ಅಂಕಣ ಬರಹ

ನಾನೊಬ್ಬನೆ ಉಳಿದೆನು

ನೋಡಯ್ಯ

Products – Shunya Creations

ವಚನಚಳುವಳಿಗೆ ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಸ್ಥಾನವಿದೆ. ವಚನಗಳಲ್ಲಿ ಆಡಿದ, ಸಾರಿದ, ಸಾಧಿಸಿ ತೋರಿಸಿದ ಮೌಲ್ಯಗಳು ಕೇವಲ ಘೋಷಣೆಗಳಾಗದೆ ನಡೆ ನುಡಿಯಲ್ಲಿ ಒಂದಾಗಿ ಏಕವನ್ನು ಸ್ಥಾಪಿಸಿದ ಕಾರಣದಿಂದ ವಚನಕಾರರು ಈ ನೆಲದಲ್ಲಿ ಮಾನ್ಯ ಮತ್ತು ಮುಖ್ಯರಾಗುತ್ತಾರೆ. ಕೊಂಡುಗೊಳಿ ಕೇಶೀರಾಜನಿಂದ ಕೊನೆಯ ವಚನಕಾರನೆನ್ನುವುದಾದರೆ ಅಗ್ಘವಣಿಯ ಹಂಪಯ್ಯನವರೆಗೂ ನಡೆ, ನುಡಿಗಳಲ್ಲಿ ಏಕಭಾವವು ಓತಪ್ರೋತವಾಗಿ ಹರಿದಿದೆ. ವಚನ ಚಳುವಳಿಯ ಕೊನೆಯ ಹಂತದ ಬಗೆಗೆ ಬಹಳಷ್ಟು ಅಭಿಪ್ರಾಯಗಳು ವಿದ್ವಾಂಸರ ವಲಯದಲ್ಲಿ ಚರ್ಚಿತವಾಗಿದೆ. ‘ಒಂದು ಕಡೆ ಶರಣರು ತಳಮಳದಿಂದ ಕುದಿಯುತ್ತಿರುವ ಈ ಪ್ರಸಂಗವನ್ನು ಉಪಯೋಗ ಮಾಡಿಕೊಳ್ಳಬೇಕೆಂದು ಇನ್ನೊಂದು ಕಡೆ ರಾಜ್ಯ ಕಳೆದುಕೊಂಡ ಚಲುಕ್ಯರೋ ಅವರ ಶ್ರದ್ಧೆಯ ಅನುಯಾಯಿಗಳೋ ಇನ್ನೊಂದು ಕಡೆ ಹೊಂಚುಹಾಕುತ್ತಿದ್ದರು.’೧ ಎಂಬ ಕಲಬರ‍್ಗಿಯವರ ಮಾತುಗಳು ಒಳಗೆ ಮತ್ತು ಹೊರಗಿನಿಂದ ಸಂಭವಿಸಿರಬಹುದಾದ ಐತಿಹಾಸಿಕ ನಡೆಯ ಅಪಾಯವನ್ನು ಹಿಡಿದಿಡುವ ಕೆಲಸ ಮಾಡಿದೆ. ಕೊನೆಗೆ ‘ಬಸವಣ್ಣನವರಿಂದ ಕೈಲಾಸವೆನಿಸಿದ ಕಲ್ಯಾಣ ಈ ಕಾಳಗದ ಕಣವೆನಿಸಿತು. ಅವರು ಕೈಯಾರೆ ಕಟ್ಟಿದ ಶರಣಕಲ್ಯಾಣ ಈ ಕ್ರಾಂತಿಯಿಂದ ಪುಡಿಪುಡಿಯಾಯಿತು.’೨ ಎಂದು ವಾಚ್ಯವಾಗಿಯೇ ಆದ ಘಟನೆಯನ್ನು ಹೇಳಿದ್ದಾರೆ. ಅಂದು ಘಟಿಸಿರಬಹುದಾದುದರ ಕುರಿತಾಗಿ ವಚನಕಾರರ ಅನಂತರ ಬಂದ ಕವಿಗಳು ಕಲಾತ್ಮಕವಾಗಿ ಸತ್ಯ ಶೋಧನಡೆಯ ಕಡೆಗೆ ಮುಖಮಾಡಿದರು. ಅವರಿಗೆ ಮೌಖಿಕವಾಗಿ ಜನಸಮೂಹದಿಂದ ಕಥೆಗಳ ರೂಪದಲ್ಲಿ ಘಟನೆಗಳು ದೊರೆತಿರಲೂಬಹುದು. ಹಂಪೆಯ ಹರಿಹರನ ‘ಬಸವರಾಜದೇವರ ರಗಳೆ’ಯಿಂದ ಷಡಕ್ಷರದೇವನ ‘ವೃಷಭೇಂದ್ರವಿಜಯ’ ಕಾವ್ಯಗಳವೆರೆಗೂ ವಚನಚಳುವಳಿಯ ಕೊನೆಯಲ್ಲಿ ನಡೆದಿರಬಹುದಾದ ಘಟನಡಯ ಬಗೆಗೆ ಮೌನವಹಿಸಿರುವುದು ತಿಳಿಯುತ್ತದೆ. ಕವಿಗಳ ಅನಂತರ ಬಂದ ‘ಶೂನ್ಯಸಂಪಾದನೆ’ಕಾರರು ಭಿನ್ನ ರೀತಿಯಿಂದ ವಚನಗಳನ್ನು ಸಂಪಾದಿಸಿ, ವ್ಯವಸ್ಥಿತಗೊಳಿಸಿ, ಕಾಲದ ಬೆಳವಣಿಗೆಯಲ್ಲಿ ಸಂವಾದದೋಪಾದಿಯಲ್ಲಿ ಕಥನಕ್ರಮಕ್ಕೆ ಒತ್ತು ಕೊಟ್ಟು ಬೆಳೆಸಿಕೊಂಡು ಹೋಗಿದ್ದಾರೆ. ಹರಿಹರಾದಿ ಕವಿಗಳ ಮೌನಕ್ಕೆ ಹೇಗೆ ಒಂದು ಕಾರಣವಿದ್ದಿರಬಹುದೋ, ಹಾಗೆಯೇ ಶೂನ್ಯಸಂಪಾದನೆಕಾರರು ಸಂಪಾದಿಸಿ ವ್ಯವಸ್ಥಿತಗೊಳಿಸಿ ಕಟ್ಟಿರುವ ಕಥನರೂಪೀ ಮಾತುಗಳ ಹಿಂದೆಯೂ ಒಂದು ಕಾರಣವಂತೂ ಇದ್ದೇ ಇದೆ, ಇರಲೇಬೇಕು. ಅನಂತರದಲ್ಲಿ ಬಂದ ವಿದ್ವಾಂಸರು, ಸಂಶೋಧಕರು, ಸೃಜನಶೀಲ ಬರಹಗಾರರು ಈ ಮಾತು ಮೌನಗಳ ನಡುವೆ ಘಟಿಸಿರಬಹುದಾದದಕ್ಕೆ ತಮ್ಮದೇ ಭಿನ್ನ ಕಾರಣಗಳನ್ನು ಹುಡುಕಿ ಕೊಟ್ಟಿದ್ದಾರೆ. ವಚನ ಚಳುವಳಿಯ ಕೊನೆಯನ್ನು ಗ್ರಹಿಸಲು ಬಸವಣ್ಣನವರ ಆದಿಯಾಗಿ ಅವರ ಸಹಜತೆಗಾರರಾಗಿದ್ದ ಶಿವಶರಣರ/ವಚನಕಾರರ ವಚನಗಳ ಪರಿಶೀಲನೆಯೂ ಈ ನೆಲೆಯಲ್ಲಿ ಅತ್ಯಗತ್ಯವಾದ್ದು. ಬಸವಣ್ಣನವರೇ ತಮ್ಮೊಂದು ವಚನದಲ್ಲಿ ಕಲ್ಯಾಣದಲ್ಲಿ ನಡೆದಿರಬಹುದಾದ ಕೊನೆಯ ನಡೆಯ ಬಗೆಗೆ ಹೇಳಿದ್ದಾರೆ. ಏಕಾಂಗಿತನ, ಅದಕ್ಕೆ ಕಾರಣವಾದ ಅಸಹಜ ಸಮಾಜದ ನಡೆ, ಪ್ರಭುತ್ವದ ದುರ್ವರ್ತನೆ, ಎಲ್ಲದರಿಂದಲೂ ನಂಬಿಕೆ ಕಳೆದುಕೊಂಡ ಸ್ಥಿತಿ ಅವರ ವಚನಗಳಲ್ಲಿ ಅಲ್ಲಲ್ಲಿ ಬಂದಿದೆ. ಇದೆಲ್ಲವುಗಳ ಮಧ್ಯೆ ಸ್ವಗತದಂತಿರುವ ಈ ವಚನದಲ್ಲಿ ಸ್ಪಷ್ಟವಾಗಿ ಆ ಭಾವಗಳು ಒಡೆದು ಮೂಡಿದೆ. ಆ ವಚನವು ಹೀಗಿದೆ

