ಪರಿಮಳದ ಹನಿಗಳು

ಪುಸ್ತಕ ಸಂಗಾತಿ

ಪರಿಮಳದ ಹನಿಗಳು

“ಸಖ

ಸತ್ತ ಹೃದಯ ಮಸಣ ಸೇರಿತು

ನಿನ್ನ ಕುಡಿಮೀಸೆಯ ಕುಂಚ ದಿಂದ

ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದುಬಿಡು

ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರುತ್ತಾರೆ”. ಇದು ಎ. ಎಸ್. ಮಕಾನದಾರ ಅವರ “ಪ್ಯಾರಿ ಪದ್ಯ” ಹನಿಗವನ ಸಂಕಲನದ ಒಂದು ಹನಿ.

“ ಮನಸ್ಸಿನ ಆಳದಲ್ಲಿ ಮುದಿವಯಸ್ಸಿನವರಿಗಿಂತ ಯುವ ಜನರೇ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ” ಅನ್ನೋ  ಮಾತಿದೆ. ಆ ಏಕಾಂತಕ್ಕೆ ಸಂಗಾತಿಯೇ ಕವಿತೆ.  ಇಲ್ಲಿರುವ ಹನಿಗವನಗಳು ಪ್ರೀತಿ, ಪ್ರೇಮ ವಿರಹ ಹಾಗೂ ಶೋಷಣೆಯ ವಿರುದ್ಧ ತಣ್ಣಗಿನ ಹನಿಯಂತೆ ಕೆಲವು ಬಾರಿ ನುಡಿದರೆ, ಮತ್ತೊಮ್ಮೆ ಭೋರ್ಗರೆವ ನದಿಯಂತೆ ಬೊಬ್ಬಿರುತ್ತವೆ.

 ಪ್ರೇಮ ಕವಿ ಪ್ರೀತಿಯ ತಳಮಳವನ್ನು ಅದರ ಜೊತೆಗೆ ಸೃಷ್ಟಿಯ ಸೊಬಗನ್ನು ಅದರ ವಿಶ್ವರೂಪ ಅನನ್ಯತೆಯನ್ನು ಶಬ್ದಗಳ ಹಾರದಲ್ಲಿ ಪೋಣಿಸುವ ಪ್ರಯತ್ನವನ್ನು ತನ್ನ ಅನುಭವಗಳ ಆಧಾರದ ಮೇಲೆ ಮಾಡುತ್ತಲೇ ಕಾವ್ಯ ಕನ್ನಿಕೆಯ ಸೆರಗಲ್ಲಿ ಪುಷ್ಪವೇಷ್ಟಿತ ಪರಿಮಳವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಅಂತಹ ಪ್ರೇಮದ ತಹತಹವನ್ನು ತೋಡಿಕೊಳ್ಳುವ ಇಲ್ಲಿಯ ಸಾಲುಗಳು ವಿಚಿತ್ರವಾಗಿ ಆಕರ್ಷಿಸುತ್ತವೆ. ಇಂತಹ ಸಾಲುಗಳನ್ನು  ಉರ್ದು ಸಾಹಿತ್ಯದಲ್ಲಿ ಹೇರಳವಾಗಿ ಶಾಯರಿ ರೂಪದಲ್ಲಿ ಬಳಸುತ್ತಾರೆ. ಅಂತಹ ಆಕರ್ಷಕ ಉರ್ದು ಪದಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡು ಇಲ್ಲಿಯ  ಹನಿಗಳಿಗೆ ತೀವ್ರತೆಯನ್ನು ನೀಡಿದ್ದಾರೆ ಎ. ಎಸ್. ಮಕಾನದಾರ. ಪ್ರೇಮ ಮತ್ತು ವಿರಹ ಇಲ್ಲಿಯ ಹನಿಗವನಗಳಲ್ಲಿ ವ್ಯಕ್ತವಾಗಿಯೂ ಅಲ್ಲಿಯೇ ಸಾಮಾಜಿಕ ಅಂತರಗಳಿಗೆ, ವಿಘಟನಾ ವಿಧಾನಗಳಿಗೆ ಸಣ್ಣ ಚಾಟಿಯನ್ನು ಬೀಸುತ್ತವೆ ಕವನಗಳು.

