ಭಾನುಮತಿಯ ಸ್ವಗತ

ಕವಿತೆ

ಭಾನುಮತಿಯ ಸ್ವಗತ

ಭುವನೇಶ್ವರಿ. ಫ .ಟೊಂಗಳೆ

Image result for photos of mythological mahabaratha  woman in arts

ನಾ… ಭಾನುಮತಿ
ಪ್ರಾಗ್ಜ್ಯೋತಿಷಪುರದರಸುವಿನ ಪುತ್ರಿ,
ಹಸ್ತಿನಾಪುರದೊಡೆಯ ದೃತರಾಷ್ಟ್ರ ಮತ್ತು ಪಾತಿವ್ರತ್ಯಕ್ಕೆ ಹೊಸಭಾಷ್ಯ ಬರೆದ ಗಾಂಧಾರಿಯ ಮುದ್ದಿನ ಸೊಸೆ,
ವೀರ ಲಕ್ಷಣನ ತಾಯಿ,
ಸಾಮ್ರಾಟ ಸುಯೋಧನನರಸಿ.
ನಲ್ಲಾ ಗೆದ್ದುತಂದೆ ನೀ….ನನ್ನ,
ಆದರೆ ಗೆಲ್ಲಲೇ ಇಲ್ಲ ನೀ… ನನ್ನ.
ಜನ ಕರೆಯುತ್ತಿದ್ದರು ನನ್ನ
ಸುಯೋಧನನಂತರಂಗದರಸಿಯೆಂದು, ಆದರೆ ನಾನಿನ್ನರಿತಂತೆ
ನಿನ್ನನಂತರಂಗದೊಳು ನಾನಿರಲೇ ಇಲ್ಲ.
ನೀ ಮಲಗಿದ್ದಾಗೊಮ್ಮೆ ನಿನ್ನೆದೆಗೆ
ಕಿವಿಗೊಟ್ಟು ಕೇಳಿದ್ದೆ, ಅಲ್ಲಿ ಕೇಳಿದ್ದು ಬರಿ…ಪಾಂಚಾಲಿಯ ರೂಪದ ಶಕುನಿಯ ಸೇಡಿನ ನಗು.
ಈ ಲೋಕ ಆಡಿಕೊಳ್ಳುತ್ತಿದೆ ನನ್ನ,
ಗಂಡನಿಗೆ ತಿಳಿಹೇಳದ ಮಂದಮತಿ ಈ ಭಾನುಮತಿ ಎಂದು,
ಅವರಿಗೇನು ಗೊತ್ತು?
ಗಾಂಗೇಯನ ಮಾತನ್ನ,
ಗುರುವಿನಪ್ಪಣೆಯನ್ನ,
ವಿದುರನ ನೀತಿಯನ್ನ,
ಮೀರಿದವ ನೀ …..
ನನ್ನುಸಿರ ಬಿಸಿಗೆ ಕರಗುವಷ್ಟು
ಕರುಣಿ ನೀನಲ್ಲವೆಂದು.
ಅಂದು ರಾಣಿವಾಸದವರೆಗೂ ಕೇಳುತ್ತಿತ್ತು ರಣಭೂಮಿಯಲಿ ತೊಡೆಮುರಿದುಕೊಂಡು ನೀ ಕೂಗುತ್ತಿದ್ದ ಆರ್ತನಾದ ಆದರೆ
ನನ್ನೆದೆಯ ದುಃಖವೆಲ್ಲಾ ಖಾಲಿಯಾಗಿತ್ತು, ನನ್ನೊಡಲ ಕುಡಿ
ನಿನ್ನ ಛಲದದಾಹಕ್ಕೆ ಬೂದಿಯಾದಾಗಲೇ…

ಕುರುಕುಲವನೇ ರಣದೇವಿಗರ್ಪಿಸಿದ ನಿನ್ನ ಇಹದಲೇ ಅನುಸರಿಸದ ನಿನ್ನ
ಇನ್ನು ಪರದಲಿ….?
ನಾ…. ಭಾನುಮತಿ

********************************

22 thoughts on “ಭಾನುಮತಿಯ ಸ್ವಗತ

      1. ಇನ್ನಷ್ಟು ಅವಳ ಬಗ್ಗೆ ಹೇಳಬಹುದಿತ್ತು… ಅಸಹಾಯಕ ರಾಣಿ…. ಚೆನ್ನಾಗಿ ಬಂದಿದೆ…

  1. ಕವಿತೆಯು ತುಂಬಾ ಅರ್ಥಪೂರ್ಣ ಹಾಗೂ ಭಾವಪೂರ್ಣವಾಗಿದೆ. ಅಭಿನಂದನೆಗಳು.

  2. ಕೇವಲ ಸ್ವಗತವಲ್ಲಾ ಅಂತರಂಗದಾ ಅಹವಾಲು
    ಉತ್ತಮ ಪ್ರಸ್ತುತಿ

Leave a Reply

Back To Top