ಅಂಕಣ ಬರಹ

ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ

ಡಾ ಪ್ರೇಮಲತ .ಬಿ.

ಪರಿಚಯ


ಮೂಲತಃ ತುಮಕೂರಿನವರಾದ ಪ್ರೇಮಲತ ವೃತ್ತಿಯಲ್ಲಿ ದಂತವೈದ್ಯೆ. ಕಳೆದ 18 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ.
ದಿನಪತ್ರಿಕೆ, ವಾರಪತ್ರಿಕೆ,ಮಾಸಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ಲೇಖನಗಳು,ಅಂಕಣ ಬರಹ, ಕಥೆ, ಕವನಗಳು ಮತ್ತು ಪ್ರಭಂದಗಳನ್ನು ಬರೆದಿದ್ದಾರೆ.
ತುಷಾರ ಚಿತ್ರಕವನ ಸ್ಪರ್ಧೆಯ ಬಹುಮಾನ, ಪ್ರಜಾವಾಣಿ ಪ್ರೇಮ ಪತ್ರ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಭಂದ ಸ್ಪರ್ದೆಯಲ್ಲಿ ಸಮಾಧಾನಕರ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಕವನ ಸ್ಪರ್ಧೆಯ ಬಹುಮಾನ, ಸಿಂಗಾಪೂರ್ ನಡೆಸುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಕವನ ಸ್ಪರ್ದೆಯಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ. ೨೦೨೦ ರ ಕಹಳೆ ಕಥಾ ಸ್ಪರ್ಧೆಯಲ್ಲಿ ಅವರದೊಂದು ಕಥೆ ಅತ್ಯುತ್ತಮ ಕಥೆಯೆನ್ನುವ ಗೌರವಕ್ಕೆ ಪಾತ್ರವಾಗಿದೆ. ಅವರ ಪ್ರಥಮ ಕಥಾ ಗುಚ್ಛ ’ಛಂದ ಪ್ರಕಾಶನದ’ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಸುಧಾ, ತರಂಗ, ಮಯೂರ, ಕನ್ನಡ ಪ್ರಭಾ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗಿವೆ.
’ಬಾಯೆಂಬ ಬ್ರಂಹಾಂಡ’ ಎನ್ನುವ ವೃತ್ತಿಪರ ಕಿರು ಪುಸ್ತಕವನ್ನು ಜನಸಾಮಾನ್ಯರಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮೂಲಕ ಪ್ರಕಟಿಸಿದ್ದಾರೆ. ಕನ್ನಡಪ್ರೆಸ್.ಕಾಂ ನಲ್ಲಿ ಆರು ತಿಂಗಳ ಕಾಲ ಅಂಕಣ ಬರಹವಾಗಿ ಪ್ರಕಟಗೊಂಡ ಅವರ ಬರಹಗಳು ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ. ’ಕೋವಿಡ್ ಡೈರಿ’ ಎನ್ನುವ ಈ ಬರಹಗಳ ಗುಚ್ಛದ ಈ ಪುಸ್ತಕ ಈ ತಿಂಗಳ ನವಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಟಾಪ್-ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಸೇರಿದೆ.
……………………………

ಕವಿತೆ, ಕಥೆಗಳನ್ನು ಯಾಕೆ ಬರೆಯುತ್ತೀರಿ?

ಸೃಜನಾತ್ಮಕವಾಗಿ ಯಾವುದೋ ಒಂದು ನಿಮಿಷವನ್ನು ಕಟ್ಟಿಕೊಡುವ ತುಡಿತದಿಂದ. ಅದು ಮನಸ್ಸಿಗೆ ಸಂತೋಷವನ್ನು ನೀಡುವುದರಿಂದ. ಸಾಹಿತ್ಯ, ಕಥೆ, ಕವಿತೆಗಳನ್ನು ಓದುವುದರಿಂದ.

  • ಕವಿತೆ, ಕತೆ ಹುಟ್ಟುವ ಕ್ಷಣ ಯಾವುದು?

ಯಾವಾಗ ಬೇಕಾದರೂ ಆಗಬಹುದು. ಆದರೆ ಮನಸ್ಸಿನ ಮೇಲೆ ಯಾವುದೋ ಒಂದು ವಿಚಾರ ಮೋಡಕಟ್ಟಿದ ರೀತಿ ಆವರಿಸಿಕೊಂಡ ನಂತರ ಮಳೆಯಾಗಲೇ ಬೇಕು ಎನ್ನುವ ಧಾವಂತದ ರೀತಿಯಲ್ಲಿ ಬರಹಗಳೂ ಹುಟ್ಟಿ ಬಿಡುತ್ತವೆ. ಅಗಲೇ ತೃಪ್ತಿ ಮತ್ತು ಸಮಾಧಾನ. ಆದರೆ ಇದು ನನಗೆ ಬೇಕೆಂದಾಗ ಆಗುವುದಿಲ್ಲ.

  • ನಿಮ್ಮ ಕವಿತೆ, ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು ?

ಕವಿತೆಗಳು ಪ್ರೀತಿ, ಭಾವನೆ ಮತ್ತು ಪರಿಸರದ ಮೇಲೆ ಹೆಚ್ಚಿವೆ. ಪ್ರಚಲಿತ ಸಮಸ್ಯೆಗಳ ಬಗ್ಗೆ ಭಾವನಾತ್ಮಕವಾಗಿ ಬರೆದಿರುವುದು ಕಡಿಮೆ. ಕಾರಣ ಎಂದರೆ ಅಂಥಹ ವಿಚಾರಗಳು ಕವಿತೆಯ ಅಲಂಕಾರ, ರೂಪಕಗಳನ್ನು ನಿರ್ಲ್ಯಕ್ಷಿಸಿ ವಸ್ತುನಿಷ್ಠ ಮತ್ತು ವಾಸ್ತವಕ್ಕೆ ಸಂಭಂದಿಸಿದ ಲೇಖನಗಳೋ ಮತ್ತೊಂದೋ ಆಗಿರುವುದೇ ಹೆಚ್ಚು. ಕಥೆಗಳಲ್ಲಿ ಮನುಷ್ಯನ ಮನೋವ್ಯಾಪಾರದ ಬಗ್ಗೆ ಹೆಚ್ಚು ಬರೆದಿದ್ದೇನೆ. ನನ್ನ ಕಥೆಗಳ ವ್ಯಾಪ್ತಿಯಲ್ಲಿ ಸಮಾಜದ ಶೀತಲ ಕ್ರೌರ್ಯಗಳು ಎದ್ದು ಕಾಣುವಷ್ಟು ಇರುತ್ತವೆ.ಆದರೆ ತೀರ್ಮಾನಗಳಿರುವುದಿಲ್ಲ.ಅತಿಯಾದ ಭಾವುಕತೆ, ಉತ್ಪ್ರೇಕ್ಷೆ ಇರುವುದಿಲ್ಲ. ಆ ಮಟ್ಟಕ್ಕೆ ಮಿತವೂ ಹೌದು.
ಪದೇ ಪದೇ ಕಾಡವ ವಿಷಯವೆಂದರೆ ಅದು ಮನುಷ್ಯ ಸಂಬಂಧಗಳ ನಡುವಿನ ಭಾವನಾತ್ಮಕ ಮತ್ತು ವಿನೋದತ್ಮಕ ಮನೋವ್ಯಾಪಾರ.

