ಪ್ರೀತಿಯೆಂದರೆ
ಅರುಣಾ ನರೇಂದ್ರ
ಪ್ರೀತಿ ಎಂದರೆ
ಬೇರೇನೂ ಅಲ್ಲ
ಅದು ನಿನ್ನ ನೋಟ
ಕಣ್ಣರೆಪ್ಪೆಗಳ ಹುಡುಕಾಟ
ಪ್ರೀತಿ ಎಂದರೆ
ನಾನು ನಿನ್ನ ನೀನು ನನ್ನ
ತಿಳಿದುಕೊಳ್ಳುವುದು
ಸೆಳೆದುಕೊಳ್ಳುವುದು
ಪ್ರೀತಿ ಎಂದರೆ
ಒಣಗಿದ ಮರ
ಚಿಗುರುವುದು
ಹೂ ಅರಳುವುದು
ಪ್ರೀತಿಯೆಂದರೆ
ನನಗೆ ನೀನು ನಿನಗೆ ನಾನು
ಗಂಧ ತೇಯುವುದು
ಗಾಳಿಯಲಿ ತೂರುವುದು
ಪ್ರೀತಿ ಎಂದರೆ
ನಿನಗಾಗಿ ಬರೆದ
ಕವಿತೆಯ ಸ್ವಗತ
ಕಡಲಿನ ಮೊರೆತ
*******************************