ಕವಿತೆ
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ?
ಎ .ಎಸ್ . ಮಕಾನದಾರ
ಮೊಗ್ಗಿದ್ದಾಗಲೇ ಉಡಕಿ ಗಂಡನನ್ನು ಕಟ್ಟಿಕೊಂಡು
ಡಜನ್ ಮಕ್ಕಳನ್ನು ಹೆತ್ತರು ಲಂಬಾಣಿಯ ಹಚಡಾ
ಕಳ್ಳಬಟ್ಟಿ ಘಾಟಿನಲಿ ಅಪ್ಪ ಮುಳುಗಿದರೂ
ಅಮ್ಮ ಬಿಕ್ಕಳಿಸಲಿಲ್ಲ
ಹಸಿದ ಮಕ್ಕಳ ಪಾಟೀ ಚೀಲ ಮೂಲಿಗೆಸೆಸದು
ಚಿನ್ನಿ ದಾಂಡು ಕೊಡುವ ಕೈಗಳಿಗೆ ಹಿಡಿ ನವಿಲಗರಿ
ಚಾಮಲಾ ಹೋಳಿಗೆ ಕೊಟ್ಟು ಭಿಕ್ಷೆಗೆ ಕಳುಹಿಸಿದರೂ
ಅಮ್ಮಾ ಬಿಕ್ಕಳಿಸಲಿಲ್ಲ
ಬುರ್ಕಾದ ನಕಾಬು ಬೀಸಾಕಿ
ಕುಂಟ ಎತ್ತಿನ ಜೊತೆ ನೊಗ ಹೊತ್ತು
ಹೊಲವ ಎತ್ತಿ ಬಿತ್ತಿದಾಗಲೂ
ಅಮ್ಮ ಬಿಕ್ಕಳಿಸಲಿಲ್ಲ
ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ
ರಂಜಾನ್ ಮಾಸದಲ್ಲಿ ಹಳಸಿದ ಸಂಕಟಿ
ಹಕ್ಕರಕ್ಕಿ ತಿಂದು ರೋಜಾ ಮುಗಿಸಿ
ಚೌಕಿಮಠದಲಿ ಪುರಾಣ ಕೇಳಿದರೂ
ಅಮ್ಮ ಬಿಕ್ಕಳಿಸಲಿಲ್ಲ
ಬಿಸಿಲಿನಲಿ ಬಾಯಾರಿ ಕರೆಯ ದಡದಲಿ
ಬೊಗಸೆ ತಿಳಿ ನೀರು ಕುಡಿವಾಗ
ಜಲಬಿಂಬ ಹೇಳುವ ಸಾಂತ್ವನದಿಂದ
ಅಮ್ಮ ಬಿಕ್ಕಳಿಸಲಿಲ್ಲ
ತಾ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದಿದ್ದಾಗ
ನೇಣು ಹಾಕಿಕೊಂಡ
ಮಗನ ಪಾರ್ಥಿವ ಶರೀರವನು
ತೊಡೆಯ ಮೇಲಿಟ್ಟುಕೊಂಡು
ಅಮ್ಮ ಬಿಕ್ಕಳಿಸುತ್ತಿದ್ದಾಳೆ
ತೂಗುವ ತೊಟ್ಟಿಲು ಮಸಣವಾಗುತ್ತಿವುದಕ್ಕೆ
ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಗುಂಡು ನುಂಗಿದ ಎದೆ ತಣ್ಣಗಾಗಿದ್ದಕ್ಕೆ
ನೆತ್ತರು ಕುಡಿದು ನೆಲ ಉರಿಯುತ್ತಿರುವುದಕ್ಕೆ
ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಸೆರಗಿನಂಚಿನಲ್ಲಿದ್ದ ಪುಡಿಗಾಸು
ಪೋಸ್ಟ್ ಮಾರ್ಟಮ್ ಗಾಗಿ ಸುರಿದು
ಜಮಾತಗೆ ದಂಡ ಕಟ್ಟದೆ ಜನಾಜ್ ಬರದಿದ್ದಕ್ಕೆ
ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಕಫನ್ ಚದ್ದರಿಲ್ಲದೆ
ಮೂಗು ಮುಚ್ಚಿಕೊಂಡ ಜನ ಶವ ಎತ್ತಲು
ಚಡಪಡಿಸುತ್ತಿರುವದನು ಕಂಡು
ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಮಸೀದಿಯ ಐಲಾನ ಕೇಳಿ
ಅಂತ್ಯಕ್ರಿಯೆಗೆ ಜಮಾಯಿಸಿದ ಜನ ಚದುರಿದ್ದಾರೆ
ಏಕಲವ್ಯ ಬಿಟ್ಟ ಬಾಣದಂತೆ ಅಕ್ಷಿಗಳನ್ನು
ಆಕಾಶದತ್ತ ತಿರುಗಿಸಿ ಅಮ್ಮ ಬಿಕ್ಕಳಿಸುತ್ತಿದ್ದಾಳೆ
ಕುಂಟ ಎತ್ತು ಮುದ್ದಿನ ಟಾಮಿ
ಚಿಂವ್ ಚಿಂವ್ -ಗುಡುವ ಕೋಳಿಮರಿ
ತೊದಲು ನುಡಿಯ ಮೊಮ್ಮಗಳೂ
ಅಜ್ಜಿಯ ಬಿಕ್ಕಳಿಕೆ ನಿಲ್ಲಿಸಲು ವಿಫಲರಾಗಿದ್ದಾರೆ
*********************************
ಅಣ್ಣನ ಅಂತ್ಯ ಸಂಸ್ಕಾರಕ್ಕೆ ಜನಾಜ್ ಕೊಡಿಸಿ
ತೊಟ್ಟು ಗಂಜಿ ಗುಟುಕು ಔಷಧಿ ಗಂಟಲಲಿ
ಇಳಿಯುವಂತೆ ಮಾಡಿ
ನನ್ನಮ್ಮನ ಬಿಕ್ಕಳಿಕೆ ನೀವು ನಿಲ್ಲಿಸುವಿರಾ,?
ನೀವು ನಿಲ್ಲಿಸುವಿರಾ…?
ಸಾರ್ಥಕ ಬದುಕಿನ ಸಾಹಿತ್ಯ ಸಂಗಾತಿ ಗಳಾದ ಹೊನ್ನಾಳಿ ಸರ್ಮ, ಧಸೂಧನ ಸರ್, ನಾಗರಾಜ್ ಹರಪನಹಳ್ಳಿ ಸರ್ ಇವರಿಗೆ ಧನ್ಯವಾದಗಳು
ಆರ್ದ್ರಗೊಳಿಸುವ ಕವನ
ಮನ ಮಿಡಿಯುವ ಕವನ