  • ಕವಿತೆ, ಕತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ?

ಖಂಡಿತ. ಹರೆಯವನ್ನಾದರೂ ಹತ್ತಿಕ್ಕಬಹುದು ಆದರೆ ಬಾಲ್ಯದ ನೆನಪುಗಳದ್ದು ಗಾಢ ಬಣ್ಣಗಳು. ಅವು ಬೇರೆ,ಬೇರೆ ಆಯಾಮಗಳಲ್ಲಿ ಮತ್ತೆ ಡಣಾ ಡಾಳಾಗಿ ಇಣುಕುತ್ತವೆ. ಸಮಕಾಲೀನ ಬದುಕಿನ ಸ್ಪಂದನೆಗಳೊಂದಿಗೆ ಉತ್ತಮ ಸಾಥ್ ನೀಡುತ್ತವೆ.

  • ನೀವು ವೃತ್ತಿಯಿಂದ ದಂತ ವೈದ್ಯರು. ಇದು ನಿಮ್ಮ ಸೃಜನಶೀಲತೆಗೆ ನೆರವಾಗಿದಿಯ

ಸದಾ ಜನರೊಂದಿಗೆ ಆತ್ಮೀಯವಾಗಿ ಒಡನಾಡಲು ಅವಕಾಶವಿರುವ ನನ್ನ ಕೆಲಸ ಜನರ ಬದುಕಿನ ಬಗ್ಗೆ ಬರೆಯುವ ಅವಕಾಶವನ್ನು ಕೂಡ ಹಿಗ್ಗಿಸುತ್ತದೆ. ದಿನಕ್ಕೆ ಇಪ್ಪತ್ತೈದು ಹೊಸ ಮುಖಗಳನ್ನು ನೋಡುತ್ತ, ಹೊಸ ಕಥೆಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಈ ಅತಿವೃಷ್ಟಿ ಒಮ್ಮೊಮ್ಮೆ ಬರೆಯುವ ಗೀಳನ್ನು ತಗ್ಗಿಸುತ್ತದೇನೋ.
ಕೆಲಸಮಾಡುವಾಗ ಇರುವ ಕರ್ತವ್ಯದ ದೃಷ್ಟಿಗೂ, ಬರಹಕ್ಕೆ ಕುಳಿತಾಗ ಬರುವ ಉಮೇದಿಗೂ ಯಾವ ನೇರ ತಾಳೆಯೂ ಇಲ್ಲದಿರಬಹುದು.ಆದರೆ ರೋಗಿಗಳನ್ನು ನಿಭಾಯಿಸಿದಂತೆಯೇ ಕಥೆಯ ಪಾತ್ರಗಳನ್ನು ಕೂಡ ನಿಭಾಯಿಸಲು ಪರೋಕ್ಷವಾದ ಪ್ರಭಾವ ಇದ್ದಿರಬಹುದು. ಬರೇ ಮೇಜು, ಕುರ್ಚಿ, ಕಂಪ್ಯೂಟರಿನ ನಡುವೆ ಕುಳಿತವರು ಕೂಡ ಅದ್ಭತವಾದ ಕಥೆಗಳನ್ನು ಹೆಣೆಯುವುದನ್ನು ಗಮನಿಸಿದ್ದೇನೆ.ಹಾಗಾಗಿ ಯಾರು ಬೇಕಾದರೂ ಬರೆಯಬಲ್ಲರು ಅನ್ನೋದರಲ್ಲಿ ಸಂಶಯವಿಲ್ಲ.
ವೃತ್ತ ಪರಿಜ್ಞಾನ ಮತ್ತು ಬರಹದ ಭಾವುಕಥೆಯ ಜೊತೆಗೆ ವೃತ್ತಿಯ ಪ್ರಭಾವದಿಂದ ಬರುವ ಸ್ಥಿತಪ್ರಜ್ಞತೆಯನ್ನಂತೂ ನನ್ನ ಬರಹದಲ್ಲಿ ಖಂಡಿತ ನೋಡಬಹುದು. ಕೆಲವೊಮ್ಮೆ ಅದನ್ನು ಕಳೆದು ಬರೆಯುವುದು ಕೂಡ ತೊಡಕಾಗಿದೆಯೆನ್ನಬಹುದು.

ವೃತ್ತಿ ಹಾಗೂ ಸೃಜನಶೀಲತೆ ಮತ್ತು ಅಪ್ತ ಬದುಕನ್ನು ನಿಭಾಯಿಸುವ ಕೌಶಲ್ಯ ಹೇಗದು?