ಜಜ್ಜನೆ ಜರಿದೆನು ಜಜ್ಜನೆ ಜರಿದೆನು

ಜಜ್ಜನೆ ಜರಿದೆನು ನೋಡಯ್ಯಾ

ಬಿಬ್ಬನೆ ಬಿರಿದೆನು ಬಿಬ್ಬನೆ ಬಿರಿದೆನು

ಬಿಬ್ಬನೆ ಬಿರಿದೆನು ನೋಡಯ್ಯಾ

ನಾನೊಬ್ಬನೆ ಉಳಿದೆನು ನಾನೊಬ್ಬನೆ ಉಳಿದೆನು

ನಾನೊಬ್ಬನೆ ಉಳಿದೆ ನೋಡಯ್ಯ

ಕೂಡಲಸಂಗಮದೇವಾ

ನಿಮ್ಮ ಶರಣರನಗಲಿದ ಕಾರಣ೩

M. M. Kalburgi - Wikipedia

ಈ ವಚನವನ್ನು ಬಸವಯುಗದ ವಚನ ಮಹಾಸಂಪುಟದಿಂದ ಲೇಖನಕ್ಕೆ ಪೂರಕವಾಗಿ ತೆಗೆದುಕೊಳ್ಳಲಾಗಿದೆ. ಇದೇ ವಚನವು ಫ. ಗು. ಹಳಕಟ್ಟಿ೪ ಡಾ. ಎಂ. ಎಂ. ಕಲಬುರ್ಗಿ೫ ಡಾ. ಎಸ್. ವಿದ್ಯಾಶಂಕರ೬ ಮತ್ತು ಓ. ಎಲ್. ನಾಗಭೂಷಣಸ್ವಾಮಿ೭ ಅವರ ಸಂಪಾದನಾ ಕೃತಿಗಳಲ್ಲಿಯೂ, ಡಾ.ಎಸ್. ವಿದ್ಯಾಶಂಕರರ ಸಂಪಾದನೆಯ ‘ಹಲಗೆಯಾರ್ಯನ ಶೂನ್ಯಸಂಪಾದನೆ’೮ ಯಲ್ಲಿಯೂ, ಫ. ಗು. ಹಳಕಟ್ಟಿಯವರ ಸಂಪಾದನೆಗಿಂತ ಸಣ್ಣ ಪಾಠಾಂತರಕ್ಕೆ ಒಳಪಟ್ಟು ಪ್ರಕಟವಾಗಿವೆ. ಆ ಪಾಠಾಂತರವು ಮೇಲೆ ಕೊಟ್ಟಿರುವ ವಚನದ ಭಾವಕೇಂದ್ರ, ಬಂಧ ಮತ್ತು ವಚನವು ಹೊರಡಿಸುವ ಆರ್ದ್ರವಾದ ದನಿಗೆ ಯಾವ ಧಕ್ಕೆಯನ್ನೂ ಉಂಟು ಮಾಡಿಲ್ಲ. ಗಮನಿಸಬೇಕಾದ ಅಂಶವೆಂದರೆ ಡಾ. ಎಲ್. ಬಸವರಾಜುರವರು ಸಂಪಾದಿಸಿರುವ ‘ಬಸವಣ್ಣನವರ ವಚನಗಳು’ ಸಂಗ್ರಹದಲ್ಲಿ ಈ ವಚನವು ಇಲ್ಲ.೯ ಕಾಲಾನಂತರದಲ್ಲಿ ಎಲ್. ಬಿ ಅವರ ಕೃತಿಯು ಪರಿಷ್ಕೃತವಾಗಿ ಮರುಮುದ್ರಣಗೊಂಡಿದ್ದಲ್ಲಿ ಈ ವಚನ ಸೇರಿರಲೂಬಹುದು.

ಈ ವಚನದ ಭಾವವು ಬಹುದೊಡ್ಡ ತಲ್ಲಣ ಮತ್ತು ತಮ್ಮ ಸುತ್ತಲಿನ ಪರಿಸರದಲ್ಲಿ ಘಟಿಸಿದ ಚಾರಿತ್ರಿಕ, ಸಾಮಾಜಿಕ ಸಮಸ್ಯೆಯ ಕಡೆಗೆ ಗಮನಸೆಳೆಯುತ್ತದೆ. ಡಾ. ಎಸ್. ವಿದ್ಯಾಶಂಕರರು ಮೇಲಿನ ವಚನದ ಕಲಾತ್ಮಕತೆ ಮತ್ತು ಭಾವತೀವ್ರತೆಯನ್ನು ವಿವರಿಸಿ ‘ಇಲ್ಲಿಯೇ ನಾವು ಬಸವಣ್ಣನವರ ಕಾವ್ಯಾತ್ಮಕ ಅಭಿವ್ಯಕ್ತಿ ವಿಶೇಷವನ್ನು ಗುರುತಿಸುವುದು. ಬೇರೆ ವಚನಕಾರರಿಗೂ ಇವರಿಗೂ ಇರುವ ಅಂತರ ನಿಶ್ಚಲವಾಗಿ ಕಾಣಬರುವುದು ಅಂತರಂಗದ ಭಾವನೆಗಳ ಅಭಿವ್ಯಕ್ತಿ ವಿಧಾನದಲ್ಲಿ’೧೦ ಎಂದಿದ್ದಾರೆ. ಆದರೆ ಕಲ್ಯಾಣಪಟ್ಡಣದಲ್ಲಿ ರಾಜಕೀಯ, ಸಾಮಾಜಿಕ ಮತ್ತು ನಂಬಿಕರ‍್ಹರಿಂದಲೇ ಘಟಿಸಿರಬಹುದಾದ ದ್ರೋಹದಿಂದ ಬಸವಣ್ಣನವರ ವಚನದಲ್ಲಿ ಬಂದ ಭಾವವಿದು ಎಂಬುದನ್ನು ಗಮನಿಸದೆ ಬಿಟ್ಟಿದ್ದಾರೆ. ‘ನಾನೊಬ್ಬನೆ ಉಳಿದೆನು’ಎಂದು, ಅದೂ ಮೂರು ಬಾರಿ ಬಸವಣ್ಣನವರಿಂದ ಪುನರುಚ್ಛಾರವಾಗಬೇಕಾದರೆ, ಅಷ್ಟು ದೊಡ್ಡ ಏಕಾಕಿತನದ ಭಾವ ಮಡುಗಟ್ಟಿಬರಬೇಕಾದರೆ ಕಾರಣ ಏನಿರಬೇಕು? ಎಂಬ ಮುಖ್ಯವಾದ ಪ್ರಶ್ನೆ ಕಾಡುತ್ತದೆ. ಇದನ್ನು ಷಟ್ ಸ್ಥಲಗಳಲ್ಲಿಟ್ಟು ನೋಡಿದಷ್ಟು ಐತಿಹಾಸಿಕವಾಗಿ ಘಟಿಸಿರಬಹುದಾದ ಘಟನೆ ಕೈ ತಪ್ಪಿ, ರ‍್ಮದ ಕಗ್ಗಂಟಿಗೆ ಸಿಕ್ಕಿ ಹೋಗುವ ಅಪಾಯ ಸಂಭವಿಸುವುದರ ಜೊತೆಗೆ, ಬಸವಣ್ಣವನರು ಕೇವಲ ಭಾವತೀವ್ರತೆಯೆಂತಲೋ, ಆತ್ಮಾವಲೋಕನ ಕ್ರಮ ಎಂತಲೋ ಅಥವಾ ಆಧುನಿಕ ಅಸ್ಥಿತ್ವ, ಅಸಂಗತವಾದಗಳ ಹರಿಕಾರರ ಮಟ್ಟಕ್ಕೆ ಬಸವಣ್ಣನವರನ್ನು ಇಳಿಸಿ ಹೋಲಿಸಿ, ಕೂಡಿಸಿ, ತಳಕುಹಾಕಿ ನೋಡುವ ಅಪಾಯ ಸಂಭವಿಸುತ್ತದೆ. ಬಸವಣ್ಣನವರು ಅವರೆಲ್ಲರಿಗಿಂತ ಅತ್ಯುನ್ನತ ಮಟ್ಡದವರು ಎಂಬುದಂತೂ ನರ‍್ವಿವಾದ. ಆರೋಪಿಸಿಕೊಂಡು ಅನುಭವಿಸುವ ಏಕಾಕಿತನಕ್ಕೂ, ನಂಬಿಕೆದ್ರೋಹದಿಂದ ನಲುಗಿದ ವ್ಯಕ್ತಿಯೊಬ್ಬನಿಗೆ ಉಂಟಾದ ಏಕಾಕಿತನಕ್ಕೂ ಬಹಳ ದೊಡ್ಡ ವ್ಯತ್ಯಾಸವಿದೆ. ಆ ಕಾರಣದಿಂದ ಐತಿಹಾಸಿಕ ವಿವೇಚನೆಯು ಇಲ್ಲಿ ಮುಖ್ಯವಾಗುತ್ತದೆ.

