ವಿಧಿ!
ಆರ್.ಸುನೀಲ್ ತರೀಕೆರೆ
ರಂಗಪ್ಪನ ಮನೆ ಮುಂದೆ ಬೆಂಕಿ ಬಿದ್ದ ಸುದ್ದಿ ಊರಲ್ಲೆಲ್ಲಾ ಐದೇ ನಿಮಿಷಕ್ಕೆ ಹರಡಿಹೋಯಿತು.ಆ ಸುದ್ದಿ ನನ್ನ ಕಿವಿಗೂ ಬಿದ್ದ ಕ್ಷಣದಿಂದ ಮನಸ್ಸು ವ್ಯಾಕುಲಗೊಳ್ಳತೊಡಗಿತು.ಛೇ..ಅಂತೂ ಇಂತೂ ರಂಗಪ್ಪ ಹೋಗ್ನಿಟ್ಟ.! ಬದುಕಿದ್ದಾಗ ಅವನು ಪಟ್ಟ ಪಾಡು ನೆನೆಸಿಕೊಂಡು ಸಅಯ್ಯೋ ಅಂತ ಒಂದು ಕಡೆ ಅನ್ನಿಸತೊಡಗಿದರೆ ಮತ್ತೊಂದು ಕಡೆ ಬಿಡು ಅವನು ಹೋದದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಪಾಪ ಇನ್ನೂ ನೋವು ಅನುಭವಿಸುತ್ತಿದ್ದ.ಏನ್ ಈಗಾಗ್ಲೇ ಕಮ್ಮೀ ನೋವು ಅನುಭವಿಸಿದ್ದಾನಾ ಅವ್ನು..?!ಇಷ್ಟು ದಿನ ಅವ್ನು ಬದುಕಿದ್ದೂ ಸತ್ತಂಗೆ ತಾನೇ ಇದ್ದದ್ದು.ದಿನಾ ಬೆಳಗಾದ್ರೆ ಒಂದಲ್ಲ ಒಂದು ಗೋಳು ನೋವು ರಗಳೆ ಅವ್ನಿಗೆ ಇದ್ದೇ ಇತ್ತು ಪಾಪ.!ಅಂತ ಮನಸ್ಸು ಅವನ ಬಗ್ಗೆ ಇನ್ನಿಲ್ಲದಂತೆ ಮರುಗತೊಡಗಿತು.
ರಂಗಪ್ಪ ತೀರಾ ಬಡವನೇನೂ ಆಗರ‍್ಲಿಲ್ಲ.ಇದ್ದ ಎರಡೆಕೆರೆ ಜಮೀನಿನಲ್ಲೇ ಅಡಿಕೆ ಗಿಡಕೆ ಬೆಳೆದುಕೊಂಡು ಅದರಲ್ಲೇ ತನಗೊಂದು ಸ್ವಂತದ ಸೂರು ಅಂತ ಮಾಡಿಕೊಂಡಿದ್ದ.ಹೆAಡ್ತಿ ಬೇರೆ ಸತ್ತು ಎಷ್ಟೋ ವರ್ಷ ಆಗಿತ್ತು.ಇದ್ದ ಒಬ್ಬ ಮಗನ ಮದ್ವೆ ಮಾಡಿ ಹೆಂಗೋ ಅಂತ ಒಂತ ಒಂದು ನೆಮ್ಮದಿಯ ಜೀವ್ನ ಮಾಡ್ತಿದ್ದ.ಮೊದ್ಲು ಮೊದ್ಲು ಎಲ್ಲಾ ಚೆನ್ನಾಗೇ ಇತ್ತು.ರಂಗಪ್ಪನ್ನೂ ಕೂಡ ಚೆನ್ನಾಗೇ ನೋದ್ಕೋತಿದ್ರು.ಆದ್ರೆ ಬರ್ತಾ ಬರ್ತಾ ರಂಗಪ್ಪನ ಮಗ ಸೊಸೆಗೆ ರೋಟದಿಂದ ಬರ್ತಿದ್ದ ಆದಾಯದ ಮೇಲೆ ಕಣ್ಣು ಬಿತ್ತು.