ದಿನದಲ್ಲಿ ಎಲ್ಲರಿಗೂ ಇರುವ ಅವೇ ೨೪ ಗಂಟೆಗಳನ್ನು ಪ್ರೀತಿಪಾತ್ರವಾದ ಮೂರಕ್ಕೂ ಹಂಚಲು ಇರುವ ಒಂದೇ ವಿಧಾನ ಎಂದರೆ, ಬರೇ ಎರಡರಲ್ಲಿ ಅಥವಾ ಒಂದರಲ್ಲೇ ತೊಡಗಿದವರಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸಮಾಡುವುದು. ಜಾಣತನದಿಂದ ಸಮಯ ಪೋಲಾಗದಂತೆ ನೋಡಿಕೊಳ್ಳುವುದು. ಅಲಂಕಾರ, ಕಾಡು ಹರಟೆ, ಗಾಸಿಪ್, ಸಾಮಾಜಿಕ ಜಾಲತಾಣಗಳಿಂದ ಸ್ವಲ್ಪ ದೂರವಿದ್ದು ಏಕಾಂತದ ಸಮಯವನ್ನು ಉಳಿಸಿಕೊಳ್ಳುವುದು. ಕೆಲಸಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಅತಿಯಾದ ನಿಯಮಗಳನ್ನು ಹಾಕಿಕೊಳ್ಳದೆ, ಅತಿಯಾಗಿ ಯಾವುದನ್ನೂ ಹಚ್ಚಿಕೊಳ್ಳದೆ ನಮ್ಮತನವನ್ನು ಕಾಪಾಡಿಕೊಳ್ಳುವ ಉಪಾಯಗಳನ್ನು ಪಾಲಿಸುವುದು.
ಮಲ್ಟಿ ಟಾಸ್ಕಿಂಗ್ ಮೊದಲಿಂದಲೂ ಇತ್ತು.ಕಾಲ ಕ್ರಮೇಣ ಬದುಕು ಅವುಗಳನ್ನು ನಿಭಾಯಿಸುವ ಕಲೆಯನ್ನು ಕಲಿಸಿತು ಎನ್ನಬಹುದು.

ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಅದೊಂದು ಅವಿರತ ಚಕ್ರ. ಹಿಂದೊಮ್ಮೆ ಏಕತ್ವದ ಸಂಕುಚಿತ ಲೋಕವಿತ್ತು. ಅದು ಜಾಗತೀಕರಣದೊಂದಿಗೆ ಬಹುತ್ವಕ್ಕೆ ತೆರೆದುಕೊಂಡಿತು. ಅದಕ್ಕೆ ಬಹಳ ಸಮಯ ಹಿಡಿಯಿತು. ಅದು ಪೂರ್ಣವಾಗುವ ಮೊದಲೇ ನ್ಯಾಷನಲಿಸ್ಟಿಕ್ ಮೂವ್ ಮೆಂಟ್ ಗಳು ಶುರುವಾಗಿವೆ. ಅದು ಪೂರ್ಣವಾಗುವ ಮಾತಂತು ಖಂಡಿತ ಸಾಧ್ಯವಿಲ್ಲ. ಏಕೆಂದರೆ ಈ ಪ್ರಪಂಚ ವೈವಿಧ್ಯಮಯ. ಅದರಲ್ಲು ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಪ್ರಪಂಚ ಈಗ ಮುಷ್ಠಿಗಾತ್ರಕ್ಕೆ ತಿರುಗಿದೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಒಡನಾಟಗಳು, ವಾಣಿಜ್ಯ ವಿಚಾರಗಳು,ಜಾಗತಿಕ ಮಾರುಕಟ್ಟೆ , ಪ್ರವಾಸ, ಮಾಹಿತಿ ತಂತ್ರಜ್ಞಾನ ಇವೆಲ್ಲವೂ ಅಗಾಧವಾಗಿ ಜಾಗತಿಕ ಮಟ್ಟದಲ್ಲಿ ಬೆಳೆದಿರವ ಈ ಕಾಲದಲ್ಲಿ ಒಂದು ದೇಶದ ಜನರು ಹಲವು ದೇಶಗಳಲ್ಲಿ ಹಂಚಿಹೋಗಿದ್ದಾರೆ. ಇವೆಲ್ಲ ಸಾವಿರಾರು ವರ್ಷಗಳ ಕಾಲ ನಡೆದ ಸಂಘರ್ಷಗಳ, ಪರಿವರ್ತನೆಗಳ ಪರಿಣಾಮವೂ ಹೌದು. ಹಾಗಿರುವಾಗ ಅದನ್ನೆಲ್ಲ ಇಲ್ಲವಾಗಿಸಿ ಏಕತ್ವ ಅಥವಾ ಸ್ವ-ಹಿರಿಮೆಯ ಸಂಕುಚಿತ ಲೋಕಕ್ಕೆ ಹಿಂತಿರುಗಿ ಹೋಗುವ ಪ್ರಯತ್ನ ಅಪಹಾಸ್ಯದ್ದು. ಸ್ವಾರ್ಥಕ್ಕಾಗಿ ದೇಶವನ್ನು ಆಳವಾಗಿ ಒಡೆದು ಒಂದು ಬಣದ ಶ್ರೇಷ್ಠತೆಯನ್ನು ಮಾತ್ರ ಮೆರೆಸಲು ಮಾಡುವ ಪ್ರಯತ್ನ ಅಮೆರಿಕಾದಲ್ಲಾದಂತಹ ಅರಾಜಕತೆಯನ್ನು, ಅಧೀರತೆಯನ್ನು ಸೃಷ್ಠಿಸಬಲ್ಲದು.ಅದನ್ನು ಹೊರಗಿಟ್ಟು ಇಡೀ ದೇಶ ಒಂದು ಎನ್ನುವ ಒಗ್ಗಟ್ಟಿನ ಭಾವಕ್ಕೆ ಪುಷ್ಟಿ ಕೊಟ್ಟು ದೇಶದ ಏಳ್ಗೆಯ ಬಗ್ಗೆ ಯೋಚಿಸುವ ರಾಜಕಾರಣದ ಅಗತ್ಯವಿದೆ.
ಪ್ರಪಂಚವೆಂಬ ಮನೆಯಲ್ಲಿ ಮನಸ್ಸನ್ನು ತೆರೆದಿಟ್ಟು ಬದುಕುವಲ್ಲಿನ ವೈವಿಧ್ಯತೆ, ವೈರುದ್ಧ್ಯತೆ, ಸಾಮ್ಯತೆ ಸೃಜನಶೀಲ ಮನಸ್ಸುಗಳ ವಿಕಸನಕ್ಕೆ ಅತ್ಯಗತ್ಯ. ಸ್ವಾರ್ಥದ ರಾಜಕೀಯ ಬೇರೆ ಬೇರೆ ರೂಪಗಳಲ್ಲಿ ಇದ್ದೆ ಇರುತ್ತದೆ. ದೊಡ್ಡ ಪ್ರಜಾ ಪ್ರಭುತ್ವದ ದೇಶಗಳಲ್ಲು ಸಹ. ಅದನ್ನು ಹಿತ ಮಿತವಾಗಿಡುವಲ್ಲಿ ಎಲ್ಲೆಡೆಯ ರಾಜಕೀಯ ಹೋರಾಟಗಳು ಸಮತೋಲನ ಸಾಧಿಸಬೇಕಷ್ಟೆ. ಎಡ-ಬಲಗಳ ತಿಕ್ಕಾಟ ಅಗತ್ಯವಿಲ್ಲದ ಸ್ವಾರ್ಥದ ರಾಜಕೀಯ ಮಾತ್ರ. ದೇಶ ಭಕ್ತಿಯೆನ್ನುವುದು ಎಡ-ಬಲಗಳ ರಾಜಕೀಯ ದಿಂದ ಹೊರತಾದ ವಿಚಾರ.

ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು?

ದೇವರನ್ನು ನಂಬುತ್ತೇನೆ. ನಾಸ್ತಿಕಳೇನಲ್ಲ. ಆದರೆ ಧರ್ಮದ ವಿಚಾರ ಬಂದಾಗ ಸಂಪ್ರದಾಯಸ್ಥಳಲ್ಲ. ಬೇರೆಲ್ಲ ಧರ್ಮಗಳನ್ನು ನಾನು ಗೌರವಿಸುತ್ತೇನೆ. ಆ ಬಗ್ಗೆ ನಾನು ಸಹಿಷ್ಣು. ದ್ವೇಷವನ್ನು ಬಿತ್ತುವ ನಂಜಿನ ಮಾತುಗಳು ನನಗೆ ಸಹ್ಯವಲ್ಲ.ನನಗೆ ಬೇಕಾದ ರೀತಿಯಲ್ಲಿ ಬದುಕುವ ಹಿಂದೂ ಆಗಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಅದರ ಭಾವ ವೈಶಾಲ್ಯತೆಯ ಬಗ್ಗೆ ಪ್ರೀತಿಯಿದೆ. ಶಾಂತಿಯುತವಾಗಿ ಬದುಕಬೇಕಿದ್ದಲ್ಲಿ ನಾವು ಇತರರ ಬಗ್ಗೆ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ.ಹಾಗೆ ಹಿಂದೂ ಧರ್ಮಕ್ಕೆ ’ಅಸಹಿಷ್ಣು’ ಎನ್ನುವ ಹಣೆ ಪಟ್ಟಿಯನ್ನು ಅಂಟಿಸುವ ಕೆಲಸ ನಡೆಯದಿರಲಿ.ಅವರವರ ಧರ್ಮ ಅವರವರಿಗೆ ದೊಡ್ಡದು. ಇನ್ನೊಂದು ಧರ್ಮವನ್ನು ಗೌರವಿಸದ ಎಲ್ಲರೂ ತಪ್ಪಿತಸ್ಥರೇ.

  • ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ?

ಇದು ಜಾಗತಿಕ ಯುಗ. ತೊರೆ-ಹಳ್ಳಗಳು ಹರಿದು ನದಿಯಾಗಿರುವ ಕಾಲ. ಅದರಲ್ಲಿ ರಾಜಕೀಯದ , ಸ್ವಾರ್ಥದ ಕಶ್ಮಲಗಳನ್ನು ಸೇರಿಸದಿದ್ದಲ್ಲಿ ಅದು ಹಲವು ಜೀವಗಳನ್ನು, ಸೃಜನಶೀಲತೆಯನ್ನು ಸಮೃದ್ಧವಾಗಿ ಬೆಳೆಸಬಲ್ಲದು. ಸಾಂಸ್ಕೃತಿಕ ಅರಿವು-ಆಳಗಳು ಹಿಗ್ಗಿಸಬಲ್ಲವು.
ಪ್ರಸ್ತುತ ಸಾಂಸ್ಕೃತಿಕ ವಾತಾವರಣದಲ್ಲಿ ಫೇವರಟಿಸಂ, ಜಾತೀಯತೆ, ಧಾರ್ಮಿಕತೆ, ಎಡ-ಬಲ, ವಶೀಲಿ ಎಲ್ಲವೂ ಇವೆ. ಅದು ತಿಳಿಗೊಳ್ಳಬೇಕು. ಹೃದಯ ವೈಶಾಲ್ಯತೆ ಹೆಚ್ಚಾಗಬೇಕು.ಇವೆಲ್ಲ ಮೊದಲಿಂದಲೂ ಇದ್ದವಾದರೂ ಈಗೀಗ ’ಅತಿ ’ ಎನ್ನುವ ಮಟ್ಟಕ್ಕೆ ಬೆಳೆಯುತ್ತಿದೆ. ಒಳ್ಳೆಯ ವಿಚಾರ ಎಂದರೆ ಇವೆಲ್ಲದರಿಂದ ದೂರವಿರುವ, ಮುಕ್ತರಾಗಿರುವ ಜನರೂ ಇರುವುದು.

  • ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?

