ಕವಿತೆ
ಕತ್ತಲೆ,ಬೆಳಕಿನೊಂದಿಗೆ
ಅಬ್ಳಿ,ಹೆಗಡೆ

‘ಕತ್ತಲಿಂದ ಬೆಳಕಿನೆಡೆಗೆ……
ಬೆಳಕ ಬೆಂಬತ್ತಿ ಜೀವ ನಡಿಗೆ…
ಅಜಾ಼ನದ ಕತ್ತಲೋಡಿಸಲು
ಜಾ಼ನದ ಬೆಳಕ ‘ಬಡಿಗೆ’….
ಎಂಬಿತ್ಯಾದಿ ಬೆಳಕ ಕುರಿತು ಅನೇಕ
ಸ್ಲೋಗನ್ನುಗಳೊಟ್ಟಿಗೆ ಬೆಳೆದು
ಬೆರೆದು ತಂತಾನೇ ಬೆಳಕಿಷ್ಟವಾಗಿ
ಕತ್ತಲೊಳಗಿಂದ ಹೊರಗೆ
ಬಯಲಿಗೆ ಬಂದರೆ…….
ಕಣ್ಣ ಕೋರೈಸುವ ಪ್ರಖರ ಮಧ್ಯಾಹ್ನ.
ಕಲ್ಲು,ಮುಳ್ಳು,ಕೊರಕಲು,ಪ್ರಪಾತ
ಕಸ,ಕಡ್ಡಿ ಬಯಲಿನೆಲ್ಲ ಅಪಸವ್ಯಗಳು
ಬಟಾಬಯಲು ‘ರಫ್’ ನೆ ಕಣ್ಣಿಗೆ
ರಾಚಿದಂತಾಗಿ ಕತ್ತಲೆಯೇ ಸಹ್ಯವೆನಿಸಿ
ಅಸಹ್ಯ ಹೊರಬೆಳಕಿಂದ ಒಳಸರಿದು
ಎಂದೋ,,ಯಾರೋ ಅಥವಾ ನಾನೋ
ಹಚ್ಚಿಟ್ಟ ಮಿಣುಕು ಹಣತೆಯನ್ನೂ
ಆರಿಸುವ ಬಯಕೆ.
ಒಳಕತ್ತಲ ದಾಸ್ತಾನು ಕೋಣೆಯ
ಬೀಗ ತೆರೆದು ಒಂದಿಷ್ಟು ಕತ್ತಲ ಬೀಜ
ಬಾಚಿಕೊಂಡು ಹೊರಬಂದು
ಬೆಳಕ ಬಯಲಲ್ಲಿ ಬಿತ್ತಿ ಬೆಳೆವಾಸೆ
ಬಂದ ಫಸಲ,ಬೆಳಕಿನೊಂದಿಗೆ
ಹದವಾಗಿ ಬೆರೆಸಿ ಸಂಜೆ ಮುಂಜಾವುಗಳ
ಮಂದ ಬೆಳಕಲ್ಲಿ ಬಯಲಿನಂದವ
ಆಸ್ವಾದಿಸುವಾಸೆ ಇತ್ತೀಚೆಗೆ ಯಾಕೋ…
ಒಳ ಗೋಡೌನಿನಲಿ ಹೆಚ್ಚೆಚ್ಚು ಕತ್ತಲ
ದಾಸ್ತಾನು ಮಾಡುವಾಸೆ….
ದಿನ ಬಳಕೆಗೆ.
*****************************
ಕತ್ತಲೂ,ಒಂದುರೀತಿಯ ಬೆಳಕೇ!
ಜಗವೆಲ್ಲ ಮಲಗಿರಲು..ಏಳುವುದಕೇ.