ಕಾವ್ಯಯಾನ
ನಾಲ್ಕು ದಿನದ ಪಯಣ
ತೇಜಾವತಿ ಹೆಚ್.ಡಿ.
ಪ್ರವಾಹವೋ ಬಿರುಗಾಳಿಯೋ
ಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪ
ಬಂದೆರಗಲೇಬೇಕು
ನವನೆಲೆ ರೂಪಾಂತರವಾಗಲು
ಹೊಸ ಅಲೆ ಪ್ರಸಾರವಾಗಲು…
ಬೇಕಾದದ್ದು ಬೇಡವಾಗಿ
ಬೇಡವಾದದ್ದು ಬೇಕಾಗಿ
ಕಸ ರಸವಾಗಿ, ರಸ ಕಸವಾಗಿ
ಎಲ್ಲವೂ ತಲೆಕೆಳಾಗಾಗುವ
ವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…
ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ..
ನಿನ್ನನುಗ್ರಹವಿದ್ದರೆ
ಹೂವಿನ ಮೇಲಿನ ನಡಿಗೆ
ಇಲ್ಲದಿದ್ದರೆ..
ಕತ್ತಿಯ ಮೇಲಿನ ನಡಿಗೆ
ಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆ
ತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು..
ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?
ಈ ಕ್ಷಣಿಕದ ಗೊಂಬೆಗಳು..!
ದಾನ ಮಾಡಿದ ಕರಗಳು ಬೇಡುವುದೆಂದರೇನು..
ತನ್ನಸ್ತಿತ್ವವ ಪರರ ವಶದಲ್ಲಿಟ್ಟು
ನಶ್ವರದ ಬಾಳು ಬದುಕುವುದೆಂದರೇನು..
ನೂರೊಂದು ಮನೆಗಳ ಬೆಳಗಾಗಿದ್ದ ಬೆಳಕು
ಕತ್ತಲಕೋಣೆಯಲ್ಲಿ ಕೊಳೆಯುವುದೆಂದರೇನು…
ದೃಷ್ಟಿ ಕಳೆದುಕೊಂಡ ನಯನಗಳು
ಎಲ್ಲಿದ್ದರೇನು… ಎಂತಿದ್ದರೇನು?
ಭೂಮಿ ತಿರುಗುವುದು
ಕಾಲ ಉರುಳುವುದು
ಕಾಡು ನಾಡಾಗಿ, ನಾಡು ಕಾಡಾಗಿ
ನೆಲ ನೀರಾಗಿ, ನೀರು ನೆಲವಾಗಿ
ದೇಹ ಮಣ್ಣಾಗಿ, ಜೀವ ಹಾರಿಹೋಗಿ ಆತ್ಮ ಅಮರವಾಗುವುದು….
ಇದಿಷ್ಟೇ ತಾನೇ…
ನಾಲ್ಕು ದಿನದ ಪಯಣ..
ಇದಿಷ್ಟೇ ತಾನೇ..
ಮುಕ್ತಗುಟ್ಟು…
**************************
ಕಾಲ ಬದಲಾಗುತ್ತ ಮನುಷ್ಯನ ವಿಧಿ ಕೂಡ ಬದಲಾಗುವ ಸತ್ಯವನ್ನು ಕವಿತೆಯಲ್ಲಿ ತುಂಬಾ ಚೆನ್ನಾಗಿ ಹಿಡಿದಿಟ್ಟು ಪ್ರಸ್ತುತ ಪಡಿಸಿದ್ದೀರಿ.ಇಂದು ಭಾರಿ ಭೋಜನ ಮಾಡುಷ ಮುಂದೆ ತುತ್ತು ಅನ್ನಕ್ಕೆ ಒದ್ದಾಡುವಂತಾಗಬಹುದು .ಅರಮನೆಯಲ್ಲಿರುಷನಿಗೆ ಗುಡಿಸಲ್ಸೇ ಗತಿಯಾಗಬಹುಗು