ಕವಿತೆ
ಅಪರಿಚಿತನಾಗಿಬಿಡು
ದೇವು ಮಾಕೊಂಡ
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ
ನಿನ್ನ ಥರಾನೇ ಯೋಚಿಸಿ ಹಣೆಗೆ ಮಸಿ ಬಳಿದು ಕೇಕೆ ಹಾಕುವವರ ನಡುವೆ ಅಪರಿಚಿತನಂತೆ ನಿಂತು ಬಿಡು ನೀನು
ಕಂಡದ್ದು ಕಾಣದ್ದು ನುಂಗಿ ನೀರು ಕುಡಿದು ಬಿಡಲಿ ಅವರು
ನಿನ್ನಷ್ಟು ಓದದವನು
ನಿನ್ನಷ್ಟು ನುರಿಯದವನು
ನಿನಗೆ ಪಾಠ ಮಾಡುವಾಗ
ಜೇಬಿನಲ್ಲಿ ಇಟ್ಟಿರುವ ನಿನ್ನ ಪೆನ್ನು ಬಚ್ಚಿಟ್ಟುಕೊಳ್ಳು
ನ್ಯಾಯ ಕೇಳಲು ಬಂದ ನಿನ್ನ ಹೆಜ್ಜೆಗಳನ್ನು ಒರೆಸಿಕೊಳ್ಳುತ್ತಾ ತಿರುಗಿ ಹೋಗು
ಕಾರಣ ಇಷ್ಟೇ
ಇಲ್ಲಿ ಬರಿ ಭ್ರಮೆಯ ಫಸಲು ಚಿಗುರುತ್ತಿವೆ
ನೀನೊಮ್ಮೆ ತಿರುಗಿ ಸಾಗ ಹೊರಟಾಗ
ದಾರಿಮಧ್ಯದಲ್ಲಿ ಕುಸಿದು ಬಿದ್ದು ಸತ್ತರೆ
ಮುಂಚೆಯೇ ನಿನ್ನವರಿಗೆ ತಿಳಿಸಿ ಹೇಳು
ಗೊರಿಯ ಮೇಲೆ ಹೆಸರು ವಿಳಾಸ ಬರೆಯಕೂಡದೆಂದು
ಕಾರಣ
ಕಾರಣ
ಇಲ್ಲಿ ಯಾರಿಗೂ ಅವಧಾನವಿಲ್ಲ
ಮತ್ತು
ಓದುವಿನ ಕೊರತೆಯೂ ಇದೆ
ಒಂದುವೇಳೆ
ಬದುಕಿದ್ರೆ
ಹೇಗಿದ್ದೀಯೋ ನೀನು
ಹಾಗೆಯೇ ಇದ್ದು ಬಿಡು
**********************************