ಯುಗ ಯುಗದ ಸೀತೆಯರು
ರೇಶ್ಮಾಗುಳೇದಗುಡ್ಡಾಕರ್
ಇದು ಚರಿತ್ರೆಯ ಅವತಾರವಲ್ಲ
ನಿತ್ಯವು ಉದ್ಭವಿಸುವ
ಉದ್ವೇಗಗಳಿಗೆ ಇತಿಹಾಸ
ಮರುಕಳಿಸುತ್ತಲೇ
ತನ್ನ ಇರವ ಸಾಧಿಸುತ್ತದೆಯಲ್ಲ …
ರಾಮನಿಲ್ಲದ ಸೀತೆಯರಿಗೆ
ಕಮ್ಮಿ ಇಲ್ಲ ಈ ಜಗದಲ್ಲಿ
ಒಡಲ ಕುಡಿಗಾಗಿ ಬದುಕ
ಸವೆಸುವಳು ಕಂಡವರ
ಸೆರಗಲ್ಲಿ ಗಂಡ ಬಿದ್ದರು ತನ್ನ
ಬೆವರ ಹನಿಯ ದೀಪವಾಗಿಸಿ
ಮನೆಯ ಬೆಳಗುವಳು ….
ನೊರೆಂಟು ಮಾತುಗಳು
ಹಾದಿ – ಬೀದಿಯ ರಂಪಗಳು
ಎಷ್ಟಿದ್ದರು ಮನವದು ಗಟ್ಟಿಯಾಗುತ್ತಲೆ
ಸಾಗುವದು ಕಲ್ಲು ಬಂಡೆಯನ್ನು ಮೀರಿಸಿ
ಬದುಕಿನ ದಾರಿಯ ಹಿಡಿಯುವುದು
ಸಮಯದೊಂದಿಗೆ ಓಡಿ
ತಿಂಗಳ ಪಗಾರವನು ಕಾಪಿಟ್ಟು
ಪುಟ್ಟ ಪುಟ್ಟ ಕನಸ ನೇರವೇರಿಸಿ
ತನ್ನ ಒಡಲ ಸಿರಿಗಾಗಿ ನಗುವ ಕಾಣುವಳು
ಎಲ್ಲ ನೋವ ಮರೆತು …..
ತ್ರೇತಾಯುಗದ ಸೀತೆಗೆ ಕಾಡಾದರೂ ಇತ್ತು ;
ನವಯುಗದ ಹೆಣ್ಣುಗಳಿಗೆ
ಕಾಂಕ್ರೀಟ್ ಕೋಣೆಯು ದಹಿಸುವದು
ಅಂತರಾತ್ಮವ ಬಡಿದು ಹಿಡಿದು
ಹಿಪ್ಪೆಮಾಡಿ ಸಂತಸ ಪಡುವದು ..!
ಸೀತೆಯ ಯುಗವು ಅಳಿಯದೆ
ನವನವೀನ ಸಮಸ್ಯೆಗಳ ಸರಮಾಲೆಯಲ್ಲಿ
ರೂಪಾಂತರಗೊಂಡು ಹೊಸ
ಮನ್ವಂತರ ವಾದರೊ,
ಅವಳ ನೋವಿನ ಛಾಯೇ ಉಳಿಸಿಕೊಂಡು
ಮತ್ತೆ ಮತ್ತೆ ಅವತರಿಸುತಿಹುದು ….
*************************************
ಚೆಂದವಿದೆ ಅಕ್ಕ
ಬದಲಾಗದ ವೇದನೆ
ಸ್ಪೂರ್ತಿಯ ಮೂರುತಿಯವಳ ಬಾಳಿನ ಕಿರುತಿಯಾಗಬೇಕು.. ಹೋಲಿಕೆ ಅರ್ಥಪೂರ್ಣವಾಗಿದೆ.
ಚೆಂದದ ಸಾಲುಗಳು