ಈ ವಚನದ ಭಾವಸ್ಪುಟತ್ವಕ್ಕೆ ಪೂರಕವಾಗಿ ಒಂದಷ್ಟು ಬೇರೆ ವಚನಗಳನ್ನು, ಶೂನ್ಯಸಂಪಾದನೆಗಳನ್ನು ಸಹಾಯಕವಾಗಿ ಬಳಸಬಹುದು. ಹೀಗೆ ನೋಡುವುದರಿಂದ ಒಂದಷ್ಟು ಹೊಸ ಹೊಳಹುಗಳು ದೊರೆಯುವ ಸಾಧ್ಯತೆಯಿರುವುದನ್ನಂತೂ ತಳ್ಳಿಹಾಕುವಹಾಗಿಲ್ಲ. ಹಲಗೆಯರ‍್ಯನ ಶೂನ್ಯಸಂಪಾದನೆಯಲ್ಲಿ ಈ ವಚನವು ಬಹಳ ಭಿನ್ನವಾದ ಸನ್ನಿವೇಷದಲ್ಲಿ ಬಂದಿದೆ. ‘ಇಂತು ಪ್ರಭುದೇವರು ಬಸವಣ್ಣ ಚೆನ್ನಬಸವಣ್ಣ ಮಡಿವಾಳ ಮಾಚಿತಂದೆಗಳಿಗೆ ಮಹಾಜ್ಞಾನಮಂ ಬೋಧಿಸಿ ಸಕಲ ಪುರಾತನರ ಕೃತರ‍್ಥರ ಮಾಡಿ, ಮಹಾದೇವಿಯಕ್ಕಂಗೆ ನಿಜ ಶಿವತತ್ವಮಂ ನರ‍್ವಹಿಸಿ ತೋಱಿಸಿಕೊಟ್ಟು ಶ್ರೀಶೈಲಪರ್ವತಕ್ಕೆ ಕಳುಹಿಸಿ, ಸಿದ್ಧರಾಮಯ್ಯದೇವರಿಗೆ ನಿಜಸಮಾಧಿಯ ನಿರ್ಣಯಮಂ ತಿಳುಹಿ ಸೊನ್ನಲಿಗೆಯಪುರಕ್ಕೆ ಕಳುಹಿ ತಾವು ನರ್ಗಮನ ನಡೆವಿಡಿದು ನಾನಾದೇಶ ನಾನಗಿರಿ ಗುಹಾಂತರಗಳೊಳು ಸುಳಿದಾಡುತರ‍್ದರದೆಂತೆಂದೆಡೆ’೧೧ ಎಂದು ಒಂದು ಸಂದರ್ಭವನ್ನು ಕೊಟ್ಟಿಕೊಟ್ಟು ನಂತರದಲ್ಲಿ

ಗುರುತತ್ವದಲ್ಲಿ ಹುಟ್ಟಿ ಶಿವತತ್ವದಲ್ಲಿ ಬೆಳೆದು

ಪರತತ್ವದಲ್ಲಿ ಮಗ್ನವಾದ ಶರಣಂಗೆ

ಕಾಯವಳಿದು ನಿರ್ವಯಲಾದಡೇನು

ಕಂಥೆಯ ಕಳೆದು ನರ್ವಯಲಾದಡೇನು

ಕಾಯಸಮಾಧಿ ಕರಣಸಮಾಧಿ ಭಾವಸಮಾಧಿಯಾದ ಬಳಿಕ

ಗೊಗೇಶ್ವರಲಿಂಗದಲ್ಲಿ ಬಯಲಭ್ರಮೆಯ ಕಳೆದು

ಸುಜ್ಞಾನ ಸಮಾಧಿಯನೈದಬಲ್ಲಡೆ

ಅದೆ ನಿಜ ಸಮಾಧಿ ಕೇಳಾ ಸಿದ್ಧರಾಮಯ್ಯ೧೨

ಇಂತಹ ‘ಶರಣರ ವಿಯೋಗ’ ದ ಸಮಯದಲ್ಲಿ ಬಸವಣ್ಣನವರ ಎರಡು ವಚನಗಳು ಬಂದಿದೆ.

ನಿಮ್ಮ ನೋಡ ನೋಡಲಿಕೆನ್ನ ಹರಣವಿದ್ದುದ ಕಂಡೆ

ನಿಮ್ಮನಗಲಲೆನ್ನ ಹರಣವಿಲ್ಲಯ್ಯಾ

ಇರುಳೊಂದು ಜುಗ ಮೇಲೆ ಕೆಡದಂತೆ

ಅದೇನೆಂದು ಅಳವಾಡಿ ಕಳವೆನಯ್ಯಾ ?

