ಅಂಕಣ ಬರಹ

ಕಬ್ಬಿಗರ ಅಬ್ಬಿ

ಮಗುವಿನ ಪರಿಮಳ

Mums of the world: The traditional Indian baby bath and massage -

ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ. 

ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ ಅಗಲಿಸಿ ಗಟ ಗಟ ನಗುತ್ತೆ. ಪುಟ್ಟ ಕೈಗಳನ್ನು ಚಪ್ಪಾಳೆ ಹೊಡೆಯುವಂತೆ ಅಲುಗಾಡಿಸುತ್ತೆ!.

ಹೌದು!! ಮಗುವಿಗೆ ಅನೂಹ್ಯ ಪರಿಮಳವಿದೆ.‌ ಆ ಪರಿಮಳ ಮುಗ್ಧ ಪರಿಮಳ. ಕಲಬೆರಕೆಯಾಗದ ಪರಿಮಳ. ಈ ಲೋಕದ್ದೇ ಅಲ್ಲವೋ ಎನ್ನುವ ಪ್ರೀತಿಯ ಪರಿಮಳ.

ಮಗು ಬೆಳೆಯುತ್ತಾ ಹೋದಂತೆ, ಆ ಪರಿಮಳ ಮರೆಯಾಗಿ, ಕಲೆಯುತ್ತಾ, ಕಲಿಯುತ್ತಾ ಹೋದಂತೆ,  ಸಮಾಜದ ‘ವಾಸನೆ’ ದೇಹಕ್ಕಂಟುತ್ತೆ. 

ಮಗುವಿನ ಪರಿಮಳವನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?. ಆರು ದಶಕಗಳ ಬದುಕಿನ ದಾರಿಯಲ್ಲಿ ಇಷ್ಟೊಂದು ಗಂಧಗಳು ಮೈ ಮನಸ್ಸಿಗೆ ಅಂಟಿಕೊಳ್ಳುವಾಗ ಮಗುವಾಗಿದ್ದಾಗಿನ ಪರಿಮಳ ಉಳಿಸಿಕೊಂಡು ಹಿಂತಿರುಗಿ ನೋಡಿದರೆ ಹೇಗಿರಬಹುದು!?

ಬೆಂಗಳೂರಿನ –

 ” ಇಷ್ಟು ಕಾರು, ಬಸ್ಸು,  ಮೆಟ್ರೋ ರೈಲುಗಳು ಓಡಾಡುವ ಜಾಗದಲ್ಲಿ, ಉಸಿರಿದ್ದರಷ್ಟೇ ಸಾಕು ಎಂದು ಜನರು ನಿಟ್ಟುಸಿರಿಡುವಲ್ಲಿ ದೊಡ್ಡದೊಂದು ತೆಂಗು ಗರಿ ತೇಲುತ್ತಾ ಮನೆಯೊಳಕ್ಕೆ ಬಂದು ಬಿದ್ದಿದ್ದನ್ನು ನಂಬುವುದು ಹೇಗೆ?!. ಮನುಷ್ಯರಿಗೆ ಮನುಷ್ಯನ ದನಿಯೇ ಕೇಳದ ಜಾಗದಲ್ಲಿ ಈ ವಲಸೆ ಗರಿಯ ಸದ್ದು ಅವಳಿಗೆ ಕೇಳಿದ್ದಾದರೂ ಹೇಗೆ?!”

ಹೀಗೆ ಪೇಟೆಯಲ್ಲಿ ಮನೆಕಟ್ಟಿದ ವಯಸ್ಕ ಮನಸ್ಸೊಳಗೆ ಬಾಲ್ಯದ ನೆನಪಿನ ತೆಂಗಿನ ಮಡಲು ಹಾರಿ ಬರುತ್ತೆ.  ಆಕೆ, ಆ ಮಡಲಿನ ಒಂದೊಂದೇ ಪುಟ್ಟ ಗರಿಗಳನ್ನು ಕೀಳುತ್ತಾಳೆ.

ಮೊದಲು ಹೆಣೆಯುವುದೇ ಚಾಪೆ!.

ಅದರಲ್ಲಿ ಕುಳಿತು

ಗರಿಯ ವಾಚು,

ಊದಲು ಪೀಪೀ

ಗೆಳೆಯರನ್ನು ಕರೆದು ಅವರಿಗೆಲ್ಲ ‘ಕನ್ನಡಕ’.

107 Pattern Weaving Coconut Leaves Photos - Free & Royalty-Free Stock  Photos from Dreamstime

” ಕಣ್ಣ ಕನಸುಗಳು ಗರಿಯ ತೋರಣ ಕಟ್ಟಿದವು. ಎಲ್ಲರೂ ಗಿರಗಿಟ್ಟಲೆಯಾಗಿ ಗರಗರ ತಿರುಗಿದರು. ಒಂದೊಂದೇ ಗರಿಗಕ್ಕಿಗಳ ಮಾಡಿ ಹಾರಲು ಬಿಟ್ಟರು.”

Attend this Fun Event of making Coconut Leaf Toys on 24th!

ಆ ಹಕ್ಕಿಗಳು, ನೆರೆಮನೆಗಳ ಜಜ್ಜಕ್ಕೆ ಬಡಿದು, ಚರಂಡಿಯಲ್ಲಿ ಸಿಕ್ಕಿ ಉಸಿರುಗಟ್ಟಿ, ಗಾಳಿಯ ಚಕ್ರಕ್ಕೆ ಸಿಕ್ಕಿ, ಸಾಯುತ್ತವೆ. ಚೆಲ್ಲಾಪಿಲ್ಲಿಯಾದ ಹಕ್ಕಿಗಳ ಬದುಕನ್ನು ಕಂಡ ಗೆಳೆಯರು ಜಾಗ ಖಾಲಿ ಮಾಡುತ್ತಾರೆ. 

ಆದರೆ, ಆಕೆ ಉಳಿದ ಗರಿಗಳನ್ನು ಕಟ್ಟಿ ಪೊರಕೆ ಮಾಡಿ, ಕನಸಿನ ಹಿಡಿಕೆಯನ್ನು ಗರಿಯಲ್ಲೇ ಕಟ್ಟುತ್ತಾಳೆ!.

