ಕಾವ್ಯಯಾನ

ಮನದಾಳದ ಬಯಕೆ

silhouette photography of woman in front of orange light

ರತ್ನಾ ಬಡವನಹಳ್ಳಿ

ಸದ್ದಿಲ್ಲದೆ ಸರಿದ ಸುಂದರ ದಿನಗಳು
ಸುದ್ದಿ ಮಾಡಿದ್ದರಿಯದಿಹ ವಾರಗಳು
ತಂಗಳೆನಿಸದ ತಿಳಿನೀರಂತಹ ತಿಂಗಳುಗಳು
ಹರುಷದ ಸವಿ ಸಿಂಚನಗೈದ ವರುಷಗಳು
ಮೆಲುಕು ಹಾಕಲು ಕಾಯಬಹುದು ನಾ ಮುಂದೊಂದು ದಿನ

ಬುದ್ದಿಯಗರ್ಭದಲಿ ಮೊಳಕೆಯೊಡೆದು ಮನಸು
ಅಂಬೆಗಾಲಿಟ್ಟ ಅಕ್ಷರಗಳಲಿರದೆ ಮುನಿಸು
ಪದಗಳಾಗಿ ಹೆಣೆದ ಬಾಡದಿಹ ಹಾರ ಸೊಗಸು
ಕನ್ನಡಾಂಬೆಯ ಕೊರಳಲಂಕರಿಸಿ ಮೆರೆವ ಕನಸು
ನಂಬಿಕೆಯ ನೆರಳಲಿ ನನಸಾಗಬಹುದು ಮುಂದೊಂದು ದಿನ

ಕಿಚ್ಚಾವರಿಸದ ಹಚ್ಚ ಹಸಿರು ಕಾನನ
ಸ್ವಚ್ಛ ಮನಗಳ ನಡುವೆ ಹೂವಾದ ಜೀವನ
ಧಾವಂತಗಳಲಿ ನಲುಗದೆ ನಲಿದ ಮೌನ ಧ್ಯಾನ
ನವನೀತದಲಿ ಜಾರುವ ಕೇಶದಂತಹ ಯಾನ
ಕಲ್ಪನೆಯ ಬದುಕು ಸಾಕಾರವಾಗಬಹುದೇ ಮುಂದೊಂದು ದಿನ

ಬರಡು ಬಯಲೊಳಗೆ ಭರವಸೆಯ ಬೆಳಕು
ತೊರೆದು ತೆರಳಿರೆ ಜಗದಿ ತುಂಬಿಹ ಕೊಳಕು
ಹಳಿಯದೆ ಹರಸುತ ಹುಡುಕದೆ ಹುಳುಕು
ಒಳಿತನೇ ಬಯಸುತ ಎಲ್ಲರಲಿ ಸರ್ವಕಾಲಕು
ಉರುಳಿತಿರೆ ಕಾಲಚಕ್ರ ಕಾಣದೇನು ಸತ್ಯಯುಗ ಮುಂದೊಂದು ದಿನ


ಕಿರುಪರಿಚಯ:

ಕವನ,ಕವಿತೆ,ಗಜ಼ಲ್,ಚುಟುಕು ಲೇಖನ ಬರೆಯುವ ಹವ್ಯಾಸ.ಪ್ರಜಾಪ್ರಗತಿ,ಮಾನಸಾ,ಕಸ್ತೂರಿ ಇನ್ನಿತರ ಪತ್ರಿಕೆಗಳಲಿ ಪ್ರಕಟಗೊಂಡಿವೆ.ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿಹೆ
ಕನ್ನಡ ಸಾಹಿತ್ಯಪರಿಷತ್ ನಿಂದ ಪ್ರಶಸ್ತಿ ಬಂದಿದೆ

Leave a Reply

Back To Top