ಸಂಕ್ರಾಂತಿ ಕಾವ್ಯ ಸುಗ್ಗಿ
ನದಿ
ನಾಗರಾಜ್ ಹರಪನಹಳ್ಳಿ
ನದಿ ಕುಲು ಕುಲು ನಕ್ಕಿತು
ಅವಳು ಜೊತೆ ಇದ್ದಾಗ
ನದಿ ಉಸಿರೆಳೆಯಿತು
ಅವಳು ಕಿವಿಯಲ್ಲಿ ಉಸುರಿದಾಗ
ನದಿ ಮಾತಾಡಿತು
ಅವಳು ನನ್ನ ಭುಜಕ್ಕೆ ಭುಜ ತಾಗಿಸಿ ಕುಳಿತಾಗ
ನದಿ ವೈಯಾರದಿ ಬಳುಕಿತು
ಅವಳು ಹೊಸ ಸೀರೆಯುಟ್ಟು
ನನ್ನೆದುರು ಬಂದಾಗ
ನದಿ ಕಣ್ಣೀರಾಯಿತು
ಅವಳು ವಿರಹದಿ ಬೆಂದಾಗ
ನದಿ ಮಗ್ಗಲು ಬದಲಿಸಿತು
ಅವಳು ದೂರವಿದ್ದಾಗ
ನದಿ ನಿಟ್ಟುಸಿರಾಯಿತು
ಅವಳು ನಾಳೆಗಳಿವೆ ಬರುವೆ
ಎಂದಾಗ
ನದಿ ಮೌನವಾಯಿತು
ಅವಳು ಮಾತೇ ಆಡದೆ ಹೋದಾಗ
ನದಿ ನಿದ್ದೆ ಹೋಯಿತು
ಅವಳೂ ನಿದ್ದೆಹೋದಾಗ
ನದಿ ಬೆಳಕಾಯಿತು
ಅವಳು ಮರಳಿ ಬಂದಾಗ