Collectrio Natural Coconut Leaf Grass Broom Stick for Floor Cleaning,  Bathroom Cleaning & Wet Floor Pack of 12: Amazon.in: Home Improvement

ಅದಕ್ಕೇ ಆಕೆ ಮಗುವಾಗಿದ್ದಾಗಿನ ಪರಿಮಳ ಇನ್ನೂ ಇದೆ!. ಎಂ. ಆರ್. ಕಮಲಾ ಅವರ ಗದ್ಯಗಂಧೀ ಕವಿತೆಗಳು ಪುಸ್ತಕದ ಸಾಲುಗಳವು. ಇದೊಂದು ಆತ್ಮಕವಿತೆ!

ಬಾಲ್ಯದ ನಿರ್ಮಲಾನಂದೋಬ್ರಹ್ಮನ ಅನುಭೂತಿಯನ್ನು ಹೊತ್ತು, ಜೀವಕೋಶಗಳು ಬಲಿತಂತೆ, ಸುತ್ತಲಿನ ಒಂದೊಂದೇ ವಾಸನೆಗಳನ್ನು ತುಂಬಿ ಲಯಿಸಿಕೊಂಡು, ಒಂದೊಂದೇ ಬಣ್ಣವನ್ನು ಕಲೆಸಿ ಲೇಪಿಸಿಕೊಂಡು, ತನ್ನ ಸುತ್ತಲೂ ಸ್ವರ ಮಂಡಲದ ಹಲವು ತರಂಗಗಳ ಸಂಕೀರ್ಣ ಪ್ರಸ್ತಾರವನ್ನು ಸಂಗೀತವಾಗಿಸಿಕೊಂಡು, ರುಚಿಗೆ ರುಚಿಯಾಗಿ ರುಚಿಕಟ್ಟಿ ಅಭಿರುಚಿ ಸೃಷ್ಟಿಸಿಕೊಂಡು ನಡೆದ ದಾರಿಯ ಇನ್ನೊಂದು ತುದಿಯಲ್ಲಿ ಕವಯಿತ್ರಿ ನಿಂತು, ಪ್ರತಿಫಲಿಸುತ್ತಾರೆ.

‘ಗದ್ಯಗಂಧೀ ಕವಿತೆಗಳು’, ಪುಸ್ತಕದಲ್ಲಿ, ಹಾಗೆ ನೋಡಿದರೆ ಒಂದೇ ಕವಿತೆಯಿದೆ, ಅಂತ ನನ್ನ ಅನಿಸಿಕೆ. ಒಂದೊಂದೇ ಪುಟವೂ ಒಂದು ಭಾವಕ್ಕೆ, ಇಂದ್ರಿಯಗ್ರಾಹ್ಯ ಅನುಭವಕ್ಕೆ, ನಗೆಯ ಚಿಗುರು ತುಟಿಗೆ, ನೋವಿನ ಕಣ್ಣೀರ ಬಿಂದುಗಳಿಗೆ ‘ಗಂಧ’ವಾಗುತ್ತೆ.

ಮಹಾಭಾರತ ಆರಂಭವಾದದ್ದೇ ರಾಜ ಆಕರ್ಷಿತನಾದ ಆ ಗಂಧದಿಂದ. ಶಂತನು ಮಹಾರಾಜ ‘ಯೋಜನಗಂಧಿ’ ಯ ಪರಿಮಳಕ್ಕೆ ಸೋತ ಕ್ಷಣವದು. ‘ಗಂಧ’ ಕ್ಕೆ ಅಂತಹ ಅಪರಿಮಿತ ಶಕ್ತಿಯೂ ಇದೆ, ವ್ಯಾಪ್ತಿಯೂ ಇದೆ.

ಗದ್ಯಗಂಧೀ ಕವಿತೆಗಳು, ಇದರ ಎಲ್ಲಾ ಪುಟಗಳ ತುಂಬಾ ಮನಸ್ಸಿನೊಳಗಿನ ಪದರಗಳಲ್ಲಿ ಮೂಡಿದ ಪ್ರತಿಮೆಗಳು ನಿತ್ಯನೋಟದ ವಸ್ತುಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರತೀ ಪುಟದಲ್ಲೂ ಮಗು ಮನಸ್ಸು ಮತ್ತು ಸಮಾಜದ ಕಲೆಕ್ಟಿವ್ ಮನಸ್ಸುಗಳ ತುಯ್ದಾಟ ಹಲವು ರೂಪ ಪಡೆದು ಚಿಂತನೆಗೆ ಹಚ್ಚುತ್ತವೆ. ಗದ್ಯದಂತಹ ಸಾಲುಗಳಲ್ಲಿ, ಪದ್ಯಾತ್ಮ ಪ್ರತಿಷ್ಠೆ ಮಾಡುವ ಪ್ರಯತ್ನ ಎನಬಹುದೇ?. ಸಾಧಾರಣವಾಗಿ ಹಿಂದಿ/ ಉರ್ದು ಶಾಯರಿಗಳಲ್ಲಿ ಕಂಡು ಬರುವ ಪಂಚ್ ಲೈನ್ ನ ಹಾಗೆ ಪುಟದ ಕೊನೆಗೆ ಕವಯಿತ್ರಿ, ತನ್ನ ಥಾಟ್ ಲೈನ್ ಅನ್ನು ಪ್ರಕಟಿಸುತ್ತಾರೆ. ಆ ಸಾಲು, ಬಾಲ್ಯದ  ಗಂಧಕ್ಕೇ ವಾಲಿರುವುದೂ ಅಥವಾ ಅದನ್ನು ರಿ-ಇನ್ವೆಂಟ್ ಮಾಡುವ ಪ್ರಯತ್ನ ನಡೆಯುವುದೂ ಸ್ಪಷ್ಟ.

ಇದಕ್ಕೆ ಸಾಮ್ಯವಿರುವ ಪ್ರಯತ್ನವೇ ಎಂದು ಹೇಳುವ ಭಾಷಾ ಪಾಂಡಿತ್ಯ ಇಲ್ಲದಿದ್ದರೂ, ವಿದ್ಯಾರ್ಥಿಯ ಕನವರಿಕೆಯ ಹಾಗೆ, ಇದನ್ನು ಉಲ್ಲೇಖಿಸ ಬಯಸುತ್ತೇನೆ.

