು ತಮ್ಮ ಗಂಡಂದಿರನ್ನು ನಿಕ್ ನೇಮ್‌ನಿಂದ ಕರೆಯುವದನ್ನು ನೋಡಿದ್ದೇನೆ.ಡಾರ್ಲಿಂಗ್,   ಬಾಬು,ರಾಜು, ಎಂದು ಕರೆದುಕೊಳ್ಳುತ್ತಾರೆ. ಗಂಡಂದಿರೂ ಸಹ,ಡಾಲಿ  ರಾಣಿ ರೋಜಿ ಎಂದೆನ್ನುತ್ತಾರೆ.

ಮಕ್ಕಳಿಗೆ ಇಡುವ ಮುದ್ದಿನಹೆಸರಗಳಂತೂ ಲೆಕ್ಕವಿಲ್ಲದಷ್ಟು ಇವೆ ಎನ್ನಬಹುದು.ಗುಂಡು,ಪುಟ್ಟು, ಪಟ್ಟಿ, ಗುಂಡಿ,ಗೌರಿ,ಮುಂತಾದುವುಗಳಿಂದ ಮುದ್ದಾಗಿ ಕರೆದರೆ ಇನ್ನೂ ಕೆಲವರು ಇಟ್ಟಿರುವ ಹೆಸರುಗಳನ್ನೇ ಮೊಟಕುಗೊಳಿಸಿ,ಕರೆಯುವದು ತಮಾಷೆಯಾಗಿರುತ್ತದೆ. ಆನಂದ,,ಅನ್ನಿಆದರೆ,ಅನಿರುದ್ಧನೂ ಅನ್ನಿ ! ಮಂದಾಕಿನಿ ಮಂದಿ ಆದರೆ ಸುಭದ್ರ ಸುಬ್ಬಿ ಆಗುತ್ತಾಳೆ.ಭಾಗೀರತಿ ಭಾಗಿಯಾದರೆ, ರಾಜೇಶ್ವರಿ ರಾಜಿ. ಕಿಟ್ಯಾ,ರಾಮ್ಯಾಶ್ಯಾಮ್ಯಾ,ಜಯ್ಯ,ಗುಂಡಿ,ಮುನ್ನಿ,ಜಾನು,ಸೋನಾ,ಡಿಪ್ಪಿ ಅಪ್ಪಿ ಮುದ್ದಿ ಕಲ್ಲಿಇವು ಸರ್ವೆ ಸಾಮಾನ್ಯ.ಕರ್ರಗಿದ್ದವನು ಕಾಲಿಯಾ,ಉದ್ದಕ್ಕಿದ್ದವನು, ಲಂಬೂ, ಇತ್ಯಾದಿಅಡ್ಡಹೆಸರನ್ನು ಹಲವುವೇಳೆ ಅಪೇಕ್ಷಣೀಯವೆಂದು ಪರಿಗಣಿಸಲಾಗುತ್ತದೆ, ಮತ್ತು ಅಂಗೀಕಾರದ ಒಂದು ರೂಪವನ್ನು ಸಂಕೇತಿಸುತ್ತದೆ, ಆದರೆ ಕೆಲವೊಮ್ಮೆ ಅಣಕದ ಒಂದು ರೂಪವಾಗಿರಬಹುದು

ವಚನಕಾರರ ಇಷ್ಟದೇವರ ಹೆಸರುಗಳು,ಹರಿದಾಸರ ಅಂಕಿತಗಳು ಸಮರ್ಪಣಾ ಮನೋಭಾವವನ್ನು ಸೂಚಿಸುತ್ತವೆ.

ಸಾಹಿತ್ಯದಲ್ಲಿ ಯಂತೂ ಪ್ರತಿಯೋರ್ವರು ಅವರಿಗೆ ಸರಿ ಎನಿಸುವ ಕಾವ್ಯ ನಾಮಗಳನ್ನು ಇಟ್ಟುಕೊಳ್ಳುತ್ತಾರೆ. ಅಥವಾ ಅವರಿಗೆ ಬಿರುದು ಸಂಪ್ರದಾನ ರೂಪಗಳಲ್ಲಿ ಬಂದಿರುತ್ತವೆ. ಪಂಪ ಆದಿ ಕವಿಯಾದರೆ,ರನ್ನ ಶಕ್ತಿ ಕವಿ,ನಾಗಚಂದ್ರ,ಅಭಿನವ ಪಂಪ.ನಾರಣಪ್ಪ ಕುಮಾರವ್ಯಾಸ, ಸರ್ವಜ್ಞ ತ್ರಿಪದಿ ದೊರೆ, ಮಾಸ್ತಿ ಸಣ್ಣ ಕತೆಗಳ ಜನಕರಾದರೆ, ಕುವೆಂಪು ಪ್ರಕೃತಿ ಕವಿಯಾದರೆ,ಬೇಂದ್ರೆ ವರಕವಿ.

ಚಂದ್ರಶೇಖರ ಪಾಟೀಲ ಚಂಪಾ ಆದರೆ ಹಂಪಾ ನಾಗರಾಜಯ್ಯ ಹಂಪಾ.

ಎಲ್ಲರೂ ಇಟ್ಟುಕೊಳ್ಳುತ್ತರೆಂದೆನೂ ಇಲ್ಲವಾದರೂ ವೈಯಕ್ತಿಕ ಬ್ಲಾಗ್ ಗಳನ್ನು ಹೊಂದುವ  ಸ್ವಾತಂತ್ರ ಇರುವುದರಿಂದ,ಆದಕ್ಕಾದರೂ ತಮಗೆ ಇಷ್ಟವಾದ ಹೆಸರು ಕೊಟ್ಟಿರುತ್ತಾರೆ.

ಲಹರಿ ಎಂದ ಮೇಲೆ ಆದಿ ಅಂತ್ಯ ಗಳಿರುವದಿಲ್ಲ.ಎಲ್ಲಿಂದಾದರೂ ಪ್ರಾರಂಭಿಸಬಹುದು ಮಗಿಸಬೇಕೆಂದೇನೂ ಇಲ್ಲ.ನೀವು ಬೇಕಾದರೂ ಮುಂದುವರಿಸಬಹುದು.ಅದು ಲಹರಿಯ ವೈಶಿಷ್ಟ್ಯ.

*********************************************

                           

Leave a Reply

Back To Top