ಮೇಲಿನ ಮಾತೇ ಅನ್ವಯವಾಗುತ್ತದೆ. ಅದರಲ್ಲೂ ಹೊಸತಿನ ನಿರೀಕ್ಷೆಯಲ್ಲಿ ಸದಾ ತುಡಿಯುವ ಕನ್ನಡ ಸಾಹಿತ್ಯಕ್ಕೆ ದಡ ಕಟ್ಟಬಾರದು. ತಮಗೆ ತಿಳಿದ, ತಮ್ಮೂರಿನ, ತಮ್ಮ ಪ್ರಪಂಚದ ಬಗ್ಗೆ ಬರೆದದ್ದಷ್ಟೆ ಸಾಹಿತ್ಯ ಆಗಬಾರದು. ರಾಜಕೀಯ ಘೋಷಣೆಗಳು ಸಾಹಿತ್ಯಕ್ಕೆ ಅಗತ್ಯವಿಲ್ಲ. ಅರಿವೇ ಇಲ್ಲದೆ ಎಡ-ಬಲ ಎಂದು ಹಣೆಪಟ್ಟಿ ಹೊರುವ ಭಯದಲ್ಲಿ ಹಲವರು ವೈಚಾರಿಕ ಸಾಹಿತ್ಯರಚನೆಯನ್ನು ಮಾಡಲು ಹಿಂಜರಿಯಬೇಕಾದ ಕಾಲ ಘಟ್ಟವಿದು. ಇದು ನಿಜಕ್ಕೂ ವಿಶಾದನೀಯ.
ವಿಮರ್ಶಕನೊಬ್ಬ ’ನಮ್ಮೂರಿನ ಬರಹಗಾರ” ಎಂಬ ಮೊಳ ಹಿಡಿದು ಸಾಹಿತ್ಯವನ್ನು ಅಳೆವಾಗ ಅತ್ಯಂತ ಬೇಸರವಾಗುತ್ತದೆ. ಪ್ರಾಂತೀಯತೆಯ ಸೊಗಡು ಸುಂದರವಾದರೂ ಮುಖ್ಯವಾಹಿನಿಯಲ್ಲಿ ಸೇರಿದಾಗ ಬರಹಗಳನ್ನು ಅವುಗಳ ತಂತ್ರ, ಸರಾಗತೆ, ವೈಚಾರಿಕತೆ, ಭಿನ್ನತೆ, ಪ್ರಾಮಾಣಿಕತೆ, ಕುಶಲತೆ, ನವಿರು, ಸೂಕ್ಷ್ಮತೆ ಮತ್ತು ಹೊಸತನ ಇನ್ನೂ ಮುಂತಾದ ಅಳತೆಗೋಲಿನಿಂದ ಅಳೆಯುವುದು ಸಾಹಿತ್ಯದ ಬೆಳವಣಿಗೆಗೆ ಅಗತ್ಯವೆನಿಸುತ್ತದೆ.ನಿಜವಾದ ವಿಮರ್ಶಾ ಸಾಹಿತ್ಯವೂ ವಿರಮಿಸಿ ಕುಳಿತಿರುವ ಕಾಲವಿದು.

  • ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ?

ನಾನು ಅನಿವಾಸಿ ಭಾರತೀಯಳಾದ ಕಾರಣ, ಭಾರತದ ಚಲನೆಯನ್ನು ಅದರದ್ದೇ ಆದ ಚೌಕಟ್ಟಿನಿಂದ ಹೊರಗೆ ನಿಂತು ನೋಡಬಲ್ಲೆ.ಭಾತರ ಎಂತಹ ಅಗಾಧ ಮತ್ತು ಹೇಗೆ ಇತರೆ ದೇಶಗಳಿಗಿಂತ ಭಿನ್ನ ಎಂಬುದನ್ನು ಕಾಣಬಲ್ಲೆ.
ತನ್ನದೇ ಸುಳಿಗಳ ಸೆಳೆತಕ್ಕೆ ಸಿಲುಕಿ ಚಲಿಸುವ ದೇಶ ನಮ್ಮದು. ಅದರ ಶಕ್ತಿ ಅಗಾಧವಾದ್ದು. ಹಿಂದೂಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಏಕೈಕ ದೇಶವಾಗಿ ಭಾರತ ನೂರಾರು ಭಾಷೆ, ಸಂಸ್ಕೃತಿಗಳನ್ನು ಒಡಲಲ್ಲಿಟ್ಟುಕೊಂಡು ಸದಾ ಚೈತನ್ಯಮಯಿಯಾಗಿ ಮಿಡಿಯುವಂತದ್ದು. ಅಪಾರವಾದ ಜನಶಕ್ತಿಯನ್ನು ಪಡೆದ ಶಕ್ತಿಶಾಲಿ ದೇಶವಿದು. ಪ್ರತಿಭೆಗಂತೂ ಇಲ್ಲಿ ಕೊರತೆಯೇ ಇಲ್ಲ.
ಆದರೆ ವ್ಯವಸ್ಥೆಗಳು ಒಟ್ಟಾಗಿ ದುಡಿಯಲು ಹೆಣಗುತ್ತವೆ. ಅತಿಯಾದ ಧಾರ್ಮಿಕತೆ ನಮ್ಮ ದೇಶದ ಅತ್ಯಂತ ದೊಡ್ಡ ತೊಡಕಾಗಿದೆ. ಅದರಿಂದ ಹೊರತಾಗಿ ಜಗತ್ತನ್ನು ನೋಡಲು ಬಹಳ ಜನರು ಅಶಕ್ತರಾಗುತ್ತಾರೆ. ಕಾನೂನು, ಪೋಲೀಸರು ಮತ್ತು ಭದ್ರತೆ ಇವು ಜನಸಾಮಾನ್ಯರ ಪರವಾಗಿ ಕೆಲಸಮಾಡಬೇಕಾಗಿರುವ ಅತ್ಯಂತ ಮುಖ್ಯ ವಿಚಾರಗಳು. ಅವುಗಳನ್ನು ಭದ್ರಪಡಿಸುವ,ಎಲ್ಲರಿಗೂ ಸಮಾನ ಸವಲತ್ತನ್ನು ನೀಡಬಲ್ಲ ರಾಜಕಾರಣ ಅತ್ಯಂತ ಮುಖ್ಯ.
ಇಂತಹ ದೊಡ್ಡ ದೇಶ ಸಾಧ್ಯವಾದಷ್ಟು ಒಟ್ಟಾಗಿ ತುಡಿಯಬೇಕೆಂದರೆ ಒಗ್ಗಟ್ಟಿನ ಮಂತ್ರ ಪಠಣೆ ಅತ್ಯಂತ ಮುಖ್ಯ. ಒಡಕಿನ ಮಾತುಗಳು ಈ ದೇಶದ ಚಲನೆಗೆ ಮಾರಕ. ಕಾಲಚಕ್ರದ ಹೊಡೆತಕ್ಕೆ ಸಿಕ್ಕ ಭಾರತ ನಗರ ಪ್ರದೇಶಗಳಲ್ಲಿ ಬಹಳ ಬದಲಾಗುತ್ತ ನಡೆಯುತ್ತಿದೆ ಎನ್ನುವುದು ಕೂಡ ಸುಳ್ಳಲ್ಲ.

  • ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?