Literature and Criticism – Kannada Poet K.V. Tirumalesh visits MIT - The  MIT Post

ಕೆ.ವಿ.ತಿರುಮಲೇಶ್ ಅವರ ಈ ಮಹತ್ತರವಾದ ಅಕ್ಷಯ ಕಾವ್ಯ ಪುಸ್ತಕದಲ್ಲಿ ಸುಮಾರು ೪೭೮ ಪುಟಗಳು. ಬಿಡಿ ಬಿಡಿಯಾದ,ಆದರೂ ಇಡಿಯಾದ ಕವಿತೆಗಳು. ತಮ್ಮ ಅಕ್ಷಯ ಕಾವ್ಯ ಪುಸ್ತಕದ ಮುನ್ನುಡಿಯಲ್ಲಿ, ಅವರು ಹೀಗೆ ಬರೆಯುತ್ತಾರೆ.

” ಸೂತ್ರಬದ್ಧತೆ, ಸುಸಂಬದ್ಧತೆ, ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ…ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.”

ಈಗ ಗದ್ಯಗಂಧೀ ಕವಿತೆಗಳಿಗೆ ಪುನಃ ಬರೋಣ. ಈ ಒಟ್ಟೂ ಪುಸ್ತಕದ  ಕವಿತೆಯ ಅಷ್ಟೂ ‘ಗಂಧ’ ಗಳನ್ನೂ ಬರೆಯಲು ಅಸಾಧ್ಯವಾದರೂ ಎರಡು  ಪರಿಮಳ ದ್ರವ್ಯಗಳನ್ನಾದರೂ ಗ್ರಹಿಸುವ ಪ್ರಯತ್ನ ನನ್ನದು.

” ಅವಳ ಮನೆಯಲ್ಲಿ ಮೂರು ಕನ್ನಡಿಗಳಿದ್ದವು.” ಎಂದು ಆರಂಭವಾಗುವ ಕವಿತಾದಳದಲ್ಲಿ,

ನೆರೆಮನೆಯ ಹುಡುಗಿ ಮತ್ತು ಈಕೆ ಎರಡು ಕನ್ನಡಿಗಳನ್ನು ಎದುರು ಬದುರು ಇಡುತ್ತಾರೆ.

” ಆಹಾ! ಒಂದರೊಳಗೊಂದು ಒಂದರೊಳಗೊಂದು ಕನ್ನಡಿಗಳು! ಕೊಂಚ ಮುಖ ತೂರಿಸಿ ಲೆಕ್ಕವಿರದಷ್ಟು ಬಿಂಬಗಳನ್ನು ಎದೆಯಲ್ಲಿ ಸೆರೆಹಿಡಿದು ಕನ್ನಡಿಗಳ ಸ್ವ ಸ್ಥಾನಕ್ಕೆ ಸೇರಿಸಿದರು.”

ಎರಡು ಪುಟ್ಟ ಮಕ್ಕಳ ಆಟದಂತೆ ಕಾಣುವ ಈ ಚಿತ್ರ, ಚಿತ್ತಗನ್ನಡಿಗಳ ನಡುವಿನ ಅಸಂಖ್ಯ ಪ್ರತಿಫಲನಗಳಲ್ಲವೇ?

ಆ ಹುಡುಗಿಯ ಯೌವನದಲ್ಲಿ ದಿವಾನಖಾನೆಯ ಕನ್ನಡಿಯೊಳಗಿಂದ ಹುಡುಗ ಹಾಡತೊಡಗಿ, ಅವಳು “ಮಾಯಾಬಜಾರಿ”ನ ಶಶಿರೇಖೆಯಾದಳು.

ಹೀಗೆ ಒಂದು ಕನ್ನಡಿಯ ಸುತ್ತ ಪ್ರತಿಫಲಿಸುತ್ತವೆ ಹಲವು ಪ್ರತಿಮೆಗಳು.

ಈ ಪುಟದ ಕೊನೆಯ ಸಾಲು ಹೀಗಿದೆ.

” ಈಗಂತೂ ಕನ್ನಡಿಯನ್ನು ಬೀದಿಯ ಕಡೆಗೆ ಮುಖಮಾಡಿ ಇರಿಸಿಬಿಟ್ಟಿದ್ದಾಳೆ. ಹಾದು ಹೋಗುವ ಪ್ರತೀ ಜೀವಿಯ ನೋವು,ನಲಿವು ಅವಳ ಎದೆಯಲ್ಲಿ ಪ್ರತಿಫಲಿಸುತ್ತದೆ.”

ಕನ್ನಡಿಯೇ ಕವಯಿತ್ರಿಯ ಹೃದಯವೂ ಆಯಿತು. ಅದು ಸದಾ ಸಮಾಜದ ಚಲನೆಯ, ಬೀದಿಯ ಅಷ್ಟೂ ಡೈನಾಮಿಕ್ಸ್ ಗೆ, ಭಾವ ವೈವಿಧ್ಯಕ್ಕೆ ಕನ್ನಡಿ ಆಗುತ್ತೆ, ಹೃದಯ ಬರೇ ಕನ್ನಡಿಯೇ?. ಇದೊಂದು ಸ್ಪಂದನೆಯ ಕನ್ನಡಿ.

ಈ ಎಸಳಿನ ನಂತರ ಒಂದು ವೈಶಿಷ್ಟ್ಯವನ್ನು ಹೇಳುವೆ. ಬೆಲ್ಲ ತಯಾರಿಸುವ ಕಾರ್ಖಾನೆಯಲ್ಲಿ ಕಬ್ಬಿನ ರಸ ಕುದಿಸುವಾಗ ಅದರ ಪರಿಮಳ ಊರೆಲ್ಲಾ ಹರಡುತ್ರೆ. ಕುದಿಸುತ್ತಾ ಅ ರಸ, ಪಾಕವಾಗಿ ಜೇನಿನಂತೆ ಮಂದ, ಸ್ನಿಗ್ಧ ದ್ರವವಾಗುತ್ತೆ. ಈ ಹಂತದಲ್ಲಿ ಅದಕ್ಕೆ ಕಬ್ಬಿನ ರಸದ ಎಲ್ಲಾ ಗುಣಗಳೂ ಇರುತ್ತವೆ,ಆದರೆ ಸಾಂದ್ರವಾಗಿರುತ್ತದೆ. ಹರಿಯುವ ಗುಣವೂ,ಪರಿಮಳವೂ,ಸಿಹಿಯೂ. ಈ ಹಂತದಲ್ಲಿ ಅದನ್ನು ಸಂಗ್ರಹಿಸಲು ಬಾಟಲಿ ಬೇಕು.