“ಕಬರಸ್ಥಾನದಲ್ಲಿ ಜಾಗ ನಿಗದಿಯಾಗಿದೆ

ಸ್ಮಾರಕ ಶಿಲೆ ಕೆತ್ತಲಾಗಿದೆ

ದಿನಾಂಕ ಬಿಟ್ಟಿದ್ದಾನೆ ಕಲೆಗಾರ

ಜನಾಜ್ ಇನ್ನೇನು ಬರಬಹುದು

ಅನ್ನ ತಿನ್ನುವ ಕೈಗಳಿಗೆ ಧರ್ಮದ ಅಮಲು ಏರಿದೆ

ಪಂಡಿತರ ಭಾಷಣ ಪಾಶಾಣಕ್ಕಿಂತ ಸಿಹಿಯಾಗಿದೆ” ಎನ್ನುವ ಸಾಲುಗಳಲ್ಲಿ ಜ್ಞಾನವಲಯವನ್ನು ತರಾಟೆಗೆ ತೆಗೆದುಕೊಂಡರೆ, ಧರ್ಮದ ಕುರುಡನ್ನು ವಿಡಂಬಿಸುತ್ತಾರೆ.

ಪ್ರೇಮದಲ್ಲಿಯೇ  ಧ್ಯಾನಸ್ಥ ಸ್ಥಿತಿಯನ್ನ ಕಂಡ ಕವಿ ಪರಂಪರೆ ನಮ್ಮಲ್ಲಿದೆ.  “ಡೆತ್ ಇನ್ ಲವ್. ಲವ್ ಇನ್ ಡೆತ್” ಪ್ರೀತಿಯಲ್ಲೆ ಸಾವು, ಸಾವಿನಲ್ಲಿಯೂ ಮೂಡುವ ಪ್ರೀತಿ. ಆ ಸ್ಥಿತಿ ಇಲ್ಲಿದೆ.

“ಖಬರ್‌ನಲ್ಲಿ ಲೀನವಾಗಿರುವೆ

ದೀಪವಾಗಿ ಬಂದರೆ

ಪತಂಗವಾಗಿ ಸುತ್ತುವೆ” ಇಂತಹ ಸೊಗಸಾದ ಸಾಲುಗಳು ನೆನಪಿನಲ್ಲಿ ಉಳಿದೇ ಬಿಡುತ್ತವೆ.

“ಸಾವಿನ ಕದ ತಟ್ಟಿದ ಫಕೀರನಿಗೆ

ಜೀವದ ಹಂಗೂ ಇಲ್ಲಾ

ಸಾವಿನ ಹಂಗೂ ಇಲ್ಲಾ

ಚಮಲಾದ ಚುಂಗ ಇದೆ

ತೋಡಿದ ಗೋರಿ

ಜನಾಜಾ ತಬ್ಬಿದರೂ

ತಬ್ಬಲಿ ಆಗಲಾರ ಪ್ಯಾರಿ” . ಸಾಹಿತ್ಯದ ವಸ್ತು ಇತಿಹಾಸವೇ ಇರಲಿ, ಸಮಕಾಲೀನ ಸಂಗತಿಯೇ ಆಗಿರಲಿ, ಅದು ಸತ್ಯಕ್ಕೆ ವಿಮುಖವಾಗಿರಬಾರದು. ಭಾವ ಜಗತ್ತಿನ ಉತ್ಪ್ರೇಕ್ಷೆ ಇದ್ದರೂ ವಾಸ್ತವಕ್ಕೆ ನಿಕಟವಾಗಿರಬೇಕು. ಇಲ್ಲಿ ಒಂದೇ ಕವನದಲ್ಲಿ ಬಳಕೆಯಾಗಿರುವ  ಫಕೀರ, ಚಮಲಾ, ಚುಂಗ, ಜನಾಜ್ , ಪ್ಯಾರಿ ಇತ್ಯಾದಿ ಉರ್ದು ಪದಗಳು ಕಟ್ಟಿಕೊಟ್ಟ ಸಂವೇದನೆ ಮಹತ್ವದ್ದು. ಸಾವು, ಬದುಕು, ಹಂಗು, ಗೋರಿ, ತಬ್ಬಲಿ ಕನ್ನಡದಲ್ಲಿ ಮಾತಾಡಿದರೆ,ಉಳಿದವು ಉರ್ದುವಿನಲ್ಲಿ ಮಾತನಾಡಿಯೂ ಸಮಕಾಲೀನವೂ ಆಗಿವೆ ಹಾಗೇ ಇತಿಹಾಸದ ಉದ್ದಕ್ಕೂ ಹಬ್ಬಿದ ಪ್ರೇಮಜಗತ್ತಿನ ವಿಷಾದವೇ ಆಗಿದೆ.

