ಕವಿತೆ
ಶವ ಬಾರದಿರಲಿ ಮನೆ ತನಕ
ಎ. ಎಸ್. ಮಕಾನದಾರ

ನಿನ್ನ ಮನೆಯ ಅಂಗಳ ತನಕವೂ
ನನ್ನ ಶವದ ಡೋಲಿ ಬಾರದಿರಲಿ
ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿ
ತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ
ಆತ್ಮ ಸಾಕ್ಷಿ ನ್ಯಾಯಾಲಯಕೆ
ಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ
ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆ
ನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ
ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿ
ಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆ
ವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದ
ಅವಳ ನಲ್ಲನಿಗೆ ಪುಟ ಗಟ್ಟಲೆ ತೀರ್ಪು ಬರೆದಿದ್ದು ಸರಿಯೇ
ಕಾಮಾಲೆ ಮೆದುಳು ಹಳದಿ ಕಣ್ಣಿನ ಪಕೀರ
ಕೀವು ಹೃದಯಾಕೂ ಅಫಿಡವಿಟ್ ಹಾಕಿದ್ದಾನೆ
ಪ್ರತಿ ಹುಸಿ ಮಾತಿಗೂ
ಕವಿತೆಯ ಮುಟ್ಟು ನಿಲ್ಲುತಿದೆ
ನಾಳೆ ಬರುವ ಕರುಳಿನ ಕುಡಿಗೆ
ಅಪ್ಪನ ಕವಿತೆ ತೋರಿಸಿ ತುತ್ತು ಉಣಿಸದಿರು
ನಂಜಿಲ್ಲದ ಪದಗಳಿಗೆ ಬಾಣಂತಿ ಬೇರು ಕಟ್ಟದಿರು
**********************************