ಸಾಹಿತ್ಯ ನನ್ನ ಅಂದಂದಿನ ತೃಪ್ತಿ.ಇನ್ನೂ ಬರೆಯಬೇಕನ್ನುವ ಹಂಬಲವಿದೆ. ಅದಕ್ಕಿಂತ ಹೆಚ್ಚೇನು ಕನಸೇನಿಲ್ಲ.ಸವಾಲುಗಳಿಗೆ ತೆರೆದುಕೊಂಡು ಸೃಜನಶೀಲವಾದದ್ದೇನನ್ನೋ ರಚಿಸಬೇಕೆನ್ನುವ ತುಡಿತ ಇರುವವರೆಗೆ ಸಾಹಿತ್ಯ ರಚನೆ ನಡೆಯುತ್ತಿರುತ್ತದೆ.

ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ?

ನಾನು ಸಾಹಿತ್ಯವನ್ನು ಅಗಾಧವಾಗಿ ಓದಿಕೊಂಡವಳಲ್ಲ.ಸಾಹಿತ್ಯದ ವಿದ್ಯಾರ್ಥಿಯಲ್ಲ. ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ವಶೀಲಿಯಂತೂ ಇಲ್ಲವೇ ಇಲ್ಲ.
ನನ್ನ ದಾರಿಯಲ್ಲಿ ಸಿಕ್ಕಿಕೊಂಡ ಎಲ್ಲವನ್ನೂ ಓದುತ್ತಿರುತ್ತೇನೆ. ಎಲ್ಲ ವೈವಿಧ್ಯಗಳು ಹಿಡಿಸುತ್ತವೆ.ಹಾಗಾಗಿ ವ್ಯಕ್ತಿ ಆರಾಧನೆ ಮತ್ತು ಕಾಡುವ ಎನ್ನುವ ರೀತಿಯಲ್ಲಿ ಕೇಂದ್ರೀಕರಿಸಿ ಯಾರನ್ನು ಹೆಸರಿಸಲಿಚ್ಛಿಸುವುದಿಲ್ಲ. ಉದಾಹರಣೆಗೆ ಶಿವರಾಮ ಕಾರಂತರ ಬರಹದ ವೈಚಾರಿಕ ಹರಿತ, ಲಂಕೇಶರ ಬರದಲ್ಲಿ ಸುಳಿವ ಚೂಪಾದ ಹೊಳಹುಗಳು, ಟಿ.ಕೆ.ರಾಮರಾವ್ ರ ನಿಗೂಢಗಳನ್ನು ಹೆಣೆವ ತಂತ್ರಗಳು, ಕಾಯ್ಕಿಣಿಯವರ ಕಥೆಗಳ ತೆರೆದ ಕೊನೆಗಳು, ವಸುಧೇಂದ್ರರ ಕಥೆಗಳ ಭಾವನಾತ್ಮಕ ನಿವೇದನೆಗಳು, ಸರಾಗತೆ…ಒಂದೆ ಎರಡೆ?-ಪಟ್ಟಿಯನ್ನು ಬೆಳೆಸುತ್ತಲೆ ಇರಬಹುದು.

  • ಈಚೆಗೆ ಓದಿದ ಕೃತಿಗಳಾವವು?

ವಿಜಯಮ್ಮನ ’ಕುದಿ ಎಸರು ’, ಜಯಂತ ಕಾಯ್ಕಿಣಿಯವರ ’ಸಮಗ್ರ ಕಥೆಗಳು’, ಲಂಕೇಶರ ಕುರಿತಾಗಿ ನಾಗರಾಜ್ ಹುಳಿಯಾರು ಬರೆದ ’ಇಂತಿ ನಮಸ್ಕಾರಗಳು’, ’ಲಂಕೇಶರ ಸಮಗ್ರ ಕವಿತೆಗಳು, ಕಾರಂತರ ’ಔದಾರ್ಯದ ಉರುಳಲ್ಲಿ’ ವಸುಧೇಂದ್ರರ ’ವಿಶಮ ಭಿನ್ನ ರಾಶಿ’, ಗಿರೀಶ್ ಕಾರ್ನಾಡರ ’ತುಘಲಕ್ ’, ’ಟಿಪ್ಪೂ ಕಂಡ ಕನಸುಗಳು ’, ಮತ್ತೂ ಹಲವರ ಹತ್ತಾರು ಪುಸ್ತಕಗಳು.

  • ನಿಮಗೆ ಇಷ್ಟವಾದ ಕೆಲಸ ಯಾವುದು?

ನನ್ನ ದಂತ ವೈದ್ಯ ವೃತ್ತಿ. ಬರೆಯುವುದು, ನನ್ನ ಮಕ್ಕಳೊಡನೆ ಸಂವಾದ, ಹರಟೆ, ನಗು, ಓದುವುದು.

  • ನಿಮಗೆ ಇಷ್ಟವಾದ ಸ್ಥಳ ಯಾವುದು?

ಈಜಿಪ್ಟ್ ಎನ್ನಬಲ್ಲೆ. ಮೈ ನವಿರೇಳುವ ಜಾಗವದು. ಕರ್ನಾಟಕದಲ್ಲಾದರೆ ಪಶ್ಚಿಮ ಘಟ್ಟಗಳು.

  • ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು?

ನಾನು ಬಹಳ ಕಡಿಮೆ ಸಿನಿಮಾ ನೋಡುತ್ತೇನೆ. ನೋಡುವಾಗ ಭಾಷೆಗಳ ಹಂಗಿಲ್ಲದೆ ಸ್ವೀಡಿಶ್, ಸೌತ್ ಕೊರಿಯನ್, ಜಪಾನೀಸ್, ಲೆಬನೀಸ್ ಎಲ್ಲವನ್ನು ಇಂಗ್ಲಿಷ್ ಸಬ್ ಟೈಟಲ್ಸ್ ಓದಿಕೊಂಡು ನೋಡುತ್ತೇನೆ. ಕಲಾತ್ಮಕ ಚಿತ್ರಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಒಂದರ ಹೆಸರು ಹೇಳುವುದು ಕಷ್ಟ.

  • ನೀವು ಮರೆಯಲಾರದ‌ ಘಟನೆ‌ ಯಾವುದು?

ಅಂಥವೇನೂ ನನಗೆ ನೆನಪಿಲ್ಲ- ಎನ್ನುತ್ತೇನೆ!