ಪ್ರೀತಿಯ ಹಂಬಲಿಕೆಯ ಇನ್ನೊಂದು ಕವನ ಹೇಳುವ ಆಶಯ ಹಳತಾದರೂ ಬಳಸಿದ ಉಪಮೆಗಳು ಮನಃಸೆಳೆಯುತ್ತವೆ.

“ಸಾಕಿ

ನಿನ್ನ ಪ್ರೀತಿ

ಹಿಡಿ ನವಣಿಯಷ್ಟು

ಪಡೆದೆ ತೀರಲು

ಮಾಡಿಕೊಂಡಿರುವೆ ಸಾಲ

ಪಡಿ ಹೊನ್ನಿನಷ್ಟು.”

ಈ ಅಲ್ಪ ಸಾಲುಗಳು ಹೇಳುವುದು ಅಲ್ಪವೇನಲ್ಲ ಅವಳ ಪ್ರೀತಿಗಾಗಿ ಹಂಬಲಿಸಿದವನಿಗೆ ಸಿಕ್ಕಿದ್ದು ಹಿಡಿ ನವಣೆಯಷ್ಟು. ಅಲ್ಪ ಪ್ರೀತಿ. ಆದರೆ ನವಣೆ ಅಲ್ಪವಾಗುವುದಾರೂ ಹೇಗೆ? ಹಾಗೇ ಪ್ರೇಮಿ ಅದಕ್ಕಾಗಿ ಹಂಬಲಿಸಿ ಮಾಡಿದ್ದು ಪಡಿ ಹೊನ್ನಿನಷ್ಟು ಸಾಲ. ಸಾಲಗಾರನಾಗಲೂ ಹಿಂದೆ ಮುಂದೆ ನೋಡದಂತಹ ಸ್ಥಿತಿ ಅವನದು.  ಮನಸ್ಸನ್ನು ಉಲ್ಲಸಿತಗೊಳಿಸುವುದು ಕಾವ್ಯ. ರಸಸ್ವಾದನೆಯೇ ಕವಿತೆ ಮೂಲ ಆಶಯ. ಇಲ್ಲಿಯ ಕವಿತೆಗಳು ಪ್ರೇಮ ರಸಾನುಭವದ ಮತ್ತನ್ನು ಓದುಗನಿಗೆ ಕುಡಿಸುವಂತಿವೆ.

ಪ್ರೇಮಬದುಕಿನ ಕ್ಷಣಗಳು ಸುಖದ ದುಃಖದ ನೋವಿನ, ನಿರಾಶೆಯ, ಆಕ್ರೋಶದ ಅನುಭವಗಳನ್ನು  ಇಲ್ಲಿ ಬಿಚ್ಚು ನುಡಿಗಳಲ್ಲಿ ತೆರೆದಿಡಲಾಗಿದೆ.

“ಧರ್ಮ, ಧರ್ಮಗುರುವಿನ

ಉಪದೇಶ ಸಾಕು

ರಟ್ಟೆಯ ಬಲ

ರೊಟ್ಟಿಯ ರುಚಿ ಕುರಿತು

ಉಪದೇಶ ಬೇಕು.

ಪ್ರೇಮದ ಒಳದನಿಯನ್ನು ಮುಕ್ತವಾಗಿ ಅಭಿವ್ಯಕ್ತಿಸುವ  ಹನಿಗವನಗಳನ್ನು ಓದುತ್ತಾ ಪ್ರೀತಿಯ ಕಾವು ಮೈಗೂ ಏರಿದಂತಾಗಿ ಓದುಗ ಮೈಮರೆಯಬಹುದು. ಪ್ರೇಮದ ಅಭಿವ್ಯಕ್ತಿಗೆ ಅಂತಹ ಹೃದಯವಿದೆ. ಕತ್ತಲೆಯಾಚೆಗಿನ ಅನೂಹ್ಯ ನಿಗೂಢತೆಗಳನ್ನು ಶೋಧಿಸುವ ಬೆಳಕಿನ ಸೂಡಿಗಾಗಿ ಹುಡುಕುತ್ತಾ, ಆ ತೇಜದ ಹಂಬಲವನ್ನೇ ಕಣ್ಣಲ್ಲಿ ಸೃಷ್ಟಿಸಿಕೊಂಡವ ಒಂದೋ  ಕವಿಯಾಗಿರಲು ಸಾಧ್ಯ. ಇಲ್ಲ ವ್ಯಾಕುಲ ಪ್ರೇಮಿಯಾಗಿರಬಹುದು.

