ಸಂಕ್ರಾಂತಿ ಕಾವ್ಯ ಸುಗ್ಗಿ
ಗೂಸಬಮ್ಸ ನಿರೀಕ್ಷೆಯಲ್ಲಿ
ನಾಗರೇಖಾ ಗಾಂವಕರ್
ಕಡಲ ತಡಿಯಲ್ಲಿ ನಿಂತು
ವಿರುದ್ಧ ಮುಖವಾಗಿ
ಚಿತ್ತೈಸಿದರೆ ಎಂಥ ಸಹಜತೆ
ಲ್ಯಾಂಡಸ್ಕೇಪ್ ಮಾಡಿದ
ಮಹಾನ್ ತೋಟಗಾರನೊಬ್ಬ
ಅಂಚಂಚನ್ನು ಬಿಡದೆ
ಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.
ನೋಡುತ್ತ ಮೈಮೇಲೆ
ಗೂಸಬಮ್ಸಗಾಗಿ ಕಾದೆ.
ಗಗನ ಚುಂಬಿ ಕಟ್ಟಡದ
ಏರುವ ಇಳಿಯುವ
ಎಸ್ಕಲೇಟರಗಳ ಮೇಲೆ
ಕಿರು ಸೊಂಟದ
ಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನು
ಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರ
ಜೀವ ಹೊತ್ತ ಗಜಗಾಮಿನಿಯರನ್ನು
ಕಂಡು ಅರೆರೆ.. ಎಂದುಕೊಳ್ಳುತ್ತ
ಮೈ ರೋಮ ನಿಮಿರಿತೇ?
ಕಾಣದೇ ವ್ಯಗ್ರಗೊಂಡೆ.
ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿ
ಸೂಟುಬೂಟು ಹಾಕಿದ
ಮಿಂಚು ಕಂಗಳ
ಸುಂದರಾಂಗರ ಕಣ್ಣಿನ ಸಂಚಲನೆಗೆ
ಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದ
ಸೆಳೆತಕ್ಕೆ ಮನಸ್ಸು ಜೋಲಿ ಹೊಡೆದು
ಕೈ ನೋಡಿದರೆ
ರೋಮಾಂಚನ ವ್ಯಾಕ್ಸಾಯನ.
ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾ
ನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾ
ನನ್ನಪ್ಪನ ಮೈಮೇಲಿನ ಕರಿಕಪ್ಪುರೋಮ
ನಿಮಿರಕೊಳ್ಳುತ್ತ ಅದ ನೋಡುತ್ತ
ಎದೆಯಲ್ಲಾಡುವ ಅಂಜಿಕೆಯ ಕಪ್ಪೆ
ನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದು
ಬರುವ ನನಗೆ ಪ್ರತಿವರ್ಷವೂ
ಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ.
ಸಂಜೆ ಗೋಧೂಳಿ ಹೊತ್ತು
ಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳು
ಬಾಲನೆಗರಿಸಿ ಓಡುತ್ತ ಬರುವ
ಕರುಗಳ ಕಂಡು
ಕುಂಡೇ ಹರಿದ ಚಡ್ಡಿಯಲ್ಲಿಯೇ
ರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳುತ್ತಿದ್ದ ನೆನೆಪು
ಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದ
ಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾ
ಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದ ನೆನೆಪು.
ಇಲ್ಲಿ ಪಟ್ಟಣಗಳಲ್ಲಿ
ಸಂಜೆಯಾಗುತ್ತದೆ ಅಷ್ಟೇ
ರೋಮ ಸೆಟೆದುಕೊಳ್ಳುವುದಿಲ್ಲ.
ಆದರೂ ಹೂವಿನ ದಳಗಳ ಮುಗುಳು
ಮೈಸೋಕಿಸಿಕೊಂಡು ತಟ್ಟನೆ ಏಳುವ
ಮೈರೋಮಕ್ಕಾಗಿ
ಕೃತಕ
ಕಾತರಿಸುತ್ತಲೇ ಇದ್ದೇನೆ.