ಮೊದ್ಲಿನಿಂದ್ಲೂ ಉಢಾಳನಾಗಿ ಬೆಳೆದಿದ್ದ ರಂಗಪ್ಪನ ಮಗ ಮಲ್ಲ ಯಾವ ಕೆಲ್ಸ ಕಾರ್ಯಾನೂ ಮಾಡ್ದೆ ಅಪ್ಪನ ದುಡ್ನಾಗೆ ಮಜಾ ಮಾಡ್ಕೊಂಡು ತಿರುಗ್ತಾ ಇದ್ದ.ಇಸ್ಪೀಟು ಹೆಂಡ ಜೊತೆಗೆ ಅದೂ ಇದೂ ಅಂತ ಸ್ವಲ್ಪ ಶೋಕೀನೂ ಕೂಡ ಜಾಸ್ತೀನೇ ಇತ್ತು.ಅವೆಲ್ಲಾ ಇತ್ತೀಚಿಗಂತೂ ತುಸು ಮಿತಿ ಮೀರಿ ಹೋಗಿದ್ವು.ಇಂತವ್ನಿಗೆ ಒಂದು ಮದ್ವೆ ಅಂತ ಮಾಡಿಬಿಟ್ರೆ ಸರಿಹೋಗ್ತಾನೆ ಅಂತ ಲೆಕ್ಕ ಹಾಕಿದ್ದ ರಂಗಪ್ಪನ ಎಣಿಕೆ ತಪ್ಪಾಗಿ ಹೋಗಿತ್ತು.ಅವ್ನಿಗೆ ಮದ್ವೆ ಮಾಡಿದ ತಕ್ಷಣ ತೋಟದ ವ್ಯವಹಾರವೆಲ್ಲಾ ಅವ್ನಿಗೆ ಸೊಸೆಗೆ ವಹಿಸ್ಬಿಟ್ಟು ತಾನು ಆರಾಮಾಗಿ ಮೊಮ್ಮಕ್ಕಳನ್ನ ಆಟ ಆಡಿಸ್ತಾ ಕಾಲ ಕಳೀಬಹುದು ಅಂತ ಅಂದುಕೊAಡಿದ್ದ ರಂಗಪ್ಪ ಮಲ್ಲ ನಾಯಿ ಬಾಲ ಡೊಂಕು ಎಂಬAತೆ ಮದ್ವೆ ಆದ್ಮೇಲೆ ಕೂಡ ಸರಿ ಹೋಗದ್ದು ಕಂಡು ಒಳಗೊಳಗೆ ಸ್ಯಾನೇ ನೋವು ಅನುಭವಿಸ್ತಿದ್ದ.