ಇದರ ಮುಂದಿನ ಹಂತದಲ್ಲಿ ಅದನ್ನು ಗಟ್ಟಿಯಾಗಿಸಿ, ಅಚ್ಚಾಗಿಸಿ, ಆಕರ್ಷಕ ಪ್ಲಾಸ್ಟಿಕ್ ಕವರಿನೊಳಗೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ, ಕಂಪೆನಿಯ ಬೆಲ್ಲದಚ್ಚಾಗಿ ಗ್ರಾಹಕರ ವಿಕ್ರಯದ ವಸ್ತುವಾಗಿ ಪ್ರಕಟವಾಗುತ್ತೆ.  ಕಮಲಾ ಅವರ ಗದ್ಯಗಂಧೀ ಕವಿತೆ ಬೆಲ್ಲದ ಅಚ್ಚು ಅಲ್ಲ. ಇದು ಸಾಂದ್ರವಾದ ಬೆಲ್ಲದ ಪಾಕ. ಇದಕ್ಕೆ ಹರಿವು,ಪರಿಮಳ, ರುಚಿ ಎಲ್ಲವೂ

 ಇದೆ. ರೂಪ ಮಾತ್ರ ಪಾಕವನ್ನು ತುಂಬಿಸಿಕೊಂಡ  ಪಾತ್ರೆಯದ್ದೇ.

ಗದ್ಯ ಗಂಧಿಯ ಇನ್ನೊಂದು ಎಸಳು ಹೀಗೆ ಆರಂಭವಾಗುತ್ತೆ.

“ಅವಳು ಪುಟ್ಟವಳಿದ್ದಾಗ ಅಣ್ಣ ಕೊಟ್ಟ ನಾಲ್ಕಾಣೆ,ಎಂಟಾಣೆ ನಾಣ್ಯವನ್ನು ನೆಲದಲ್ಲಿ ಉರುಳಿ ಬಿಟ್ಟು ಎಷ್ಟು ದೂರ ಹೋಗುತ್ತದೆ ಎಂದು ನೋಡುತ್ತಿದ್ದಳು”

ಈ ನಾಣ್ಯ, ಈ ನೆಲ, ಈ  ನಾಣ್ಯದ ಉರುಳು ಚಲನೆ,ಚಲಾವಣೆ ಏನನ್ನು ಧ್ವನಿಸುತ್ತೆ?.

ಆಕೆಯ ಅಪ್ಪ , ಪ್ರೀತಿಯಿಂದ ನಾಣ್ಯವನ್ನು ಉರುಳಿಸಿ

 ” ಅಂತಃಕರಣದ ನುಡಿಯನ್ನು ಹೀಗೇ ಉರುಳಿಸು. ಆ ಭಾಷೆ ಎಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ. ಅದು ಅವರಿಗೆ ಅರ್ಥವಾಗದಿದ್ದರೂ ಸರಿ, ಉರುಳಿಸುತ್ತಾ ಹೋಗಬೇಕು, ಎಷ್ಟು ದೂರ ಸಾಧ್ಯವಾದರೆ ಅಷ್ಟು ದೂರ”

ಉರುಳುವ ನಾಣ್ಯಕ್ಕೆ ಅಂತಃಕರಣದ ನುಡಿಯ ಸ್ವರೂಪ. ಕೊಡು ಕೊಳ್ಳುವಿಕೆಯ ಕ್ರಿಯೆಯಿಂದ, ಪ್ರೀತಿಯಲ್ಲಿ ಕರಗುವ, ಕರಗಿಸುವ, ದ್ರಾವಣದೊಳಗೆ ಒಂದೇ ಆಗುವ ಕ್ರಿಯೆ. ನೀರಲ್ಲಿ ಕರಗಿಸಿದ ಸಕ್ಕರೆಯ ಹಾಗೆ. ನೀರೂ,ಸಕ್ಕರೆಯೂ ಒಂದಕ್ಕೊಂದು ಅಂತಃಕರಣಿಸಿ ಸ್ವಂತ ರೂಪ ಕಳೆದು ಏಕಸ್ವರೂಪ ಹೊಂದಿದ ಹಾಗೆ.

ಕೊನೆಯ ಸಾಲುಗಳಲ್ಲಿ ಮನಸ್ಸಿನ ಟ್ರಾನ್ಸ್ಫಾರ್ಮೇಟಿವ್ ಚೈತನ್ಯ ಪರಿಮಳಿಸುತ್ತೆ.

 ” ಈಗ ನೀವು ನಿಮ್ಮೊಳಗಿನ ಯಾವ ನಾಣ್ಯವನ್ನಾದರೂ ಅವಳೆದುರಿಗೆ ಉರುಳಿಸಿ. ಎತ್ತಿಕೊಂಡು ಅಂತಃಕರಣದ ನುಡಿಯಾಗಿಸಿ ಉರುಳಿಬಿಡುತ್ತಾಳೆ”

ಎಚ್ ನರಸಿಂಹಯ್ಯ ಅವರ

” ಹೋರಾಟದ ಹಾದಿ” ಪುಸ್ತಕದಲ್ಲಿ ಒಂದು ಘಟನೆಯಿದೆ. ಎಚ್. ಎನ್. ಅವರ ಗೆಳೆಯ ಮತ್ತು ಆತನ ಪುಟ್ಟ ಮಗು ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಆ ಮಗು ಕೋರ್ಟ್ ನ ಎಡಭಾಗದಲ್ಲಿ ಇರುವಾಗ,ಎದುರಾಳಿ ಶಟಲ್ ಕಾಕ್ ಅನ್ನು ಕೋರ್ಟಿನ ಬಲಗಡೆಗೆ ಪ್ಲೇಸ್ ಮಾಡುತ್ತಾನೆ. ಮಗು ಕೋರ್ಟ್ನ ಬಲ ಭಾಗದಲ್ಲಿದ್ದರೆ ಎದುರಾಳಿ, ಶಟಲ್ ನನ್ನು ಕೋರ್ಟ್ ನ ಎಡ ಭಾಗಕ್ಕೆ ಹೊಡೆಯುತ್ತಾನೆ.

