ಸ್ಮರಣೆ

ಶರೀಫರ ಇನ್ನೂರನೇ ಜಯಂತಿ

ವರದಿ: ಚಂದ್ರಪ್ರಭ.ಬಿ.

ನಮ್ಮ #ಶರೀಫ #ಬಳಗ ಹಾಗೂ ಬನಹಟ್ಟಿಯ

ಅರು #ಪ್ರಕಾಶನ ಸಹಯೋಗದಲ್ಲಿ ಶರೀಫರನ್ನು ಅವರ ೨೦೦ ನೇ ಜಯಂತಿ ಸಂದರ್ಭದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ ನಿನ್ನೆ ನೆರವೇರಿತು. ಕನ್ನಡದ ಅಪರೂಪದ ಆಶು ಕವಿ ಶರೀಫರ ವ್ಯಕ್ತಿತ್ವ.. ಜೀವನಗಳ ಕುರಿತು ಒಂದಷ್ಟು ಮಾತು. ಜನಮಾನಸದಲ್ಲಿ ನೆಲೆಗೊಂಡಿರುವ ಅವರ ಆಯ್ದ ೧೦ ತತ್ವ ಪದಗಳನ್ನು ಗಾಯನ ತಂಡದವರಿಂದ ಸುಶ್ರಾವ್ಯವಾಗಿ ಪ್ರಸ್ತುತಪಡಿಸುವಿಕೆ.. ಜೊತೆಗೆ ಆ ಪದಗಳ ತಾತ್ವಿಕ ವಿಶ್ಲೇಷಣೆ.. ಕೊನೆಯಲ್ಲಿ ಪುಟ್ಟದೊಂದು ಉಪಹಾರದ ರೀತಿಯ ಪ್ರಸಾದ ಸೇವನೆ.. ಇಷ್ಟು ಕಾರ್ಯಕ್ರಮದ ಒಟ್ಟು ರೂಪುರೇಷೆ.

ಸುಮಾರು ೧೫ ದಿನದಿಂದ ಬಳಗದ ಸದಸ್ಯರು ತಯಾರಿಯಲ್ಲಿ ತೊಡಗಿ ಕೆಲಸ ಸಂಭಾಳಿಸಿದ್ದು ವಿಶೇಷ. ಅಲ್ಲಿರುವವರೆಲ್ಲ ಒಂದೊಂದು ಬಗೆಯ ಉದ್ಯೋಗದಲ್ಲಿ ತೊಡಗಿದವರು.. ಕೆಲವರು ನೌಕರದಾರರು. ರವಿವಾರವೂ ಬಿಡುವು ಸಿಗದವರು. ಚರ್ಚೆಗಾಗಿ ನಾವು ಸೇರುತ್ತಿದ್ದುದೇ ರಾತ್ರಿ ೮.೩೦ ರ ನಂತರ. ಆದರೂ ಬಳಗದ ಬಂಧುಗಳದು ಕುಂದದ ಉತ್ಸಾಹ. ತಿಂಗಳೊಪ್ಪತ್ತಿನಲ್ಲಿ ಐದಾರು ಸಲ ಕೂಡಿ ಚರ್ಚಿಸಿದೆವು. ಗಾಯನ ತಂಡದವರು ತಮ್ಮ ಪಾಡಿಗೆ ತಾವು ನಾವು ಬಯಸುವ ಗೀತೆಗಳನ್ನು ಪ್ರಾಕ್ಟೀಸ್ ಮಾಡತೊಡಗಿದರು.. ಪ್ರಚಾರಕ್ಕಾಗಿ , ಆಮಂತ್ರಣಕ್ಕಾಗಿ, ಹೆಚ್ಚೆಚ್ಚು ಜನರನ್ನು ಸೆಳೆಯಲು ಬೇಕಾದ ಎಲ್ಲ ಕಸರತ್ತುಗಳನ್ನೂ ಮಾಡಲಾಯಿತು.
ವೇದಿಕೆ ಮೇಲೆ ಕಡಿಮೆ ಮಾತು, ಹೆಚ್ಚು ಸಂಗೀತ.. ಹಾಡಲು ಆಯ್ಕೆ ಮಾಡಿಕೊಂಡ ತತ್ವ ಪದಗಳ
ಅರ್ಥಪೂರ್ಣ ವ್ಯಾಖ್ಯಾನ – ಇದು ನಮ್ಮ ಅಜೆಂಡಾದ ನಿರೀಕ್ಷೆಯಾಗಿತ್ತು. ಅದೆಲ್ಲವೂ ನಿರೀಕ್ಷೆ ಮೀರಿ ಸಾಧ್ಯವಾಗಿದ್ದು ನಮ್ಮ ಬಳಗದ ಹೆಮ್ಮೆ.. ಸಾರ್ಥಕತೆ.
ದೊಡ್ಡದೊಂದು ಹಳ್ಳಿ ಎನಿಸುವಂತಿರುವ ಬನಹಟ್ಟಿಯಲ್ಲಿ(ಇತ್ತೀಚೆಗೆ ಇದು ತಾಲೂಕಾಗಿ ಬಡ್ತಿ ಪಡೆದಿದೆ) ‘ಗಾನಯೋಗಿ ಪಂಚಾಕ್ಷರಿ ಸಂಗೀತ ಶಾಲೆ’ ಹೆಸರಿನ ಪಾಠಶಾಲೆ ಒಂದಿದೆ. ಅಲ್ಲಿನ ಪ್ರಶಿಕ್ಷಣಾರ್ಥಿಗಳು, ಅವರ ಗುರುಗಳು ಸೇರಿ ಗಾಯನ ಪ್ರಸ್ತುತ ಪಡಿಸಿದರು..

