ಚಂದಿರನ ಬೆಳದಿಂಗಳಲ್ಲಿ

ಭಾವಲಹರಿ…

ಭಾವಲಹರಿ…

ರಶ್ಮಿ.ಎಸ್.

full moon over dark clouds

ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ.

ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ.

ಮತ್ತದೆ ರಾತ್ರಿ, ಮತ್ತದೆ ಒಂಟಿತನ. ಹಾಸಿಗೆಗೆ ಬೆನ್ನು ಆನಿಸಿ, ಅಂಗಾತ ಮಲಗಿದಾಗ, ಫ್ಯಾನಿನ ರೆಕ್ಕಿಗಳು ಮಾತಿಗಿಳೀತಾವ. ಈ ಫ್ಯಾನಿನ ರೆಕ್ಕಿಗಳ ಜೊತಿಗೆ ನನ್ನವು ಹಲವಾರು ಗುಟ್ಟುಗಳದಾವ.  ರಾತ್ರಿಗಳಿಂದ ಯಾವ ಗುಟ್ಟುಗಳನ್ನೂ ಮುಚ್ಚಿಡಾಕ ಆಗೂದಿಲ್ಲ. ಗುಟ್ಟೇನು ಬಂತು.. ಏನೇನೂ ಮುಚ್ಚಿಡಾಕ ಆಗೂದಿಲ್ಲ.

ಅಗ್ದಿ ನೀರವ ರಾತ್ರಿ ಇವು. ತೀರ ನಮ್ಮ ಹೃದಯದ ಲಯ, ನಮಗೇ ಕೇಳಿಸುವಷ್ಟು ನೀರವ ರಾತ್ರಿಗಳಿವು. ಇದ್ದಕ್ಕಿದ್ದಂತೆ ಫೋನಿನಲ್ಲಿ ಮಿನುಗು ದೀಪ. ಕತ್ತಲೆಗೆ ಹೊಂದಿಕೆಯಾಗಲಿ ಅಂತ ಬೆಳಕು ಕಡಿಮೆ ಮಾಡಿದಷ್ಟೂ ಮಾದಕ ಮಂದ ದೀಪ.

ಯಾವುದೋ ಮೂಲೆಯಲ್ಲಿರುವವರಿಗೆ ಇದೀಗ ಎಚ್ಚರಿಕೆ. ಹೇಗಿದ್ದೀರಿ ಅಂತ ಕೇಳುವ ಕಾಳಜಿ. ಆದರೆ ಮನಸಿಗೆ ಅದ್ಯಾವುದೂ ಬೇಡ. ಯಾರೂ ಬೇಡ. ಮತ್ತದೇ ಏಕಾಂತದೊಳು, ನಾಭಿಯಾಳದಿಂದ ಒಮ್ಮೊಮ್ಮೆ ಅಳು, ನರನಾಡಿಯಲ್ಲಿ ವ್ಯಾಪಿಸುವಂತೆ ಆವರಿಸುತ್ತದೆ.

ಕಂಗಳಿಗೂ ಹಟ. ಇನ್ನು ಕಂಬನಿ ಸುರಿಸಲಾರೆವು ಎಂಬಂತೆ. ಜೊತೆಗೆ ಕೆನ್ನೆಗಾನಲಾರೆವು ಎಂಬಂತೆ. ಮತ್ತೆ ಫೋನಿನ ಮಿಂಚು. ಅಲೆಮಾರಿಯೊಬ್ಬ, ಕಸ ಕೆದುಕುತ್ತ, ಹೂ ಗಿಡಗಳ ದಿಟ್ಟಿಸುತ್ತ, ಕಾಲಿನಿಂದ ಕಲ್ಲನ್ನೊಂದು ಒದೆಯುತ್ತ ಹೋದಂತೆ… ಎಫ್‌.ಬಿಯಲ್ಲಿ ಕಣ್ಣಾಡಿಸುತ್ತ, ಕೈ ಆಡಿಸುತ್ತ ಅಲೆಮಾರಿಯಾಗುವುದು.

ಯಾವುದೇ ಉದ್ದೇಶವಿಲ್ಲದೆ, ಯಾವುದೇ ಅಜೆಂಡಾಗಳಿಲ್ಲದೆ, ಯಾರಿಗೂ ಕಿರಿಕಿರಿ ಮಾಡದೇ, ಯಾರನ್ನೂ ಮೆಚ್ಚಿಸಲೆಂದೋ, ದೂರಲೆಂದೋ… ಏನೇನೂ ಬರೆಯದೆ, ಖುಷಿಯೆನಿಸಿದ ಹಾಡು, ಸಂಕಟವನ್ನೇ ಪದಗಳಲ್ಲಿ ಹಿಡಿದಿಡುವ ಶಾಯರಿಗಳನ್ನು ಹಂಚುತ್ತ ಹೋಗುವುದು. ಅದು ಯಾರಾದರೂ ಓದಲಿ ಅಂತಲ್ಲ. ನಮ್ಮ ಪುಟದಲ್ಲಿ ಉಳಿಯಲಿ ಅಂತ.