ಮಗು ಬಹಳ ನೊಂದುಕೊಂಡು ಎಚ್. ಎನ್. ಹತ್ರ ಹೇಳುತ್ತೆ, “ಅಂಕಲ್! ಇದು ಚೀಟಿಂಗ್” ಅಂತ.

ಇದು ಕೂಡಾ ಮಗುವಿನ ಪರಿಮಳ. ಅಂತಹಾ ಪರಿಮಳವನ್ನು ಮೇಟಿಕುರ್ಕೆ ಯ ಬಾಲ್ಯದ ದಿನದಿಂದ ನಾಗರಿಕ ಜಗತ್ತಿನ ಗಂಧಗಳ ನಡುವೆಯೂ ಉಳಿಸಿಕೊಂಡು, ಇಲ್ಲಿಯೂ ಅಲ್ಲಿಯೂ ಸಲ್ಲುವ ಮತ್ತು ಯಾವುದೇ ನಾಣ್ಯವನ್ನು ಅಂತಃಕರಣದ ನುಡಿಯಾಗಿ ಪರಿವರ್ತಿಸುವ ಕವಿತೆಗಳಿವು.

ಕವಿತೆಯುದ್ದಕ್ಕೂ ಸ್ತ್ರೀ ಸಹಜ ಮಮತೆ, ಸಹನೆ, ಮಡಿಲಲ್ಲಿ ತುಂಬಿಕೊಳ್ಳುವ ಕ್ಷಮತೆ, ಹರಿಯುತ್ತಲೇ ಇರುವ ನಿರಂತರತೆ, ತನ್ನ ಗಾಯವಲ್ಲದೇ,ಇತರರ ಗಾಯಗಳನ್ನೂ ಸ್ಪರ್ಶಿಸಿ ಗುಣವಾಗಿಸುವ ಔಷಧೀಯ ಹಸ್ತದ ಮೃದುಲತೆ, ಇವೆಲ್ಲವನ್ನೂ ಚಿತ್ತಾರವಾಗಿಸಿದ್ದನ್ನು ಕಾಣಬಹುದು. 

ಈ ಒಂದು ಚಿತ್ರವನ್ನು ಮನದಲ್ಲಿ ರೂಪಿಸಿಕೊಳ್ಳಿ.

ಎರಡು ಗುಡ್ಡಗಳಿವೆ. ನಡುವೆ ಬಯಲು.

ಒಂದು ಗುಡ್ಡದಲ್ಲಿ ಬಾಲ್ಯದ ಹಳ್ಳಿ, ಅಣ್ಣ ( ಅಪ್ಪ), ಅಮ್ಮ, ಮನೆ, ಕನ್ನಡಿ, ಕಲ್ಲುಗಳು, ತೆಂಗಿನ ಮರಗಳು, ಗಾಜಿನ ಬಳೆಗಳು, ಓಡಿದ ಓಣಿಗಳು, ಹೊಲಗಳು. ಸದಾ ಬೀಸುವ ಗಾಳಿ, ಪೋಸ್ಟ್ ಆಫೀಸ್, ನಕ್ಷತ್ರ, ಇವುಗಳೆಲ್ಲವೂ ಮಗುವಿನ ಪರಿಮಳದಂತೆ.

ಮುಗ್ಧ, ನಿರ್ಮಲ, ನೇರ ನಿರಂತರ. ಭಾವ, ಮಮತೆ, ಜೀವಸಂಕುಲದ ಜತೆಗಿನ ತಾದಾತ್ಮ್ಯ ಸ್ಥಿತಿಗಳು ಈ ಗುಡ್ಡದ ತುಂಬಾ.

ಎರಡನೆಯ ಗುಡ್ಡದಲ್ಲಿ, ಕಾರು, ಮೆಟ್ರೋ ರೈಲು, ಮುಖವಾಡಗಳು, ಕಲ್ಲು ಮನೆಗಳು, ಬೀಗ ಹಾಕಿದ ಬಾಗಿಲುಗಳು, ಸಿಮೆಂಟ್ ರಸ್ತೆಗಳು,  ತಾಜ್ ಮಹಲ್ ಗಳು ಮತ್ತು ಗಾಳಿಯೂ ಸ್ಥಿರವಾಗಿವೆ.

 ಬಯಲಿನಲ್ಲಿ ಒಂದು ಸ್ಥಂಭದಲ್ಲಿ ಪೆಂಡುಲಮ್,ಈ ಎರಡು ಗುಡ್ಡಗಳ ನಡುವೆ ಓಲಾಡುತ್ತೆ. ಆ ಪೆಂಡುಲಮ್ನಲ್ಲಿ ಕವಯಿತ್ರಿ ಕುಳಿತಿದ್ದಾರೆ. ಪ್ರತೀ ಆಸ್ಸಿಲೇಷನ್, ಒಮ್ಮೆ ಮೊದಲ ಗುಡ್ಡದ ಹತ್ತಿರ, ಮತ್ತೆ ಎರಡನೇ ಗುಡ್ಡದ ಸಮೀಪ ಆಂದೋಳಿಸಿ  ತರುವ ಅನುಭೂತಿಯ ಸಂಕಲನವೇ ‘ಗದ್ಯಗಂಧೀ ಕವಿತೆಗಳು’.