ಇತ್ತ ತಾನು ಮದ್ವೆ ಆದ್ರೂ ಕೂಡ ಅಪ್ಪ ಯಾವ ವ್ಯವಹಾರಾನೂ ಕೊಡ್ತಾ ಇಲ್ವಲ್ಲಾ ಅಂತ ಮಲ್ಲ ಕೂಡ ಒಳಗೊಳಗೇ ಕುದ್ದು ಹೋಗ್ತಿದ್ದ.ಇಂಥಾ ಬೇಜವಾಬ್ದಾರಿ ಮಗನಿಗೆ ವ್ಯವಹಾರ ಕೊಟ್ರೆ ಆಸ್ತಿಯೆಲ್ಲಾ ನುಂಗಿ ನೀರು ಕುಡಿದಾನೂ ಅಂತ ರಂಗಪ್ಪ ಹೆದರಿದ್ರೆ ಅತ್ತ ಮಲ್ಲ ತಾನು ಮದ್ವೆ ಆದ್ರೂ ಕೂಡ ಖರ್ಚಿಗೆ ಕಾಸು ಬೇಕು ಅಂದ್ರೆ ಅಪ್ಪನ ಮುಂದೆಯೇ ಕೈ ಒಡ್ಡಬೇಕಲ್ಲಾ ಅನ್ನೋ ಅಸಹನೆಯಿಂದ ವಿಲವಿಲ ಒದ್ದಾಡ್ತಿದ್ದ.ಮಗ ನೋಡಿದ್ರೆ ಹಿಂಗೆ ಸೊಸೆನಾದ್ರೂ ಅವ್ನಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಬಹುದು ಅನ್ನೋ ಎಲ್ಲೋ ಒಂದು ಸಣ್ಣ ಭರವಸೆ ಕೂಡ ಸೊಸೆ ಮದುವೆಯಾಗಿ ಬಂದ ಹೊಸತರಲ್ಲೇ ಸುಳ್ಳು ಮಾಡಿದ್ಳು.ಇರೋ ಇರಡೆಕೆರೆ ಜಮೀನಿನಲ್ಲೇ ಮೂರ್ನಾಲ್ಕು ಲಕ್ಷ ಆದಾಯ ಬರೋದು ನೋಡಿ ಸೊಸೆಯ ಕಣ್ಣು ಕೂಡ ಕುಕ್ಕುತ್ತಿತ್ತು.ಒಮ್ಮೊಮ್ಮೆ ಮಗನಿಗಿಂತ ಮೊದಲು ಇವಳೇ ದುಡ್ಡಿಗಾಗಿ ಜಗಳ ಕಾಯೋಕೆ ಮುಂದೆ ನಿಂತ್ಕೋತಿದ್ಲು.ಆದಷ್ಟು ಬೇಗ ಈ ವ್ಯವಹಾರನೆಲ್ಲಾ ತಾನೇ ವಹಿಸ್ಕೊಂಡ್ರೆ ತನಗೆ ಬೇಕಾದ ಒಡವೆ ವಸ್ತç ಮಾಡ್ಕೊಂಡು ಜಮ್ಮಂತ ರಾಣೀಯಂಗೆ ಮೆರೀಬಹ್ದು ಅಂತ ಕನಸು ಕಾಣ್ತಾ ತನ್ನ ಗಂಡನಿಗೇ ಇಲ್ಲಸಲ್ಲದ್ದು ಹೇಳಿಕೊಟ್ಟು ತನ್ನಪ್ಪನ ವಿರುದ್ಧವೇ ಯುದ್ಧಕ್ಕೆ ನಿಲ್ಸಿಬಿಡ್ತಿದ್ಳು.ಒಟ್ನಲ್ಲಿ ರಂಗಪ್ಪನ ಸ್ಥಿತಿ ಮನೆಯಲ್ಲಿ ಬಿಸಿ ತುಪ್ಪದ ಹಾಗೆ ಇತ್ತ ನುಂಗೋಕೂ ಆಗ್ದೆ ಉಗುಳೋಕೂ ಆಗ್ದೆ ಇರೋ ತರ ಅಯೋಮಯವಾಗಿಬಿಟಟಿತ್ತು.