ಹಗಲೆಲ್ಲಾ ಹಂಬಲಿಸಿ ಹಲುಬಿದೆನಯ್ಯಾ

ಕೂಡಲಸಂಗನ ‘ಶರಣರನಗಲುವ ಧಾವತಿ’ಯಿಂದ

ಮರಣವೇ ಲೇಸಯ್ಯ೧೩

ಅಯ್ಯಾ ನಿಮ್ಮ ಮಹಾನುಭಾವರನಗಲಿ ಬದುಕಲಾರೆ

ಶಿವಧೋ ಕಂಗಳಶ್ರುಗಳಿಂದ ಮುಂದುಗಾಣೆ

‘ಲಿಂಗಸಂಗಿಗಳನಗಲಿ ನಾನೆಂತು ಬದುಕುವೆ’

ಕೂಡಲಸಂಗಮದೇವ೧೪

ಇವುಗಳಾದ ನಂತರ ‘ಜಜ್ಜನೆ ಜರೆದೆನು’ ವಚನವು ಬರುತ್ತದೆ. ಅನಂತರ

ಕಂಡಡೆ ಮನೋಹರವು ಕಾಣದಿದ್ದಡೆ ಅವಸ್ಥೆ ನೋಡಯ್ಯಾ

ಹಗಲು ಇರುಳಹುದು ಇರುಳು ಹಗಲಹುದು

ಇರುಳು ಹಗಲು ಒಂದು ಜುಗ ಮೇಲೆ ಕೆಡದಂತೆ ಇಹುದು

ಕೂಡಲಸಂಗನ ‘ಶರಣರನಗಲುವ ಧಾವತಿಯಿಂದ’

ಮರಣವೇ ಲೇಸಯ್ಯ೧೫

ಇದೊಂದು ‘ಶರಣರನಗಲುವ ಧಾವತಿ’ಯ ಸ್ಥಿತಿಯನ್ನು ಕಟ್ಟಿಕೊಡುವಾಗ ಬಂದಿರುವ ವಚನವಾಗಿದೆ. ಮೇಲೆ ಉದ್ದರಿಸಿರುವ ಬಸವಣ್ಣನವರ ವಚನಗಳಲ್ಲಿ ‘ಲಿಂಗಸಂಗಿಗಳನಗಲಿ ನಾನೆಂತು ಬದುಕುವೆ’, ‘ಮರಣವೇ ಲೇಸಯ್ಯ’  ಮುಂತಾಗಿ ಸಮಕಾಲೀನ ಶರಣರ ಅಗಲುವಿಕೆಯಿಂದ ಉಂಟಾದ ಏಕಾಕಿತನ ಬಸವಣ್ಣನವರಿಗೆ ಕಾಡಿದುದರ ಪರಿಣಾಮವಾಗಿ ‘ಜಜ್ಜರೆ ಜರೆದೆನು’ವಚನವು ಬಂದಿದೆ ಎಂದು ಹೇಳಿದ್ದಾರೆ. ಶೂನ್ಯಸಂಪಾದನೆಯ ಮೊದಲ ಮತ್ತು ಕೊನೆಯ ವಚನದಲ್ಲಿ  ‘ಮರಣವೇ ಲೇಸಯ್ಯ’ಎಂದು ವಾಚ್ಯವಾಗಿಯೇ ವಿಯೋಗದ ತೀವ್ರತೆ ಸಾವಿನ ಮಟ್ಟಕ್ಕೆ ಬಂದಿದ್ದರೆ, ಮಧ್ಯದ ವಚನದಲ್ಲಿ ‘ನಾನೆಂತು ಬದುಕುವೆ’ಎಂದು ಪ್ರಶ್ನರ‍್ಥಕ ವಾಕ್ಯವಾಗಿ ಬಂದಿದೆ. ಆ ಪ್ರಶ್ನೆಗೆ ಉತ್ತರ ‘ವಿಯೋಗವನ್ನು ಸಹಿಸಿ ನಾನು ಬದುಕಲಾರೆ’ಎಂಬ ಭಾವವೇ ಉತ್ತರ ರೂಪಿಯಾಗಿ ವಚನದ ಹಿನ್ನೆಲೆಯಲ್ಲಿ ನಿಂತಿರುವುದು ಸ್ಪುಟವಾಗಿ ಗೋಚರಿಸುತ್ತಿದೆ. ಡಾ. ಎಲ್. ಬಸವರಾಜು ಅವರ ‘ಸರಳ ಶೂನ್ಯಸಂಪಾದನೆ’ ಕೃತಿಯಲ್ಲಿ ‘ಪ್ರಭುಗಳು ದೇಶಾಂತರ ಹೋಗಿಬಂದ ಸಂಪಾದನೆ’ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಇವೇ ವಿವರಗಳು ಬಂದಿವೆ.೧೬ ಆದರೆ ಅಲ್ಲೆಲ್ಲೂ ‘ಜಜ್ಜರೆ ಜರೆದೆನು’ ಎಂಬ ಪದ ಬಂದಿಲ್ಲ. ಮೇಲಿನ ವಚನಗಳ ಭಾವಕೇಂದ್ರವನ್ನೇ ಹೋಲುವ ವಿರವಣೆಗಳು ಬಂದಿವೆ. ಶೂನ್ಯಸಂಪಾದನೆಗಳು ವಚನಕಾರರನ್ನು, ವಚನಗಳನ್ನು ವರ್ತಮಾನದ ತುರ್ತಿಗೆ ಹೊಂದಿಸಿಕೊಳ್ಳುತ್ತಾ ಸಾಗಲು ಅರ್ಥೈಸಿಕೊಳ್ಳಲು ಕಂಡುಕೊಂಡಿರುವ ಮಾರ್ಗ ಇದಾಗಿದೆ. ಮೇಲಿನ ಸಂಪಾದನಾಕಾರರು ಭಕ್ತಸ್ಥಲದಲ್ಲಿ ಈ ವಚನವನ್ನು ಇಟ್ಟು ನೋಡಲು ಹಲಗೆಯರ‍್ಯನ ಶೂನ್ಯಸಂಪಾದನೆಯ ಈ ಸಂದರ್ಭದಲ್ಲಿ ಉಧೃತವಾಗಿರುವುದೂ ಒಂದು ಕಾರಣವಿರಬಹುದು.

ಮತ್ತೊಂದು ಕ್ರಮದಲ್ಲಿ ಈ ವಚನದ ಭಾವಕೇಂದ್ರವನ್ನು ಅರ್ಥೈಸಿಕೊಳ್ಳುವ ಮಾರ್ಗವನ್ನು ಹಿಡಿಯಬಹುದು. ಬಸವಣ್ಣನವರ ಸಮಕಾಲೀನ ವಚನಕಾರರ ವಚನಗಳ ಹಿನ್ನೆಲೆ ನೋಡುವುದು ಉಚಿತವೆನಿಸುತ್ತದೆ. ತುರುಗಾಹಿ ರಾಮಣ್ಣನೆಂಬ ವಚನಕಾರ೧೭ ಇವನ ಅಂಕಿತನಾಮ ‘ಗೋಪತಿನಾಥ ವಿಶ್ವೇಶ್ವರಲಿಂಗ’ಮತ್ತು ಬಸವಣ್ಣನವರ ಎರಡನೆಯ ಹೆಂಡತಿಯಾದ ನೀಲಾಂಬಿಕೆ, ನೀಲಮ್ಮ, ನೀಲಲೋಚನೆ ಎಂದು ಪ್ರಸಿದ್ಧಳಾದ ವಚನಕಾರ್ತಿಯ ವಚನವನ್ನೂ ಇಲ್ಲಿ ನೋಡಬಹುದಾಗಿದೆ.೧೮ ‘ಅದರಲ್ಲಿ ಮೊದಲನೆಯವಳೇ ಬಸವಣ್ಣನವರ ಪತ್ನಿ ಇರಬಹುದು. ಶೂನ್ಯಸಂಪಾದನೆಯಲ್ಲಿಯೂ ವಚನಶಾಸ್ತ್ರಸಾರದಲ್ಲಿಯೂ ‘ಸಂಗಯ್ಯ’ಎಂಬ ಅಂಕಿತ ನೀಲಲೋಚನೆಯದೆಂದು ತಿಳಿಸಿದರೆ ವಚನಶಾಸ್ತ್ರಸಾರದಲ್ಲಿ ‘ಬಸವಪ್ರಿಯ ಕೂಡಲ ಸಂಗಮದೇವಾ’ಎಂಬ ಅಂಕಿತ ನೀಲಾಂಬಿಕೆಯದೆಂದು ಬೇರೆ ಹೇಳಿದೆ. ನೀಲಾಂಬಿಕೆ, ನೀಲಲೋಚನೆಯರು ಒಂದೇ ಎಂಬ ವ್ಯಕ್ತಿಯೆಂದೂ ವ್ಯಕ್ತಿ ಬಸವಣ್ಣನವರ ಎರಡನೆಯ ಹೆಂಡತಿಯೆಂದೂ ನಾವು ಅಭಿಪ್ರಾಯ ಪಡುತ್ತೇವೆ. ‘ಬಸವಪ್ರಿಯ ಕೂಡಲ ಸಂಗಮದೇವಾ’ಎಂಬ ಅಂಕಿತವು ಬೇರೆಯವರದಾಗಿರಬೇಕು.’೧೯ ಎಂಬ ಅಭಿಪ್ರಾಯವನ್ನು ಎಂ. ಆರ್. ಶ್ರೀ ಯವರು ನೀಲಮ್ಮನ ಕುರಿತು, ಅವಳ ಅಂಕಿತವನ್ನು ಕುರಿತು, ಮೂವರಿದ್ದಾರೆ ಎಂಬ ಸಮಸ್ಯೆಯ ಕುರಿತು ನರ್ದಿಷ್ಟವಾಗಿ ಉತ್ತರ ಕೊಟ್ಟಿದ್ದಾರೆ.