ನಿಮ್ಮ ಕವಿತೆ / ಕತೆಗಳಲ್ಲಿ ಪಾತ್ರ ಹಾಗೂ ವಸ್ತು ನಿರ್ವಹಣೆಯಲ್ಲಿ ಪ್ರಜ್ಞಾಪೂರ್ವಕ ನಿರೂಪಣೆ ಇದೆಯಾ?

ಕವಿತೆಗಳಿಗೆ ಕೊಟ್ಟಷ್ಟು ಸ್ವಾತಂತ್ರ್ಯವನ್ನು ಕಥೆಗಳಲ್ಲಿ ಕೊಟ್ಟುಕೊಂಡಿಲ್ಲ ಎನ್ನಿಸುತ್ತದೆ. ಅಲ್ಲಿ ಪ್ರಜ್ಞಾಪೂರ್ವಕ ನಿರ್ವಹಣೆ ಹಲವೆಡೆ ಇಣುಕಿದೆಯೆನ್ನಬಹುದು. ಪಾತ್ರ ಮತ್ತು ವಸ್ತು ಎರಡನ್ನು ಮತ್ತಷ್ಟು ಬಿಡುಗಡೆಗೊಳಿಸಿ ಯಾವ ಪ್ರಜ್ಞಾಪೂರ್ವಕ ನಿರ್ವಹಣೆಗೂ ಒಳಪಡಿಸದೆ ಮನಸಾ ಇಚ್ಛೆ ಅವು ನಡೆಸಿದಂತೆ ಕಟ್ಟಿಕೊಡುವ ತಲ್ಲೀನತೆ ನನಗಿನ್ನೂ ದೊರಕಿಲ್ಲವೆನಿಸುತ್ತದೆ.ಹಾಗಂತ ಪ್ರಜ್ಞಾಪೂರ್ವಕ ಬರವಣಿಗೆ ಒಳ್ಳೆಯದಲ್ಲವಂತ ಹೇಳುತ್ತಿಲ್ಲ. ಆ ಬಾಧ್ಯತೆಯೂ ಬರಹಗಾರರ ಮೇಲಿರುತ್ತದೆ.ಆದರೆ ಇಲ್ಲದಂತವು ಪ್ರಕಟಣೆಯ ಅವಕಾಶವನ್ನರಸದೆ ನನ್ನ ಮನಸ್ಸಿಗೆ ಅತ್ಯಂತ ತೃಪ್ತಿ ನೀಡಿದರೆ ಅಷ್ಟೇ ಸಾಕು. ಬಹುಶಃ ಆ ನಿಟ್ಟಿನ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದು ಪ್ರತಿ ಬರಹಗಾರರ ಅಗತ್ಯ ಅಂದುಕೊಳ್ಳುತ್ತೇನೆ.

ಕನ್ನಡ ವಿಮರ್ಶಾ ಲೋಕ ನಿಮ್ಮ ಕತೆಗಳನ್ನು ಗಮನಿಸಿದೆಯಾ?

ನಾನು ಖಂಡಿತ ಅಷ್ಟೊಂದು ದೊಡ್ಡ ಕಥೆಗಾರ್ತಿಯಲ್ಲ. ಕಥೆಗಳನ್ನು ಓದುಗರು, ಸಂಪಾದಕರು ಮತ್ತು ಕೆಲವೊಮ್ಮೆ ತೀರ್ಪುಗಾರರು ಮೆಚ್ಚಿದಾಗ ಖುಷಿಯೆನಿಸಿದೆ.

ಮಹಿಳಾ ಬರಹಗಾರ್ತಿಯಾಗಿ ನೀವು ಎದುರಿಸಿದ ಸವಾಲು ,ಸಮಸ್ಯೆಗಳೇನು?

ಸಮಯದ ಸಮಸ್ಯೆ ಪ್ರತಿ ತಾಯಿ ಮತ್ತು ಗೃಹಿಣಿಯರು ಎದುರಿಸುವಂಥದ್ದು. ಅದನ್ನು ಹೊರತು ಪಡಿಸಿ ಸ್ವತಃ ನಾನು ಮಹಿಳೆಯಾದ ಕಾರಣ ಯಾವ ಸಮಸ್ಯೆಗಳೂ ಎದುರಾಗಿಲ್ಲ ಆದರೆ ಸುತ್ತಲಿನ ಜನರು ಗಂಡಸರು ಬರೆವ ವೈಚಾರಿಕ ಕಥೆಗಳನ್ನು ಹೆಂಗಸರು ಬರೆವ ಭಾವನಾತ್ಮಕ ಕಥೆಗಳನ್ನು ಮಾತ್ರ ಮೆಚ್ಚುವಾಗ ಅಲ್ಲಿ ತಾರತಮ್ಯವಿದೆ ಎನ್ನುವ ಅರಿವಾಗತ್ತದೆ. ಇದು ಮಹಿಳೆಯರಿಂದ ಮಹಿಳೆಯರಿಗೂ ಆಗುವಂತದ್ದು.

ಸಾಹಿತ್ಯಲೋಕದಲ್ಲಿ ಮಹಿಳಾ ಬರಹಗಾರ್ತಿಯಾಗಿ, ಲಿಂಗ ಅಸಮಾನತೆಯನ್ನು ನೀವು ಎಂದಾದರೂ ಎದುರಿಸಿದ್ದೀರಾ?