ದಿನಾ ಈ ಗೋಳು ರಗಳೆ ಯಾಕೆ ಆಕಡೆ ಹಾಳಾಗಿ ಹೋಗ್ಲಿ ಅಂತ ಆ ತೋಟವನ್ನ ಮನೆಯನ್ನ ಅವ್ರ ಹೆಸ್ರಿಗೇ ಮಾಡಿಬಿಡೋಣ ಇಲ್ಲದಿದ್ರೆ ಒಂದಲ್ಲಾ ಒಂದು ದಿನ ಇವು ಆಸ್ತಿ ಹಣದ ಆಸೆಗೆ ತನ್ನನ್ನ ಕೊಲ್ಲೋಕೂ ಹೇಸಲ್ಲಾ ಅಂತ ಯೋಚಿಸಿದ ರಂಗಪ್ಪ ಹೀಗೆ ಭಂಗ ಪಡೆದಾಗ್ಲೆಲ್ಲಾ ನನ್ನ ಹತ್ರ ಬಂದು ತನ್ನ ಗೋಳು ತೋಡ್ಕೊಂಡಾಗ ಹಂಗೆಲ್ಲಾದ್ರೂ ಮಾಡ್ಬಿಟ್ಟಿಯೋ ರಂಗಪ್ಪ..ನೀನಿನ್ನೂ ಚೆನ್ನಾಗಿರೋವಾಗ್ಲೇ ಹಿಂಗೆಲ್ಲಾ ರ‍್ಕೊಟ್ಟು ಬಿಟ್ರೆ ಆಮೇಲೆ ಆ ಆಸ್ತೀನೂ ಇರಲ್ಲ ನೀನೂ ಇರಲ್ಲ ನಿನ್ನ ಭಿಕ್ಷೆ ಬೇಡೋ ಹಾಗೆ ಮಾಡಿಬಿಟ್ಟಾರು ಹುಶಾರೂ ಇನ್ನೂ ಸ್ವಲ್ಪ ದಿನ ಹೋಗ್ಲಿ ಆಮೇಲೆ ಬೇಕಾದ್ರೆ ಒಂದು ನಿರ್ಧಾರಕ್ಕೆ ಬರ್ತಿಯಂತೆ..!ಅAತ ಏನೋ ಹೇಳಿ ಅವ್ನಿಗೆ ಸಮಾಧಾನ ಮಾಡುವ ಜೊತೆಗೆ ಸ್ವಲ್ಪ ಎಚ್ಚರಿಕೆಯ ಮಾತನ್ನೂ ಹೇಳ್ತಾ ಇದ್ದೆ.ಆದ್ರೆ ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಆ ಹಾಳಾದವ್ರು ರಂಗಪ್ಪನಿಗೆ ಏನೋ ಒಂದು ಗತಿ ಕಾಣ್ಸೇ ಕಾಣಿಸ್ತಾರೆ ಅಂತ ಒಂದು ಸಣ್ಣ ಅನುಮಾನ ಮಾತ್ರ ಕಾಡ್ತಾನೇ ಇತ್ತು.
ಇದನ್ನೆಲ್ಲಾ ನೋಡಿ ಬೇಸತ್ತು ಹೋಗಿ ನಾನೇ ಒಮ್ಮೆ ಮಲ್ಲನತ್ರ ಯಾಕಪ್ಪಾ ಹಿಂಗೆಲ್ಲಾ ಮಾಡ್ತೀರಾ ಒಂದಲ್ಲ ಒಂದು ದಿನ ಈ ತೋಟ ಮನೆಯೆಲ್ಲಾ ನಿಂಗೇ ತಾನೆ ಬರೋದು.ನೀವು ಕೊಡೋ ಕಾಟಕ್ಕೆ ಪಾಪ ನಿಮ್ಮಪ್ಪ ದಿನಾ ಕೊರಗ್ತಾ ಇದಾನೆ ಅಂತ ಬುದ್ದಿ ಹೇಳೋಕೆ ಹೋದ್ರೆ ನನಗೆ ಅವರಪ್ಪನ ತರ ವಯಸ್ಸಾಗಿದೆ ಅವನ ಹಾಗೆ ನಾನೂ ಒಬ್ಬ ಹಿರೀ ಮನುಷ್ಯ ಅಂತಾನೂ ನೋಡ್ದೆ ನಂಗೇ ಬಾಯಿಗೆ ಬಂದAಗೆ ಮಾತಾಡಿ ನಿಮಗ್ಯಾಕ್ರೀ ನಮ್ಮನೆ ಉಸಾಬರಿ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ ಅಂತ ದಬಾಯಿಸಿ ಹೋಗಿದ್ದ.ಇವ್ನೇ ಹಿಂಗೆ ಇನ್ನು ರಂಗಪ್ಪನ ಬಾಯಿಂದ ಅವ್ನ ಸೊಸೆಯ ಗುಣಗಾನ ಕೇಳಿದ್ದ ನನಗೆ ಅಪ್ಪಿತಪ್ಪಿಯೂ ಅವಳ ಹತ್ರ ಮಾತಾಡೋ ಧೈರ್ಯ ಕೂಡ ಬರಲಿಲ್ಲ.
