ಕವಿತೆ
ಅನೂಹ್ಯ.
ಅಬ್ಳಿ, ಹೆಗಡೆ
ಮೈಮೇಲೆ ಬೇಸಿಗೆಯ ಬಿಸಿಲ
ಕೆಂಡದ ಮಳೆ ಸುರಿಯುತ್ತಿದ್ದರೂ
ಸ್ವಲ್ಪವೂ ವಿಚಲಿತವಾಗದೇ..
ಎದೆ ತುಂಬ ಕಾಲ್ತುಳಿತದ
ಸಣ್ಣಪುಟ್ಟ ರಕ್ತ ಸಿಕ್ತ
ಗಾಯಗಳನ್ನೂ ಲೆಕ್ಕಿಸದೇ….
ಅಂಗಾತ ಮಲಗಿರುವ ನನ್ನ
ನೆಚ್ಚಿನ ಕಾಲು ಹಾದಿ ನನಗಾಗಿ
ನನಗಷ್ಟೇ ನಾನೇ ನಿರ್ಮಿಸಿ
ಕೊಂಡಿದ್ದು ಸರಳ,ಸುಂದರ
ಗುರಿ ತಲುಪಲಷ್ಟೇ..!
ಭಾರೀ ವಾಹನಗಳೋಡಾಡುವ
ಗಟ್ಟಿಮುಟ್ಟಾದ ದಾಂಬರು
ರಸ್ತೆ ಇದಲ್ಲ.ವಿಲಾಸಿ,ದುಬಾರಿ
ಕಾರುಗಳೋಡಾಡುವ
ಮಿರಿ,ಮಿರಿ ಮಿಂಚುವ
ರಾಜ ಮಾರ್ಗವೂ ಇದಲ್ಲ.
ಜನ ನಿಬಿಡ ರಸ್ತೆಯಂತೂ
ಇದಲ್ಲವೇ ಅಲ್ಲ.
ಯಾವಾಗಲೋ ಅಪರೂಪ
ಕ್ಕೊಮ್ಮೆನನ್ನೊಟ್ಟಿಗೆ
ನನ್ನವರೆಂದು ಕೊಂಡವರ,
ಅಥವಾ ನನ್ನವರೆಂದುಕೊಂಡು
ಸಿದ್ಧ ಪ್ರಸಿದ್ಧರೊಟ್ಟಗೆ
ನಡೆವಾಗ..ಅವರ ಚಪ್ಪಲಿಯ
ಧರ್ಪದ ಪದಾಘಾತಕ್ಕೆ
ಆದ,ಕಾಲ ಕ್ರಮೇಣ ಮಾಯ
ಬಹುದಾದ ಸಣ್ಣ,ಪುಟ್ಟ
ಗಾಯಗಳಿದ್ದರೂ ನಿರಾತಂಕ
ವಾಗಿ,ನೋವ ಸಹಿಸಿ,
ಗಮ್ಯದೆಡೆ ತಲುಪಿಸುವ
ಧ್ಯೇಯದೊಡನೆ ಅಂಗಾತ
ಮಲಗಿ ನಿಟ್ಟುಸಿರು ಬಿಡುತ್ತಿರುವ
ನನ್ನ ಅಚ್ಚುಮೆಚ್ಚಿನ ಸುಂದರ
ಕಾಲು ಹಾದಿಯ ಮಧ್ಯೆ
ಇದ್ದಕ್ಕಿದ್ದಂತೆ…
ಗೋಚರಿಸಿತೊಂದು
ಪಾತರಗಿತ್ತಿಯ ಹೆಣ.
ಸುತ್ತ ತಿನ್ನಲು ಮುಗಿಬಿದ್ದ
ಕಟ್ಟಿರುವೆಗಳ ಸಾಲು
ಭಯಾನಕ,ಭೀಬತ್ಸ
ಕೆಲವುಸಲ ಅನೂಹ್ಯ
ಇದು ನನ್ನ ಸೋಲು.
********************************