**********************************************

ಮಹಾದೇವಕಾನತ್ತಿಲ

ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

14 thoughts on “

  1. ನಿಮ್ಮ ಪ್ರತಿಬರಹವನ್ನೂ ಕಾಯ್ದು ಓದುತ್ತೇನೆ.ವಿಜ್ಞಾನ ‌ಮತ್ತು ಕಾವ್ಯದ ಹದಮಿಳಿತವಿರುತ್ತದೆ ಅದರಲ್ಲಿ. ಒಂದು ಗಂಧದಿಂದ ಆರಂಭವಾದ ಮಹಾಭಾರತವನ್ನು ಕಮಲ ಮ್ಯಾಡಮ್ ಅವರ ಗದ್ಯಗಂಧಿಯೊಳಗೆ ಸೇರಿಸಿದ್ದು ‌ಸೊಗಸಿದೆ.

    1. ತುಂಬಾ ಧನ್ಯವಾದಗಳು ನಂದಿನಿ ಅವರೇ.

  2. ಕಮಲ ಮ್ಯಾಡಮ್ ಅವರ‌ ಪದ್ಯಗಂಧಿ ನಿಮ್ಮ ಬರಹದಿಂದ ಮತ್ತಷ್ಟು‌ ಪರಿಮಳ ತುಂಬಿ ಆಪ್ತವೆನಿಸಿದೆ.

    1. ಪೂರ್ಣಿಮಾ ಅವರೇ
      ಈ ಪುಸ್ತಕ ಓದಲೇ ಬೇಕಾದದ್ದು. ಪ್ರತೀ ಪುಟಗಳಲ್ಲೂ ಪ್ರತಿಮೆಗಳು ಮಾತಾಡುತ್ತವೆ.
      ನಿಮಗೆ ಧನ್ಯವಾದಗಳು

  3. ಮಗುವಿನ ಮುಗ್ಧ ಪರಿಮಳದ ಬಗ್ಗೆ ಹೇಳಿ, ಅದು ಕ್ರಮೇಣ ಪರಿಸರದಲ್ಲಿಯ ಇತರ ವಾಸನೆಗಳನ್ನು ಮೈಗೂಡಿಸಿಕೊಂಡು ಬೆಳೆಯುವ ಪರಿಯನ್ನು, ಮಹಾದೇವ್ ಅವರು ಬಹಳ ಸುಂದರವಾಗಿ ಪ್ರಸ್ತುತ ಪಡೆಸಿದ್ದಾರೆ. ಕವಯಿತ್ರಿ ಎಮ್ ಆರ್ ಕಮಲಾ ಅವರ ಕವನಗಳನ್ನು ‘ ಗದ್ಯ ಗಂಧಿ’ ಕವನಗಳನ್ನು ವಿಶ್ಲೇಷಣೆ ಮಾಡುತ್ತಾ, ಎರಡು ಗುಡ್ಡಗಳ ನಡುವೆ ಇರುವ ಬಯಲಿನ ನಡುವೆ ತೂಗುಬಿಟ್ಟ ಒಂದು ಪೆಂಡ್ಯುಲಮ್ ನಲ್ಲಿ ಕವಯಿತ್ರಿ ಕುಳಿತು ಕೊಂಡು, ಎರಡು ಧ್ರುವಗಳ ನಡುವೆ ಹೊಯ್ದಾಡುವ ಸ್ಥಿತಿಯನ್ನು ಮಹಾದೇವ್ ಅವರು ಮಾರ್ಮಿಕವಾಗಿ ನಿರೂಪಣೆ ಮಾಡಿದ್ದಾರೆ.
    ಹಾಗೆ ನೋಡಿದರೆ, ಗದ್ಯ- ಕಾವ್ಯ ಎರಡು ಧ್ರುವಗಳು.
    ಅದಕ್ಕೇ, ಇಂತಹ ಸಂಕೀರ್ಣವಾದ ಥೀಂಗಳ ಬಗ್ಗೆ ಬರೆಯಬೇಕಾದರೆ, ಕವನಗಳಿಗೆ ಗದ್ಯದ ಗಂಧ ಬೇಕೇನೋ!
    ಹಿರಿಯ ಕವಿ ತಿರುಮಲೇಶ್ ಅವರು ” ಅಕ್ಷಯ ಕಾವ್ಯ’ ದ ಮುನ್ನುಡಿಯಲ್ಲಿ , ಛಂದದ ಉಲ್ಲಂಘನೆಯ ಅನಿವಾರ್ಯತೆ ಕುರಿತು ಆಡಿದ ಮಾತುಗಳನ್ನು , ಮಹಾದೇವ್ ಅವರು ಉಲ್ಲೇಖ ಮಾಡಿದ್ದು ಸಮರ್ಪಕವಾಗಿದೆ.
    ಮಹಾದೇವ್ ಅವರು ತಮ್ಮ ಅಂಕಣದ ಮೂಲಕ ,‌ ನಾವು ಕಾಣದ ಆಯಾಮಗಳ ದರ್ಶನ ಮಾಡಿಸಿ, ಒಂದು ಅಪೂರ್ವವಾದ ಅನುಭೂತಿಯನ್ನು, ಚೇತನವನ್ನು ನಮ್ಮಲ್ಲಿ ಜಾಗೃತಗೊಳಿಸುತ್ತಾರೆ. ಅವರ ಇಡೀ ಅಂಕಣ ಕಾವ್ಯಮಯವಾಗಿದೆ. ಹಾರ್ದಿಕ ಅಭಿನಂದನೆಗಳು

    1. ಸರ್
      ನೀವಂದಿರಿ,
      “ಹಾಗೆ ನೋಡಿದರೆ, ಗದ್ಯ- ಕಾವ್ಯ ಎರಡು ಧ್ರುವಗಳು.
      ಅದಕ್ಕೇ, ಇಂತಹ ಸಂಕೀರ್ಣವಾದ ಥೀಂಗಳ ಬಗ್ಗೆ ಬರೆಯಬೇಕಾದರೆ, ಕವನಗಳಿಗೆ ಗದ್ಯದ ಗಂಧ ಬೇಕೇನೋ!”
      ಚಿಂತನೆಗೆ ಹಚ್ಚುವ ಸಾಲುಗಳು.
      ನಿಮ್ಮ ವಿಸ್ತಾರವಾದ ಪ್ರತಿಕ್ರಿಯೆಗೆ ನಾನು ಋಣಿ.