ಅಲ್ಲಾ ಹೆಂಗೂ ರಂಗಪ್ಪನಿಗೆ ಒಬ್ನೇ ಮಗ.ಅಕಸ್ಮಾತ್ ರಂಗಪ್ಪ ಏನಾದ್ರೂ ತೀರಿಹೋದ್ರೂ ಆ ಆಸ್ತಿಯೆಲ್ಲಾ ಅವ್ನಿಗೇ ತಾನೆ ಬರೋದು ಸುಮ್ನೆ ಯಾಕೆ ಜಗಳ ಆಡಿ ಎಲ್ರೂ ನೆಮ್ಮದಿ ಹಾಳು ಮಾಡ್ಕೋತಾರೆ ಅಂತ ಅನ್ನಿಸಿದರೂ ಮಲ್ಲ ನಂಗೆ ಮಾಮೂಲಿ ಮನುಷ್ಯನ ತರ ಕಾಣಲಿಲ್ಲ.ಹೌದು ಕುಡಿದ ಅಂದ್ರೆ ಅವ್ನು ಮನುಷ್ಯನಾಗೇ ಇರ್ತಿರ್ಲಿಲ್ಲ.ಆ ನಶೆಯಾಗೆ ತಾನು ಏನು ಮಾಡ್ತಿದ್ದೀನೆಂಬ ಪರಿವೆಯೂ ಅವ್ನಿಗೆ ಇರ್ತಿರ್ಲಿಲ್ಲ.ಶುದ್ಧ ತಲೆ ಕೆಟ್ಟೋನಂಗೆ ಆಡ್ತಿದ್ದ.
ಹಿಂಗೆ ದಿನಾ ಜಗಳ ನೋವು ಭಯ ಇವುಗಳಿಂದಲೇ ಕಾಲ ದೂಡುತ್ತಿದ್ದ ರಂಗಪ್ಪ ಅಂತೂ ಇವತ್ತು ಹೋಗ್ಬಿಟ್ಟ.ಪಾಪ ಏನ್ ಅವ್ನೇ ಅಚಾನಕ್ಕಾಗಿ ಸತ್ನೋ ಇಲ್ಲಾ ಮಗ ಸೊಸೆ ಸೇರಿ ಇಬ್ರೂ ಅವ್ನನ್ನ ಹೊಡೆದಾಕುದ್ರೋ ..?!ಏನೋ ಹಾಳಾಗೋಗ್ಲಿ ಬಿಡು ರಂಗಪ್ಪ ಇದ್ದಾಗಂತೂ ಜೀವನದಾಗೆ ನೆಮ್ಮದಿ ಕಾಣ್ಲಿಲ್ಲ.ಸತ್ತ ಮೇಲಾದ್ರೂ ನೆಮ್ಮದಿ ಸಿಕ್ತಲ್ಲಾ ಅಂತ ಮನಸ್ಸಿನಾಗೇ ಅಂದ್ಕೊAಡು ಕೊನೇ ಸಲ ಅವನ ಮುಖನಾದ್ರೂ ನೋಡ್ಕೊಂಡು ಬರೋಣ ಅಂತ ಅವನ ಮನೆ ಕಡೆ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕತೊಡಗಿದೆ.
ಆಗ್ಲೇ ಅವನ ಮನೆ ಮುಂದೆ ದೊಡ್ಡದಾಗಿ ಶಾಮಿಯಾನ ಹೊಡೆದಿತ್ತು.ನಾಲ್ಕೆöÊದು ಸೌಧೆ ತುಂಡುಗಳು ಸಣ್ಣಗೆ ಉರಿಯುತ್ತಿದ್ದವು.ಆಗಲೇ ತುಂಬಾ ಜನಗಳೂ ಕೂಡ ಸೇರಿದಂಗಿತ್ತು.ಇವನ್ನೆಲ್ಲಾ ದೂರದಿಂದಲೇ ನೋಡುತ್ತಲೇ ಅವನ ಮನೆಗೆ ಹತ್ತಿರ ಹತ್ತಿರವಾದಂತೆ ಹೃದಯದೊಳಗೆ ದುಃಖವೂ ಹೆಚ್ಚಾಯಿತು.ಕಣ್ಣು ತನಗರಿವಾಗದಂತೆ ತೇವವಾಗತೊಳ್ಳತೊಡಗಿದವು.ನಿಧಾನವಾಗಿ ಭೂಜದ ಮೇಲಿದ್ದ ಟವೆಲ್ಲಿನಿಂದ ಮುಖದ ಬೆವರನ್ನು ಒರೆಸಿಕೊಳ್ಳುತ್ತಾ ಅವನ ಮನೆಯ ಮುಂದಿನ ಜಗುಲಿಯ ಹತ್ತಿರ ಬಂದAತೇ ಅಲ್ಲಿ ಕೂತಿದ್ದವನನ್ನು ನೋಡಿ ಒಮ್ಮೆಲೆ ಹೌಹಾರಿದಂತಾಯ್ತು.ಕಣ್ಣುಗಳನ್ನು ದೊಡ್ಡದಾಗಿ ಬಿಡುತ್ತಾ ಇದೇನು ಆಶ್ಚರ್ಯವೆಂಬAತೆ ನೋಡಿದೆ.ಅಲ್ಲಿ ಕೂತಿದ್ದವನು ಅಕ್ಷರಶಃ ರಂಗಪ್ಪನೇ ಆಗಿದ್ದ.ಮತ್ತೊಮ್ಮೆ ಕಣ್ಣುಜ್ಜಿಕೊಂಡು ಅವನೇ ಹೌದೋ ಅಲ್ಲವೋ ಎಂಬAತೆ ನೋಡಿದೆ.ಅದರಲ್ಲಿ ಯಾವುದೇ ಅನುಮಾನವಿಲ್ಲ ಅವನು ರಂಗಪ್ಪನೇ ಆಗಿದ್ದ.!ಹಾಗಾದ್ರೆ ಸತ್ತೋನು ರಂಗಪ್ಪ ಅಪ್ಪ..ಹಾಗಾದ್ರೇ ಮತ್ಯಾರು..ಮಲ್ಲನಾ..ಸೊಸೆಯಾ..?!
ಮತ್ತೆ ಸಾವಕಾಶದಿಂದ ಗಾಬರಿ ದುಗುಡದಿಂದ ರಂಗಪ್ಪನ ಪಕ್ಕದಲ್ಲಿ ಹೋಗಿ ಕೂತೆ.ಅವನಿಗೆ ಕಣ್ಣಲ್ಲೇ ಸಂಜ್ಙೆ ಮಾಡುತ್ತಾ ಇವೆಲ್ಲಾ ಏನು..?ಸತ್ತದ್ದು ಯಾರು..?!ಎಂಬAತೆ ಕೇಳಿದೆ.ಅದಕ್ಕವನಿಗೆ ದುಃಖ ಒಮ್ಮಳಿಸಿ ಬಂತು.ಬಿಕ್ಕುತ್ತಲೇ