ಬಂದಿತ್ತು ದಿನ ! ಬಸವಣ್ಣ ಕಲ್ಲಿಗೆ

ಚೆನ್ನಬಸವಣ್ಣ ಉಳುವೆಯಲ್ಲಿಗೆ

ಪ್ರಭು ಅಕ್ಕ ಕದಳಿದ್ವಾರಕ್ಕೆ

ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ

ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ

ಅಡಗಿಹರದೆಲ್ಲರು ಅಡಗಿದುದ ಕೇಳಿ ನಾ

ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು೨೦

ಅಟ್ಟಡವಿಯಲ್ಲಿ ಬಿಟ್ಟು ಹೋದಿರಿ ಬಸವಯ್ಯಾ

ನಟ್ಟನಡುಗ್ರಾಮವ ಕೆಡಿಸಿ ಹೋದಿರಿ ಬಸವಯ್ಯಾ

ಹುಟ್ಟಿಲ್ಲದ ಬಂಜೆಗೆ ಮಕ್ಕಳ ಕೊಟ್ಟು ಹೋದಿರಿ ಬಸವಯ್ಯಾ

ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ

ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ೨೧

ಅರಿಯೆನರಿಯೆ ನಾನು, ಏನುವನರಿವೆನಯ್ಯಾ

ಎಲ್ಲವ ಮರೆದೆನಯ್ಯಾ

ಎಲ್ಲಾ ಪುರಾತನರ ಸಂಗ ಹರಿದು ನಾನು

ಸಂಗ ನಿಸ್ಸಂಗಿಯಾದೆನು

ಗುಣಕಥನದ ಮಾತ ಹರಿದು

ಬಸವ ಬಸವಾಯೆಂಬ ಮಾತಿನ ಭ್ರಮೆಯ

ಕಳೆದುಳಿದೆನಯ್ಯಾ೨೨

ಆಡದ ನುಡಿಯ ನುಡಿದೆನೆನ್ನ ಮನ ತುಂಬಿ

ಮದದ ಹಂಗು ಹರಿದು ಮಾತನಳಿದು

ಉಳಿದ ಪ್ರಸಂಗ ಪ್ರಸನ್ನವನರಿದು

ಅರಿಯದ ಮುಕ್ತಿಯ ಮರದು ಕುರುಹನಳಿದು

ನಾನು ನಿಂದೆನಯ್ಯ ಸಂಗಯ್ಯ೨೩

ಮೇಲಿನ ವಚನಗಳು ಮತ್ತವುಗಳ ಭಾವಕೇಂದ್ರವಾದ ಅತೀವಿಶಾದ ಹಾಗೂ ಬಸವಣ್ಣನವರ ‘ಜಜ್ಜರೆ ಜರೆದೆನು’ವಚನವನ್ನು ಪಕ್ಕದಲ್ಲಿಟ್ಟು ಒಮ್ಮೆ ಗಮನಿಸಿದರೆ ಚರ್ಚೆಗೆ ತೆಗೆದುಕೊಂಡಿರುವ ವಚನದ ಹಿಂದೆ ನಡೆದಿರಬಹುದಾದ ಚಾರಿತ್ರಿಕ ಘಟನೆಗಳು ಗ್ರಹಿಕೆಗೆ ಬರುತ್ತದೆ. ಬಸವಣ್ಣನವರದೇ ಈ ವಚನಗಳನ್ನು ಗಮನಿಸಿ

ಅರಸು ವಿಚಾರ ಸಿರಿಯು ಶೃಂಗಾರ ಸ್ಥಿತವಲ್ಲ ಮಾನವಾ

ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ

ಒಬ್ಬ ಜಂಗಮದಭಿಮಾನದಿಂದ

ಚಾಳುಕ್ಯರಾಯನ ಆಳಿಕೆ ತೆರೆಯಿತ್ತು

ಸಂದಿತ್ತು, ಕೂಡಲಸಂಗಮದೇವಾ, ನಿಮ್ಮ ಕವಳಿಗೆಗೆ೨೪

ವ್ಯಾಧನೊಂದು ಮೊಲನ ತಂದರೆ ಸಲುವ ಹಾಗಕ್ಕೆ ಬಿಲಿವರಯ್ಯ.

ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬರಿಲ್ಲ, ನೋಡಯ್ಯ !

ಮೊಲನಿಂದ ಕರಕಷ್ಟ ನರನ ಬಾಳುವೆ

ಸೆಲೆನಂಬೋ ನಮ್ಮ ಕೂಡಲಸಂಗಮದೇವನ೨೫

ಮೇಲಿನ ಐತಿಹಾಸಿಕ ಸಮಸ್ಯೆಯನ್ನು ಗ್ರಹಿಸಲು ‘ಅರಸು ವಿಚಾರ ಸಿರಿಯು ಶೃಂಗಾರ ಸ್ಥಿರವಲ್ಲ ಮಾನವಾ’ ಎಂಬ ವಚನವನ್ನು ಕುರಿತ ನಡೆದಿರುವ ಎರಡು ವಿದ್ವತ್ ಪೂರ್ಣ ಚರ್ಚೆಗಳು ಇಲ್ಲಿ ಮುಖ್ಯವಾಗುತ್ತವೆ. ಒಂದು ಮಂಜೇಶ್ವರ ಗೋವಿಂದ ಪೈ ಅವರದು.೨೬ ಮತ್ತೊಂದು ಜಿ. ಎಸ್. ದೀಕ್ಷಿತರದು.೨೭

ಗೋವಿಂದ ಪೈ ಗಳು ಈ ವಚನ ಕುರಿತು ಮಾತನಾಡುತ್ತಾ ಆ ಚಾಲುಕ್ಯ ರಾಯನ ಆಳಿಕೆ (=ಅರಸುತನ, ಪ್ರಭುತ್ವ) ತಗೆಯಿತ್ತು, ಅಂದರೆ ಅಪಹರಿಸಲ್ಪಟ್ಟಿತ್ತು ಎಂಬುದನ್ನು, ಆತನ ರಾಜ್ಯಪದವಿಯನ್ನು ಪರಕೀಯನೊಬ್ಬನು ಸೆಳೆದುಕೊಂಡಿರಬೇಕೆಂದು, ಅದು ‘ಸಂದಿತ್ತು ಕೂಡಲ ಸಂಗಮ ದೇವ ನಿಮ್ಮ ಕವಳಿಕೆಗೆ’ ಅಂದರೆ ಶಿವನ ಕಪಾಲಿಕೆ (=ಕವಳಿಕೆ) ಭಿಕ್ಷಾಪಾತ್ರೆಗೆ ಸಂದಿತು. ಎಂಬುದರಲ್ಲಿ ಅದು ಮುಗಿಯಿತು, ನಾಮಾವಶೇಷವಾಯಿತು’ ಎಂದಿದ್ದಾರೆ.

