ಕವಿತೆ
ನವನವೋನ್ಮೇಶಶಾಲಿನಿ !
ಕಾತ್ಯಾಯಿನಿ ಕುಂಜಿಬೆಟ್ಟು
ಕವನ ಹುಟ್ಟುತ್ತಿಲ್ಲ
ನವಮಾಸ ಉರುಳಿದರೂ
ಹೆರದೆ ಹೊಟ್ಟೆಯೇ ಮೈ ಆಗಿರುವ ತುಂಬು
ಬಸಿರಿಯ ಹಾಗೆ ಅಂಗಾತ
ಏದುಸಿರಲಿ ಅವಡುಗಚ್ಚಿ ಕಾಯುತ್ತಿರುವೆ
ನಾಳೆ ಮೋಡಗಳ ಗಭ೯ ಸೀಳಿಕೊಂಡು
ನೇಸರ ಹುಟ್ಟುತ್ತಾನೆ
ಕಾಳುಗಳು ಕಣ್ತೆರೆದು
ಕವಿತೆಗಳನ್ನು ಹೆರುತ್ತವೆ
ಕಿರಣಗಳು ಆಟಿಕೆಗಳಾಗುತ್ತವೆ
ಸುರುಳಿ ಸುಳಿವ ಕೋಮಲ ಬೆರಳುಗಳಿಗೆ
ಇರುಳಲಿ ಹೂವುಗಳು ಬಸಿರಲಿ ಕಾಯಿಬ್ರೂಣಗಳನ್ನು ಹೆರಲು
ಕಾಯುತ್ತವೆ
ಎಲ್ಲ ನಾಮ೯ಲ್ ಡೆಲಿವರಿ
ನಾಳೆಗಳು ನಗುತ್ತವೆ ಕಾಲದ ಧಾವಂತದ ನಡಿಗೆ ಕಂಡು
ಮುಸಿಮುಸಿ
ಎಂತೆಂಥ ಭಾಸ ಭವಭೂತಿ ಬೋಜ
ಕಾಳಿದಾಸರು ಕಾಳುಗಳಲ್ಲಿ ಕಣ್ತೆರೆದು ಹಾಲತೆನೆತೆನೆಗಳನ್ನು ಉಣಿಸಿ…
ಭಾಸನು ಕಾಲಕ್ಕೆ ದಾಸನಾಗಿ
ಭವಭೂತಿಯು ಕಾಲರುದ್ರನ ಹಣೆಯ ವಿಭೂತಿಯಾಗಿ
ಕಾಲ ತಾನು ಹೆತ್ತದ್ದನ್ನೇ ತಾನೇ ತೆತ್ತು
…
ಕಾಳಿದಾಸನು ಕಾಲದಾಸನಾಗಿ…
ಕಾವ್ಯ ಕಾಲ ಕಾಲಕ್ಕೂ ಹೊಸ ಹೊಸತಾಗಿ ಕಾಲಾತೀತವಾಗಿ
…
ನವನವೋನ್ಮೇಶಶಾಲಿನಿ !
ಓಹ್! ನಾನು ಈಗಷ್ಟೇ ಹೆತ್ತ ಕವಿತೆ
ಒಂದು ಇರುವೆಯ ಹಾಗೆ ಒಂದು ಅಕ್ಕಿಕಾಳು ಹೊತ್ತು ನಡೆಯುತ್ತಲೇ ಇದೆ
ಕಾಲನ ತುಟಿಯ ಸಂದಿಯಲ್ಲಿ
*******************************************
ಚಂದ..