೧. ಬಿದ್ದೀಯ ಬೇ
೨. ಸೋರುತಿಹುದು
೩.ತರವಲ್ಲ ತಗಿ
೪.ಹಾಕಿದ ಜನಿವಾರವಾ
೫.ಗುಡಿಯ ನೋಡಿರಣ್ಣ
೬.ಎಂಥಾ ಮೋಜಿನ ಕುದುರಿ
೭.ಕುಂಬಾರಕಿ ಈಕಿ ಕುಂಬಾರಕಿ
೮.ಅಳಬೇಡ ತಂಗಿ
೯.ಕೋಡಗನ್ನ ಕೋಳಿ ನುಂಗಿತ್ತ
೧೦.ಬೋಧ ಒಂದೇ..

https://www.facebook.com/chandraprabha.b.77/videos/pcb.270209807270798/270209203937525/?type=3&tn=HH-R&eid=ARBAVfiCaFRgJKbSTO2889JYBGuQoHq4Eoa-xXN91noMU_4t4m4ObbgbnqftJYlHwJiAKkluBnDOBZb-

ಇನ್ನೂರರಿಂದ ಮುನ್ನೂರರ ತನಕ ಜನ ಸೇರಬಹುದು ಎಂಬ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿ ಅಂದಾಜು ಐದು ನೂರು ಜನ ಸೇರಿದ್ದಕ್ಕೆ ಏನೆನ್ನುವುದು!! ಅದು ಶರೀಫರ ತತ್ವ ಪದಗಳಿಗೆ ಇರುವ ತಾಕತ್ತು.. ಜೊತೆಗೆ ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸಲು ನಾವು ಮಾಡಿದ ಪ್ರಯತ್ನ. ಕೊನೆಯ ಹಾಡು ಮುಗಿಯುವ ವರೆಗೆ ಗುಂಪು ಚದುರಲಿಲ್ಲ.. ಹಾಡುಗಾರರು, ಕೇಳುಗರು, ಬುದ್ಧಿ ಜೀವಿಗಳು ( ಜನಪದರ ಸಂಖ್ಯೆಯ ಮುಂದೆ ಇವರ ಸಂಖ್ಯೆ ತುಂಬ ಕಡಿಮೆ ಇತ್ತು.. ಬಿಡಿ, ಅದು ಬೇರೆ ವಿಷಯ), ಮಕ್ಕಳು, ವೃದ್ಧರು.. ಎಲ್ಲವೆಂದರೆ ಎಲ್ಲರೂ ಖುಷಿಯಿಂದ ಕುಣಿದು ಕುಪ್ಪಳಿಸುತಿರುವಂತೆ ಆ ಕ್ಷಣ ತೋರಿದ್ದು ನಿಜ. ಅಲ್ಲೊಂದು ಹಬ್ಬದ ವಾತಾವರಣವೇ ನಿರ್ಮಾಣಗೊಂಡಿತ್ತು.. ಎಲ್ಲೆಡೆಯೂ ಸಂಭ್ರಮ.. ಸಡಗರ..
ತಾವು ವಹಿಸಿಕೊಂಡ ಕೆಲಸವನ್ನು ಒಬ್ಬೊಬ್ಬರೂ ಮಾಡಿ ಮುಗಿಸಿ ಮತ್ತೆ ಯಥಾರೀತಿ ವೇದಿಕೆ ತೆರವುಗೊಳಿಸಿ ನಾವು ಮನೆ ಸೇರಿದಾಗ ನವಂಬರ್ ತಿಂಗಳ ಕೊರೆವ ಚಳಿ ಅನುಭವಕ್ಕೆ ಬರತೊಡಗಿತ್ತು..
ಈ ತಂಡವನ್ನು ಕೆಲವು ಊರುಗಳಿಗಾದರೂ ತೆಗೆದುಕೊಂಡು ಹೋಗುವ ಹಂಬಲ ಬಳಗಕ್ಕಿದೆ. ಆಸಕ್ತರು ಸಂಪರ್ಕಿಸಿದರೆ.. ಕೈ ಜೋಡಿಸಿದರೆ ಸಾಧ್ಯ ಆದೀತು.. ಎಲ್ಲ ಸಾಧ್ಯ ಆಗಿದ್ದು ಆ ತಾತನಿಂದ.. ನನ್ನ ಆರಾಧ್ಯ ದೈವ ಶರೀಫಜ್ಜನಿಗೆ ಒಂದು ಪ್ರೀತಿಯ ಸಲಾಮು.. 🙏


Leave a Reply

Back To Top