ಜಿ. ಎಸ್. ದೀಕ್ಷಿತರು ‘ಬಿಜ್ಜಳನಿಗೆ ಬಸವಣ್ಣನವರು ಕೊಟ್ಟ ಶಾಪ ಮತ್ತು ಆ ವಚನ ಒಂದೇ ವಿಷಯಕ್ಕೆ ಸಂಬಂಧಿಸಿದೆ. ಈ ವಚನ ಬಸವಣ್ಣನವರು ಭಂಡಾರಿ ಪದವಿಯಿಂದ ನಿವೃತ್ತರಾಗಿ ಕೂಡಲಸಂಗಮಕ್ಕೆ ಹೋಗಿ ಅಲ್ಲಿ ನೆಲೆಸಿದ್ದ ಕಾಲಕ್ಕೆ ಬರೆದಿರಬೇಕು. ಬಿಜ್ಜಳನೇ ಆ ಚಾಲುಕ್ಯರಾಯ. ಈ ಅಭಿಪ್ರಾಯಕ್ಕೆ ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ್ರೆಯು ಆಧಾರ” ಎಂದು ಬಹಳ ವಿವರವಾಗಿ, ನಿಖರವಾಗಿ ತಿಳಿಸಿದ್ದಾರೆ.

ಬಿಜ್ಜಳ ಮತ್ತು ಬಸವಣ್ಣರಲ್ಲಿ ಉಂಟಾಗಿರಬಹುದಾದ ಆಂತರಿಕ ಕಲಹವು ತಮ್ಮ ಮಿತಿಯನ್ನು ಮೀರಿ ವಿಸ್ತಾರವಾಗಿರುವ ಸಂದರ್ಭವಿದು. ಅದೇ ಸಮಯದಲ್ಲಿ ಹೊರಗಿನಿಂದಲೂ ರಾಜ್ಯದ ಮೇಲೆ ದಾಳಿಯ ಒತ್ತಡಗಳಾಗುತ್ತಿದ್ದವು. ಒಳ ಹೊರಗಿನ ಎಲ್ಲ ಸಮಸ್ಯೆಗಳು ಸೇರಿ ಪರಿಸ್ಥಿತಿ ಬಿಗಡಾಯಿಸಿದೆ. ‘ಬಸವರಾಜದೇವರ ರಗಳೆಯ ಪ್ರಕಾರ ಬಿಜ್ಜಳನಿಗೆ ಬಸವಣ್ಣನವರ ಸುಧಾರಣಾ ಚಳುವಳಿಯು ಸರಿದೋರಲಿಲ್ಲ. ಆತನು ಕಟ್ಟಾ ಸನಾತನಿ. ಚಳುವಳಿಯನ್ನು ನಿಲ್ಲಿಸೆಂದು ಎಷ್ಟು ಹೇಳಿದರೂ ಬಸವಣ್ಣ ಕೇಳಲಿಲ್ಲ. ಈ ಚಳುವಳಿಯು ಮುಂದುವರೆಯಿತು. ಬಸವಪುರಾಣದ ಪ್ರಕಾರ ಬಿಜ್ಜಳನಿಂದ ಸುಧಾಕರರಾದ ಹರಳಯ್ಯ-ಮಧುವಯ್ಯ ಇವರ ಕೊಲೆಯಾಯಿತು. ಕೊನೆಗೆ ಈ ಕೊಲೆ ಬಿಜ್ಜಳನ ಕೊಲೆಯಲ್ಲಿ ಪರಿಣಮಿಸಿತು. ಮತ್ತು ಈ ಕೊಲೆ ಚಾಲುಕ್ಯರಿಗೂ ಕಲಚುರಿಗಳಿಗು ನಡೆದ ಕೊನೆಯ ಯುದ್ಧದ ಮುಖ್ಯ ಭಾಗವಾಯಿತು. ಇದು ಆಗಿದ್ದು ಕ್ರಿ. ಶ. ೧೧೮೪ ರಲ್ಲಿ, ಆದ್ದರಿಂದ ಮೇಲೆ ಹೇಳಿದ ಹಾಗೆ ಕಲ್ಯಾಣಕ್ರಾಂತಿ ಕ್ರಿ. ಶ ೧೧೮೪ ರಲ್ಲಿ ಆಯಿತು’೨೮ ಮತ್ತು ‘ಬಿಜ್ಜಳನ ಸಾವಿಗೂ ಬಸವಣ್ಣನವರ ಐಕ್ಯಕ್ಕೂ ಬಹಳ ಅಂತರವಿಲ್ಲದುದರಿಂದ ಬಿಜ್ಜಳನ ಸಾವು ಸು. ೧೧೮೨-೮೪ ರಲ್ಲಿ, ಬವಣ್ಣನವರು ಐಕ್ಯವಾಗಿದ್ದು ಸು. ಕ್ರಿ. ಶ ೧೧೮೪-೮೬ ರಲ್ಲಿ ಎಂದು ಇಟ್ಟುಕೊಳ್ಳಬಹುದು’೨೯ ಎಂಬ ಜಿ. ಎಸ್. ದೀಕ್ಷಿತರ ಮಾತು, ಮತ್ತು ‘ಬಸವಣ್ಣನು ೧೧೮೬ ರ ಸುಮಾರಿಗೆ ಲಿಂಗೈಕ್ಯನಾಗಿದ್ದಾನೆ.’೨೦ ಎಂಬ ಕಲ್ಬುರ್ಗಿ ಯವರ ಅಭಿಪ್ರಾಯವು ಬಸವಣ್ಣನವರ ಐಕ್ಯದ ವಿಷಯದಲ್ಲಿ ಒಂದೇ ಆಗಿದೆ.

