ಆನೆಯೂ ಅಂಬಾರಿಯೂ

ಕವಿತೆ

ಆನೆಯೂ ಅಂಬಾರಿಯೂ

ನೂತನ ದೋಶೆಟ್ಟಿ

ನೂತನಾ ಕಾವ್ಯಗುಚ್ಛ

Image result for photos of ambari elephant

ಪರಿಹಾಸ್ಯಗಳು, ಅಣಕ ಹುಳುಗಳು
ಕಚ್ಚಿ ಹಿಡಿದಿದ್ದವು ಬಾಲದ ತುದಿಯನ್ನು
ಆನೆ ನಡೆಯುತಿತ್ತು
ತನ್ನದೇ ದಾರಿ ಮಾಡಿಕೊಂಡು

ದೊಡ್ಡ ಹೊಟ್ಟೆಯ ಹಿಂದಿನ ಪುಟ್ಟ ಬಾಲದಲ್ಲಿ
ಹುಳುಗಳು ನಗೆಯಾಡುತಿದ್ದವು
ನಡೆದದ್ದೇ ದಾರಿ ಹೇಗಾದೀತು?
ಎಲ್ಲ ಆನೆಗಳೂ ಅಂಬಾರಿ ಹೊರಬಲ್ಲವೇ?
ಬಾಲದ ಹುಳುಗಳು ಹುಡುಕುತಿದ್ದವು
ಒಜ್ಜೆ ಹೆಜ್ಜೆಗೆ ಹೊಯ್ದಾಡುತ್ತ

ಬೆನ್ನ ಮೇಲೆ ಹರಡಿದರು
ರೇಶಿಮೆಯ ನುಣುಪು ವಸ್ತ್ರ
ಕಡುಗೆಂಪು ಝರಿಯ ಚಿತ್ತಾರ
ಪಟ್ಟೆ ಪೀತಾಂಬರ
ಗಾಂಭೀರ್ಯದ ಹೆಗಲೇರಿದ ಅಂಬಾರಿ

ಹೊರಟ ಗಜರಾಜನ ಸುತ್ತೆಲ್ಲ ಜನಸ್ತೋಮ
ಜೈಕಾರ ಬಹುಪರಾಕು
ಬಾಲದ ತುದಿಯ ಹುಳುಗಳು ತಲೆಬಾಗಿ ವಂದಿಸಿದವು
ಜನರತ್ತ ಕೈ ಬೀಸಿದವು

ಆನೆ ಮಾತ್ರ ನಡೆಯುತಿತ್ತು
ಹೆಗಲಲ್ಲಿ ಹೆಮ್ಮೆಯ ಹೊತ್ತು.

*******************************

Leave a Reply

Back To Top