ಗಜಲ್
ಶುಭಲಕ್ಷ್ಮಿ ಆರ್ ನಾಯಕ
ಇತರರ ಅಲ್ಲ ಸಲ್ಲದ ನುಡಿಗೆ ನೋಯದಿರು ಗೆಳತಿ
ಪರರು ಆಡುವ ಬಿರುನುಡಿಗಳಿಗೆ ಅಂಜದಿರು ಗೆಳತಿ
ನಿನ್ನಾತ್ಮ ಸಾಕ್ಷಿಯದು ನಿಜವನ್ನೇ ನುಡಿಯುವಾಗ
ಕುಹಕಿಗಳ ಕುಹಕಕ್ಕೆ ಮನಕೆಡಿಸಿಕೊಳದಿರು ಗೆಳತಿ
ಧರಣಿಯ ಮನುಜರಲ್ಲಿ ಮಾನವೀಯತೆಯ ತುಂಬಲು
ವ್ಯರ್ಥವಾಗಿ ಎಂದಿಗೂ ನೀನು ಹೆಣಗದಿರು ಗೆಳತಿ
ಕೊಡುವ ದಾನ ಧರ್ಮಗಳಲಿ ಪುಣ್ಯವಿದೆ ಎಂದರಿತು
ಅಪಾತ್ರರಿಗೆ ದಾನ ಧರ್ಮವನು ಮಾಡದಿರು ಗೆಳತಿ
ಸಾಂತ್ವನವ ನಯದಿ ಹೇಳುತ ಧೈರ್ಯ ನೀಡುವೆಯೆಂದು
ಸಂಕುಚಿತಮನದವರಿಗೆ ಉಪದೇಶಿಸದಿರು ಗೆಳತಿ
ನಂಬಿಕೆ ವಿಶ್ವಾಸದಲಿ ಧೈರ್ಯ ತುಂಬುವ ಜನರನು
ನಿನ್ನ ಕಠೋರತೆಯಿಂದ ದೂರ ತಳ್ಳದಿರು ಗೆಳತಿ
ಎಲ್ಲರೂ ಎಲ್ಲರ ಒಳಿತನೆ ಬಯಸುತ್ತಿರುವಾಗ
ಜೀವನದಲಿ ಜಂಜಾಟದಿಂದ ಕುಗ್ಗದಿರು ಗೆಳತಿ
ಅರಿತು ಬಾಳಿದರೆ ಜಗದಲಿ ಮುಳ್ಳು ಹೂವಾಗುವುದು
ಸಹನೆಯಿಂದ ಬಾಳ ನೂಕುವುದ ಮರೆಯದಿರು ಗೆಳತಿ
ಆತ್ಮಸಾಕ್ಷಿಯಿಂದ ಒಳಿತ ಬಯಸಿದೆ ಶುಭಳ ಮನವು
ಅರಿಯದೇ ಅದನು ನೀ ಸುಮ್ಮನೆ ರೇಗದಿರು ಗೆಳತಿ
********************************
ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಗಾತಿ ಪತ್ರಿಕೆಗೆ ಧನ್ಯವಾದಗಳು
ಗೆಳತಿಗೊಂದು ಮಾರ್ಗದರ್ಶನ ಚೆನ್ನಾಗಿದೆ…. ಮೇಡಂ
ಸಕಾರತ್ಮಕ ಭಾವ ತುಂಬುವ ಸುಂದರ ಕವನ.ಆತ್ಮವಿಶ್ವಾಸ ಎಷ್ಟು ಮಹತ್ವಎನ್ನುವುದನ್ನು ಕವಾಯಿತ್ರಿಚೆನ್ನಾಗಿ ಬಿಡಿಸಿಟ್ಟಿದ್ದಾರೆ. ಅಭಿನಂದನೆಗಳು.
ಮಾಲತಿಶ್ರೀನಿವಾಸನ್