ತಂತ್ರದ ಮೂಲಕ ರಚಿಸಿದ ವಿನ್ಯಾಸ ಯಾವಾಗಲೂ ಸುಂದರವಾಗಿಯೇ ಇರುತ್ತದೆ. ಈ ಪ್ರಯತ್ನ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಆದರೆ ಮಕಾನದಾರ ಅವರ ಎಲ್ಲ ಹನಿಗವನಗಳು ವಿನ್ಯಾಸಕ್ಕೆ ಪಕ್ಕಾಗಿಲ್ಲ. ಆದರೆ ಆಶಯದಲ್ಲಿ ಹಿಂದೆ ಬಿದ್ದಿಲ್ಲ. ಅರ್ಥದಲ್ಲಿ ಸೋತಿಲ್ಲ. ಹಾಗಾಗಿ ಓದುಗ ಒಮ್ಮೆ ಕೈಗೆತ್ತಿಕೊಂಡರೆ ಸರಸರನೇ ಓದಿ ಮುಗಿಸುವವರೆಗೂ ಸರಾಗವಾಗಿ ಕರೆದೊಯ್ಯುತ್ತವೆ ಹನಿಗಳು.ಕೆಲವನ್ನು ಗಪದ್ಯದ ಗತಿಯಲ್ಲಿ ಕಟ್ಟಿಕೊಟ್ಟರೆ ಇನ್ನು ಕೆಲವು ಎರಡು ಸಾಲುಗಳ ಪದ ಮಿತಿಯಲ್ಲಿ ಅರ್ಥ ಮಹತ್ತನ್ನು ಮೈಗೂಡಿಸಿಕೊಂಡಿವೆ.

ಅಲ್ಲಲ್ಲಿ ಅಸ್ಪಷ್ಟ ಪದ್ಯಗಳು ಇದ್ದು ಅವು ಸಂಕಲನದ ಒಟ್ಟಂದಕ್ಕೆ ಭಂಗ ತರುವುದಿಲ್ಲ. ಕವಿ ಇನ್ನಷ್ಟು ಈ ಕವಿತಾ ಬಂಧದೊಳಗೆ ಮುಳುಗಿ ಸಾಕಿಯನ್ನು ಇನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದರೆ ಹನಿಗವನಗಳು ಇನ್ನಷ್ಟು ಉತ್ಕಟವಾಗಿ ಹೊಮ್ಮುತ್ತಿದ್ದವು.  ಕವಿತೆಗಳಿಗೆ ಸುಂದರ ಚಿತ್ರಗಳ ಬರೆದು ಹನಿಗವನಗಳ ಗಹನತೆಯನ್ನು ಹೆಚ್ಚಿಸಿದ ಚಿತ್ರಕಾರನಿಗೂ ಹಾಗೂ ಕವಿಗೂ ಶುಭಾಶಯಗಳು.

********************************************

ನಾಗರೇಖಾ ಗಾಂವಕರ್

ನಾಗರೇಖಾ  ಕಾವ್ಯಗುಚ್ಚ

5 thoughts on “ಪರಿಮಳದ ಹನಿಗಳು

  1. ಉತ್ತಮ ವಿಮರ್ಶೆ,ಕವಿಯ ಅಂತರಂಗವನ್ನು ಹೆಕ್ಕಿ ತಗೆದಿದ್ದರಿ
    ಅಭಿವಂದನೆ ತಮಗೆ
    ಶುಭಾಶಯ ಕವಿಗೆ

    ಯಾಕೊಳ್ಳಿ ಯ.ಮಾ.

  2. ಪ್ಯಾರಿ ಪದ್ಯದ ಸಖಿ ಚೆಲ್ಲಿದ ಕಾವ್ಯ ಗಂಧವನು ಪರಿಮಳ ದ ಹನಿಗಳನ್ನು ಓದುಗರಿಗೆ ಹನಿಸಿದ ಹಿರಿಯ ಸಾಹಿತಿಗಳು, ವಿಮರ್ಶಕರಾದ ನಾಗರೇಖಾ ಗಾಂವಕರ ಮೇಡಂ ಅವರಿಗೆ ಪ್ರಧಾನ ಸಂಪಾದಕರಾದ ಮಧಸೂದನ ಸರ್ ಅವರಿಗೆ ಅಭಾರಿ ಯಾಗಿದ್ದೇನೆ

    ಎ ಎಸ್. ಮಕಾನದಾರ

  3. ಕವಿತೆಯ ಆಳ ಅಗಲವನ್ನು ಚೆನ್ನಾಗಿ ಹದವರಿತು ಪರಮಶಿ೯ಸಿದ್ದಿರಿ ವಂದನೆಗಳು

Leave a Reply

Back To Top