ಅಂಥವನ್ನು ಓದಿ, ಒಂದಷ್ಟು ಮೆಸೆಂಜರ್‌ನಲ್ಲಿ ವಿಚಾರಿಸಿಕೊಳ್ಳುವುದು. ಆಪ್ತರೆನಿಸಿದರೆ ಉತ್ತರಿಸುವದು, ಇಲ್ಲದಿರೆ ನೋಡಿ, ಮುಗುಳೊಂದನ್ನು ಚೆಲ್ಲಿ, ಮುಂದಕ್ಕೆ ಹೋಗುವುದು.

ಇದಿಷ್ಟೂ ಆಗುವಾಗ, ಬದುಕಿಡೀ ಕಪ್ಪುಬಿಳುಪಿನ ಚಿತ್ರದಂತೆ ಕಾಣತೊಡಗುತ್ತದೆ. ಕಾಡತೊಡಗುತ್ತದೆ. ಕತ್ತಲೆಯೊಳಗೆ ಬಣ್ಣಗಳಿಲ್ಲ. ಬಣ್ಣಗಳಿರುವುದಿಲ್ಲ. ಒಂದೋ ಕಡುಕಪ್ಪು. ಇಲ್ಲವೇ ಶ್ವೇತಶುಭ್ರ ಬಿಳುಪು. ಈ ಎರಡರ ನಡುವಿನ ಬೂದು ಬಣ್ಣಕ್ಕೆ ಯಾವ ಅರ್ಥವೂ ಇಲ್ಲ.

ಕಡುಕಪ್ಪು ರಾತ್ರಿ, ಹೀಗೆ ಬೆಳಗಿನ ಸೆರಗಿನಂಚಿಗೆ ಸರಿಯುವಾಗ ನಿದ್ದೆ ಸುಳಿಯುತ್ತದೆ. ಕಣ್ರೆಪ್ಪೆ ಕೆನ್ನೆಗಾನುತ್ತವೆ… ಈ ರಾತ್ರಿಗಳಲ್ಲಿ ಅದೆಷ್ಟು ಗುಟ್ಟುಗಳಡಗಿವೆಯೋ… ಅದೆಷ್ಟು ಚುಕ್ಕೆಯಂಥ ಮಿಣಮಿಣ ನಗು ಮಿಂಚಿದೆಯೋ…

ಮತ್ತ ಮರುದಿನ ಎಚ್ಚರ ಆದಾಗ, ಸಣ್ಣದೊಂದು ನಗು.. ಇನ್ನೊಂದು ರಾತ್ರಿ ಸಿಕ್ತು.. ಮೋಹಿಸಲು… ಏಕಾಂತವನ್ನು ಅನುಭವಿಸಲು, ಯಾವ ಮುಖವಾಡಗಳಿಲ್ಲದೆ ನನ್ನತನವನ್ನು ಇಡಿಯಾಗಿ ಅನುಭವಿಸಲು. ಈ ಚಳಿಗಾಲದ ನೀರವ ರಾತ್ರಿಯ ಮೌನದೊಳಗಿನ ಮಾತುಗಳಿಗೆ, ಮಾತುಗಳ ನಡುವಿನ ಮೌನಕ್ಕೆ ಮರುಳಾಗುತ್ತಲೇ ಇರ್ತೀನಿ. ರಾತ್ರಿಗಳನ್ನು ಮೋಹಿಸುವುದು ಈ ಕಾರಣಕ್ಕೆ. ಮೋಹಕ ರಾತ್ರಿಗಳನ್ನು ಪ್ರೀತಿಸುವುದೂ ಇದೇ ಕಾರಣಕ್ಕೆ.

**********************************

One thought on “ಚಂದಿರನ ಬೆಳದಿಂಗಳಲ್ಲಿ

  1. ಸುಂದರ ಆತ್ಮಾವಲೋಕನ. ಫ್ಯಾನಿನ ರೆಕ್ಕೆಗಳನ್ನೂ ಜೀವಂತ ಮಾಡಿದ್ದು ತುಂಬಾ ಸುಂದರ ಪ್ರತಿಮೆ.

Leave a Reply

Back To Top