  4. ಕವಿತೆಯ ಕುರಿತ ನಿಮ್ಮ ವಿಶ್ಲೇಷಣೆ ಯಲ್ಲೂ ಒಂದು ಪರಿಮಳವಿದೆ. ಸೊಗಸಾದ ಬರಹ ಕಾನತ್ತಿಲ ಸರ್

    1. ಸ್ಮಿತಾ ಅವರೇ
      ಈ ಪರಿಮಳ ಎನ್ನುವುದೇ ಒಂದು ವಿಸ್ಮಯ. “ಗಂಧ” ಎಂಬ ಪದವನ್ನು ಸಾಹಿತ್ಯದಲ್ಲಿ ತುಂಬಾ ವಿಷಯಗಳಿಗೆ ಪ್ರತಿಮೆಯಾಗಿ ಉಪಯೋಗಿಸುತ್ತಾರೆ.
      ಗದ್ಯಗಂಧೀ ಕವಿತೆಯ ಪರಿಮಳ ನಿಮಗೂ ಇಷ್ಟವಾಗಬಹುದು.
      ನನ್ನ ಲೇಖನಕ್ಕೆ ಚೇತನ ಕೊಟ್ಟಿರಿ.
      ಧನ್ಯವಾದಗಳು

  5. ಈ ಗಂಧಗಳೆಲ್ಲಾ ಒಮ್ಮೆ ಪರಿಚಯವಿದ್ದರೂ ಅವುಗಳನ್ನು ಕಾಪಿಸಿಕೊಂಡು ಮತ್ತೆ ಮತ್ತೆ ಅವುಗಳ ಸುಗಂಧಕ್ಕೆ ಮರಳುವ ಪ್ರಕ್ರಿಯೆಯನ್ನು ಕಮಲ ರವರು ಸಾಧಿಸಿದ ಹಾಗೆ ಕಾಣುತ್ತದೆ. ನಿಮ್ಮ ಕಾವ್ಯ ಪರಿಚಯ ಅವರ ಸಂಕಲನವನ್ನು ಓದಲೇ ಬೇಕೆನಿಸುವ ಸ್ಥಿತಿಗೆ ತರುತ್ತದೆ. ಏಕೆಂದರೇ ಮಗುವಿನ ಪರಿಮಳ, ಬೆಲ್ಲದ ದ್ರಾವಣದ ಸುಗಂಧ, ಬಾಲ್ಯದ ದಿನಗಳು ಮತ್ತೆ ಪಡೆಯುವ ಅವಕಾಶ ಅನಿಸುತ್ತದೆ. ನಾಣ್ಯದ ಉರುಳುವಿಕೆಯನ್ನು ಅಂತಃಕರಣಕ್ಕೆ ಹೋಲಿಸಿದ್ದು ತುಂಬಾ ಅದ್ಭುತ ಪ್ರತಿಮೆ. ಹಾಗೇ ಅನಂತಾನಂತ ಪ್ರತಿಬಿಂಬಗಳನ್ನು ಕಾಣುವ ಕನ್ನಡಿಯ ಪ್ರತಿಮೆಯೂ ಅಷ್ಟೇ. ಹೃದಯ ಎನ್ನುವ ಕನ್ನಡಿ ಅದೆಷ್ಟು ವೈವಿಧ್ಯಮಯ ಪ್ರತಿಫಲನಗಳನ್ನು ಕಾಣುತ್ತದೆ, ಅಡಗಿಸಿಕೊಳ್ಳಲು ಯತ್ನಿಸುತ್ತದೆ ! ಊಹಿಸಲಸಾಧ್ಯ !! ನಿಮ್ಮ ಅಂಕಣದ ಬರಹ ಜೀವನದ ಹಲವಾರು ಮುಖಗಳನ್ನು ಕಾವ್ಯಮಯವಾಗಿ ತೋರುತ್ತದೆ. ಅಭಿನಂದನೆ.

    1. ಚಂದಕಚರ್ಲ ರಮೇಶ್ ಬಾಬು ಸರ್
      ನೀವು ಹೇಳಿದಂತೆ, ಈ ಪುಸ್ತಕದಲ್ಲಿ ನಾನು ಉದಾಹರಿಸಿದಂತಹ ಹಲವು ಎಸಳುಗಳಿವೆ. ಎಲ್ಲವೂ ತುಂಬಾ ಆಪ್ತವಾದ, ದಿನ ನಿತ್ಯದ ವಸ್ತು ವಿಶೇಷ ಗಳನ್ನು ಬಳಸಿ,ಪ್ರತಿಮೆಯಾಗಿಸಿ, ಚಿಂತನೆಗೆ ಪ್ರೇರಣೆ ಕೊಡುವ ಆಳ ಹುಡುಕುವ ಬರಹಗಳು.
      ನೀವು ಓದಲೇ ಬೇಕು ಅನಿಸುವ ಪುಸ್ತಕ.

      ನಿಮ್ಮ ವಿಸ್ತಾರವಾದ ಸ್ಪಂದನೆಗೆ ನಮಿಪೆ.

  6. ಮಹದೇವ ಅವರೆ ನಿಮ್ಮ ಅಂಕಣ ಓದುವುದೇ ಒಂದು ಕಾವ್ಯವಾಚನ. ಪರಿಮಳ ಸೂಸುವ ಕಲೆ ನಿಮಗೆ ಸಾಧಿಸಿದೆ.ಮಗುವನ್ನು ಎತ್ತಿಕೊಂಡಾಗ,ಅದು ಜಿಗಿಯವದಿಲ್ಲವೇ ಹಾಗೆ ನೀವು ಜಿಗಿಯುತ್ತಲೇ ಇರುವಿರಿ.ತಿರುಮಲೇಶರು,ಎಚ್ ಎನ್ ರು,ಎಲ್ಲಾ ಕೊಂಡಿಗಳನ್ನು ಒಂದೆಡೆ ಹೊಂದಿಸಿಕೊಂಡು ಪರಿಮಳ ಅಸ್ವಾದಿಸುವ ಕೆಲಸಕ್ಕೆ ಸಮಾನವಾದುದು ಯಾವುದಿದೆ ? ಡುತ್ತಿರುವಿರಿ. ಗದ್ಯಗಂಧಿಯ ಪರಿಮಳ ಆಘ್ರಾಣಿಸಿದಾಗ ಉಂಟಾಗುವ ವ ಅನುಭವಕ್ಕೆ ಎಣೆಯುಂಟೆ ?
    ಕಮಲಾ ಮೇಡಂ ನನಗೆ ತುಬಾ ಹತ್ತಿರದವರು.ಅವರೊಂದು ಕೃತಿಯಬಗ್ಗೆ ನಾನು ಬರೆಯುವವನಿದ್ದೆ.ಅಷ್ಟರಲ್ಲಿ ನೀವು ಜಿಗಿದು ಖುಷಿ ನೀಡಿದಿರಿ. ನಮನಗಳು ನಿಮಗೆ.

