ಕೆಂಪು ತೋರಣ ಕಟ್ಟುತ್ತೇವೆ
ಅಲ್ಲಾಗಿರಿರಾಜ್ ಕನಕಗಿರಿ
ಈಗ ನಾವು
ಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ.
ರಾಜಧಾನಿಯ ಸಾಹುಕಾರರ ಮನೆಯ,
ಕುಂಡಲಿಯಲ್ಲಿ ಕೆಂಪು ಗುಲಾಬಿ ಬಾಡಿಹೋಗಿವೆಯಂತೆ.
ಹೂ ಗಿಡದ ಬೇರಿಗೆ ರಕ್ತ ಕುಡಿಸಲು ಹೊರಟಿದ್ದೇವೆ.
ಈಗ ನಾವು
ಊರು ಕೇರಿ ಧಿಕ್ಕರಿಸಿ ಬಂದಿದ್ದೇವೆ.
ನಮ್ಮ ಅನ್ನ ಕಸಿದು ಧಣಿಗಳಾದವರ,
ಮನೆಯ ತಲ ಬಾಗಿಲು ತೋರಣ ಒಣಗಿ ಹೋಗಿವೆಯಂತೆ.
ನಮ್ಮ ತೊಡೆ ಚರ್ಮ ಸುಲಿದು
ಕೆಂಪು ತೋರಣ ಕಟ್ಟಲು ಹೊರಟಿದ್ದೇವೆ.
ಈಗ ನಾವು
ಜೀವದ ಹಂಗು ತೊರೆದು ಬಂದಿದ್ದೇವೆ.
‘ಮರಣವೇ ಮಹಾನವಮಿಯೆಂದು’
ದಿಲ್ಲಿ ಗಡಿ ಮುಚ್ಚಿಕೊಂಡವರ ಮನೆ ಮುಂದೆ
ನಮ್ಮ ಹೋರಾಟದ ಹಾಡು ಬರೆಯಲು,
ಕಳ್ಳು ಬಳ್ಳಿ ಕಟ್ಟಿಕೊಂಡು ಹೊರಟಿದ್ದೇವೆ.
ನೇಗಿಲೆಂಬ ಶಿಲುಬೆ ಹೊತ್ತುಕೊಂಡು.
ಕಿರು ದಾರಿಯಿಂದ ಹೆದ್ದಾರಿಗೆ ಬಂದಿದ್ದೇವೆ ನಾವು.
**************************************