ಕವಿತೆ
ಕಾಡುವ ಕನಸುಗಳು
ರಶ್ಮಿ ಹೆಗಡೆ
ಒಮ್ಮೊಮ್ಮೆ ಕಾಡುವ ರಂಗುರಂಗಾದ ಕನಸುಗಳು
ಬಣ್ಣದಲ್ಲಿ ಮಿಂದ ಮುಸ್ಸಂಜೆಯ ರವಿಯಂತೆ
ಕಣ್ಣಿಗೆ ಇನ್ನೇನು ಚಂದ ಎನ್ನುವಷ್ಟರಲ್ಲಿ
ಮುಳುಗಿ ಮಂಗಮಾಯವಾಗುವುದೇಕೆ?
ಯಾರಿಂದಲೋ ಬಾಡಿಗೆ ತಂದ ಭಾವನೆಗಳಲ್ಲ
ಅವೆಲ್ಲವೂ ನನ್ನ ನೆನಪಿನ ಗರ್ಭದಲ್ಲಿಯೇ ಅಡಗಿ
ಬೆಚ್ಚಗೆ ಕುಳಿತು ಸಮಯ ಮೀರಿದ ಮೇಲೆ
ಎದೆಯ ಗೂಡಿನಿಂದ ಹೊರಬಂದವುಗಳೇ!
ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಬೇಕಾದ
ಆ ನೆನಪಿನ ಪಕ್ಷಿಗಳು ಇಂದು ಮತ್ತೆ
ಮನದ ಪಂಜರದಲ್ಲೇ ಬಂಧಿಯಾಗಿವೆ
ಅದಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ದು ನನ್ನಿಂದಲೇ!
ಶಿಥಿಲಗೊಂಡ ಭಾವಸೇತುವೆಯಲ್ಲಿ
ಇಂದು ಹರೆಯವೂ ಇಲ್ಲ,ಹುಮ್ಮಸ್ಸೂ ಇಲ್ಲ
ಎಂದೋ ಆಗಾಗ ನೆನಪ ಮಳೆ ಸುರಿದಾಗ
ಎದೆಯಡಿಗೆ ನೀರು ಉಕ್ಕಿ ಹರಿವುದನು ಕಾಣುತ್ತೇನೆ
ಈ ನೆನಪುಗಳೇ ಹೀಗೆ,ಕಾಡುತ್ತವೆ,ಬೇಡುತ್ತವೆ
ಕೊನೆಗೆ ಅಸಹಾಯಕತನದಿಂದ ಮಿಡಿಯುತ್ತವೆ
ಮರಳುಗಾಡಿನ ಮರೀಚಿಕೆಯಂತೆ
ಆಸೆ ತೋರಿಸಿ ಕಡೆಗೊಮ್ಮೆ ಮರೆಯಾಗುತ್ತವೆ!
******************************
ಸುಂದರ ಕವನ !
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