ಕವಿತೆ
ನಾವು ಹೀಗೆಯೆ
ನಿರ್ಮಲಾ ಶೆಟ್ಟರ್
ಇಂದಿಲ್ಲವಾದರೆ ನಾಳೆ
ಈಗ ಆಗ ಆಮೇಲೆ ಎಂದು
ಅಸಂಖ್ಯ ಹಗಲು ನಾನೇ ಬೇಯುತ
ರಾತ್ರಿಗಳಲಿ ದೀಪದಂತೆ ಉರಿಯುತ ಕಾದಿದ್ದೇನೆ
ನಿನ್ನ ಮಾತುಗಳ ಕೇಳಲು
ಆ ವಿಷಯದಲಿ ಜುಗ್ಗ ನೀನು ಮತ್ತು
ನಿನ್ನಂಥಹ ಎಲ್ಲರೂ
ಇದೇ ಕಾರಣ
ಅವ್ವ ಅಪ್ಪನೊಡನೆ ಸೆಟಗೊಂಡು
ನನ್ನ ಪಕ್ಕದಲಿ ಬಂದು ಮಲಗಿದ
ಅದೆಷ್ಟೊ ರಾತ್ರಿಗಳ ಪ್ರಶ್ನಿಸುತ್ತಾ ಬೆಳದವಳು ನಾ
ಮೊನ್ನೆ ವನಿತೆ
ಊರ ಹೊರಗಿನ ನಡುರಸ್ತೆಯಲಿ
ಬಿಟ್ಟು ತನ್ನವನನು
ಒಂಟಿಯಾಗಿ
ನಡೆದು ಮನೆಸೇರಿ ಕ್ರಮಿಸಿದ್ದು ಸಮೀಪದ ಹಾದಿಯನ್ನಲ್ಲ
ನಾವು ಹೀಗೆಯೆ
ಇಂಥವರನ್ನು ಇಷ್ಟಪಡುವುದಿಲ್ಲ
ಒಂದೇ ಗುಟುಕಿಗೆ ಚರಿಗೆ ನೀರು ಕುಡಿದಂತೆ
ನಿಮ್ಮೆದೆಯ ಭಾವವನೆಲ್ಲ ನಮ್ಮೆದೆಗಿಳಿಸಿ
ಕಣ್ಣರೆಪ್ಪೆಯಲಿ ತೂಗಾಡಿಸಿಕೊಂಡು
ತೊಟ್ಟಿಲು ಕಟ್ಟಿ ಹಾಡುವ ಜೋಗುಳಗಳ
ತಲೆಮಾರಿಗೂ ದಾಟಿಸುತ್ತೇವೆ
ನಿಮ್ಮ ಕೈ ಬೆರಳು
ತುಟಿಯ ಸೀಳು ಒರಟು ಗಲ್ಲ
ಬಿರುಸು ಪಾದಗಳೊಡನೆ
ಹಾ ಹುಂ ಹೋ ಗಳಲಿ ಮುಗಿಸುವ ಮಾತು
ನಿನ್ನೆ ಇಂದು ನಾಳೆಗ್ಯಾವತ್ತು ನಮಗೆ ಮುದವೆನಿಸುವುದಿಲ್ಲ
ಇನ್ನಾದರೂ
ಮುಖಕ್ಕೆ ಮುಖ ಕೊಟ್ಟು
ಕಣ್ಣಲಿ ಕಣ್ಣ ನೆಟ್ಟು ಮಾತಾಡುತ್ತಲಿರಿ
ಹಗಲ ಬೆಳಕಿನಲಿ
**************
Super
Super teacher