ಏನAತ ಹೇಳಲಿ ಮಂಜಣ್ಣ..ನಿನ್ನೆ ರಾತ್ರಿ ಮಗ ಸೊಸೆ ಇಬ್ರೂ ಯಾರಿಗೂ ಗೊತ್ತಾಗ್ದಂಗೆ ತೋಟಕ್ಕೆ ಹೋಗವ್ರೆ ಅಡಿಕೆ ಗೊನೆ ಕದಿಯೋಕೆ.ಅಂತಾ ಕತ್ಲಾಗೆ ಮರ ಹತ್ತಿದವ್ನು ಗೊನೆ ಕೊಯ್ದು ಇಳಿಯೋ ರಭಸದಾಗೆ ಆಯಾ ತಪ್ಪಿ ಕೆಳಗೆ ಬಿದ್ದವ್ನೆ.ಬಿದ್ದ ತಕ್ಷಣಕ್ಕೆ ಜೀವ ಅಲ್ಲೇ ಹೋಗ್ಬಿಟ್ಟೆöÊತೆ.ಇದನ್ನು ನೋಡಿ ಗಾಬರಿಯಾದ ಸೊಸೆ ಗಂಡನ ಅವಸ್ಥೆ ನೋಡಿ ಯಾರನ್ನಾದ್ರೂ ರ‍್ಕೊಂಡು ಬರೋಣ ಅಂತ ಓಡೋಡಿ ಬಂದ್ಳೆ ಕತ್ಲಾಗೆ ಗೊತ್ತಾಗ್ದೆ ತೋಟದ ಬಾವಿಯಾಗೆ ಬಿದ್ದವ್ಳೆ.ಅವ್ಳೂ ಅಲ್ಲೇ ಶಿವನ ಪಾದ ಸೇರವ್ಳೆ
ಅಯ್ಯೋ ವಿಧಿಯೇ..?!ಅಂತ ಅಳುತ್ತಾ ತಲೆ ಮೇಲೆ ಕೈಹೊತ್ತು ಕೂತು ಬಿಟ್ಟ ರಂಗಪ್ಪ.
ವಿಷಯ ಕೇಳಿ ನನಗೆ ಗರ ಬಡಿದಂತಾಯ್ತು.ಒAದು ಕ್ಷಣ ಮನದಲ್ಲಿ ಏನೇನೋ ಯೋಚನೆಗಳು ರಂಗಪ್ಪನ ಮನೆಯ ಚಿತ್ರಣ ಮಗ ಸೊಸೆ ಎಲ್ಲಾ ದೃಶ್ಯದಂತೆ ಹಾದುಹೋದವು.ಯಾರು ರಂಗಪ್ಪ ಸಾಯಲಿ ಅಂತ ದಿನಾ ಕಾಯ್ತಾ ಇದ್ರೋ ಅವರೇ ಸತ್ತು ಹೆಣವಾಗಿ ಮಲಗಿದ್ರು.ಅವರು ಕೊಡೋ ಕಾಟಾನ ತಡೀಲರ‍್ದೆ ಎಂದೋ ಶಿವನ ಪಾದಕ್ಕೆ ಸೇರಬೇಕಿದ್ದ ರಂಗಪ್ಪ ಅವರ ಹೆಣದ ಮುಂದೆನೇ ಜೀವಂತ ಕೂತಿದ್ದ.ಆ ದೇವ್ರು ಯರ‍್ಯಾರ ಹಣೆಬರಹದಲ್ಲಿ ಏನೇನು ಬರೆದವ್ನೋ..ದೇವ್ರೇ ಏನಪ್ಪಾ ನಿನ್ನ ಲೀಲೆ ಅಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ ರಂಗಪ್ಪನಿಗೆ ಸಮಾಧಾನ ಪಡಿಸಿ ಮುಂದಿನ ಕೆಲಸಕ್ಕೆ ಅಣಿಯಾದೆ.
ಕಿರುಪರಿಚಯ:
ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನೌಕರಿ ಹಾಗೂ ವಾಸ.ಹಲವಾರು ಕಥೆ,ಕವನ,ಲೇಖನ ಬರೆದಿರುವ ಇವರ ನೆಚ್ಚಿನ ಸಾಹಿತ್ಯ ಪ್ರಕಾರ ಹನಿಗವನ ಹಾಗೂ ಚುಟುಕುಗಳು.