ಗಜಲ್
ಸಿದ್ಧರಾಮ ಹೊನ್ಕಲ್
ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ
ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ
ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ
ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ
ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ
ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ
ಫಲ ಪುಷ್ಪ ಹೂ ಬಿಡುವ ಹಸಿರು ಮರವು ಸಹ ಕಂಬನಿಗೆ ಕಾರಣವಾಗುತ್ತದೆ ಸಾಕಿ
ಅಮಾಯಕರಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರೀಕ್ಷೆಗೊಡ್ಡುತ್ತದೆ ಸಾಕಿ
“ಹೊನ್ನಸಿರಿ” ಅಕ್ಕ-ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ
ಬಯಕೆಗಳ ನುಂಗಿ ಬರೀದೇ ಬಾನಂಗಳದಲಿ ಚುಕ್ಕಿ ನೋಡುತ್ತಾ ಜಟಕಾಬಂಡಿಯಾಗುವದು ಕಡುಕಷ್ಟವಾಗುತ್ತದೆ ಸಾಕಿ.
ಕಿರುಪರಿವಯ:
ಪ್ರಕಟಿತ ಕೃತಿಗಳು- ಒಟ್ಟು 40 ಕೃತಿಗಳು.ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-1996.ಪಂಚನದಿಗಳ ನಾಡಿನಲ್ಲಿ ಪ್ರವಾಸ ಕೃತಿಗೆ.ಗುಲ್ಬರ್ಗಾ ವಿವಿ ಚಿನ್ನದ ಪದಕ ಕಥೆಗಳಿಗೆ-1991,ರಾಜ್ಯೋತ್ಸವ ಪುರಸ್ಕಾರ,ಗುಲ್ಬರ್ಗ ವಿವಿ—2002 ಮತ್ತು 2006, ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಕೃತಿ.
ನೆಲದ ಮರೆಯ ನಿಧಾನ ಕಥಾ ಸಂಕಲನಕ್ಕೆ
ಸಂಕ್ರಮಣ ಸಾಹಿತ್ಯ ಪುರಸ್ಕಾರ-ಕಾವ್ಯ ಹಾಗೂ ಲಲಿತ ಪ್ರಬಂಧಕ್ಕೆ
ಶ್ರೀ ವಿಜಯ ಪುರಸ್ಕಾರ, ಅತ್ತಿಮಬ್ಬೆ ಪುರಸ್ಕಾರ-ಗಾಂಧೀಯ ನಾಡಿನಲ್ಲಿ ಪ್ರವಾಸ ಕೃತಿಗೆ.ಹೀಗೆ ಅನೇಕ ಪುರಸ್ಕಾರ.