ಈ ಮೇಲಿನ ಎಲ್ಲಾ ಘಟನೆಗಳನ್ನು, ವಚನಗಳನ್ನು ಗಮನಿಸಿದರೆ ‘ಜಜ್ಜರೆ ಜರೆದೆನು’ ಎಂಬ ಬಸವಣ್ಣನವರ ವಚನವು ಬಸವಕಲ್ಯಾಣವು ಕಣ್ಣೆದುರಿನಲ್ಲೆ ಕ್ರಾಂತಿಕಲ್ಯಾಣವಾದುದರ ಬೇಸರ ಮತ್ತು ಆ ಕಾರಣದಿಂದ ಬಸವಣ್ಣನವರಲ್ಲಿ ಮಡುಗಟ್ಟಿರುವ ಶೋಕಭಾವದಿಂದ ಹೊರಬಂದಿರುವ ಸಾಧ್ಯತೆಯೇ ಹೆಚ್ಚಾಗಿದೆ. ಮೇಲಿನ ವಿದ್ವಾಂಸರ ಸಾಕ್ಷಿಗಳನ್ನು ಪರಿಶೀಲಿಸಿ ಎರಡು ವರ್ಷಗಳು ಬದುಕಿದ್ದರು ಎನ್ನುವುದಾದರೆ ಕಣ್ಣೆದುರೇ ಕೆಟ್ಟ ಕಲ್ಯಾಣವನ್ನು ಕಂಡು ಆಗಿರಬಹುದಾದ ಹಿಂಸೆಯಲ್ಲಿ ಈ ವಚನ ಬಂದಿದೆ. ಇಲ್ಲಿನ ಭಾವ ಆತ್ಮಾವಲೋಕನ ಅಲ್ಲ. ವಚನಗಳನ್ನು ಸಂಪಾದಿಸಿ, ವ್ಯವಸ್ಥಿತಗೊಳಿಸಿದ ಶೂನ್ಯಸಂಪಾದನಾಕಾರರು ಇದನ್ನು ಪ್ರಭುವಿನ ಅಗಲಿಕೆಯ ಸಮಯದಲ್ಲಿ ಬಂದಿದ್ದೆಂದು ದಾಖಲಿಸಿದ್ದಾರೆ. ಶೂನ್ಯಸಂಪಾದನೆಯನ್ನು ಸಂಪಾದಿಸಿದ ಎಲ್ಲ ವಿದ್ವಾಂಸರು ಅವರ ಅಭಿಪ್ರಾಯವನ್ನೇ ಒಪ್ಪಿದ್ದಾರೆ. ‘ಜಜ್ಜರೆ ಜರೆದೆನು’ ವಚನಕ್ಕೆ ಬೇರೆ ಬೇರೆ ಪಾಠಾಂತರಗಳು ಇರುವುದನ್ನು ಮೊದಲಿನಲ್ಲಿಯೇ ಪ್ರಾಸ್ತಾಪಿಸಿದ್ದೇನೆ. ‘ಜರೆದೆನು’ಎಂಬ ಪದವನ್ನು ಗಮನಿಸಿದರೆ ‘ನಾನು’ಎಂಬ ಭಾವವು ಅದರಲ್ಲಿ ಮಡುಗಟ್ಟಿದೆ. ‘ಇದುವರೆವಿಗೂ ಜರೆಯದ ನಾನು ಇಂದು ಜರೆದಿದ್ದೇನೆ, ನಿಮ್ಮ ಶರಣರ ಅಗಲಿದ ಕಾರಣ’ ಎಂದು ಓದಿಕೊಂಡರೆ ವಚನದಲ್ಲಿನ ಬಸವಣ್ಣನವರ ಅಸಹಾಯಕ ಸ್ಥತಿ ಕಣ್ಣಮುಂದೆ ಬರುತ್ತದೆ. ಬಸವಣ್ಣನವರಲ್ಲಿ ಆಗಿರಬಹುದಾದ ‘ಜರೆದೆನು’ ಎಂಬ ಬದಲಾವಣೆ ಆತ್ಮವಿಮರ್ಶೆಯದಲ್ಲ ಕಣ್ಣೆದುರೇ ಕೆಟ್ಟ ಕಲ್ಯಾಣದ ದುಸ್ಥಿತಿಯನ್ನು ಕಂಡು ಎಂದು ಮನದಟ್ಟಾಗುತ್ತದೆ. “ಜರೆದೆನು” ಎಂಬ ಪದವು ದ್ರೋಹದಿಂದ ಉಂಟಾದ ಬೇಸರ, ದುಃಖ ಭಾವಕೇಂದ್ರಕ್ಕೆ ಪುಷ್ಟಿಕೊಡುವ ಮತ್ತು ಬಸವಣ್ಣನವರಲ್ಲಿ ಉಂಟಾದ ಏಕಾಕಿತನವನ್ನು ಸ್ಪಷ್ಟವಾಗಿ ಹಿಡಿದಿಡಲು ಸಹಾಯಕವಾಗಿ ಕೆಲಸ ನಿರ್ವಹಿಸುತ್ತಿದೆ. ಕೊನೆಗೆ “ನಾನೊಬ್ಬನೆ ಉಳಿದೆನು ನೋಡಯ್ಯಾ” ಎಂದು ವಾಚ್ಯವಾಗಿಯೇ ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಸಮಕಾಲೀನರಾದ ತುರುಗಾಹಿ ರಾಮಣ್ಣ ಮತ್ತು ನೀಲಮ್ಮನ ವಚನಗಳೊಂದಿಗೆ ‘ಜಜ್ಜರೆ ಜರಿದೆನು’ವಚನವು ಸಾಧಿಸಿಕೊಳ್ಳುವ ಸಂಬಂಧವು ಕೇವಲ ಬೇಸರ, ಶೋಕಭಾವಗಳಷ್ಟೇ ಅಲ್ಲದೆ, ತೆರದುಕೊಳ್ಳುವ ಐತಿಹಾಸಿಕ ದುರಂತದ ಕಡೆಗೆ ಬೊಟ್ಟುಮಾಡಿ ತೋರಿಸುತ್ತಿದೆ. ಕೊನೆಗೆ ಅವರದೇ ವಚನದಲ್ಲಿನ ‘ಚಾಳುಕ್ಯರಾಯನ ಆಳಿಕೆ ತೆರೆಯಿತ್ತು, ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ’ ಎಂಬ ಕಾರಣದಿಂದ ‘ಜಜ್ಜರೆ ಜರೆದೆನು’ ವಚನದ ಅಭಿವ್ಯಕ್ತಿಯು ಕಾರಣವಾಗಿರಲೂಬಹುದು. ‘ಪ್ರಾಣಕ್ಕೆ ಅಂಜಿ ಓಡಿಹೋಗುವುದು ಬಸವಣ್ಣನ ಸ್ವಭಾವಕ್ಕೆ ಸಾಧ್ಯವಿಲ್ಲದ ಮಾತು. ಅಂತಹ ಸಂಕಟದ ಕಾಲದಲ್ಲಿಯೂ ಒಂದಷ್ಟು ದಿನ ಅವನು ಕಲ್ಯಾಣದಲ್ಲಿಯೇ ಉಳಿದಾಗ ಅವನ ಮನಸ್ಥಿತಿ ಹೇಗಿತ್ತು ಎಂಬುದನ್ನು ಈ ವಚನವು ಸ್ಪಷ್ಟಪಡಿಸುವಂತಿದೆ.’೩೧ ಎಂಬ ಪ್ರೊ. ಎಂ. ಜಿ. ಚಂದ್ರಶೇಖರಯ್ಯನವರ ಮಾತುಗಳು ‘ಜಜ್ಜರೆ ಜರೆದೆನು’ ವಚನವನ್ನು‌ ಐತಿಹಾಸಿಕ ಹಿನ್ನೆಲೆಯನ್ನು ಸ್ಪಷ್ಟವಾಗಿ ಗ್ರಹಿಸಿದ್ದು, ಮೌಲಿಕವಾದದ್ದೂ ಆಗಿದೆ. 


ಅಡಿಟಿಪ್ಪಣಿಗಳು

೧. ಮಾರ್ಗ ಸಂಪುಟ ೭. ಲೇ. ಎಂ. ಎಂ. ಕಲಬುರ್ಗಿ. ಸ್ವಪ್ನ ಬುಕ್ ಹೌಸ್ ಬೆಂಗಳೂರು. (೨೦೧೫) ಪು ೨೨

೨. ಮಾರ್ಗಸಂಪುಟ ೭. ಲೇ. ಎಂ. ಎಂ. ಕಲಬುರ್ಗಿ. ಸ್ವಪ್ನ ಬುಕ್ ಹೌಸ್ ಬೆಂಗಳೂರು. (೨೦೧೫) ಪು ೨೨-೨೩

೩. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ ಎಂ ಕಲಬುರ್ಗಿ. (೨೦೧೬) ವ ಸಂ ೩೭೦. ಪು ೮೯

೪. ಬಸವಣ್ಣನವರ ಷಟ್ ಸ್ಥಲದ ವಚನಗಳು. ಸಂ. ಫ. ಗು. ಹಳಕಟ್ಟಿ. (೧೯೫೪) ವ ಸಂ ೩೬೯. ಪು ೯೨

೫. ಬಸವಣ್ಣನವರ ವಚನ ಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. (೨೦೦೧) ವ ಸಂ ೩೭೦. ಪು ೮೯

೬. ಎನ್ನ ನಾ ಹಾಡಿಕೊಂಡೆ. ಲೇ. ಡಾ. ಎಸ್. ವಿದ್ಯಾಶಂಕರ. (೨೦೧೨) ವ ಸಂ ೩೬೯. ಪು ೨೮೬

೭. ವಚನ ಸಾವಿರ. ಸಂ. ಓ. ಎಲ್. ನಾಗಭೂಷಣಸ್ವಾಮಿ. (೨೦೦೪) ವ ಸಂ ೫೨೮. ಪು ೧೫೬

೮. ಹಲಗೆಯರ‍್ಯನ ಶೂನ್ಯಸಂಪಾದನೆ. ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. (೨೦೦೮) ವ ಸಂ ೧೧೧೩. ಪು ೪೮೫