    1. ಕಿಶನ್ ಸರ್. ನೀವು ಕನ್ನಡ ಭಾಷೆಯಲ್ಲಿ ಅಪಾರ ಪಾಂಡಿತ್ಯ ಉಳ್ಳವರು. ನಿಮ್ಮ ಪ್ರತಿಕ್ರಿಯೆಯೇ ನಮಗೊಂದು ಪಠ್ಯ.

      ಮನಸ್ಸು ಹರಿದಂತೆ,ಪೆನ್ನು ಸರಿದಿದೆ. ಅದನ್ನೇ ಬರೆದೆ. ನಿಮ್ಮ ನುಡಿಗಳು ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದೆ.

      ನಮಿಪೆ.

  7. ಮಹದೇವರವರ ವಿಮರ್ಶೆ,ಪುಸ್ಕಕ ಪರಿಚಯ ಮಾಡಿಸುವ ರೀತಿ ಅವರದೇ ಆದ ವೈವಿಷ್ಟ್ಯದಿಂದ ಕೂಡಿರುತ್ತದೆ.ಅವರಿಗಿರುವ ವಿವಿಧ ರಂಗಗಳಲ್ಲಿಯ ಜ್ಞಾನದ ಬಗ್ಗೆ ಗೊತ್ತಾಗುವುದಲ್ಲದೆೇ ಅವರು ಅದನ್ನು ತಮ್ಮ ಬರವಣಿಗೆಯಲ್ಲಿ ಅನ್ವಯಿಸುವ ಪರಿ ಅನನ್ಯ.ಗದ್ಯಗಂಧಿ ಹೆಸರೇ ವಿಶಿಷ್ಟವಾಗಿದೆ.ಮಗು ಬೆಳೆಯುತ್ತಾ ಪರಿಮಳವನ್ನು ಕಳೆದುಕೊಂಡು ಸಮೀಜದ ವಾಸನೆಯನ್ನು ಅಂಟಿಸಿ ಕೊಳ್ಳುತ್ತದೆ ಎಂಬುದು ಎಷ್ಟುನಿಜ.ಇದನ್ನು ಹೇಳುತ್ತ ಕಮಲಾರವರ ಗದ್ಯಗಂಧಿ ಬೆಲ್ಲದ ಅಚ್ಚಲ್ಲ ಪರಿಮಳವನ್ನು ಉಳಿಸಿಕೊಂಡ ಸಾಂದ್ರವಾದ ಬೆಲ್ಲದ ಪಾಕ ಎಂದು ಹೇಳುವಲ್ಲಿ ಬಗಲಾವಣೆ ಅಗತ್ಯವಾದರೂ ತನ್ನತನವನ್ನು ಕಳೆದುಕೊಳ್ಳುವ ಪರಿಧಿಯನ್ನು ದಾಟದ ಮಿತಿಯಲ್ಲಿರಬೇಕೆಂದು ತಿಳಿಸುತ್ತ ಗದ್ಯಗಂಧಿಗೆ ಅಂಥ ಚೌಕಟ್ಟಿನಲ್ಲಿ ಬರುವ ಶ್ರೇಷ್ಟತೆಯನ್ನು ಕೊಟ್ಟಿದ್ದಾರೆ.ಅಂತಃಕರಣಕ್ಕೆ ಉರುಳುವ ನಾಣ್ಯದ ಹೋಲಿಕೆ ತುಂಬಾ ಹೊಸತೆನಿಸಿದರೆ,ಸಣ್ಣ ಪೋರ ಚೀಟಿಂಗ ಹೇಳಿದ್ದೂ ಸರಿಯೇ ಎನ್ನಿಸಿತು.ಗದ್ಯಗಂಧಿ,ಅದರ ಪರಿಚಯ ಪರಿಮಳ ಬೀರಿವೆ

  8. Dr. Sampat Sulibhavi.
    ಮಹಾದೇವ ಅವರೆ. ನಿಮ್ಮ ಲೇಖನ ಓದುವುದೆ ನಮಗೆ ಪರೀಮಳಾ. ನಸುಕುಸಿನ ಪರೀಮಳಾ ಬರತಾ ಬರತಾ ಸಮಾಜದ ಕಲುಸಿತ ವಾಸನೆ ಕೂಸಿನ ಪರೀಮಳಾ ಡೈಲೂಟ ಆಗಿದ್ದುನ್ನು ವಿವರಿಸಿದ್ದು ನಿಮ್ಮ ಕಲ್ಪನಾ ಶಕ್ತಿ ಹಾಗೂ ಬರೆಯುವ ಶೈಲಿ. ಪ್ರದರ್ಶನ. ನಿಮಗೆ ಹೊಳೆಯುವ ವಿಚಾರಗಳು ಭಾರಿ ಹಿಡಿಸುತ್ತೆ. ಪೂರ್ತಿ ಲೇಖನ ಬಹಳ ಹಿಡಿಸಿತು ಗರಿ ಬಿದ್ದದ್ದು ಅದರಿಂದ ಚಾಪೆ ಮಾಡಿದ್ದು. ಮೆಡಂ ಅವರ ಕವೀತೆ ಹಾಗು ತಿರುಮಲೇಶ ಅವರ ವಿವರಣೆ ಒಂದಾ ಎರಡಾ. ಒಂದರಕಿಂತ ಒಂದು ಸೂಪರ. ಅಭಿನಂದನೆಗಳು ಮಹಾದೇವ ಅವರೆ

Leave a Reply

Back To Top