ಹನಿಗಳು
ಸುವಿಧಾ ಹಡಿನಬಾಳ

೧) ಮೌನ ಮಾತಾಗುವ ವೇಳೆ
ನೀ ಹೋದೆ ದೂರ
ಎದೆಯಂತರಾಳದಲಿ
ನೆನಪು ಬಲು ಭಾರ
೨) ಮಗು ನಿನಗೆ ಕೋಪ
ಮಹಾ ಶತ್ರುವಂತೆ
ಅದಕೆ ನಿನ್ನ ಮನ
ಉರಿವ ಕುಲುಮೆಯಂತೆ
೩) ಬೆಕ್ಕೊಂದು ಕಣ್ಣು ಮುಚ್ಚಿ
ಹಾಲು ಕುಡಿವಂತೆ
ಸುತ್ತೆಲ್ಲ ಅವ್ಯವಹಾರ
ಅನಾಚಾರ
ನಡೆಯುತಿಹುದಂತೆ
೪) ನನ್ನ ಒಲವಿನ ಕವಿತೆ
ನೀನೆಲ್ಲಿ ಅವಿತು ನಿಂತೆ
ನಕ್ಷತ್ರವನೆಣಿಸುತ ಕುಳಿತೆ
ಬಂದೆ ಮತ್ತೆ ಬೆಳಕಿನಂತೆ
೫) ಎದೆಯ ಗೂಡೆಂಬ
ಗುಬ್ಬಚ್ಚಿ ಗೂಡಲ್ಲಿ
ಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆ
ನೀ ಒತ್ತಿದ ಮುತ್ತಿನ ಮೊಹರು
ಹಾರಲು ಕಲಿಸಿದ ಹಾಗೆ
೬) ಬಡತನ ನಿವಾರಣೆಗೆಂದು
ಹತ್ತಾರು ಯೋಜನೆ
ವೋಟ್ ಬ್ಯಾಂಕ್ ರಾಜಕಾರಣದಿಂದ
ಖಾಲಿ ಸರ್ಕಾರದ ಖಜಾನೆ
೭) ನಲ್ಲ ನಿನ್ನ
ನೆನಪು ತಂದ
ವಿರಹ ಸಹಿಸಲಾಗದು
ಕಣ್ಣ ತುಂಬಾ
ನಿನ್ನ ರೂಪ
ಎದೆಯ ಬಿರಿಯೆ
ಭಾವ ಲಹರಿ
ನಿದ್ದೆ ಬಾರದು
೮) ನಾವು ಇರುವುದೆ ಹಿಂಗ
ನಿಂತ ನೀರಿನಂಗ
ಬಿಟ್ಟರೂ ಗ್ರಹಣ ಚಂದ್ರಂಗ
ಬಿಟ್ಟಿಲ್ಲ ನಮಗ
ನಾವು ಇರುವುದೆ ಹಿಂಗ
೯) ಸಾವಿಗೆ ದಿನವೂ
ಹಲವು ಮುಖ
ಈಗ ಹೊಸದೊಂದು ಸೇರ್ಪಡೆ
ಕೊರೊನಾ ಜಪ
೧೦) ಕರಗುತಿದೆ ಕೊರೊನಾ
ಸೃಷ್ಟಿಸಿದ ತಲ್ಲಣ
ಈಗ ಎಲ್ಲೆಲ್ಲೂ ಜೋರು
ಲಸಿಕೆ ಅಭಿಯಾನ
೧೧) ಕನ್ನಡವೆಂದರೆ
ಮೂಗು ಮುರಿಯಬೇಡ
ನಿನ್ನ ಮೊದಲ ತೊದಲ್ನುಡಿ
ಇಂಗ್ಲಿಷ್ ಎಂದರೆ
ವ್ಯಾಮೋಹ ಬೇಡ
ಕನ್ನಡವೆ ನಿನಗೆ ಕನ್ನಡಿ
೧೨) ರಸಿಕ ನೀನು
ನಗುವಿನಲ್ಲೆ
ಮನವ ತಣಿಸುವೆ
ಮಾತಿನಲ್ಲೆ
ತನುವ ಕೆಣಕಿ
ನನ್ನ ಕೊಲ್ಲುವೆ
*****************************