ಖಂಡಿತ. ಈ ತಾರತಮ್ಯ ಅತ್ಯಂತ ಆಳವಾದ್ದು. ಗಣ್ಯರು, ಪದವೀಧರರು, ಸೆಲೆಬ್ರಿಟಿಗಳು, ಪ್ರಭುದ್ಧರು ಎಂದರೂ ಅವರ ಮನದ ಆಳದಲ್ಲೆಲ್ಲೋ ಈ ತಾರತಮ್ಯ ಆಳವಾಗಿ ಬೇರುಬಿಟ್ಟಿದೆಯೆಂಬುದನ್ನು ಗಮನದಲ್ಲಿಟ್ಟುಕೊಂಡೆ ಬರೆವವಳು ನಾನು. ಇಡೀ ಸಮಾಜವೇ ಹಾಗಿದೆ.ಮೇಲೆ ಹಾಡಿ ಹೊಗಳಿದರು, ಒಳಗೊಳಗೆ ಪುರುಷರನ್ನೇ ಗೌರವಿಸುವುದು, ವೈಚಾರಿಕವಾಗಿ ಮಾತಾಡಬಲ್ಲ ಹೆಂಗಸರನ್ನು ವ್ಯಂಗ್ಯ ಧೋರಣೆಗಳಿಂದ ನೋಡುವುದು ಅತ್ಯಂತ ಖಚಿತವಾಗಿ ವೇದ್ಯವಾಗುವ ವಿಚಾರ. ಇನ್ನು ಪದವಿ , ಪುರಸ್ಕಾರಗಳ ವಿಚಾರ ಬಂದರಂತು ಅವರ ಏಕಸಾಮ್ಯತೆಗೆ ಹೊಡೆತ ಬಿದ್ದಂತೆ ಆಡುವುದು ಸುಳ್ಳಲ್ಲ.ಹೆಂಗಸರ ವಿಚಾರಕ್ಕೆ ಹೆಂಗೆಳೆಯರ ಪೂರ್ವಾಗ್ರಹಗಳು ಕೂಡ ದೊಡ್ಡ ತಡೆಗೋಡೆಗಳಾಗಿವೆ.
ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿಗೆ ೧೦೪ ವರ್ಷಗಳಾದರೂ ಮಹಿಳಾ ಅಧ್ಯಕ್ಷರಿಲ್ಲ ಎನ್ನುವುದು ಎಂತಹ ಸೋಜಿಗವಲ್ಲವೇ?

ಎಡ , ಬಲಪಂಥೀಯ ತಿಕ್ಕಾಟದ ಗುಂಪುಗಳ ಬಗ್ಗೆ ನಿಮ್ಮ ಅನಿಸಿಕೆ ಏನು?

ಇತ್ತೀಚೆಗಿನವರೆಗೆ ಸರಿ ಮತ್ತು ತಪ್ಪುಗಳಷ್ಟೆ ನನಗೆ ತಿಳಿದದ್ದು. ಎಡ-ಬಲಗಳ ತಿಕ್ಕಾಟ ಇತ್ತೀಚೆಗೆ ಅತಿಯಾಗಿದೆ. ಈ ಬಗ್ಗೆ ಇರುವ ಚಾರಿತ್ರಿಕ ವಿಚಾರಗಳ ಬಗ್ಗೆಯೂ ಇತ್ತೀಚೆಗೆ ತಿಳಿಯುತ್ತ ಹೋಯಿತು. ಹಳೆಯ ಭೂತಗಳನ್ನು ಎಬ್ಬಿಸಿ ನಮ್ಮ ಮುನ್ನೆಡೆಯನ್ನೇ ಅಡ್ಡಿಪಡಿಸಿಕೊಳ್ಳುವ ಅಜಾಗರೂಕತೆ ನಡೆಯದಿರಲಿ. ಇಡೀ ಪ್ರಪಂಚವನ್ನು ಒಮ್ಮೆ ಆಳಿದ್ದ ’ ಸೂರ್ಯ ಮುಳುಗದ ಸಾಮ್ರಜ್ಯ’ ಹೊಂದಿದ್ದ ಬ್ರಿಟಿಷರು ಕೂಡ ’ಭೂತ’ ವನ್ನು ಮರೆತು ಪ್ರಸ್ತುತಕ್ಕೆ ಹೊಂದಿಕೊಂಡಿದ್ದಾರೆ. ಅದು ಅನಿವಾರ್ಯ. ಆಗಷ್ಟೆ ಮುಂದಿನ ದಾರಿ ಕಾಣಿಸುವುದು.
ವೈಚಾರಿಕವಾಗಿ ಸಮರ್ಥಿಸಿಕೊಳ್ಳಬಲ್ಲ, ಇನ್ನೊಬ್ಬರಿಗೆ ಹಾನಿಮಾಡದ, ಅವಮಾನಿಸದ, ಮಾನವೀಯ ತತ್ವಗಳಲ್ಲಷ್ಟೆ ನನ್ನ ನಂಬುಗೆ.ಎಡ-ಬಲಗಳಲ್ಲಲ್ಲ. ಎಡವಾಗಲಿ, ಬಲವಾಗಲಿ ತಪ್ಪು ತಪ್ಪೇ ಮತ್ತು ಸರಿ ಸರಿಯೇ ಎನ್ನುವ ಇರಾದೆ ನನ್ನದು.

ಇನ್ನು ಕೆಲ ಹೇಳಲೇ‌ ಬೇಕಾದ ಸಂಗತಿಗಳಿದ್ದರೂ ಹೇಳಿ….

ಈ ಅವಕಾಶವನ್ನು ನೀಡಿ ನನ್ನ ಅನಿಸಿಕೆಗಳನ್ನು ಹೊರಹಾಕಲು ಅವಕಾಶವನ್ನು ಕೊಟ್ಟದ್ದಕ್ಕೆ ನಿಮಗೂ, ಸಂಗಾತಿಗೂ ನನ್ನ ಧನ್ಯವಾದಗಳು. ಈ ಅವಕಾಶವನ್ನು ನನ್ನ ಬರವಣಿಗೆಗೆ ಸಿಕ್ಕ ಉತ್ತೇಜನ ಎಂದುಕೊಳ್ಳುತ್ತೇನೆ.

***************************************************************

ನಾಗರಾಜ ಹರಪನಹಳ್ಳಿ

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

8 thoughts on “

  1. ಅನಿವಾಸಿ ಕನ್ನಡ ಬರಹಗಾರ್ತಿ ಯಾದ ನನ್ನನ್ನು ಗುರುತಿಸಿ ಈ ಸಂದರ್ಶನದ ಅವಕಾಶವನ್ನು ನೀಡಿದೆ ಸಂಗಾತಿ ಮತ್ತು ನಾಗರಾಜ್ ಹರಪನ ಹಳ್ಳಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

  2. ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಪ್ರೇಮ್..
    ಅಭಿನಂದನೆ.

  3. ನಿಮ್ಮ ಅಭಿಪ್ರಾಯಗಳನ್ನು ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಓದಿ ಸಂತೋಷವಾಯಿತು.

  4. Excellent interview. Searching questions, you have batted well and steadily, Premalata avare! ( There is no sexism here!). Game set and match, to add a mixed metaphor!

Leave a Reply

Back To Top