೯. ಬಸವಣ್ಣನವರ ವಚನಗಳು. ಸಂ. ಡಾ. ಎಲ್. ಬಸವರಾಜು. ಗೀತಾ ಬುಕ್ ಹೌಸ್ ಮೈಸೂರು. ಹನ್ನೊಂದನೆಯ ಮುದ್ರಣ ೨೦೧೨

೧೦. ಎನ್ನ ನಾ ಹಾಡಿಕೊಂಡೆ. ಲೇ. ಡಾ. ಎಸ್. ವಿದ್ಯಾಶಂಕರ. (೨೦೧೨) ಪು ೨೮೬ ಮತ್ತು ೨೮೭

೧೧. ಹಲಗೆಯರ‍್ಯನ ಶೂನ್ಯಸಂಪಾದನೆ. ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. (೨೦೦೮) ಪು ೪೮೬

೧೨. ಹಲಗೆಯರ‍್ಯನ ಶೂನ್ಯಸಂಪಾದನೆ.  ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. (೨೦೦೮) ವ ಸಂ ೧೧೧೦, ಪು ೪೮೪

೧೩. ಹಲಗೆಯರ‍್ಯನ ಶೂನ್ಯಸಂಪಾದನೆ. ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. (೨೦೦೮) ವ ಸಂ ೧೧೧೧ ,  ಪು ೪೮೫

೧೪.  ಹಲಗೆಯರ‍್ಯನ ಶೂನ್ಯಸಂಪಾದನೆ. ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ. (೨೦೦೮) ವ ಸಂ ೧೧೧೨ , ಪು ೪೮೫

೧೫. ಹಲಗೆಯರ‍್ಯನ ಶೂನ್ಯಸಂಪಾದನೆ. ಸಂ. ಪ್ರೊ. ವಿದ್ಯಾಶಂಕರ ಮತ್ತು ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ.  (೨೦೦೮) ವ ಸಂ ೧೧೧೪ , ಪು ೪೮೫

೧೬. ಸರಳ ಶೂನ್ಯಸಂಪಾದನೆ. ಸಂ. ಡಾ. ಎಲ್. ಬಸವರಾಜು. (೧೯೯೩) ಪುಟ ೨೦೩ ರಿಂದ ೨೦೫

೧೭. ಶಿವಶರಣಕಥಾ ರತ್ನಕೋಶ. ಸಂ. ತ. ಸು. ಶಾಮರಾಯ. (೧೯೬೭) ಪು ೧೮೦

೧೮. ಶಿವಶರಣಕಥಾ ರತ್ನಕೋಶ. ಸಂ. ತ. ಸು. ಶಾಮರಾಯ. (೧೯೬೭) ಪು ೨೨೭

೧೯. ವಚನರ‍್ಮಸಾರ. ಲೇ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂಗ, ಮೈಸೂರುವಿಶ್ವವಿದ್ಯಾನಿಲಯ. (೧೯೬೮) XIII

೨೦. ಬವಸಯುಗದ ವಚನ ಮಹಾಸಂಪುಟ ೧. ಸಂ. ಎಂ. ಎಂ. ಕಲಬುರ್ಗಿ. (೨೦೧೬) ವ ಸಂ ೧೦೨೫. ಪು ೧೩೦೧ 

೨೧. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ.ಎಂ. ಕಲಬರ‍್ಗಿ. (೨೦೧೬) ವ ಸಂ ೮೧೦. ಪು ೮೭೭ 

೨೨. ಬಸವಯುಗದ ವಚನ ಮಹಾಸಂಪುಟ. ಸಂ.ಡಾ. ಎಂ.ಎಂ. ಕಲಬುರ್ಗಿ (೨೦೧೬) ವ ಸಂ ೮೨೪. ಪುಟ ೨೭೮

೨೩. ಬಸವಯುಗದ ವಚನ ಮಹಾಸಂಪುಟ. ಸಂ.ಡಾ. ಎಂ.ಎಂ. ಕಲಬುರ್ಗಿ. (೨೦೧೬) ವ ಸಂ ೮೩೬. ಪು ೮೭೯

೨೪. ಬಸವಣ್ಣನವರ ಷಟ್ ಸ್ಥಲದ ವಚನಗಳು, ಸಂ. ಫ. ಗು. ಹಳಕಟ್ಟಿ. (೧೯೫೪) ವ ಸಂ ೬೨೪, ಪು ೧೬೩

೨೫. ಬಸವಣ್ಣನವರ ಷಟ್ ಸ್ಥಲದ ವಚನಗಳು, ಸಂ. ಫ. ಗು. ಹಳಕಟ್ಟಿ. (೧೯೫೪) ವ ಸಂ ೧೫೮. ಪು ೪೧

೨೬.  ಮೂರು ಉಪನ್ಯಾಸಗಳು. ಶ್ರೀ ಗೋವಿಂದ ಪೈ (ಮಂಜೇಶ್ವರ). ಕನ್ನಡ ರಿಸರ್ಚ್ ಆಫೀಸು, ಧಾರವಾಡ. (೧೯೪೦) ಪು ೮೫ ಮತ್ತು ೮೬

೨೭. ಮಧ್ಯಕಾಲೀನ ಕರ್ನಾಟಕ. ಸಂ. ಡಾ. ಶ್ರೀನಿವಾಸ ಹಾವನೂರು. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ. ಮೈಸೂರು. (೨೦೦೮) ಪು ೩೪

೨೮. ಮಧ್ಯಕಾಲೀನ ಕರ್ನಾಟಕ. ಸಂ. ಡಾ. ಶ್ರೀನಿವಾಸ ಹಾವನೂರು. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ. ಮೈಸೂರು. (೨೦೦೮) ಪು ೧೭

೨೯. ಮಧ್ಯಕಾಲೀನ ಕರ್ನಾಟಕ. ಸಂ. ಡಾ. ಶ್ರೀನಿವಾಸ ಹಾವನೂರು. ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ. ಮೈಸೂರು. (೨೦೦೮) ಪು ೨೯

೩೦. ಕನ್ನಡ ಶಾಸನ ಸಾಹಿತ್ಯ. ಸಂ. ಡಾ. ಎಂ. ಎಂ. ಕಲ್ಬುರ್ಗಿ. ಚೇತನ ಬುಕ್ ಹೌಸ್ ಮೈಸೂರು. (೨೦೧೧) ಪು ೨೭೭

೩೧. ಬಸವಣ್ಣ ಜೀವನ-ಸಾಧನೆ. ಪ್ರೊ. ಎಂ. ಜಿ. ಚಂದ್ರಶೇಖರಯ್ಯ. ಕನ್ನಡ ಸಾಹಿತ್ಯ ಪರಿಷತ್ತು. (೨೦೧೭) ಪು ೮೩ ಮತ್ತ ೮೪

****************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

7 thoughts on “

  1. ಅಧ್ಯಯನಶೀಲ ನಿಮ್ಮ ಮನಸಿಗೆ ಥ್ಯಾಂಕ್ಸ. ವಚನ ಸಾಹಿತ್ಯ ಕನ್ನಡದ ಉಸಿರು ಹಾಗೂ ಬೆಳಕು

    1. ಓದಿ ಸಂತಸಪಟ್ಟ ಎಲ್ಲರಿಗೂ ಧನ್ಯವಾದಗಳು

  2. ನಿಮ್ಮ ಅಧ್ಯಯನ ಮತ್ತು ವಿದ್ವತ್ತಿಗೆ ನನ್ನ ನಮನ. ಸೊಗಸಾದ ಲೇಖನ

  3. ಹಲವು ಒಳನೋಟಗಳ ಲೇಖನ. ಇಂಥ ಮತ್ತೂ ಹಲವು ಹುಡುಕಾಟಗಳಿಂದ ಕಳೆದುಹೋದ ಚರಿತ್ರೆಯನ್ನು ಕಾಣ್ಕೆಯಾಗಿ ಕಟ್ಟಿಕೊಳ್ಳಬಹುದು. ಧನ್ಯವಾದಗಳು

Leave a Reply

Back To Top