ಅವಳು ಸತ್ಯವನ್ನು ಹೇಳಲಿಲ್ಲ

ಕವಿತೆ

ಅವಳು ಸತ್ಯವನ್ನು ಹೇಳಲಿಲ್ಲ

ವಿಶಾಲಾ ಆರಾಧ್ಯ

women art fantasy - Arts Xplore

ನೀ ಏನೇ ಹೇಳು ಗೆಳತಿ
ಅವ ಅವಳನೆಂದೂ ನಂಬಲಿಲ್ಲ
ಅವಳ ಪ್ರೀತಿಯನ್ನೇಂದೂ
ಅರಿಯಲಿಲ್ಲಾ
ಕೋಮಲೆಗೆ ಆಗಿನ್ನೂ ಹನ್ನೆರಡಿರಬಹುದೇ
ಅಮ್ಮನ ಆರೈಕೆಯಲ್ಲೇ ಬಿಡಬಹುದಿತ್ತು
ಹತ್ತುನಾಲ್ಕು ವರ್ಷ ಒಡನಿದ್ದು
ಬೇಯಿಸಿ ಬಡಿಸಲೇನು
ಧಾನ್ಯಗಳ ಕಣಜವಿತ್ತೇ
ತಿಂದದ್ದು ಕಾಡಲ್ಲಿ ಗೆಡ್ಡೆ ಗೆಣಸು
ಎಲೆ ಕಾಯಿ ಹಣ್ಣು ತಾನೇ?
ಆತ ಆಕೆಯ ಒಳಗಣದ
ಕಷ್ಟ ಅರಿತನೇನೇ?
ತಿಂಗಳಲ್ಲಿ ಪೀಡಿಸುವ
ಕರ್ಮಕ್ಕೆ ಎಲ್ಲಿತ್ತು?
ಏನಿತ್ತು ಆಕೆಗೆ?
ಕೊರೆವ ಚಳಿಯಲ್ಲಿ ಗಾಳಿಯಲಿ
ಎಷ್ಟು ನಲುಗಿತ್ತು ಜೀವ
ಜಲವಿತ್ತೋ ಇಲ್ಲವೋ
ಒಲವೆಂದು ಬಂದುದಕೆ
ಬಲವೇನಾದರೂ
ಸಂದಿತೇನೇ?

ಕಾಯದಲಿ ಒಡನಿದ್ದು
ವಾಚದಲಿ ಸರಿಯಿದ್ದು
ಮನಸಿನೊಳು ಒಲವಿದ್ದಾಕೆಯ
ಅರಿಯದೆ ಬೆರಿದೆ
ಗಾಳಿಮಾತಿಗೆ ತೋಕ ಕಳೆದು
ತೂರಿ ಹೋದನಲ್ಲೇ
ರಾಮರಾಮ!
ಒಲವಿನ ಹೊಲದ ಬೆಳೆಯೆಲ್ಲಾ
ಬೇಲಿಗೇ ಬಲಿಯಾಯಿತಲ್ಲೇ
ಅವಳಿಗಿನ್ನಾರು ವೈರಿಯುಂಟೇ
ಜಗದೊಳಗೆ ಹೌದಲ್ಲವೇನೇ
ಅವನೆಂದೂ ಅವಳಿಗೆ
ಆದರ್ಶವಾಗಲಿಲ್ಲ
ಅವಳೆಂದೂ ಸತ್ಯವನ್ನು
ಹೇಳಲೇ ಇಲ್ಲ !!

********************************

6 thoughts on “ಅವಳು ಸತ್ಯವನ್ನು ಹೇಳಲಿಲ್ಲ

  1. ಸೀತೆ ಸದಾ ಬಗೆಬಗೆಯಲ್ಲಿ ಕಾಡುವ ಕವಿತೆ ಅರ್ಥ ಆಗದೇ ಉಳಿದ ವನಿತೆ…. ಚೆಂದದ ಕವಿತೆ ಮೇಡಂ

    1. ಸೀತೆ ಅವಳ ಬಾಳೇ ಶೋಕಗೀತೆ!
      ವಿಧಿಯ ಹುನ್ನಾರದಲ್ಲಿ ಬದುಕು ಬೇಯಿತೇ?
      ಅವಳು ಯಾರನ್ನೂ ದೂಷಿಸಲಿಲ್ಲ
      ಆದರೂ ನೆಮ್ಮದಿಯ ಬದುಕು ಮರೀಚಿಕೆಯಾಯ್ತೇ?

Leave a Reply

Back To Top